ADVERTISEMENT

ಫ್ರೀ ಸರ್ವಿಸ್‌!

ಪ್ರೊ.ಎಸ್.ಬಿ.ರಂಗನಾಥ್
Published 1 ಮೇ 2019, 18:30 IST
Last Updated 1 ಮೇ 2019, 18:30 IST
   

ವೋಟಿನ ದಿನ ಬೆಳ್ಳಂಬೆಳಿಗ್ಗೆ ಬಿಸಿಲು ಬೆವರಿಳಿಸುತ್ತಿತ್ತು. ಮತ ಚಲಾಯಿಸಲು ಎದೆಯುಬ್ಬಿಸಿಕೊಂಡು ಮತಗಟ್ಟೆಗೆ ಹೋದೆ. ಎಷ್ಟು ಹುಡುಕಿದರೂ ಮತದಾರರ ಪಟ್ಟಿಯಲ್ಲಿ ನನ್ನ ಹೆಸರೇ ಕಾಣಿಸಲಿಲ್ಲ! ಪೆಚ್ಚು ಮುಖ ಹಾಕಿಕೊಂಡು ಮನೆಕಡೆ ಕಾಲೆಳೆದೆ.

ಎದುರಿಗೆ ಗುಂಡಣ್ಣ ಬೈಕ್ ಮೇಲೆ ಬಂದ.

‘ಸವಾರಿ ಎಲ್ಲಿಂದ?’ ಎಂದೆ.

ADVERTISEMENT

‘ಬೈಕ್ ಸರ್ವಿಸ್‍ಗೆ ಹೋಗಿದ್ದೆ ಕಣಯ್ಯಾ’.

‘ವೋಟು ಹಾಕೋದು ಬಿಟ್ಟು ಸರ್ವಿಸಾ?’

‘ವೋಟು ಮಾಡಿದೋರ ಬೈಕ್ ಫ್ರೀ ಸರ್ವಿಸ್ ಕಣಯ್ಯಾ. ನಿನ್ನ ಬೈಕನ್ನೂ ಸರ್ವಿಸ್‌ ಮಾಡಿಸೋಣ ನಡಿ’ ಅಂದ.ನಾನು ಪಟ್ಟಿಯಲ್ಲಿ ಹೆಸರಿಲ್ಲದ ನನ್ನ ಸಂಕಷ್ಟ ತೋಡಿಕೊಂಡೆ.

‘ಅಯ್ಯೋ ವೋಟ್‌ ಅಷ್ಟೇ ಅಲ್ಲ, ಇನ್ನೂ ಎಷ್ಟೆಲ್ಲ ಮಿಸ್‌ ಆಯ್ತಯ್ಯಾ ನಿಂಗೆ. ಹೋಗ್ಲಿ ಬಾ, ತಮಾಷೆ ತೋರಿಸ್ತೀನಿ, ಕೂತ್ಕೊ. ಈಗ ಹೋಗೋಣ-ಫ್ರೀ ಬೆಣ್ಣೆ ದೋಸೆಗೆ’.

ಎಡಗೈ ಬೆರಳಿನ ಶಾಯಿ ತೋರಿಸಿ ಅವ ಬಿಟ್ಟಿ ದೋಸೆ ತಿಂದ. ನಾನು ಮಾತ್ರ ಹೊಟ್ಟೆಯುರಿದುಕೊಂಡು ದುಡ್ಡು ತೆತ್ತು ತಿಂದೆ.

ಬೈಕ್ ಮೇಲೆ ಹೋಗುತ್ತಾ ಕೇಳಿದೆ- ‘ಕನ್ನಡಕ ಯಾವಾಗ ಬದಲಾಯಿಸಿದೆಯೋ?’

‘ಈ ಬೆಳಿಗ್ಗೇನೆ. ಮತ ಚಲಾಯಿಸಿದವರಿಗೆ ಪಕ್ಕದ ಕಣ್ಣಾಸ್ಪತ್ರೇಲಿ ಪರೀಕ್ಷೆ ಮಾಡಿ ರಿಯಾಯ್ತಿ ದರದಲ್ಲಿ ಕನ್ನಡಕ ಕೊಟ್ರು. ನಾನು ಏಳು ಗಂಟೆಗೇ ಮತ ಹಾಕಿಬಿಟ್ಟೆ’.

ಡಿಪಾರ್ಟ್‌ಮೆಂಟಲ್‌ ಸ್ಟೋರ್ ಮುಂದೆ ಬೈಕ್ ನಿಲ್ಲಿಸಿ, ಅವನ ಕೈಬೆರಳು ತೋರಿಸಿ, ತೊಗರಿ ಬೇಳೆಯ ಪ್ಯಾಕೆಟ್ ತಗೊಂಡ!

‘ಮನೆಗೆ ಹೋಗೋಣ. ಶರಬತ್ ಮಾಡ್ತೀನಿ. ಆಮೇಲೆ ನಿಂಗೆ ಡ್ರಾಪ್ ಕೊಡ್ತೀನಿ. ಹೆಂಡ್ತಿ, ಮಗಳು ವೋಟು ಹಾಕಿದ ಮೇಲೆ ಚಿನ್ನ ಖರೀದಿಸಿ ಬೆಳ್ಳಿ ಉಚಿತವಾಗಿ ಪಡೆಯಲು ಹೋಗಿದಾರೆ’.

‘ಇದೆಲ್ಲ ವೋಟಿನ ನಂತರ. ವೋಟಿಗೆ ಮೊದಲು?’

‘ಒಳಗೆ ಬಂದು ನೋಡು’.

ಹಜಾರದಲ್ಲಿ ಶ್ರೀಕೃಷ್ಣ ಪರಮಾತ್ಮನ ಫೋಟೊ ನಗುತ್ತಿತ್ತು. ಅದಕ್ಕೆ ಚಿನ್ನದ ಸರ! ಗುಂಡಣ್ಣನತ್ತ ನೋಡಿದೆ. ‘ಇವು ಲೀಡರುಗಳಿಗೆ ಮಾತ್ರ. ಜೊತೆಗೆ, ನೀಡಿದ ನೋಟುಗಳಿಗೆ ಸಮನಾದ ವೋಟುಗಳನ್ನು ಹಾಕಿಸಿದರಾಯ್ತು’.

ಗುಂಡಣ್ಣ ನಕ್ಕ. ನಾನು ಬೆಪ್ಪಾಗಿ ನೋಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.