ಶ್ಯಾಂಪೂ ಸ್ಯಾಷೆಯ ಸರ ಮತ್ತು ಹ್ಯಾಂಡ್‌ವಾಷ್ ರೀಫಿಲ್ಲನ್ನು ಫುಡ್‌ಮಾರ್ಟ್‌ವೊಂದರಲ್ಲಿ ಕೊಂಡೆ. ಶ್ಯಾಂಪೂವಿನ ಸರದಲ್ಲಿ ಹದಿನಾರು ಸ್ಯಾಷೆಗಳಿದ್ದವು. ಅವುಗಳನ್ನು ಬಳಸತೊಡಗಿದಾಗ ಕೆಲವು ಸ್ಯಾಷೆಗಳ ತುಂಬಾ ಶ್ಯಾಂಪೂ ಇದ್ದರೆ, ಒಂದೆರಡು ಸ್ಯಾಷೆಗಳಲ್ಲಿ ಅರ್ಧದಷ್ಟು ಶ್ಯಾಂಪೂ ಕೂಡ ಇರಲಿಲ್ಲ!
ಈ ಹಿಂದೆ ಆ ಬ್ರ್ಯಾಂಡ್‌ನ ಹ್ಯಾಂಡ್‌ವಾಷ್ ರೀಫಿಲ್ಲನ್ನು ಕೊಂಡಾಗ 900 ಎಂ.ಎಲ್. ಇರುತ್ತಿತ್ತು. ಬೆಲೆ ನೂರು ರೂಪಾಯಿ. ಇತ್ತೀಚೆಗೆ ಕೊಂಡ ಹ್ಯಾಂಡ್‌ವಾಷ್ ರೀಫಿಲ್ಲಿನ ಬೆಲೆಯೂ ನೂರು ರೂಪಾಯಿಯೇ ಆಗಿತ್ತು. ಎಲ್ಲದರ ಬೆಲೆ ಹೆಚ್ಚಾದರೂ ಹ್ಯಾಂಡ್‌ವಾಷ್ ರೀಫಿಲ್ಲಿನ ಬೆಲೆ ಹೆಚ್ಚಾಗಿಲ್ಲವಲ್ಲ ಎಂದು ಖುಷಿಪಟ್ಟೆ. ಆದರೆ ಪ್ಯಾಕೆಟ್ಟನ್ನು ಸೂಕ್ಷ್ಮವಾಗಿ ಗಮನಿಸಿದಾಗ, 750 ಎಂ.ಎಲ್. ಮಾತ್ರ ತುಂಬಲಾಗಿತ್ತು!
ಮಾಂಸ ತರಲು ಮಟನ್ ಮಾರ್ಕೆಟ್‌ಗೆ ಹೋಗಿದ್ದೆ. ಒಂದು ಕೆ.ಜಿ. ಮಾಂಸ ಕೊಡಲು ಹೇಳಿದೆ. ‘ಚರ್ಬಿ ಬೇಡಪ್ಪ, ಒಳ್ಳೆ ಮಟನ್ ಕೊಡು’ ಎಂದೆ. ‘ನೋಡಿ ಸರ್ ಹೇಗಿದೆ’ ಎಂದು ಒಳ್ಳೊಳ್ಳೆ ಗಟ್ಟಿ ತುಂಡುಗಳನ್ನೇ ತೋರಿಸಿ, ಕತ್ತರಿಸಿ ತಕ್ಕಡಿಗೆ ಹಾಕಿದ. ತಕ್ಕಡಿಯ ಒಳಭಾಗ ನಮ್ಮ ಕಣ್ಣಿಗೆ ಕಾಣದಷ್ಟು ಮೇಲ್ಗಡೆ ಇತ್ತು. ಒಂದು ಕೆ.ಜಿ. ಮಾಂಸ ತೂಗಿ ಕಪ್ಪುಬಣ್ಣದ ಪ್ಲಾಸ್ಟಿಕ್ ಕವರಿಗೆ ಹಾಕಿದ. ಮನೆಗೆ ತೆರಳಿ ಕವರ್ ಒಳಗಿನ ಮಾಂಸವನ್ನು ಪಾತ್ರೆಗೆ ಸುರಿದಾಗ ನೂರರಿಂದ ನೂರೈವತ್ತು ಗ್ರಾಮ್‌ನಷ್ಟು ಚರ್ಬಿಯ ಉಂಡೆ ಇತ್ತು! ಅರೆ ನನ್ನ ಕಣ್ಣ ಮುಂದೆಯೇ ನನಗೆ ತೋರಿಸಿಯೇ ಮಾಂಸ ಹಾಕಿದನಲ್ಲ, ಚರ್ಬಿ ಉಂಡೆ ಎಲ್ಲಿಂದ ಬಂತು ಎಂದು ಯೋಚಿಸಿದಾಗ ಹೊಳೆದದ್ದು, ಅದನ್ನು ತಕ್ಕಡಿಯೊಳಗೆ ಮಾಂಸ ಹಾಕುವ ಮೊದಲೇ ಹಾಕಿಟ್ಟಿದ್ದ!
