ADVERTISEMENT

ಸಂಗತ | ಬಿಹಾರ ಚದುರಂಗ: ದಲಿತರ ಮತಗಣಿತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:24 IST
Last Updated 21 ನವೆಂಬರ್ 2025, 0:24 IST
   

ಬಿಹಾರದಲ್ಲಿನ ವಿಧಾನಸಭೆ ಚುನಾವಣೆಯ ಫಲಿತಾಂಶ ಹಲವು ಆಯಾಮದ ಚರ್ಚೆಗೆ ಕಾರಣವಾಗಿದೆ.
ಶೇ 20ರಷ್ಟು ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆ ಇರುವ ಬಿಹಾರದಲ್ಲಿ 38 ಎಸ್‌ಸಿ, 2 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. 2007ರಲ್ಲಿ ಪ್ರಬಲ ಚಮ್ಮಾರ್, ಪಾಸ್ವಾನ್ ಜಾತಿಗಳೊಡನೆ ಸ್ಪರ್ಧಿಸಲಾಗದೆ ಹೊರಗುಳಿದವರಿಗಾಗಿ ‘ಮಹಾದಲಿತ್ ರಾಜಕಾರಣ’ದ ದಾಳ ಉರುಳಿಸಿದವರು ನಿತೀಶ್ ಕುಮಾರ್. ಇದೊಂದು ಪರ್ಯಾಯ ‘ಒಳಮೀಸಲಾತಿ’ಯೇ ಆಗಿತ್ತು.

ಮೀಸಲಾತಿಯ ವರ್ಗೀಕರಣದ ಗೋಜಿಗೆ ಹೋಗದೆ ಸರ್ಕಾರಿ ಸೌಲಭ್ಯಗಳ ವಿತರಣೆ, ಪ್ರಾತಿನಿಧ್ಯದ ಅವಕಾಶಗಳಲ್ಲಿ ಒಟ್ಟು 23 ಜಾತಿಗಳ ಪೈಕಿ ಮಹಾದಲಿತರೆನಿಸಿದ 19 ಜಾತಿಗಳಿಗೆ ಆದ್ಯತೆ ಸಿಗುವಂತೆ ಮಾಡಿದವರು ನಿತೀಶ್. ರಾಜಕೀಯ ಒತ್ತಡ ತಂದು ಸ್ಪೃಶ್ಯ ದಲಿತರೆನಿಸಿದ ಪಾಸಿ, ದೋಭಿ ಜಾತಿಗಳೂ ಮಹಾದಲಿತರೊಳಗೆ ಬಂದರು. ಶೇ 32ರಷ್ಟು ಜನಸಂಖ್ಯೆ ಇರುವ ಚಮ್ಮಾರರು ಬೀದಿಗೆ ಇಳಿದರು. ಮಹಾದಲಿತರೊಳಗೆ ಜಾಗ ಗಿಟ್ಟಿಸಿದರು. ಇಡೀ ಪ್ರಕ್ರಿಯೆ ನಿತೀಶರಿಗೆ ದಲಿತರೊಳಗೆ ಮತಬ್ಯಾಂಕ್ ಸೃಷ್ಟಿಸಿತು. ಪ್ರಬಲ ಸಮುದಾಯವೆನಿಸಿದ ಪಾಸ್ವಾನ್‌ರ ಮುನಿಸಿಗೂ ಕಾರಣವಾಯಿತು. 2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 45 ಸ್ಥಾನಕ್ಕೆ ಇಳಿಯಲು ಚಿರಾಗ್ ಪಾಸ್ವಾನ್‌ರ ಏಟೇ ಕಾರಣವಾಗಿತ್ತು.

