ADVERTISEMENT

ಸಂಗತ: ಜಾನುವಾರಿಗೂ ಮೌಢ್ಯದ ಜಾಡ್ಯ

ಕೊಟ್ಟಿಗೆಯಲ್ಲಿನ ಕಂದಾಚಾರಗಳಿಂದ ಎಲ್ಲ ರೀತಿಯಲ್ಲಿ ಪೆಟ್ಟು ತಿನ್ನುವವರು ದುರ್ಬಲರೆ

ಡಾ.ಮುರಳೀಧರ ಕಿರಣಕೆರೆ
Published 15 ಮಾರ್ಚ್ 2021, 19:31 IST
Last Updated 15 ಮಾರ್ಚ್ 2021, 19:31 IST
ಜಾನುವಾರು–ಸಾಂದರ್ಭಿಕ ಚಿತ್ರ
ಜಾನುವಾರು–ಸಾಂದರ್ಭಿಕ ಚಿತ್ರ   

ಆ ರೈತನಿಗೆ ನನ್ನ ಬಗ್ಗೆ ಖಂಡಿತಾ ಅಸಮಾಧಾನ ಇದ್ದಿರಬೇಕು. ಬಾಯಿ ಬಿಟ್ಟು ಹೇಳದಿದ್ದರೂ ಆತನ ವರ್ತನೆಯಿಂದಲೇ ಅದು ಸ್ಪಷ್ಟವಾಗಿತ್ತು. ಅಮಾವಾಸ್ಯೆಯಂದು ಅವನ ಹಸು ಹೆತ್ತದ್ದೇ ಎಲ್ಲಾ ಸಮಸ್ಯೆಗೂ ಮೂಲ! ಆ ದಿನ ದನ ಕರು ಹಾಕಿದರೆ ಮನೆಗೆ ಕೆಡುಕು ಎಂಬುದೊಂದು ನಂಬಿಕೆ.

ಮುಚ್ಚಟೆಯಿಂದ ಸಾಕಿದ್ದ ಹಸುವನ್ನು ಮಾರಲೇಬೇಕಾದ ಅನಿವಾರ್ಯದಿಂದ ಕುಗ್ಗಿ ಹೋಗಿದ್ದ. ಆ ಮುಗ್ಧ ಪ್ರಾಣಿ ಜೊತೆಗೆ ಮತ್ತೊಂದು ಮಹಾಪರಾಧ ಮಾಡಿತ್ತು. ಕರು ಹಾಕಿ ಎರಡು– ಮೂರು ಗಂಟೆಗಳಲ್ಲೇ ತನ್ನ ಕಂದನ ಮೇಲೆ ಮಲಗಿತ್ತು. ಆ ಕರು ಸತ್ತುಹೋಗಿತ್ತು. ಇಂಥ ದೋಷಿ ಹಸುವನ್ನು ಮಾರಲು ಹೊರಟವನನ್ನು ತಡೆದಿದ್ದೆ.

ಕರು ಹಾಕಿದಾಗ ತಿಥಿ, ನಕ್ಷತ್ರ ನೋಡುವುದೇ ಒಂದು ಮೂಢನಂಬಿಕೆ. ಮನೆಯೊಳಗೆ ಮಗು ಹುಟ್ಟಿದಾಗ ಪರಿಗಣನೆಗೆ ಬಾರದ ಹುಣ್ಣಿಮೆ, ಅಮಾವಾಸ್ಯೆಯ ಲೆಕ್ಕ ಕೊಟ್ಟಿಗೆಯಲ್ಲಿ ಮಾತ್ರ ಯಾಕೆ ಎಂದೆಲ್ಲಾ ಅವನನ್ನು ಪ್ರಶ್ನಿಸುತ್ತಾ ಮನವರಿಕೆ ಮಾಡಿದ್ದೆ. ಹೆರಿಗೆ ನಂತರದ ಸುಸ್ತು, ಹೊಟ್ಟೆಯ ಬಾಧಕದಿಂದ ತಿಳಿಯದೇ ಕರು ಮೇಲೆ ಮಲಗಿಬಿಟ್ಟಿದೆ. ಹೀಗಾಗುವುದು ತುಂಬಾ ಅಪರೂಪವಾದರೂ ಆಗಲೇಬಾರದು ಎಂದೇನಿಲ್ಲ. ಇಷ್ಟಕ್ಕೆಲ್ಲ ಯಾವ ಕಂಟಕವೂ ಬಾರದು ಎಂದೆಲ್ಲಾ ವಿವರಿಸಿದ ನಂತರ ಒಲ್ಲದ ಮನಸ್ಸಿನಿಂದಲೇ ಮಾರುವ ಯೋಚನೆಯನ್ನು ಕೈಬಿಟ್ಟಿದ್ದ.

