ಸಂಗತ: ನಾಗರಿಕ ಪ್ರಜ್ಞೆ.. ಬೇಡ ಅವಜ್ಞೆ! ವಿವೇಕರಹಿತರ ಸಂಖ್ಯೆ ಹೆಚ್ಚಾಗುತ್ತಿದೆ
ಇತ್ತೀಚೆಗೆ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದೆ. ಬಹುತೇಕ ಹಿಂದಿನ ಸಾಲಿನ ಸೀಟಿನಲ್ಲಿ ಕುಳಿತಿದ್ದೆ. ಬಸ್ ವೇಗವಾಗಿ ಸಾಗುತ್ತಿದ್ದಾಗ, ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬ ತಾನು ಜಗಿಯುತ್ತಿದ್ದ ಪಾನ್ ಅನ್ನು ಅನಾಮತ್ತಾಗಿ ಹೊರಗೆ ಉಗುಳಿದ. ಮುಂದಿನದನ್ನು ಊಹಿಸಬಹುದು– ಆ ಬದಿಯಲ್ಲಿ ಕುಳಿತಿದ್ದ ಎಲ್ಲರ ಮೈಮೇಲೂ ಅವನ ಎಂಜಲಿನ ಪ್ರೋಕ್ಷಣೆ ಆಯಿತು. ‘ಕಾಮನ್‌ಸೆನ್ಸ್ ಇಲ್ವೇನ್ರೀ?’ ಎಂದು ಒಂದಷ್ಟು ಜನ ಸಿಡಿಮಿಡಿಯಾದರು. ಒಬ್ಬ ಯುವತಿಯಂತೂ ಎದ್ದು ಮುಂದೆ ಹೋಗಿ ಹತ್ತು ನಿಮಿಷ ಆತನಿಗೆ ವಾಚಾಮಗೋಚರ ಬೈದು ಬಂದಳು. ಅವನು ಯಾವ ಪ್ರತಿಕ್ರಿಯೆಯೂ ಇಲ್ಲದೆ ‘ಈಗೇನಾಯ್ತು’ ಎಂಬಂತೆ ತನ್ನ ಪಾಡಿಗೆ ಕುಳಿತಿದ್ದ. ತಾನೊಂದು ತಪ್ಪು ಮಾಡಿದೆ ಎಂಬ ಸಣ್ಣ ಭಾವನೆಯೂ ಅವನ ಮುಖದ ಮೇಲೆ ಇರಲಿಲ್ಲ.
ನಮ್ಮಲ್ಲಿ ಇದೇನೂ ಹೊಸದಲ್ಲ. ಚಲಿಸುತ್ತಿರುವ ವಾಹನದಿಂದ ಉಗಿಯುವುದು, ಅದಕ್ಕಾಗಿ ಜಗಳ
ಆಗುವುದು ಸಾಮಾನ್ಯ. ಆದರೆ ನಮ್ಮ ಮಂದಿ ನಾಗರಿಕ ಪ್ರಜ್ಞೆಯಿಲ್ಲದೆ ವಿವೇಕರಹಿತರಾಗಿ ಬದುಕು
ತ್ತಿರುವುದು ಇತ್ತೀಚಿನ ವರ್ಷಗಳಲ್ಲಂತೂ ಹೆಚ್ಚೇ ಆಗುತ್ತಿದೆ. ಕಾಲ ಸರಿದಂತೆ, ಸಮಾಜದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾದಂತೆ, ನಾಗರಿಕ ಪ್ರಜ್ಞೆ ಸುಧಾರಿಸ ಬೇಕಾದದ್ದು ಅಪೇಕ್ಷಣೀಯ. ಆದರೆ ನಾವು ಇನ್ನಷ್ಟು ಅನಾಗರಿಕತೆಯ ಕಡೆಗೆ ಸಾಗುತ್ತಿದ್ದೇವೆ ಎಂಬುದನ್ನು ಇಂತಹ ಅನೇಕ ನಿದರ್ಶನಗಳು ಬೊಟ್ಟು ಮಾಡುತ್ತವೆ.
ನಮ್ಮ ಮನೆ ಶುಚಿಯಾಗಿರಬೇಕು ಎಂದು ಬಯಸುತ್ತೇವೆ, ಹೊರಗೆ ಹೋದಾಗ ಅಂತಹ ಕನಿಷ್ಠ ವರ್ತನೆಯೂ ಇರುವುದಿಲ್ಲ. ‘ಸ್ವಚ್ಛ ಭಾರತ’ ಅಭಿಯಾನ ಆರಂಭವಾಗಿ ಒಂದು ದಶಕವೇ ಕಳೆದುಹೋಗಿದೆ. ಈ ಅಭಿಯಾನದ ಭಾಗವಾಗಿ ನೂರಾರು ಕೋಟಿ ಖರ್ಚಾಗಿದೆ. ಸಾವಿರಾರು ಕಾರ್ಯಕ್ರಮಗಳು ನಡೆದಿವೆ. ಆದರೂ ಸಮಾಜದ ಮನಃಸ್ಥಿತಿ ಬದಲಾಗಿಲ್ಲ. ಒಳಗಿನಿಂದ ಆಗಬೇಕಾದ ಬದಲಾವಣೆ ಆಗಿಲ್ಲ.