ಈ ಸಲದ ಫಲಿತಾಂಶ ದಲಿತರೊಳಗಿನ ಬಿರುಕುಗಳನ್ನು ಮುಚ್ಚಿದೆ. ನಿತೀಶ್ ಮತ್ತು ಪಾಸ್ವಾನ್‌ರನ್ನು ಬೆಸೆದಿದೆ. 38 ಮೀಸಲು ಕ್ಷೇತ್ರಗಳಲ್ಲಿ 34 ಕಡೆ ಎನ್‌ಡಿಎ ಪಾರಮ್ಯ ಮೆರೆದಿದೆ. ದಲಿತ ನೆಲೆಯ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಮತ್ತು ಜಿತನ್ ರಾಂ ಮಾಂಝಿ ಅವರ ಎಚ್‌ಎಎಂ, ಮತ ಶೇಖರಣೆಯಲ್ಲಿ ನ್ಯಾಯ ಒದಗಿಸಿರುವುದು ಎದ್ದು ಕಾಣುತ್ತದೆ. ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಜೆಡಿಯು 15ರಲ್ಲಿ ಸ್ಪರ್ಧಿಸಿ 14, ಎಲ್‌ಜೆಪಿ 8ರಲ್ಲಿ 5 ಕಡೆ ಜಯ ಸಾಧಿಸಿದ್ದರೆ, ಎಚ್‌ಎಎಂ ಸ್ಪರ್ಧಿಸಿದ 4 ಕ್ಷೇತ್ರ ಗಳಲ್ಲೂ ಜಯಿಸಿದೆ. ಬಿಜೆಪಿ  ಸ್ಪರ್ಧಿಸಿದ್ದೂ ಹನ್ನೊಂದು, ಗೆದ್ದದ್ದೂ ಹನ್ನೊಂದು. ಆರ್‌ಜೆಡಿ 19ರಲ್ಲಿ ಸ್ಪರ್ಧಿಸಿದರೂ, ದಕ್ಕಿದ್ದು 4 ಮಾತ್ರ. ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಖಾತೆ ತೆರೆಯಲಿಲ್ಲ. ಕಳೆದ ಸಲ 4 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿದ್ದ ಎಡ ಪಕ್ಷಗಳು ಈ ಸಲ 8 ಕಡೆ ಸ್ಪರ್ಧಿಸಿದರೂ ದಕ್ಕಿದ್ದು ಶೂನ್ಯ. ಎರಡು ಎಸ್‌ಟಿ ಮೀಸಲು ಕ್ಷೇತ್ರಗಳು ಕಾಂಗ್ರೆಸ್, ಬಿಜೆಪಿ ಪಾಲಾಗಿವೆ. ಪ್ರಬಲ ಪಾಸ್ವಾನ್ ಮತ್ತು ಚಮ್ಮಾರ್ ಜಾತಿಗಳಿಂದ ತಲಾ 11 ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.

ADVERTISEMENT

ಮಹಾದಲಿತರಲ್ಲಿ ಪ್ರಮುಖ ಜಾತಿ ಎನಿಸಿದ ಇಲಿ ಹಿಡಿಯುವ ಕಾಯಕದ ಮುಷಹರ್ ಸಮುದಾಯದಿಂದ ಮೊದಲ ಬಾರಿಗೆ 9 ಶಾಸಕರು ಆಯ್ಕೆಯಾಗಿದ್ದಾರೆ. ಪಾಸಿ ಮತ್ತು ದೋಭಿ ಸಮುದಾಯದಿಂದ ತಲಾ ಇಬ್ಬರು ಶಾಸಕರಾಗಿದ್ದಾರೆ. ಸಂಖ್ಯಾಬಲದಲ್ಲಿ ನಗಣ್ಯವೆನಿಸುವ ಭುಲಿಯಾ, ರಾಜ್ವರ್, ಸರ್ದರ್ ಸಮುದಾಯಗಳಿಂದ ತಲಾ ಒಬ್ಬರು ಗೆದ್ದಿದ್ದಾರೆ. ಕಳೆದ ಸಲ– ಚಮ್ಮಾರ್, ಪಾಸ್ವಾನ್ ತಲಾ 13ರಲ್ಲಿ ಗೆದ್ದಿದ್ದರು. ಮುಷಹರ್ 7, ಪಾಸಿ 3, ಚೌಪಾಲ್, ವಾಲ್ಮೀಕಿಯಲ್ಲಿ ತಲಾ ಒಬ್ಬರು ಶಾಸಕರಿದ್ದರು.

