ADVERTISEMENT

ಸಂಗತ | ಬಿರ್ಸಾ: ಬುಡಕಟ್ಟುಗಳ ಏಕೀಕರಣದ ಶಿಲ್ಪಿ

ಆದಿವಾಸಿ ಬುಡಕಟ್ಟುಗಳ ಸ್ಫೂರ್ತಿಯ ಚಿಲುಮೆ ಬಿರ್ಸಾ ಮುಂಡಾ ಜನಿಸಿ 150 ವರ್ಷ ತುಂಬಿವೆ; ಆತನ ಬಲಿದಾನಕ್ಕೆ ಈಗ 125 ವರ್ಷ.

​ಪ್ರಜಾವಾಣಿ ವಾರ್ತೆ
ಅರುಣ್ ಜೋಳದ ಕೂಡ್ಲಿಗಿ
Published 14 ನವೆಂಬರ್ 2025, 19:30 IST
Last Updated 14 ನವೆಂಬರ್ 2025, 19:30 IST
..
..   

ಈ ದೇಶದ ದಲಿತ, ದಮನಿತ, ಅಸ್ಪೃಶ್ಯರಿಗೆ ಅಂಬೇಡ್ಕರ್ ಒಂದು ಶಕ್ತಿಯಾಗಿರುವಂತೆ, ಭಾರತದ ಆದಿವಾಸಿ ಬುಡಕಟ್ಟುಗಳ ಸ್ವಾಭಿಮಾನ ಮತ್ತು ಹೋರಾಟದ ಕಿಚ್ಚಿನ ಗುರುತು– ಬಿರ್ಸಾ ಮುಂಡಾ. ಜಾರ್ಖಂಡ್ ರಾಜ್ಯ ರಚನೆಯಾದ (ನ. 15, 2000) ನಂತರವಂತೂ ಆದಿವಾಸಿಗಳ ನಾಯಕನಾಗಿ ಬಿರ್ಸಾ ಮುಂಡಾ ದೊಡ್ಡಮಟ್ಟದಲ್ಲಿ ಮುನ್ನೆಲೆಗೆ ಬರತೊಡಗಿದ. ಭಾರತದ ಪಾರ್ಲಿಮೆಂಟ್ ಭವನದಲ್ಲಿ ಈತನ ಭಾವಚಿತ್ರವಿದೆ. ಅದು, ಅಲ್ಲಿರುವ ಆದಿವಾಸಿ ಸಮುದಾಯಕ್ಕೆ ಸಂಬಂಧಿಸಿದ ಏಕೈಕ ಪ್ರಾತಿನಿಧಿಕ ಭಾವಚಿತ್ರ.

ರಾಂಚಿ ಬಳಿಯ ಉಳಿಹಾಟು ಎಂಬ ಬುಡಕಟ್ಟು ಹಾಡಿಯಲ್ಲಿ ಸುಗನ ಮುಂಡಾ ಮತ್ತು ಕರ್ಮಿ ಹಾತು ಅವರ ಮಗನಾಗಿ ಬಿರ್ಸಾ ಜನಿಸಿದ್ದು ನವೆಂಬರ್ 15ರ 1875ರಂದು. ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷ್‌ ಸಾಮ್ರಾಜ್ಯಕ್ಕೆ ದುಃಸ್ವಪ್ನದಂತಿದ್ದ ಬಿರ್ಸಾ, 1900ರ ಜೂನ್ 9ರಂದು ರಾಂಚಿಯ ಕೇಂದ್ರ ಕಾರಾಗೃಹದಲ್ಲಿ ಬ್ರಿಟಿಷ್ ಪ್ರಭುತ್ವದಿಂದ ಹತ್ಯೆಗೊಳಗಾದ. ಆಗಿನ್ನೂ ಆತನಿಗೆ 25 ವರ್ಷ. 