ಹೀಗೆ ಹೇಳುತ್ತಾ ಹೋದಂತೆಲ್ಲ ಮಾರುಕಟ್ಟೆಯ ಮಾಯಾಲೋಕದ ಕಣ್ಣಾಮುಚ್ಚಾಲೆ ಆಟಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಶ್ಯಾಂಪೂವಿನ ಸರದಲ್ಲಿ ಒಂದೆರಡು ಸ್ಯಾಷೆಗಳಲ್ಲಿ ಶ್ಯಾಂಪೂ ಕಡಿಮೆ ಇದ್ದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹ್ಯಾಂಡ್‌ವಾಷ್ ರೀಫಿಲ್ಲಿನಲ್ಲಿ 150 ಗ್ರಾಂ ಕಡಿಮೆ ಇದ್ದರೂ ಗಮನಿಸುವುದಿಲ್ಲ. ಒಂದು ಕೆ.ಜಿ. ಮಾಂಸದಲ್ಲಿ ನೂರರಿಂದ ನೂರೈವತ್ತು ಗ್ರಾಮ್‌ನಷ್ಟು ಚರ್ಬಿ ಇದ್ದರೂ ಹೋಗಲಿ ಬಿಡು ಎಂದು ತಾತ್ಸಾರ ಮಾಡುತ್ತೇವೆ. ಕೆಲ ಕಂಪನಿಗಳು ತಾವು ತಯಾರಿಸುವ ವಸ್ತುಗಳ ಗುಣಮಟ್ಟವನ್ನೂ ಈ ಹಿಂದಿನಂತೆ ಉಳಿಸಿಕೊಂಡಿಲ್ಲ. ಜನ ಮಾತನಾಡುವುದನ್ನು ನಾವು ಗಮನಿಸಿರುತ್ತೇವೆ. ಈ ಕಂಪನಿ ಪ್ರಾರಂಭದಲ್ಲಿ ಹೊರತಂದ ದ್ವಿಚಕ್ರ ವಾಹನ ತುಂಬಾ ಗಟ್ಟಿಮುಟ್ಟಾಗಿತ್ತು, ಇತ್ತೀಚೆಗೆ ಮಾರುಕಟ್ಟೆಗೆ ಬಿಟ್ಟಿರುವ ವಾಹನ ಗಟ್ಟಿಮುಟ್ಟಾಗಿಲ್ಲ. ಈ ಕಂಪನಿಯ ಹೊಸ ಕಾರು ಹಳೆಯ ಕಾರಿನಂತೆ ಮೈಲೇಜ್ ಕೊಡದು. ಸೇಫ್ಟಿ ಇಲ್ಲ. ಈ ಕಂಪನಿಯ ಚಹಾಪುಡಿ ಮೊದಲಿನಂತೆ ಸ್ವಾದಿಷ್ಟವಾಗಿಲ್ಲ. ಆ ಕಂಪನಿಯ ಕಾಫಿಪುಡಿ ಮೊದಲಿನಂತೆ ಘಮಿಸದು. ಈ ಕಂಪನಿಯ ಮಸಾಲೆ ಪೌಡರ್‌ಗೆ ಹಿಂದಿನ ರುಚಿಯಿಲ್ಲ... ಹೀಗೆ ಹಲವಾರು ವಿಚಾರಗಳ ಬಗ್ಗೆ ಜನ ಗೊಣಗುತ್ತಲೇ ಇರುತ್ತಾರೆ. ಆದರೆ ಮೇಲಿನ ಉದಾಹರಣೆಗಳೆಲ್ಲ ಮಾರುಕಟ್ಟೆಯ ತಂತ್ರ ಮತ್ತು ಕುತಂತ್ರವನ್ನು ಬಹಿರಂಗಗೊಳಿಸುತ್ತವೆ.
