ADVERTISEMENT

ಚರ್ಚೆ | ಗಾಂಧಿ: ಕುತ್ಸಿತ ದೃಷ್ಟಿ, ಕುರುಡುಭಕ್ತಿ

ಗಾಂಧೀಜಿಯನ್ನು ಅನುಸರಿಸಲಾಗದೆ ಅವರನ್ನು ಅಪ್ರಸ್ತುತರನ್ನಾಗಿಸಲಾಗಿದೆ. ಎಲ್ಲೂ ಯಾವುದರಲ್ಲೂ ಅವರ ತತ್ವಾನುಸರಣೆ ಅಸಾಧ್ಯ ಎನ್ನುವ ಸ್ಥಿತಿ ಇದೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 20:30 IST
Last Updated 5 ಫೆಬ್ರುವರಿ 2020, 20:30 IST
ಗಾಂಧಿ ವಿಚಾರ
ಗಾಂಧಿ ವಿಚಾರ   

ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನು ಸಂಸದ ಅನಂತಕುಮಾರ ಹೆಗಡೆ ಅವರು ಪರೋಕ್ಷವಾಗಿ ಗೇಲಿ ಮಾಡಿರುವುದು ಮತ್ತು ಅದಕ್ಕೆ ವಿವಿಧ ರಾಜಕೀಯ ಪಕ್ಷಗಳ ಧುರೀಣರು ಸಾರ್ವಜನಿಕ ವಲಯದಲ್ಲಿ ಮತ್ತು ಲೋಕಸಭೆಯಲ್ಲಿ ಮಾಡಿದ ತೀವ್ರ ಸ್ವರೂಪದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ಒಂದು ವಿಚಾರ ಸ್ಪಷ್ಟವಾಗುತ್ತದೆ! ಅದೆಂದರೆ– ಗಾಂಧಿಯವರನ್ನು ಒಲ್ಲದ ಪ್ರತಿಗಾಮಿಗಳು ಮತ್ತು ಅವರನ್ನು ತಲೆಯ ಮೇಲೆ ಹೊತ್ತು ಕುಣಿಯುವ ಅನುಯಾಯಿಗಳು, ಈ ಎರಡು ಬಣಗಳಿಗೂ ಗಾಂಧೀಜಿ ಕುರಿತು ಚರ್ಚಿಸುವ ಅರ್ಹತೆ ಇದೆಯೇ?

ಗಾಂಧೀಜಿಯನ್ನು ಅವಜ್ಞೆಯಿಂದ ಕಾಣುವ ಮಂದಿ, ಅವರನ್ನು ನಿಷ್ಪಕ್ಷಪಾತವಾಗಿ ನೋಡುವಲ್ಲಿ ವಿಫಲರಾಗಿದ್ದಾರೆ. ಇವರದು ಕೇವಲ ದೋಷಗಳನ್ನು ಬೆದಕಿ ದೊಡ್ಡದು ಮಾಡುವ ಕುತ್ಸಿತ ದೃಷ್ಟಿ. ಅನುಯಾಯಿಗಳದು ಕುರುಡುಭಕ್ತಿ. ಈ ಅನುಯಾಯಿ
ಗಳಲ್ಲಿ ಎಷ್ಟು ಮಂದಿ ತಮ್ಮ ನಿಜಜೀವನದಲ್ಲಿ ಗಾಂಧೀಜಿ ಆದರ್ಶಗಳನ್ನು ಅನುಸರಿಸುತ್ತಿದ್ದಾರೆ? ಗಾಂಧೀಜಿ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಸೆಟೆದು ನಿಂತು ಜನರಿಗೆ ಉಪದೇಶ ಮಾಡುವ ಈ ನಾಯಕರೇ ತಮ್ಮ ದೈನಂದಿನ ಬದುಕಿನಲ್ಲಿ ಗಾಂಧಿ ತತ್ವಾದರ್ಶಗಳು ನಿರುಪಯುಕ್ತ ಎನ್ನುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಕಾಣುತ್ತೇವೆ!