ಒಂದೆಡೆ ಬ್ರಿಟಿಷರು, ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಲು ಆದಿವಾಸಿಗಳನ್ನು ನಿಯಂತ್ರಿಸತೊಡಗಿದ್ದರು; ಮತ್ತೊಂದೆಡೆ, ಆದಿವಾಸಿಗಳನ್ನು ವ್ಯಾಪಾರಿಗಳು, ಲೇವಾದೇವಿಗಾರರು ಮತ್ತು ಜಮೀನ್ದಾರರು ಶೋಷಿಸುತ್ತಿದ್ದರು. ಇವರ ನಡುವೆ, ಮತಾಂತರಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಆದಿವಾಸಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಮತ್ತು ತಮ್ಮ ಧರ್ಮದಲ್ಲಿ ಉಳಿಸಿಕೊಳ್ಳಲು ಸ್ಪರ್ಧೆ ನಡೆಸಿದ್ದರು. ಹೀಗೆ ಆದಿವಾಸಿಗಳ ಮೇಲೆ ಹಲವು ದಿಕ್ಕುಗಳಿಂದ ದಾಳಿಗಳು ಪ್ರಾರಂಭವಾದಾಗ, ವಿವಿಧ ಪ್ರದೇಶಗಳಲ್ಲಿ, ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟನೆಗಳು ಆರಂಭವಾದವು. ಇಂತಹ ಸಂದರ್ಭದಲ್ಲಿ ಓರ್ವ ರೈತ ಗುತ್ತಿಗೆದಾರನ ಮಗನಾದ ಬಿರ್ಸಾ ಮುಂಡಾ, ಆದಿವಾಸಿಗಳ ಗಟ್ಟಿ ಧ್ವನಿಯಾಗಿ ಮುನ್ನೆಲೆಗೆ ಬಂದ.

ADVERTISEMENT

ಬಿರ್ಸಾ ತನ್ನನ್ನು ತಾನು ದೇವರ ಅವತಾರ ಎಂದು ಘೋಷಿಸಿಕೊಂಡ. ಪ್ರಕೃತಿಯನ್ನೇ ದೇವರು ಎಂಬ ಬುಡಕಟ್ಟುಗಳ ಆದಿಮ ನಂಬಿಕೆಯ ಬುನಾದಿಯ ಮೇಲೆ ಹೊಸ ಬುಡಕಟ್ಟು ಧರ್ಮವನ್ನು ಸ್ಥಾಪಿಸಿದ. ಪ್ರಕೃತಿಯೇ ದೇವರೆಂದೂ, ಸಮಾನ ಸಮಾಜವೇ ನೀತಿಯೆಂದು ಹೇಳುವುದರ ಜೊತೆಗೆ– ಸುಳ್ಳು, ವ್ಯಭಿಚಾರ, ಕಳ್ಳತನ, ಭಿಕ್ಷಾಟನೆ, ಕಪಟ, ಸ್ವಾರ್ಥಗಳು ನಿಷಿದ್ಧ ಎಂದು ಘೋಷಿಸಿದ. ಬಿರ್ಸಾ ಮುಂಡಾನ ಹೊಸ ಧರ್ಮದ ನೀತಿಗಳು ಆದಿವಾಸಿಗಳ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರಿಂದ, ಆತ ಬಹುಬೇಗ ಜನಪ್ರಿಯನಾದ. ಆತನನ್ನು ‘ದೇವಮಾನವ’ ಎಂದೂ, ‘ಧರ್ತಿ ಅಬ್ಬಾ’ (ಭೂಮಿಯ ತಂದೆ) ಎಂದೂ ಜನ ಕೊಂಡಾಡಿದರು. 1894ರ ಅಕ್ಟೋಬರ್ 1ರಂದು ಚೋಟಾ ನಾಗಪುರದಲ್ಲಿ ನಡೆದ ಆದಿವಾಸಿಗಳ ಬೃಹತ್ ಮೆರವಣಿಗೆಯಲ್ಲಿ ‘ಉಳುವವನೇ ಭೂಮಿಯ ಒಡೆಯನಾಗಬೇಕು’, ‘ಬ್ರಿಟನ್ ಮಹಾರಾಣಿಯ ಆಡಳಿತವನ್ನು ಕೊನೆಗಾಣಿಸಬೇಕು’ ಎಂದು ಬಿರ್ಸಾ ಗರ್ಜಿಸಿದ್ದ.

