
‘ಅಯ್ಯೋ ಇಲ್ಲ್ಯಾಕೆ ಹೋಗಿ ಇವನ್ನೆಲ್ಲ ತಂದ್ರಿ? ಹೊಸದಾಗಿ ಶುರುವಾಗಿರೋ ಮಾಲ್‌ನಲ್ಲಿ ಇವೆಲ್ಲ ಕಡಿಮೆ ರೇಟ್‌ಗೆ ಸಿಕ್ತಾ ಇದ್ವು. ಅಲ್ಲಿ ತುಂಬಾ ಆಫರ್‌ಗಳಿವೆ’ ಎಂದು ಸಮೀಪದ ಅಂಗಡಿಗಳಿಂದ ದಿನಸಿ ಪದಾರ್ಥ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ತಂದಿದ್ದ ನೆರೆಹೊರೆಯವರಿಗೆ ಮಹಿಳೆಯೊಬ್ಬರು ಸಲಹೆ ನೀಡುತ್ತಿದ್ದರು. ಅವರ ಪ್ರಕಾರ, ಸ್ಥಳೀಯ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವುದು ಜಾಣ ನಡೆ ಅಲ್ಲ.
ಸಣ್ಣ ಅಂಗಡಿಗಳಿಗಿಂತ ಹೆಚ್ಚಿನ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರುವುದಾಗಿ ಬಿಂಬಿಸಿಕೊಳ್ಳುವ ದೊಡ್ಡ ಮಾರ್ಟ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವುದು ಲಾಭದಾಯಕ ಎನ್ನುವ ಅಭಿಪ್ರಾಯ ಹಲವರಲ್ಲಿ ಬೇರೂರಿದೆ. ಅದು ನಿಜವೆ?
ಆಫರ್‌ಗಳ ಚಕ್ರಸುಳಿಯಲ್ಲಿ ಸಿಲುಕಿ ಯಾಮಾರುವುದನ್ನೇ ಬುದ್ಧಿವಂತಿಕೆ ಎಂದು ಭಾವಿಸಬಹುದೆ? ಅಗತ್ಯವಿಲ್ಲದ್ದನ್ನು ಅಥವಾ ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸುವುದು ಲಾಭದಾಯಕವೋ? ಅಗತ್ಯಕ್ಕಿಂತ ಹೆಚ್ಚು ಕೊಳ್ಳುವಂತೆ ಪ್ರೇರೇಪಿಸುವ, ಆಮಿಷವೊಡ್ಡುವ ಕಾರ್ಯಸೂಚಿಯನ್ನು ಎಲ್ಲಿ ಅನುಸರಿಸಲಾಗುತ್ತದೆ– ಸಣ್ಣ ಅಂಗಡಿಗಳಲ್ಲೋ ಅಥವಾ ದೊಡ್ಡ ಮಾರ್ಟ್‌ಗಳಲ್ಲೋ?
ಹೆಚ್ಚು ಹೆಚ್ಚು ಕೊಳ್ಳುವಂತೆ ಗ್ರಾಹಕರನ್ನು ಪ್ರೇರೇಪಿಸುವಲ್ಲಿ ತಮ್ಮ ಹಿತ ಅಡಗಿದೆ ಎನ್ನುವ ಮಾರುಕಟ್ಟೆಯ ತಂತ್ರದ ಮೊರೆಹೋಗುವ ದೊಡ್ಡ ಮಾರ್ಟ್‌ಗಳು ಒಡ್ಡುವ ಆಫರ್‌ಗಳ ಆಕರ್ಷಣೆ ಮೇಲ್ನೋಟಕ್ಕೆ ಲಾಭದಾಯಕವಾಗಿ ಕಂಡರೂ, ಅದು ಎಲ್ಲರಿಗೂ ಲಾಭದಾಯಕ ಆಗಿರಲಾರದು. ಕೊಳ್ಳುವ ಸಾಮರ್ಥ್ಯ ಇದ್ದರೂ, ತೀರಾ ಅಗತ್ಯವಿರುವುದನ್ನು ಮಾತ್ರ ಕೊಳ್ಳುತ್ತೇನೆ ಎನ್ನುವ ವಿವೇಚನೆಯನ್ನು ಯಾವ ಕ್ಷಣದಲ್ಲೂ ಕಳೆದುಕೊಳ್ಳದವರ ಪಾಲಿಗೆ ದೊಡ್ಡ ಮಾರ್ಟ್‌ಗಳಲ್ಲಿನ ಖರೀದಿ ಲಾಭದಾಯಕ ಆಗಬಹುದೇ ವಿನಾ, ಎಲ್ಲರಿಗೂ ಅಲ್ಲ.