ಗಾಂಧೀಜಿ ಪ್ರತಿಪಾದಿಸಿದ ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ, ಅಸ್ಪೃಶ್ಯತಾ ನಿವಾರಣೆ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅನುಸರಿಸಬೇಕಾದ ರೀತಿನೀತಿ... ಇವೆಲ್ಲವೂ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅಪ್ರಸ್ತುತವಾಗಿರುವುದು ಅಥವಾ ಘೋಷಣೆಗಳಲ್ಲಿ ಮಾತ್ರ ಉಳಿದಿರುವುದು ಸತ್ಯ ತಾನೇ? ನಮಗೆ ಗಾಂಧೀಜಿ ನೆನಪಾಗುವುದು ವರ್ಷದಲ್ಲಿ ಎರಡು ದಿನ ಮಾತ್ರ. ಅವರ ಜನ್ಮದಿನದಂದು ಮತ್ತು ಅವರು ಹತ್ಯೆಗೀಡಾದ ದಿನದಂದು. ಈ ನಾಡಿನಲ್ಲಿ ಗಾಂಧಿ ಜನಿಸಿದ್ದು ವ್ಯರ್ಥವಾಯಿತೇನೋ! ಸಮಸ್ಯೆಗಳನ್ನು ಗಾಂಧೀಜಿ ತಮ್ಮ ದೃಷ್ಟಿಕೋನದಿಂದ, ತಮ್ಮ ಬೌದ್ಧಿಕ ಎತ್ತರದಿಂದನೋಡುತ್ತಾ ಸಾಮಾನ್ಯ ಜನರ ನಡವಳಿಕೆಯಲ್ಲೂ ಅದನ್ನೇ ನಿರೀಕ್ಷಿಸಿದ್ದು ತಪ್ಪಾಯಿತು. ಹೀಗಾಗಿಯೇ, ಗಾಂಧೀಜಿಯನ್ನು ಅನುಸರಿಸಲಾಗದೆ, ಅವರನ್ನು ಅವರು ಹುಟ್ಟಿದ ದೇಶದಲ್ಲೇ ಅಪ್ರಸ್ತುತರನ್ನಾಗಿಸಿರುವುದು. ಎಲ್ಲೂ, ಯಾವುದರಲ್ಲೂ ನಾವು ಗಾಂಧಿ ತತ್ವಾನುಸರಣೆ ಕಾಣುವುದು ಅಸಾಧ್ಯ ಎನ್ನುವ ಸ್ಥಿತಿ ಇದೆ.

ADVERTISEMENT

ಸಾಮಗ ದತ್ತಾತ್ರಿ, ಬೆಂಗಳೂರು

ಅಂಥ ಮಾತು ಆಡಿಲ್ಲ

ನಾನು ಅನುವಾದಿಸಿದ ವೀರ ಸಾವರ್ಕರರ ‘ಹಿಂದುತ್ವ’ ಕೃತಿಯ 10ನೇ ಮುದ್ರಣವನ್ನು ಫೆಬ್ರುವರಿ 1ರಂದು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ ಅವರು ಎಲ್ಲೂ ಗಾಂಧೀಜಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿಲ್ಲ. ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿ, ನಿಜವಾಗಿ ಅಹಿಂಸೆಯಲ್ಲಿ ನಂಬಿಕೆ ಇರಿಸಿ ಮಾಡಿದ ಹೋರಾಟ ಹಾಗೂ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡಂತಹ ಹೋರಾಟ... ಈ ಮೂರು ಬಗೆಯ ಹೋರಾಟಗಳು ನಡೆದವು ಎಂದು ಮಾತ್ರ ಹೇಳಿದರು.