ಈ ಬುಡಕಟ್ಟು ಧೀರನ ಬಗ್ಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸಂಶೋಧನೆಗಳು ಆರಂಭವಾದವು. 1940ರಲ್ಲಿ ಬಿಹಾರ ಸರ್ಕಾರ ಪ್ರಕಟಿಸಿದ ‘ಸಂತಾಲರ ದಂಗೆ’ ಕುರಿತ ಪುಸ್ತಕದಲ್ಲಿ ಮೊದಲ ಬಾರಿಗೆ ಬಿರ್ಸಾ ಮುಂಡಾನ ಬಗ್ಗೆ ಹೊರಜಗತ್ತಿಗೆ ತಿಳಿಯಿತು. ಬಿಹಾರದ ಬುಡಕಟ್ಟು ಸಂಶೋಧನಾ ಸಂಸ್ಥೆಯು ಎಸ್.ಪಿ. ಸಿನ್ಹಾ ಅವರ ಮೂಲಕ ‘ಲೈಫ್ ಅಂಡ್ ಟೈಮ್ಸ್ ಆಫ್ ಬಿರ್ಸಾ ಭಗವಾನ್’ (1964) ಕುರಿತ ಯೋಜನೆಯಲ್ಲಿ ಬಿರ್ಸಾನ ಬಗ್ಗೆ ಸಂಶೋಧನೆ ಮಾಡಿಸಿತು. ಇದೇ ಸಮಯದಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಕೆ. ಸುರೇಶ್ ಸಿಂಗ್, ಬಿರ್ಸಾ ಮುಂಡಾನ ಬಗ್ಗೆ ಸಂಶೋಧನೆ ಮಾಡಿ, ತಮ್ಮ ಕೃತಿಯನ್ನು 1966ರಲ್ಲಿ ಪ್ರಕಟಿಸಿದರು. ಅಂದಿನಿಂದ ಬಿರ್ಸಾ ಮುಂಡಾನ ಬದುಕಿನ ವಿದ್ಯಮಾನಗಳು ಮುನ್ನೆಲೆಗೆ ಬರುತ್ತಿವೆ.

ಸುರೇಶ್ ಸಿಂಗ್ ಅವರ ಸಂಶೋಧನೆಯನ್ನು ಆಧರಿಸಿ, ಮಹಾಶ್ವೇತಾದೇವಿ ಅವರು ಬರೆದ ‘ಅರಣ್ಯೇ ಅಧಿಕಾರ್’ ಕಾದಂಬರಿಗೆ 1977ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಆ ಕಾದಂಬರಿಯನ್ನು ಜಿ. ಕುಮಾರಪ್ಪ ಮತ್ತು ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಸಿನಿಮಾಗಳು, ಸಾಕ್ಷ್ಯಚಿತ್ರಗಳು, ಸಾಮಾಜಿಕ ಜಾಲತಾಣಗಳು ಕೂಡ ಬಿರ್ಸಾ ಮುಂಡಾನನ್ನು ಜನಪ್ರಿಯಗೊಳಿಸಿವೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯ ನಿರ್ಮಿಸಿದ ‘ಬಿರ್ಸಾ ಮುಂಡಾ’, ದೂರದರ್ಶನ ನಿರ್ಮಿಸಿದ ‘ಬಿರ್ಸಾ ಮುಂಡಾ: ದ ರಿಯಲ್ ಹೀರೊ’ ಮತ್ತು ಪ್ರಸಾರ ಭಾರತಿ ತಯಾರಿಸಿದ ‘ಬಿರ್ಸಾ ಮುಂಡಾ’ ಸಾಕ್ಷ್ಯಚಿತ್ರ ಪ್ರಮುಖವಾದವು.

ಕರ್ನಾಟಕದಲ್ಲಿ ಟಿಪ್ಪು ಸುಲ್ತಾನನ ಬಗ್ಗೆ ಬಲಪಂಥೀಯ ಚರಿತ್ರೆಕಾರರು ಹುಟ್ಟುಹಾಕಿದ ಸುಳ್ಳುಗಳಂತೆ ಬಿರ್ಸಾ ಮುಂಡಾನ ಬಗ್ಗೆಯೂ ಅಪಪ್ರಚಾರಗಳು ನಡೆದಿವೆ. ಈಗಲೂ ಜಾರ್ಖಂಡ್ ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟುಗಳಲ್ಲಿ ಬಿರ್ಸಾನ ವಿರುದ್ಧದ ಪ್ರಚಾರವಿದೆ. ಎಲ್ಲ ಅಪಪ್ರಚಾರಗಳನ್ನೂ ಮೀರಿಯೂ ಬಿರ್ಸಾ ಮುಂಡಾ ಇಂದು ಇಡೀ ದೇಶದ ಬುಡಕಟ್ಟು ಯುವಜನರಿಗೆ ಸ್ಫೂರ್ತಿಯ ಚಿಲುಮೆ. ಹಾಗಾಗಿಯೇ ಬಿರ್ಸಾನ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಭಾರತದ ಆದಿವಾಸಿ ಬುಡಕಟ್ಟುಗಳು ತಮ್ಮ ಹೋರಾಟದ ಸಂಗಾತಿಯನ್ನು ಸ್ಮರಿಸುತ್ತಿವೆ.

ಸ್ಥಳೀಯ ಸಂಸ್ಕೃತಿ ಮತ್ತು ಸ್ಮೃತಿಗಳ ಸಂರಕ್ಷಣೆಯ ದೃಷ್ಟಿಯಿಂದಲೂ ಬಿರ್ಸಾ ಮುಂಡಾ ಈಗಲೂ ಸಮಕಾಲೀನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.