ADVERTISEMENT

ಸಂಗತ: ಸ್ಪರ್ಧಾತ್ಮಕ ಪರೀಕ್ಷೆಗೆ ‘ಪರೀಕ್ಷಾ’ ಕಾಲ!

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಇತರ ಯಾವುದೇ ಪ್ರಶ್ನೆಪತ್ರಿಕೆಗಳಲ್ಲಿ ಇಲ್ಲದ ಗೊಂದಲ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ ಯಾಕೆ?

ಆಯೆಷಾ ಟಿ ಫರ್ಜಾನ
Published 22 ಮಾರ್ಚ್ 2022, 19:31 IST
Last Updated 22 ಮಾರ್ಚ್ 2022, 19:31 IST
   

ಸಾಹಿತ್ಯದ ಪಠ್ಯಗಳನ್ನು ವಿಮರ್ಶಾತ್ಮಕವಾಗಿ ಮತ್ತು ಸೃಜನಶೀಲವಾದ ರೀತಿಯಲ್ಲಿ ಓದಬೇಕಿರುವುದು ಸರಿಯಾದ ರೀತಿ. ಸಾಹಿತ್ಯದ ಬೋಧಕರಿಗಂತೂ ಇದು ಕಡ್ಡಾಯ ಕ್ರಮ. ಹಾಗಿದ್ದಾಗ ಆ ಸ್ಥಾನಗಳಿಗೆ ಅವರ ಆಯ್ಕೆಯೂ ಅದೇ ರೀತಿಯ ವಿವರಣಾತ್ಮಕ ಪರೀಕ್ಷೆಯ ಮೂಲಕ ಆಗಬೇಕಲ್ಲವೇ?

ಮಾನವಿಕ ಅಧ್ಯಯನ ವಿಷಯಗಳಲ್ಲಿ ಇದು ವಿಶೇಷವಾಗಿ ವಿದ್ಯಾರ್ಥಿಗಳ ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಿ, ಆಲೋಚನೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದ ಪ್ರಶ್ನೆಪತ್ರಿಕೆಗಳು ಕಲಿಯುವವನ ಭಾಷಾಜ್ಞಾನ, ಸಾಹಿತ್ಯಜ್ಞಾನವನ್ನು ಒರೆಗೆ ಹಚ್ಚುವುದಕ್ಕೆ ಬದಲಾಗಿ ಬಹು ಆಯ್ಕೆಯ ಪರೀಕ್ಷೆಗಳೆಂಬ ಮಂತ್ರದಂಡಗಳು (ಯಂತ್ರದಂಡ) ಆಗಿವೆ.

ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗ ಕರೋಡ್‌ಪತಿ’ ಟಿ.ವಿ. ಕಾರ್ಯಕ್ರಮದಲ್ಲಿ ಕೇಳಿದ ಹಾಗೆ, ಒಂದು ಪ್ರಶ್ನೆಗೆ ಒಂದೇ ಉತ್ತರ ಎಂಬಂತೆ ಇವೆ ವಿನಾ ಸೃಜನಶೀಲತೆಯ ಅಭಿವ್ಯಕ್ತಿಗೆ ಅವಕಾಶವೇ ಇಲ್ಲ. ಆದರೆ ಈ ವ್ಯವಸ್ಥೆಯನ್ನಾದರೂ ನೆಟ್ಟಗೆ ಮಾಡಿದ್ದರೆ ಅಷ್ಟಾದರೂ ಸಾಕು ಎಂದು ಸಮಾಧಾನ ಪಡಬಹುದಾಗಿತ್ತು. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿಪ್ರಶ್ನೆಪತ್ರಿಕೆಗಳಲ್ಲಿದ್ದ ತಪ್ಪುಗಳನ್ನು ನೋಡಿದ
ಪರೀಕ್ಷಾರ್ಥಿಗಳು ಆಘಾತಗೊಂಡಿದ್ದಾರೆ.