ಸಾವರ್ಕರ್ ಅಥವಾ ಕ್ರಾಂತಿಕಾರಿಗಳ ಬಗ್ಗೆ ಗೌರವದಿಂದ ಮಾತನಾಡಿದರೆ ಅದು ಗಾಂಧೀಜಿ ವಿರುದ್ಧದ ಮಾತು ಹೇಗಾಗುತ್ತದೆ? ಹಿಂದುತ್ವದ ಅಸಲಿ ಚರ್ಚೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಸಂವಾದವನ್ನು ಹೇಗಾದರೂ ವಿವಾದಕ್ಕೆ ತಿರುಗಿಸುವ ಸೋಗಲಾಡಿ ವೈಚಾರಿಕತೆಯ ಯುಗ ಮುಗಿದಿದೆ. ಸಾವರ್ಕರ್, ಗಾಂಧೀಜಿ, ನೆಹರೂ ಕುರಿತು ಗಂಭೀರ ಮರುಚಿಂತನೆ, ಹೊಸ ಅಧ್ಯಯನಗಳು ನಡೆಯಲಿ. ಪ್ರಜಾಪ್ರಭುತ್ವದ ಬೇರುಗಳು ಇನ್ನಷ್ಟು ಗಟ್ಟಿಗೊಳ್ಳಲಿ.

ಜಿ.ಬಿ.ಹರೀಶ, ನಿರ್ದೇಶಕ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ, ಹನಾಯಿ, ವಿಯೆಟ್ನಾಂ

ಮುಜುಗರ ತಪ್ಪಿಸಲಿ

ಸಂಸದ ಅನಂತಕುಮಾರ ಹೆಗಡೆಯವರ ಅತಿರೇಕದ ಹೇಳಿಕೆಗಳಿಂದ, ಅವರು ಪ್ರತಿನಿಧಿಸುವ ಉತ್ತರ ಕನ್ನಡ ಕ್ಷೇತ್ರದ ಜನ ಕೂಡ ಮುಜುಗರ ಅನುಭವಿಸುತ್ತಿದ್ದಾರೆ. ತಮಗೆ ಮುಸ್ಲಿಮರ ವೋಟು ಬೇಡ ಎಂದು ಒಂದು ಹಂತದಲ್ಲಿ ಅವರು ಹೇಳಿಕೊಂಡರು. ಅಂದು, ಆ ಕ್ಷೇತ್ರದಲ್ಲಿ ಅದ್ಯಾವ ಸ್ಥಿತಿ ಇತ್ತೆಂದರೆ, ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯವರ ನಾಮಬಲದಲ್ಲಿ ಅನಂತಕುಮಾರ ಹೆಗಡೆಯವರೇ ಏನು, ಒಂದು ಹುಲ್ಲುಕಡ್ಡಿಯನ್ನು ನಿಲ್ಲಿಸಿದ್ದರೂ ಗೆದ್ದು ಬರುತ್ತಿತ್ತು!

ನಂತರ, ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುವ ಹೇಳಿಕೆಯು ಅವರ ಪಕ್ಷದವರನ್ನೇ ಮುಜುಗರಕ್ಕೆ ಈಡು ಮಾಡಿತು. ಈಗಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ‘ಉಪವಾಸ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂತೇ’ ಎಂದು ತೇಲಿಬಿಟ್ಟಿರುವ ಪ್ರಶ್ನೆಯು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವಂತಿದೆ. ಅಷ್ಟೇ ಅಲ್ಲ, ಅವರದೇ ಸ್ವಂತ ಜಿಲ್ಲೆ ಉತ್ತರ ಕನ್ನಡದಲ್ಲಿ ‘ಕರ್ನಾಟಕದ ಬಾರ್ಡೋಲಿ’ ಎಂದು ಗುರುತಿಸಲಾಗುವ ಅಂಕೋಲಾ ಮತ್ತು ಸಿದ್ಧಾಪುರ ತಾಲ್ಲೂಕುಗಳ ಜನರಿಗೂ ಅವಮಾನ ಮಾಡಿದಂತಿದೆ. ಸಂಸದರು ಇನ್ನು ಮುಂದಾದರೂ ಇಂತಹ ಅತಿರೇಕದ ಹೇಳಿಕೆಗಳನ್ನು ನಿಲ್ಲಿಸಲಿ. ಈ ಮೂಲಕ ತಮ್ಮ ಕ್ಷೇತ್ರದ ಜನ ಮುಜುಗರ ಅನುಭವಿಸುವುದನ್ನು ತಪ್ಪಿಸಲಿ.

ಚಂದ್ರಕಾಂತ ನಾಮಧಾರಿ, ಅಂಕೋಲಾ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.