ADVERTISEMENT

ಇದಾಗಿ ಒಂದೇ ವಾರಕ್ಕೆ ಹಸುವಿನ ಮೈಮೇಲೆಲ್ಲಾ ಸಿಡುಬಿನ ತರಹದ ಗುಳ್ಳೆಗಳೆದ್ದವು. ಅವನ ದೃಷ್ಟಿಯಲ್ಲಿ ಇದು ಮಾರಿಯ ಕೆಂಗಣ್ಣಿನಿಂದ ಬಂದ ‘ಅಮ್ಮ’. ವೈರಾಣುಗಳು ಹುಟ್ಟುಹಾಕುವ ಚರ್ಮ ಗಂಟು ರೋಗವೆಂಬ ಈ ಹೊಸ ಕಾಯಿಲೆ ಕಳೆದ ಎಂಟ್ಹತ್ತು ತಿಂಗಳುಗಳಿಂದ ಎಲ್ಲೆಡೆ ವ್ಯಾಪಕವಾಗಿ ಹರಡಿದೆ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ನಿಗ್ರಹ ಸಾಧ್ಯವಾಗಿತ್ತು. ಐದಾರು ದಿನಗಳಲ್ಲೇ ಮತ್ತೊಮ್ಮೆ ಹಸುವಿಗೆ ಜ್ವರ. ವಾತಾವರಣದಲ್ಲಿ ಹಠಾತ್ ಬದಲಾವಣೆಯಾದಾಗ ವೈರಲ್ ಜ್ವರ ಸಾಮಾನ್ಯ. ಆದರೆ ಇದೆಲ್ಲಾ ‘ಅಮಾವಾಸ್ಯೆ’ ಪರಿಣಾಮವೆಂಬುದು ಅವನ ಖಚಿತ ನಿಲುವು. ನನ್ನ ಮಾತು ಕೇಳಿ ಈ ಹಸುವನ್ನು ಇಟ್ಟುಕೊಂಡಿದ್ದಕ್ಕೇ ಹೀಗೆಲ್ಲಾ ತೊಂದರೆಗಳ ಸರಮಾಲೆ ಶುರುವಾಗಿದೆ ಎಂಬ ಅಸಮಾಧಾನ ಅವನ ಚರ್ಯೆಯಲ್ಲಿ ಎದ್ದು ಕಾಣುತ್ತಿತ್ತು. ಪುನಃ ನನ್ನ ಸಲಹೆ ಕೇಳುವ ತಪ್ಪು ಮಾಡದೆ ದನವನ್ನು ಮಾರಿ ಕೈತೊಳೆದುಕೊಂಡ!