ADVERTISEMENT

ಕನ್ನಡ ವಿಷಯಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿ ಕಾರವು 15 ಪುಟಗಳ ಪಠ್ಯಕ್ರಮವನ್ನು ನಿಗದಿಪಡಿಸಿತ್ತು. ಆದರೆ ಪ್ರಶ್ನೆಪತ್ರಿಕೆಗಳ ಗುಣಮಟ್ಟ ನೋಡಿದರೆ ಪ್ರಾಧಿಕಾರಕ್ಕೆ ಅಥವಾ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಹಿರಿಯ ಪ್ರಾಧ್ಯಾಪಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕು!

ಎ4 ಸರಣಿಯ ಪ್ರಶ್ನೆಪತ್ರಿಕೆಯನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಪ್ರಶ್ನೆಸಂಖ್ಯೆ 9ರಲ್ಲಿ ‘Memorial stones: a study of their origin, significance, and variety’ ಎಂಬ ಸಂಪಾದಿತ ಕೃತಿಯ ಹೆಸರನ್ನು ‘Memorial stones in South India’ ಎಂದು ಬದಲಾಯಿಸಲಾಗಿದೆ. ಇದನ್ನೇ ಸರಿ ಯಾದ ಆಯ್ಕೆಯನ್ನಾಗಿ ಗುರುತಿಸಲು ಹೇಳಲಾಗಿದೆ! ಹೀಗೆ ಕೃತಿಯ ಹೆಸರನ್ನು ತಿರುಚಲಾಗಿದೆ.

ಪ್ರಶ್ನೆಸಂಖ್ಯೆ 45ರಲ್ಲಿ ಅಲ್ಲಮನ ‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ’ ಎಂಬ ವಚನ ವನ್ನು ‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ’ ಎಂದು ಕೊಡಲಾಗಿದೆ. ಬಿ.ವಿ.ಮಲ್ಲಾ ಪುರ ಅವರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿ ಕಾರ ಪ್ರಕಟಿಸಿದ ಅಲ್ಲಮ ಪ್ರಭುದೇವರ ವಚನ ಸಂಪುಟ- 2ರಲ್ಲಿ ಮತ್ತು ಎಂ.ಎಂ.ಕಲಬುರ್ಗಿ ಅವರ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ ‘ಗಂಡನವ್ವಾ’ ಎಂದೇ ಇದೆ.

ಪ್ರಶ್ನೆಸಂಖ್ಯೆ 52ರಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಕೊಟ್ಟಿದ್ದ ಉತ್ತರಗಳ ಪೈಕಿ ಅಕ್ಕಮಹಾದೇವಿಯ ಹೆಸರಿ ನೊಂದಿಗೆ ಬೇರೆ ಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ.

ಪ್ರಶ್ನೆಸಂಖ್ಯೆ 63ರ ಹೊಂದಿಸಿ ಬರೆಯಿರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಕೆ.ಎಸ್.ನರಸಿಂಹವರ್ಮ ಎಂಬ ಹೊಸ ಕವಿಯೊಬ್ಬರನ್ನು ಪರಿಚಯಿಸಲಾಗಿದೆ! ‘ಶರ್ಮ’ ಎಂದಿದ್ದು ‘ವರ್ಮ’ ಆಗಿದ್ದರೆ ಮುದ್ರಾರಾಕ್ಷಸನ ಹಾವಳಿ ಎಂದು ಸುಮ್ಮನಿರಬಹುದಾಗಿತ್ತು. ಆದರೆ ‘ಸ್ವಾಮಿ’ಯು ‘ವರ್ಮ’ ಆಗಿ ಬದಲಾಗುವುದು ಚೋದ್ಯವೇ ಸರಿ. ಕನ್ನಡ ಪತ್ರಿಕೆಯಲ್ಲಿ ಇಂತಹ ಇನ್ನೂ ಹಲವಾರು ತಪ್ಪುಗಳು ನುಸುಳಿದ್ದು ತೀರಾ ಅವಮಾನಕಾರಿಯಾಗಿದೆ.

