ಜರ್ಮನಿಯ ಮಿಟೆನ್‌ವಾಲ್ಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಕಾರ್ನಿವಲ್ ಫೂಲ್ಸ್' ಉಡುಪು ತೊಟ್ಟು ಪಾಲ್ಗೊಂಡ ಕಲಾವಿದ. (ಸಾಂಕೇತಿಕ ಚಿತ್ರ)
ಮೂರ್ಖರ ದಿನ ಅಥವಾ ಏಪ್ರಿಲ್ ಫೂಲ್ ದಿನವೆಂದೇ ಪ್ರಸಿದ್ಧಿ ಪಡೆದಿರುವ ಏಪ್ರಿಲ್ ಒಂದನೆಯ ದಿನಕ್ಕೆ ತನ್ನದೇ ಆದ ಸ್ಪಷ್ಟ ಇತಿಹಾಸವಿಲ್ಲ. ಈ ಪರಂಪರೆ ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತೆಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ.
ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್‌ನ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. 1581ರ ಹೊಸವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ 1ರಂದು ಕೊನೆಯ ದಿನವಾಗಿತ್ತು. ಚಾರ್ಲ್ಸ್ ದೊರೆಯು ಗ್ರಿಗೋರಿಯನ್ ಕ್ಯಾಲೆಂಡರನ್ನು ಜಾರಿಗೊಳಿಸಿದ ನಂತರ ಹೊಸ ವರ್ಷಾಚರಣೆಯನ್ನು ಜನವರಿ 1 ಕ್ಕೆ ಬದಲಾಯಿಸಲಾಗಿತ್ತು.
ಅಂದಿನ ಕಾಲದಲ್ಲಿ ಸಂಪರ್ಕ ಮಾಧ್ಯಮ ಸೀಮಿತವಾಗಿದ್ದ ಪರಿಣಾಮ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್ ಅನ್ನು ಒಪ್ಪಿಕೊಳ್ಳದೆ ಏಪ್ರಿಲ್ 1ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಈ ಜನತೆಯನ್ನು ಸಾರ್ವಜನಿಕರು ಮೂರ್ಖರೆಂದು ಕರೆಯಲಾರಂಭಿಸಿದರು. ಈ ಸಮುದಾಯಗಳು ಜನರಿಂದ ಅಪಹಾಸ್ಯಕ್ಕೀಡಾದವು. ಈ ಜನರು ಹಾಸ್ಯದ ವಸ್ತುಗಳಾಗಿ ಪರಿಣಮಿಸಿದರು.
ಜನರನ್ನು ಅಪಹಾಸ್ಯಕ್ಕೀಡುಮಾಡುವ ಈ ವ್ಯವಸ್ಥೆಯೇ ಕ್ರಮೇಣ ಒಂದು ಪರಂಪರೆಯಾಗಿ ಬೆಳೆದು ಏಪ್ರಿಲ್ ಒಂದನೆಯ ತಾರೀಖು ಜನರನ್ನು ಮೂರ್ಖರನ್ನಾಗಿ ಮಾಡುವ ದಿನವನ್ನಾಗಿ ಆಚರಿಸಲಾಯಿತು. ಈ ಸಂಪ್ರದಾಯವೇ 18ನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಏಪ್ರಿಲ್ ಫೂಲ್ಸ್ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಏಪ್ರಿಲ್ 1 ರಂದು ಸ್ನೇಹಿತರನ್ನು, ಜನಸಾಮಾನ್ಯರನ್ನು ಕುಚೇಷ್ಟೆ ಮಾಡುವುದು ಸರ್ವವ್ಯಾಪಿಯಾಗತೊಡಗಿತು.
ಇಂಗ್ಲೆಂಡಿನಲ್ಲಿ ಏಪ್ರಿಲ್ 1ರ ಮುಂಜಾನೆ ಮಾತ್ರ ಕುಚೇಷ್ಟೆ ಮಾಡಲಾಗುತ್ತದೆ. ಹಾಸ್ಯಕ್ಕೀಡಾದ ವ್ಯಕ್ತಿಯನ್ನು ನೂಡಲ್ ಎಂದು ಕರೆಯಲಾಗುತ್ತದೆ. ಮಧ್ಯಾಹ್ನದ ನಂತರ ಕುಚೇಷ್ಟೆ ಮಾಡುವುದು ಒಳಿತಲ್ಲವಂತೆ. ರೋಮ್‌ನಲ್ಲಿ ಈ ದಿನವನ್ನು ಹಿಲೇರಿಯಾ ಹಬ್ಬ ಎಂದು ಆಚರಿಸಲಾಗುತ್ತದೆ. ಪೋರ್ಚುಗಲ್‌ನಲ್ಲಿ ಭಾನುವಾರ ಮತ್ತು ಸೋಮವಾರದಂದು ಆಚರಿಸಲಾಗುತ್ತದೆ. ಮೆಕ್ಸಿಕೋದಲ್ಲಿ ಏಪ್ರಿಲ್ ಫೂಲ್ ದಿನವನ್ನು ಡಿಸೆಂಬರ್ 27ರಂದು ಆಚರಿಸಲಾಗುತ್ತದೆ.