ಈ ಬಾರಿ ಆರ್‌ಜೆಡಿಯಿಂದ ಗೆದ್ದ ನಾಲ್ವರಲ್ಲಿ ಇಬ್ಬರು ಚಮ್ಮಾರರು, ತಲಾ ಒಬ್ಬರು ಮುಷಹರ್ ಮತ್ತು ಪಾಸ್ವಾನರು. ಜೆಡಿಯುನಿಂದ ಗೆದ್ದ 14ರಲ್ಲಿ 5 ಚಮ್ಮಾರರು, 1 ಪಾಸ್ವಾನ್, 4 ಮುಷಹರ್, 2 ಪಾಸಿ, 1 ದೋಭಿ, 1 ಸರ್ದರ್. ಬಿಜೆಪಿಯ 11 ಶಾಸಕರಲ್ಲಿ ಮೂವರು ಚಮ್ಮಾರರಾದರೆ, ಏಳು ಪಾಸ್ವಾನರು, ಒಬ್ಬರು ಮುಷಹರ್. ಎಲ್‌ಜೆಪಿ ಗೆದ್ದ ದಲಿತ ಶಾಸಕರಲ್ಲಿ ಒಬ್ಬರು ಚಮ್ಮಾರ್, ಇಬ್ಬರು ಪಾಸ್ವಾನ್, ತಲಾ ಒಬ್ಬರು ದೋಭಿ ಮತ್ತು ರಾಜ್ವರ್ ಸಮುದಾಯದವರು. ಎಚ್‌ಎಎಂ ಪಕ್ಷದಿಂದ ಮೂವರು ಮುಷಹರ್, ಒಬ್ಬರು ಭುಲಿಯಾ ಸಮುದಾಯದವರು ಶಾಸಕರಾಗಿದ್ದಾರೆ. ಶಾಸಕರಾಗಿ ಆಯ್ಕೆಯಾದ 7 ದಲಿತ ಮಹಿಳೆಯರು ಎನ್‌ಡಿಎದವರೇ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ದಲಿತ ಸಮಾಜದವರೇ. ಕಾಂಗ್ರೆಸ್ ಪಕ್ಷ ಬಿಹಾರದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕಳೆದ ಮಾರ್ಚ್‌ನಲ್ಲಿ ಚಮ್ಮಾರ್ ಸಮುದಾಯದ ರಾಜೇಶ್ ರಾಮ್‌ ಅವರನ್ನು ನೇಮಿಸಿತು. ಈ ಇಬ್ಬರನ್ನು ಸಮರ್ಥವಾಗಿ ಬಳಸಿಕೊಳ್ಳಲಾಗದೆ ಕಾಂಗ್ರೆಸ್ ಮುಗ್ಗರಿಸಿದೆ. ರಾಜೇಶ್‌ರಿಗೆ ತಮ್ಮ ಕ್ಷೇತ್ರವನ್ನೂ ಉಳಿಸಿಕೊಳ್ಳಲಾಗಲಿಲ್ಲ.

ಚಿರಾಗ್ ಪಾಸ್ವಾನ್ ಮತ್ತು ಜಿತನ್ ಮಾಂಝಿ ಅವರನ್ನು ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಎನ್‌ಡಿಎ ಯಶಸ್ಸು ಸಾಧಿಸಿದೆ. ಕುಂಕುಮಧಾರಿ ಚಿರಾಗ್ ಪಾಸ್ವಾನ್ ಪ್ರಭಾವ ದಲಿತರಾಚೆಗೂ ವಿಸ್ತರಿಸಿದೆ.

ರಾಷ್ಟ್ರೀಯ ಪಕ್ಷ ಬಿಎಸ್‌ಪಿ ಸಾಮಾನ್ಯ ಕ್ಷೇತ್ರ ಒಂದರಲ್ಲಿ ಗೆಲುವು ಕಂಡಿದೆ. ಮೀಸಲು ಕ್ಷೇತ್ರಗಳಲ್ಲಿ ಬಿಎಸ್‌ಪಿ ಪ್ರಭಾವ ಮಂಕಾಗಿದೆ. ಒಂದು ಕ್ಷೇತ್ರದಲ್ಲಿ ಎರಡನೇ ಸ್ಥಾನ ದಕ್ಕಿದರೆ, 13 ಕಡೆಗಳಲ್ಲಿ ಮೂರನೇ ಸ್ಥಾನದಲ್ಲಿದೆ.

ಒಟ್ಟಾರೆ ಬಿಹಾರದ ದಲಿತ ರಾಜಕಾರಣ ಹೊರಳು ದಾರಿಯಲ್ಲಿದೆ. ದಲಿತ ಮಹಿಳೆ, ಅಲಕ್ಷಿತ ಜಾತಿಗಳ ಪ್ರಾತಿನಿಧ್ಯಗಳಲ್ಲಿನ ಹೆಚ್ಚಳ ಪ್ರಜಾಪ್ರಭುತ್ವದ ಆಶಯಗಳ ಕುರಿತಾದ ಭರವಸೆಗೆ ಕಾರಣವಾಗಿದೆ.

(ಲೇಖಕ: ಆರ್‌ಎಸ್‌ಎಸ್‌ ಕಾರ್ಯಕರ್ತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.