ವಸತಿ ಪ್ರದೇಶಗಳ ರಸ್ತೆಗಳು ಕಸದ ಕೊಂಪೆಗಳಾಗಿರುವುದೇ ಹೆಚ್ಚು. ಬೀಡಾಡಿ ನಾಯಿಗಳು, ಹಸುಗಳು ಅವನ್ನೇ ಬಗೆದು ಇನ್ನಷ್ಟು ಗಬ್ಬೆಬ್ಬಿಸಿರುತ್ತವೆ. ಕಸ ಒಯ್ಯಲು ಬರುವ ವಾಹನಕ್ಕೆ ಕಸ ಹಾಕುವ ವ್ಯವಧಾನವೂ ಕೆಲವರಿಗೆ ಇರುವುದಿಲ್ಲ. ಕಚೇರಿಗೆ ಹೋಗುತ್ತಾ ತಮ್ಮ ವಾಹನದಲ್ಲಿ ಕುಳಿತೇ ರಸ್ತೆಯ ಯಾವುದೋ ಒಂದು ಕಡೆ ಕಸದ ಚೀಲವನ್ನು ಎಸೆದು ಹೋಗುವ ಮಂದಿ ಬೇಕಾದಷ್ಟಿದ್ದಾರೆ.
ಯಾವುದೇ ಸಾರ್ವಜನಿಕ ಶೌಚಾಲಯಗಳಲ್ಲಿ ಕನಿಷ್ಠ ಶುಚಿತ್ವವೂ ಇಲ್ಲ. ‘ಬಳಸಿದ ಮೇಲೆ ನೀರು ಹಾಕಿ’ ಎಂದೋ ‘ನೀರನ್ನು ಮಿತವಾಗಿ ಬಳಸಿ’ ಎಂದೋ ಫಲಕ ಎಲ್ಲ ಕಡೆ ಇರುತ್ತದೆ. ಆದರೆ ಆ ನಲ್ಲಿಗಳಲ್ಲಿ ನೀರು ಬರುವುದೇ ಅಪರೂಪ. ಬಂದರೂ ಬಳಸಿದವನ ಮೈಮೇಲೆಯೇ ಸಿಡಿಯುವ ಪರಿಸ್ಥಿತಿ. ಶೌಚಾಲಯಗಳನ್ನು ತಾವು ಬಳಸಿದ ಮೇಲೆ ಬೇರೆಯವರೂ ಬಳಸಬೇಕು ಎಂಬ ಕನಿಷ್ಠ ಪ್ರಜ್ಞೆಯೂ ನಮ್ಮ ಮಂದಿಗೆ ಏಕೆ ಇರುವುದಿಲ್ಲ? ಇತ್ತೀಚೆಗೆ ದೆಹಲಿಯ ಒಂದು ಪ್ರಸಿದ್ಧ ಧಾರ್ಮಿಕ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವು. ಇಂಚಿಂಚಿಗೂ ಸ್ವಚ್ಛತೆ. ಮುಖವೇ ಕಾಣುವಂಥ ನೆಲ. ಶೌಚಾಲಯಕ್ಕೆ ಹೋದರೆ ಮಾತ್ರ ಗಲೀಜಿನ ಗುಡ್ಡೆ. ಬಳಸುವವರಿಗೆ ಸಣ್ಣ ವಿವೇಕವೂ ಇಲ್ಲದೇಹೋದರೆ ಸ್ವಚ್ಛತಾ ಸಿಬ್ಬಂದಿ ಯಾದರೂ ಏನು ಮಾಡಿಯಾರು?