ಏಪ್ರಿಲ್ ಫೂಲ್ ದಿನಾಚರಣೆಯನ್ನು ಹಾಸ್ಯದ ದಿನ ಎನ್ನುವುದಕ್ಕಿಂತಲೂ ಕುಚೇಷ್ಟೆಯ ದಿನ ಎಂದು ಹೇಳಬಹುದು. ಸುಳ್ಳು ಹೇಳುವ ಮೂಲಕ ಬುದ್ಧಿವಂತರನ್ನೂ ಬೇಸ್ತು ಬೀಳಿಸುವ ಮೂಲಕ ಅವರನ್ನು ಫೂಲ್ ಮಾಡುವ ದಿನ ಮೂರ್ಖರ ದಿನ. ಹಾಗಾಗಿ ಈ ದಿನದಂದು ಸಣ್ಣ ಪುಟ್ಟ ಜೋಕುಗಳೊಂದಿಗೇ ಇಲ್ಲಸಲ್ಲದ ಸುದ್ದಿಗಳನ್ನು ಹೇಳಿ ಮೂರ್ಖರನ್ನಾಗಿಸುವುದೂ ನಡೆಯುತ್ತದೆ. ಇದು ಕೇವಲ ತಮಾಷೆಗಾಗಿ ಮಾಡುವ ಕೃತ್ಯಗಳಾದ್ದರಿಂದ ಯಾರೂ ಬೇಸರಿಸಿಕೊಳ್ಳುವುದೂ ಇಲ್ಲ. ‘ಕ್ಷಮಿಸಿ, ನಾ ಮಾಡೋದೆಲ್ಲಾ ತಮಾಷೆಗಾಗಿ’ ಎಂಬ ಹಾಡು ನೆನಪಾಗುವುದಲ್ಲವೇ?
ಏಪ್ರಿಲ್ 1 ರ ಮೂರ್ಖರ ದಿನದಂದು ಆಗುವುದೂ ಹಾಗೆಯೇ. ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿ ನಗುವುದಕ್ಕೂ ಸಮಯವಿಲ್ಲದೆ, ಕಚೇರಿ, ಮನೆ, ಕ್ಲಬ್ಬುಗಳಲ್ಲೇ ಮುಳುಗಿರುವ ಮಧ್ಯಮ ವರ್ಗದ ಸಂಖ್ಯೆ ಹೆಚ್ಚಾಗುತ್ತಿರುವಾಗ ಮೂರ್ಖರ ದಿನಾಚರಣೆ ಒಂದು ರೀತಿ ಮರುಭೂಮಿಯ ಓಯಸಿಸ್‌ನ ಹಾಗೆ ಕಾಣಬಹುದೇನೋ. ಆದರೂ ಏಪ್ರಿಲ್ ಫೂಲ್ ಎಂದೊಡನೆ ಯಾರಿಗೇ ಆದರೂ ಬಾಲ್ಯದ ದಿನಗಳ ನೆನಪಾಗದಿರುವುದಿಲ್ಲ.