ಎಮ್ಮೆ ಹುಣ್ಣಿಮೆ ದಿನ, ಹಸು ಅಮಾವಾಸ್ಯೆಯಂದು ಹೆತ್ತರೆ ಅವನ್ನು ಇಟ್ಟುಕೊಳ್ಳಬಾರದೆಂಬುದು ಕೆಲವು ಹೈನುಗಾರರ ಮನದೊಳಗೆ ಬೇರೂರಿರುವ ಮೌಢ್ಯ. ಹಿಂದೆಲ್ಲಾ ದೊಡ್ಡ ಭೂಮಾಲೀಕರ ಕೊಟ್ಟಿಗೆ ತುಂಬಾ ನೂರಾರು ಸಂಖ್ಯೆಯಲ್ಲಿ ಹಸುಕರುಗಳು ಇರುತ್ತಿದ್ದವು. ಪಶು ಸಂಪತ್ತಿನ ಮೇಲೆಯೇ ಶ್ರೀಮಂತಿಕೆ ನಿರ್ಧಾರವಾಗುತ್ತಿತ್ತು. ಈ ಹುಣ್ಣಿಮೆ- ಅಮಾವಾಸ್ಯೆಯ ಕಾರಣದಿಂದಲಾದರೂ ಬಲ್ಲಿದರು ಬಡವರಿಗೆ ನೀಡಲಿ ಎಂಬ ಸದುದ್ದೇಶದಿಂದ ಹೀಗೊಂದು ಶಾಸ್ತ್ರ ಶುರುವಾಗಿರಬಹುದು. ಆದರೀಗ ಹಸು ಕರುಗಳಿರುವುದೇ ಬಡವರು, ಮಧ್ಯಮವರ್ಗದವರ ಕೊಟ್ಟಿಗೆಯಲ್ಲಿ. ಅದೂ ಒಂದೆರಡರ ಸಂಖ್ಯೆಯಲ್ಲಿ. ಸಂಪ್ರದಾಯದ ಹಣೆಪಟ್ಟಿ ಹೊತ್ತ ಇಂಥ ಮೌಢ್ಯದಿಂದಾಗಿ ಮಾನಸಿಕವಾಗಿ, ಆರ್ಥಿಕವಾಗಿ ಪೆಟ್ಟು ತಿನ್ನುವವರು ದುರ್ಬಲರೆ!

‘ಅಮ್ಮ ಬಿದ್ದು ಕೈ ಮುರ್ಕೊಂಡ್ರು. ಕೊಟ್ಗೇಲೂ ದನಕರುಗಳಿಗೆ ಒಂದಲ್ಲಾ ಒಂದು ತೊಂದ್ರೆ. ಪ್ರಶ್ನೆ ಕೇಳ್ಸಿದ್ರೆ ನಾಗನ ದೋಷ ಅಂದ್ರು. ಮತ್ತೆ ಪ್ರತಿಷ್ಠೆ ಆಗ್ಬೇಕಂತೆ. ಎಷ್ಟೇ ಸಣ್ಣಕೆ ಮಾಡೋದಾದ್ರೂ ಲಕ್ಷದ ಮೇಲೆ ಬೇಕು. ಮಂಡೆನೇ ಕೆಟ್ಟು ಹೋಗಿದೆ’ ಎಂದು ಸುಶಿಕ್ಷಿತ ಮಹಿಳೆಯೊಬ್ಬರು ಅಲವತ್ತುಕೊಂಡಾಗ, ಸಲಹೆ ನೀಡುವುದು ವ್ಯರ್ಥವೆಂದು ಸುಮ್ಮನಾಗಿದ್ದೆ. ‘ಸಮಸ್ಯೆ ಯಾರ ಮನೆಯಲ್ಲಿಲ್ಲ ಹೇಳಿ. ಏನೂ ಆಗಲ್ಲ ಯೋಚ್ನೆ ಮಾಡ್ಬೇಡಿ’ ಎಂದರೆ ತಲೆಯೊಳಗೆ ಹುಳ ಬಿಟ್ಕೊಂಡಿರೋರು ತೆಪ್ಪಗಿರುತ್ತಾರಾ?