ದಿನಸಿ, ಗೃಹಬಳಕೆಯ ವಸ್ತುಗಳನ್ನು ಖರೀದಿಸಲು ಹೊರಡುವ ಗ್ರಾಹಕರ ತಲೆಯಲ್ಲಿ ತಾವು ಕೊಳ್ಳಬೇಕಿರುವ ವಸ್ತುಗಳ ಪಟ್ಟಿ ಇರುತ್ತದೆ. ಸಣ್ಣ ಅಂಗಡಿಗಳಲ್ಲಿ ಖರೀದಿ ಮಾಡುವಾಗ ಆ ಪಟ್ಟಿಯ ಪ್ರಕಾರ ಕೊಳ್ಳುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಸಾವಧಾನವಾಗಿ ಒಂದೆಡೆಯಿಂದ ಎಲ್ಲವನ್ನೂ ಗಮನಿಸುತ್ತಾ ಇದು ಬೇಕೋ ಬೇಡವೋ ಎಂದು ನಿರ್ಧರಿಸುವ ಅವಕಾಶ ಅಲ್ಲಿರುವುದಿಲ್ಲ. ಖರೀದಿಸಲು ವೈವಿಧ್ಯಮಯ ವಸ್ತುಗಳ ಯಥೇಚ್ಛ ಭಂಡಾರವೂ ಅಲ್ಲಿರುವುದಿಲ್ಲ. ಹೀಗಾಗಿ ಸಣ್ಣ ಅಂಗಡಿಗಳಿಗೆ ಹೋದಾಗ ಮೊದಲು ಏನನ್ನು ಖರೀದಿಸಬೇಕೆಂದು ಅಂದುಕೊಂಡಿರುತ್ತೇವೊ ಅವನ್ನಷ್ಟೇ ಕೊಳ್ಳುತ್ತೇವೆ.
ದೇಶದಾದ್ಯಂತ ಮಾಲ್ ಸ್ವರೂಪದ ಬೃಹತ್ ಮಳಿಗೆಗಳನ್ನು ಹೊಂದಿರುವ ಮಾರ್ಟ್‌ಗಳು ಕೂಪನ್, ಬೋನಸ್ ಪಾಯಿಂಟ್, ಆಫರ್‌ಗಳಂತಹ ಆಮಿಷಗಳನ್ನು ಒಡ್ಡಿ, ಹೆಚ್ಚು ಖರೀದಿಸುವ ಧಾವಂತಕ್ಕೆ ಗ್ರಾಹಕರನ್ನು ದೂಡುತ್ತವೆ. ಗ್ರಾಹಕರನ್ನು ಕೊಳ್ಳುಬಾಕರನ್ನಾಗಿ ಮಾಡಲು ಹೊಸ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತವೆ.
ಸ್ಟಾರ್ಟ್‌ಅಪ್‌ನಲ್ಲಿ ಕಾರ್ಯ ನಿರ್ವಹಿಸುವ ಪರಿಚಿತರೊಬ್ಬರು, ತಾವು ಸದ್ಯ ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ಒಂದರ ವಿವರಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಕನ್ನಡಕಗಳನ್ನು ಮಾರುವ ಸಂಸ್ಥೆ, ದೇಶದ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ ಮಳಿಗೆಗಳನ್ನು ತೆರೆದಿದ್ದು, ಅಲ್ಲಿಗೆ ಭೇಟಿ ನೀಡುವ ಗ್ರಾಹಕರ ಮನಃಸ್ಥಿತಿ ಅರಿಯಲು ಯಾಂತ್ರಿಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ. ಅಂಗಡಿಯಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ವಿಶ್ಲೇಷಿಸಿ, ಗ್ರಾಹಕರು ಯಾವ ಉತ್ಪನ್ನಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಮತ್ತು ಅಂಗಡಿಯ ಯಾವ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ತಿಳಿಯಲಾಗುತ್ತದೆ. ಈ ನಿದರ್ಶನ ಗ್ರಾಹಕರನ್ನು ಸೆಳೆಯಲು, ತಮ್ಮ ಬಳಿ ಹೆಚ್ಚು ಖರೀದಿಸುವಂತೆ ಮಾಡಲು ವ್ಯಾಪಾರಿ ಸಂಸ್ಥೆಗಳು ಹೇಗೆ ಹೊಸ ದಾರಿಗಳನ್ನು ಅನ್ವೇಷಿಸುತ್ತವೆ ಎಂಬುದಕ್ಕೆ ಒಂದು ನಿದರ್ಶನವಷ್ಟೆ. ಸೀಮಿತ ಸಂಪನ್ಮೂಲ ಮತ್ತು ತಿಳಿವಳಿಕೆಯ ಕಾರಣದಿಂದ ಇಂತಹ ತಂತ್ರಗಳನ್ನು ಹೆಣೆಯಲಾಗದ ಸಣ್ಣ ವ್ಯಾಪಾರಿಗಳು ಮಾರುವ ಉತ್ಪನ್ನದ ಬೆಲೆ ಸ್ವಲ್ಪ ಹೆಚ್ಚೇ ಇದ್ದರೂ, ಅದು ಗ್ರಾಹಕರ ಜೇಬಿಗೆ ದೊಡ್ಡ ಮಾರ್ಟ್‌ಗಳಂತೆ ಯೋಜಿತ ರೀತಿಯಲ್ಲಿ ಕನ್ನ ಹಾಕಲಾರದು.