ಎಲ್ಲೆಂದರಲ್ಲಿ ಕಸ ಎಸೆಯುವ, ಉಗುಳುವ ವಿಷಯವಷ್ಟೇ ಅಲ್ಲ, ಸಾರ್ವಜನಿಕ ವಸ್ತು ಹಾಗೂ ಸ್ಥಳಗಳ ಬಳಕೆಯ ಯಾವುದೇ ವಿಚಾರವಾದರೂ ಇದೇ ಕಥೆ. ನಮ್ಮ ನಾಗರಿಕ ಪ್ರಜ್ಞೆಯೇ ಸತ್ತುಹೋಗಿದೆ. ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣ, ಉದ್ಯಾನ, ಸರ್ಕಾರಿ ಕಚೇರಿ, ಬಸ್ಸು- ಯಾವುದನ್ನೇ ನೋಡಿದರೂ ಅವು ‘ನಮ್ಮವು’ ಎಂಬಂತೆ ಜನ ನಡೆದುಕೊಳ್ಳುವುದೇ ಕಡಿಮೆ. ನಲ್ಲಿಗಳಲ್ಲಿ ನೀರು ಹರಿಯುತ್ತಲೇ ಇರುತ್ತದೆ, ಜನ ಇರಲಿ, ಇಲ್ಲದಿರಲಿ ವಿದ್ಯುದ್ದೀಪ ಉರಿಯುತ್ತಲೇ ಇರುತ್ತದೆ, ಫ್ಯಾನು ತಿರುಗುತ್ತಲೇ ಇರುತ್ತದೆ. ನಾವು ಯಾಕೆ ನಿಲ್ಲಿಸಬೇಕು ಎಂಬ ಮನಃಸ್ಥಿತಿಯೇ ಎಲ್ಲರದೂ.
ದಿನಬೆಳಗಾದರೆ ಕಿವಿಗೆ ಮೊಬೈಲ್ ಫೋನ್ ಹಚ್ಚಿ ಕೊಂಡು ದ್ವಿಚಕ್ರವಾಹನ ಚಲಾಯಿಸುವ ಮಂದಿಯೇ ರಸ್ತೆ ತುಂಬ ಕಾಣಸಿಗುತ್ತಾರೆ. ಇದು ಕಾನೂನಿನ ಉಲ್ಲಂಘನೆಯೆಂದೋ ಇದರಿಂದ ತಮ್ಮೊಂದಿಗೆ ಓಡಾಡುವವರಿಗೆ ಕೂಡ ಅಪಾಯವೆಂದೋ ಇವರಿಗೆ ಒಂದಿನಿತೂ ಅನಿಸುವುದಿಲ್ಲ. ಇಂಥವರಿಗೆ ಬುದ್ಧಿವಾದ ಹೇಳಿಯೂ ಪ್ರಯೋಜನ ಇಲ್ಲ. ಇನ್ನು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹಾರ್ನ್ ಮಾಡಬಾರದು, ಸಿಗ್ನಲ್ ಉಲ್ಲಂಘನೆ ಮಾಡಬಾರದು, ಹೆಲ್ಮೆಟ್-ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಬಾರದು, ವ್ಹೀಲಿಂಗ್ ಮಾಡಬಾರದು ಎಂಬಂತಹ ಸೂಚನೆಗಳೆಲ್ಲ ಇವರಿಗೆ ತಮಾಷೆಯ ವಿಷಯಗಳು. ತಾನಿಂದು ಹೆಲ್ಮೆಟ್ ಹಾಕದೆಯೇ ಹೇಗೆ ಇಡೀ ನಗರ ಸುತ್ತಾಡಿ ಬಂದೆ ಎಂಬುದೇ ಅನೇಕರಿಗೆ ಪೌರುಷದ ಸಂಕೇತ.
‘ಧೂಮಪಾನ ನಿಷೇಧಿಸಿದೆ’ ಎಂಬ ಫಲಕದ ಕೆಳಗೇ ನಿಂತುಕೊಂಡು ಸಿಗರೇಟ್ ಸೇದುವುದು, ‘ಇಲ್ಲಿ ಮೂತ್ರ ವಿಸರ್ಜಿಸಿದರೆ ದಂಡ’ ಎಂಬ ಬರಹದ ಮೇಲೆಯೇ ಮೂತ್ರ ವಿಸರ್ಜಿಸುವುದು ಈ ದಿನಗಳ ವಾಸ್ತವ. ನಾಗರಿಕ ಪ್ರಜ್ಞೆಯುಳ್ಳವರಿಂದ ಮಾತ್ರ ಸಾರ್ವಜನಿಕ ನೈತಿಕತೆಯನ್ನು ಪೋಷಿಸುವುದು ಸಾಧ್ಯ. ಒಂದು ನಗರ ಅಥವಾ ಊರಿನ ವ್ಯಕ್ತಿತ್ವವು ಅಲ್ಲಿನ ನಿವಾಸಿಗಳ ವ್ಯಕ್ತಿತ್ವ, ವರ್ತನೆ ಮತ್ತು ನಾಗರಿಕ ಪ್ರಜ್ಞೆಯನ್ನು ಪ್ರತಿಫಲಿಸುತ್ತದೆ. ಜನರಂತೆ ಊರು, ಊರಿನಂತೆ ಜನ.
ಲೇಖಕ: ಸಹಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.