ಮನೆಯೊಳಗಿನಂತೆ ಕೊಟ್ಟಿಗೆಯಲ್ಲೂ ಇಂತಹ ನೂರಾರು ಕಂದಾಚಾರಗಳಿವೆ. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದರೆ ಮಾರಮ್ಮ ಸಿಟ್ಟಾಗಿದ್ದಾಳೆಂಬ ಭಯದಲ್ಲಿ ಮಾರಿಹಬ್ಬ ಮಾಡುವವರು, ಎಮ್ಮೆ, ದನಗಳಲ್ಲಿ ಗರ್ಭ ನಿಲ್ಲದಿದ್ದರೆ ನಾಗನೆಡೆಯೆಂದು ಕಟ್ಟಿದ ಕೊಟ್ಟಿಗೆಯನ್ನೇ ಬೀಳಿಸಿ ಬೇರೆಡೆ ಕಟ್ಟುವುದು, ಹಸುಕರುಗಳಿಗೆ ಜ್ವರ ಬಂದಾಗ ಕೆಟ್ಟ ರಕ್ತ ಹೊರ ಹೋಗಲು ಕಿವಿ ಕುಯ್ಯುವುದು, ಮೈಮೇಲೆ ಬರೆ ಹಾಕುವುದು, ‘ನೀಲಿನಾಲಿಗೆ’ ರೋಗದಿಂದ ಬಳಲುವ ಕುರಿಗಳನ್ನು ತಲೆಕೆಳಗಾಗಿ ಮರಕ್ಕೆ ನೇತಾಡಿಸುವುದು, ನಾಯಿಯ ಬಾಲ ಸುರುಳಿ ಸುತ್ತಿದ್ದರೆ ಬಾಲವನ್ನೇ ಕಡಿದು ಹಾಕುವುದು ಇಲ್ಲವೇ ರಬ್ಬರ್ ಬ್ಯಾಂಡ್ ಸುತ್ತಿ ಅದಾಗಿಯೇ ತುಂಡಾಗುವಂತೆ ಮಾಡುವುದು... ಮೌಢ್ಯದ ಜೊತೆಗೆ ಥರಾವರಿ ಕ್ರೌರ್ಯವೂ ಸೇರಿಕೊಂಡಿರುವುದನ್ನು ಕಂಡಾಗ ಮನಸ್ಸು ಅದುರುತ್ತದೆ.

ಜೀವನದಲ್ಲಿ ಸಹಜವಾಗಿ ಎದುರಾಗುವ ಆರೋಗ್ಯ, ಆರ್ಥಿಕ, ಸಾಂಸಾರಿಕ ಸಮಸ್ಯೆಗಳನ್ನೆಲ್ಲಾ ತಿಥಿ, ನಕ್ಷತ್ರ, ಜಾತಕಗಳ ದೋಷವೆಂದು ಟ್ಯಾಗ್ ಮಾಡುವ ಮಾನಸಿಕ ಅಸ್ವಾಸ್ಥ್ಯ ಏರುಗತಿಯಲ್ಲಿದೆ. ಚಿತ್ತದ ಆಳಕ್ಕೆ ತಳವೂರಿ ಬದುಕಿನ ಅಂಗದಂತಾಗಿರುವ ಈ ಅನಾರೋಗ್ಯಕರ ಅಂಧಾಚರಣೆಗಳಿಗೂ ಸಾಕ್ಷರತೆಗೂ ಸಂಬಂಧವೇ ಇಲ್ಲದಿರುವುದು ನಿಜಕ್ಕೂ ದುರಂತ! ಜನರಲ್ಲಿ ವೈಜ್ಞಾನಿಕ, ವೈಚಾರಿಕ ಭಾವನೆಗಳನ್ನು ಬೆಳೆಸುವ ನಿರಂತರ ಪ್ರಯತ್ನವೊಂದೇ ಕಂದಾಚಾರವೆಂಬ ಸಾಮಾಜಿಕ ಕಳೆಯನ್ನು ತೊಲಗಿಸಲು ಏಕೈಕ ದಾರಿ. ಈ ದಿಸೆಯಲ್ಲಿ ಮಾಧ್ಯಮಗಳ ಪಾತ್ರ ತುಂಬಾ ಹಿರಿದಾದುದು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಬಾಳೆಬೈಲು, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.