ದೊಡ್ಡ ಮಾರ್ಟ್‌ಗಳ ಕಾರ್ಯತಂತ್ರ ಹೇಗಿರುತ್ತದೆಂದರೆ, ಬೇಕೆನಿಸಿದ್ದೆಲ್ಲವನ್ನೂ ಖರೀದಿಸಿ ಬಿಲ್ಲಿಂಗ್ ಕೌಂಟರ್ ಮುಂದಿರುವ ಸಾಲಿನಲ್ಲಿ ನಿಂತಾಗಲೂ ನಮ್ಮೆದುರು ಕೆಲವು ವಸ್ತುಗಳು ಪ್ರತ್ಯಕ್ಷವಾಗುತ್ತವೆ. ಸ್ವಲ್ಪ ಹೊತ್ತು ನೋಡುತ್ತಿದ್ದಂತೆ, ಇದೂ
ಬೇಕಾಗುತ್ತದೆ ಎನ್ನಿಸುವುದಕ್ಕೆ ಶುರುವಾಗಿ, ಬಿಲ್ ಪಾವತಿಸುವ ಕ್ಷಣದಲ್ಲೂ ಒಂದೆರಡು ವಸ್ತುಗಳು ಬಿಲ್‌ಗೆ ಸೇರುತ್ತವೆ.
ಬೇಕಿರುವ ವಸ್ತುಗಳಿಗೂ, ಬೇಕೆನಿಸುವ ವಸ್ತುಗಳಿಗೂ ಇರುವ ಅಂತರದ ಕುರಿತು ನಮಗೆ ಸ್ಪಷ್ಟತೆ ಇದ್ದಾಗ ಮಾತ್ರ ದೊಡ್ಡ ಮಾರ್ಟ್‌ಗಳಲ್ಲಿನ ಖರೀದಿ ಮೂಲಕ ಒಂದಿಷ್ಟು ಹಣ ಉಳಿಸಲು ಸಾಧ್ಯ. ಇಲ್ಲವಾದಲ್ಲಿ, ಹೆಚ್ಚು ಹಣ ಉಳಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸುತ್ತೇವೆ, ಉಳಿಸಿದ್ದಕ್ಕಿಂತ ಹೆಚ್ಚು ಕಳೆದುಕೊಂಡಿರುತ್ತೇವೆ.
ಒಟ್ಟು ವಹಿವಾಟಿನ ಗಾತ್ರ ಹಿಗ್ಗಿಸಲು ಹೊಸ ಕಾರ್ಯತಂತ್ರಗಳ ಮೊರೆ ಹೋಗುವ ಮಾರ್ಟ್‌ಗಳು, ಉಳಿಸುವ ಉಮೇದಿನಲ್ಲಿ ಗಳಿಸಿದ್ದನ್ನು ಕರಗಿಸುವ ಮಾರುಕಟ್ಟೆಯ ಆಟಕ್ಕೆ ನಮ್ಮನ್ನು ನಾಜೂಕಾಗಿ ಅಣಿಗೊಳಿಸಿರುತ್ತವೆ. ಬೆಲೆ ಇರುವುದು ಬರೀ ನಾವು ವ್ಯಯಿಸುವ ಹಣಕ್ಕಷ್ಟೇ ಅಲ್ಲ, ಕಳೆಯುವ ಸಮಯಕ್ಕೂ ಎಂಬ ಅರಿವು, ನಮಗಿರಿವಿಲ್ಲದಂತೆಯೇ ನಾವು ಏನೆಲ್ಲ ಕಳೆದುಕೊಳ್ಳುತ್ತಿರುತ್ತೇವೆ ಎನ್ನುವ ಸ್ಪಷ್ಟತೆ ದೊರಕಿಸಿಕೊಡಲಿದೆ. ಕೊಳ್ಳುಬಾಕ ಸಂಸ್ಕೃತಿಯ ತೀವ್ರತೆಯಲ್ಲಿ ವಸ್ತುಗಳ ಉಪಯೋಗದ ನೈಜ ಸಾಧ್ಯತೆಯನ್ನೇ ಮರೆತಿದ್ದೇವೆ. ಅಗತ್ಯವಿಲ್ಲದ ವಸ್ತುಗಳು ಜೀವನಕ್ಕೆ ಭಾರ ಎನ್ನುವ ಸತ್ಯವನ್ನು ಮರೆತಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.