ಸಮಕಾಲೀನ ಸಂದರ್ಭದಲ್ಲಿ ಮೂರ್ಖರಾಗುವವರು ಯಾರು, ಮೂರ್ಖರನ್ನಾಗಿ ಮಾಡುವವರಾರು? ಸಮಕಾಲೀನ ಸಮಾಜದ ಸಣ್ಣ ಕುಟುಂಬಗಳಲ್ಲಿ, ಗಣಕೀಕೃತ ಕಚೇರಿಗಳಲ್ಲಿ, ಮಾರ್ಕ್ಸ್‌ಗಳಿಗಾಗಿ ಹಗಲಿರುಳೂ ಓದಿನಲ್ಲೇ ಮುಳುಗಿರುವ ಶಾಲೆಗಳಲ್ಲಿ ಈ ರೀತಿಯ ಘಟನೆಗಳು ಸಾಧ್ಯವೇ ಎನಿಸುತ್ತದೆ. ಆದರೂ ಏಪ್ರಿಲ್ ಫೂಲ್ ದಿನವನ್ನು ಈಗಲೂ ಆಚರಿಸಲಾಗುತ್ತದೆ. ಮೊಬೈಲ್‌ಗಳ ಮೂಲಕ, ಅಂತರ್ಜಾಲದ ಮೂಲಕ, ಎಸ್ಸೆಮ್ಮೆಸ್‌ಗಳ ಮೂಲಕ ಸ್ನೇಹಿತರನ್ನು ಫೂಲ್ ಮಾಡಲೂಬಹುದು. ಆದರೂ ಪ್ರಸ್ತುತ ಸಂದರ್ಭದಲ್ಲಿ ಏಪ್ರಿಲ್ ಫೂಲ್ ದಿನವನ್ನು ವರ್ಷವಿಡೀ ಆಚರಿಸುವುದು ನಮ್ಮ ಆಳುವ ವರ್ಗಗಳೇ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಚುನಾವಣೆ ಇರಲಿ, ಇಲ್ಲದಿರಲಿ, ನಮ್ಮ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕೊರತೆ ಇರುವುದಿಲ್ಲ. ಕರ್ನಾಟಕದಲ್ಲೇ ನೋಡಿ, ಕಳೆದ ವರ್ಷದ ನೆರೆಹಾವಳಿಗೆ ತುತ್ತಾದ ಲಕ್ಷಾಂತರ ಜನರನ್ನು ಸರ್ಕಾರ ಫೂಲ್ ಮಾಡುತ್ತಲೇ ಇದೆ. ‘ನಿಮಗೆ ಮನೆ ನಿರ್ಮಿಸಿಕೊಡುತ್ತೇವೆ, ಹೊಸ ಗ್ರಾಮ ನಿರ್ಮಾಣ ಮಾಡುತ್ತೇವೆ’ ಎಂದು ಹೇಳುತ್ತಲೇ ಇದೆ. ಈವರೆಗೂ ಏನನ್ನೂ ನಿರ್ಮಿಸಿಲ್ಲ, ಕನಸುಗಳ ಭವನಗಳ ಹೊರತಾಗಿ. ಹಾಗೆಯೇ ‘ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುತ್ತೇವೆ’ ಎಂದು ಹೇಳುತ್ತಲೇ ವಿದ್ಯುತ್ ಕಡಿತ ಮುಂದುವರೆಯುತ್ತಿರುತ್ತದೆ.
‘ರೈತರ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಹೇಳುತ್ತಿರುವಾಗಲೇ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುತ್ತವೆ. ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಎಂಬ ಆಶ್ವಾಸನೆಯನ್ನು ನಂಬಿದ ಜನ ಆರು ದಶಕಗಳಿಂದಲೂ ಮೂರ್ಖರಾಗುತ್ತಲೇ ಇದ್ದಾರೆ.
ಏನೇ ಆದರೂ, ಏಪ್ರಿಲ್ ಫೂಲ್ ದಿನಾಚರಣೆ ಸಾಮಾನ್ಯ ಜನರಿಗಷ್ಟೇ ಏಪ್ರಿಲ್ ಒಂದರಂದು ಬರುತ್ತದೆ. ಆಳ್ವಿಕರಿಗೆ, ರಾಜಕಾರಣಿಗಳಿಗೆ ದಿನನಿತ್ಯವೂ ಏಪ್ರಿಲ್ ಫೂಲ್ ದಿನವೇ. ಯಾವುದಾದರೂ ಒಂದು ರೀತಿಯಲ್ಲಿ ಜನರನ್ನು ಫೂಲ್ ಮಾಡುತ್ತಲೇ ಇರುತ್ತಾರೆ. ಜನಸಾಮಾನ್ಯರೂ ಮೂರ್ಖರಾಗುತ್ತಲೇ ಇರುತ್ತಾರೆ.
ವಾಸ್ತವದಲ್ಲಿ ಅನೇಕ ಸಂದರ್ಭಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಹಾಸ್ಯದ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಇದನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಏಪ್ರಿಲ್ 1 ರ ದಿನ ಮತ್ತೊಬ್ಬರನ್ನು ಕುಚೇಷ್ಟೆಯ ಮೂಲಕ ಬೇಸ್ತು ಬೀಳಿಸುವ ದಿನ. ಸುಳ್ಳು ಹೇಳಿ ನಂಬಿಸಿ ತಮಾಷೆ ಮಾಡುವ ದಿನ. ಈ ದಿನವನ್ನು ಶಿಸ್ತಾಗಿ, ಕ್ರಮಬದ್ಧವಾಗಿ ಆಚರಿಸುವವರು ನಮ್ಮ ರಾಜಕಾರಣಿಗಳಿಗಿಂತ ಬೇರೆ ಯಾರಿದ್ದಾರೆ?
(ಇದು 14 ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಲೇಖನ. ಚಿತ್ರ ಅಳವಡಿಸಿ ತಿದ್ದುಪಡಿ ಮಾಡಲಾಗಿದೆ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.