ಗ್ರಾಹಕರ ಗಮನಕ್ಕೆ ತಂದು ಕೆಲ ವಸ್ತುಗಳ ಬೆಲೆ ಏರಿಸಿದಾಗ ಬೀದಿಗಿಳಿಯುವ ನಾವು, ಗ್ರಾಹಕರ ಗಮನಕ್ಕೆ ತಾರದೆಯೇ ಪ್ರಮಾಣ ಮತ್ತು ಗುಣಮಟ್ಟವನ್ನು ಕಡಿಮೆ ಮಾಡಿದಾಗ ತಲೆಕೆಡಿಸಿಕೊಳ್ಳುವುದೇ ಇಲ್ಲ. ಸಣ್ಣ ಪ್ರಮಾಣದಲ್ಲಿ ಪ್ರಮಾಣ ಮತ್ತು ಗುಣಮಟ್ಟ ಕಡಿಮೆ ಮಾಡಿದರೂ ಕಂಪನಿಗಳು ದೊಡ್ಡ ಮಟ್ಟದಲ್ಲಿಯೇ ಲಾಭವನ್ನು ಪಡೆಯುತ್ತವೆ. ಆದರೆ ಗ್ರಾಹಕ ಮಾತ್ರ ಕ್ರಿಕೆಟ್ ಆಟದ ಮೈದಾನದಲ್ಲಿನ ಚೆಂಡಿನಂತೆ ಆಗುತ್ತಾನೆ. ಕಂಪನಿ ಹಾಗೂ ವರ್ತಕರು ಗ್ರಾಹಕರನ್ನು ಹೇಗೆ ಬೇಕಾದರೂ ವಂಚಿಸಬಹುದು. ಆದರೆ ಗ್ರಾಹಕ ಯಾವ ರೀತಿಯಲ್ಲೂ ಕಂಪನಿಗೆ, ವರ್ತಕರಿಗೆ ವಂಚಿಸಲು ಸಾಧ್ಯವಿಲ್ಲ.
ಯಾವುದೇ ಉತ್ಪಾದಕ ಕಂಪನಿ ತನ್ನ ಉತ್ಪಾದಿತ ವಸ್ತುಗಳ ಬೆಲೆ ಏರಿಸುವ ಅಥವಾ ಅದರ ಪ್ರಮಾಣ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುವ ಮುನ್ನ ಗ್ರಾಹಕರ ಗಮನಕ್ಕೆ ತರಬೇಕಾದುದು ಆದ್ಯ ಕರ್ತವ್ಯವಾಗುತ್ತದೆ. ತಯಾರಿಕಾ ಕಂಪನಿಗಳು, ವರ್ತಕರು ಬರೀ ಲಾಭದ ದೃಷ್ಟಿಯಿಂದ ವ್ಯವಹರಿಸದೆ, ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ದೃಷ್ಟಿಯಿಂದಲೂ ವ್ಯವಹರಿಸಬೇಕಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಗಮನಕ್ಕೆ ತಾರದೆಯೇ ಪ್ರಮಾಣ, ಗುಣಮಟ್ಟ ಕಡಿಮೆ ಮಾಡುವುದು ಅಥವಾ ಬೆಲೆ ಏರಿಸುವುದು ಸಮಂಜಸ, ನ್ಯಾಯಯುತ ನಡೆ ಎನಿಸುವುದಿಲ್ಲ. ಸರ್ಕಾರಗಳು ತಮ್ಮ ಅಧೀನದಲ್ಲಿರುವ ಸಂಸ್ಥೆ, ಕಂಪನಿ, ನಿಗಮಗಳಲ್ಲಿ ಉತ್ಪಾದಿಸುವ ವಸ್ತುಗಳ ಬೆಲೆ ಹೆಚ್ಚಿಸುವಾಗ ಅದನ್ನು ಗ್ರಾಹಕರ ಗಮನಕ್ಕೆ ತಂದು ಮಾಡುತ್ತವೆ. ಖಾಸಗಿ ವಲಯಕ್ಕೂ ಈ ನಿಯಮ ಅನ್ವಯವಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಸಂಬಂಧ ಕಾನೂನು ಬಿಗಿಗೊಳಿಸಬೇಕಿದೆ. ಜೊತೆಗೆ ಮಾರುಕಟ್ಟೆಯ ಮಾಯಾಲೋಕದ ಕುತಂತ್ರಗಳ ಬಗ್ಗೆ ಸದಾ ಜಾಗರೂಕರಾಗಿರಲು ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ.
ಗ್ರಾಹಕರ ಗಮನಕ್ಕೆ ತಂದು ಬೆಲೆ ಏರಿಸಿದಾಗ ತೋರುವ ಹೋರಾಟದ ಮನೋಭಾವವನ್ನು ಗ್ರಾಹಕರ ಗಮನಕ್ಕೆ ತಾರದೆಯೇ ಮೋಸ ಮಾಡುವ ಮಾರುಕಟ್ಟೆಯ ತಂತ್ರ, ಕುತಂತ್ರದ ವಿರುದ್ಧವೂ ಹೋರಾಡಬೇಕಾದ ಜರೂರು ಇಂದಿನ ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.