ಪ್ರಶ್ನೆಸಂಖ್ಯೆ 57 ‘ನೆಪೋಲಿಯನ್ ಮತ್ತು ನಾಯಿ’ ಕವನದ ಕರ್ತೃಗೆ ಉತ್ತರದ ಆಯ್ಕೆ ಕುವೆಂಪು. ಆದರೆ ಈ ಕವಿತೆಯ ಶೀರ್ಷಿಕೆ ಇರುವುದು ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನ ಸಂಕಲನದಲ್ಲಿ ‘ವೀರನ ಕನಿಕರ (ನಾಯಿ-ನೆಪೋಲಿಯನ್)’ ಎಂದಿದೆ. ಪ್ರಶ್ನೆ ರೂಪಿಸಿದವರು ಬೇಕಾಬಿಟ್ಟಿಯಾಗಿ ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ.

ಪರೀಕ್ಷಾ ಹಾಲ್‌ನಲ್ಲಿ ಸಮಯದ ಮಿತಿಯೊಳಗೆ ಪರೀಕ್ಷೆಗಳನ್ನು ಎದುರಿಸಬೇಕಾಗಿರುವಾಗ, ಈ ರೀತಿ ತಪ್ಪು ಪ್ರಶ್ನೆಗಳಿಂದಾಗುವ ಗೊಂದಲಗಳು ಅಭ್ಯರ್ಥಿಯು ಪ್ರಶ್ನೆಗೆ ಉತ್ತರಿಸುವ ಗೋಜಿಗೇ ಹೋಗ ದಂತೆ ಮಾಡುತ್ತವೆ. ನೆಗೆಟಿವ್ ಅಂಕ ಪಡೆಯುವುದ ಕ್ಕಿಂತ ದೂರವಿರುವುದೇ ಕ್ಷೇಮ ಅಂದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಪ್ರಾಧಿಕಾರವು ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿರುವವರು, ವಿದ್ವಾಂಸರು, ಕನ್ನಡಪರ ಹೋರಾಟಗಾರರು ಇಂತಹ ಕೆಟ್ಟ ಕನ್ನಡದ ಹುಟ್ಟುಗಾರರನ್ನು ಆರಂಭದಲ್ಲೇ ಚಿವುಟಿಹಾಕಬೇಕು. ಕನ್ನಡ ನಾಡಿನಲ್ಲಿಯೇ ಕನ್ನಡಕ್ಕೆ ಇಂತಹ ಅಧೋಗತಿಯಾದರೆ ಹೇಗೆ? ಇತರ ಯಾವುದೇ ಪ್ರಶ್ನೆಪತ್ರಿಕೆಗಳಲ್ಲಿ ಇಲ್ಲದ ಗೊಂದಲ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ ಯಾಕೆ?

ಪ್ರಾಧಿಕಾರವೇನೋ ಗ್ರೇಸ್ ಅಂಕಗಳನ್ನು ನೀಡು ತ್ತೇವೆ ಎನ್ನಬಹುದು. ಈ ಉಪಕ್ರಮವು ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರಿಗೆ ಮಾಡುವ ಅನ್ಯಾಯವೇ ವಿನಾ ಮತ್ತೇನಲ್ಲ. ಕರ್ನಾಟಕದ ಹೆಸರಿಟ್ಟುಕೊಂಡು ಕನ್ನಡದ ಪ್ರಶ್ನೆಪತ್ರಿಕೆಗಳನ್ನು ಈ ರೀತಿ ವಿರೂಪಗೊಳಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಅಸಡ್ಡೆ ಅಕ್ಷಮ್ಯ. ಇಂತಹ ಕೆಟ್ಟ ಪರೀಕ್ಷೆ ರದ್ದಾಗಲಿ. ಅಭ್ಯರ್ಥಿಗಳ ಭವಿಷ್ಯದೊಂದಿಗೆ ಈ ಪರಿಯ ಆಟವಾಡುವ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸ್ಪರ್ಧಾತ್ಮಕ ಪರೀಕ್ಷೆಗಾಗಿಯೇ ಹುಟ್ಟುತ್ತಿರುವ ಇಂತಹ ಕನ್ನಡವನ್ನು ಗಂಭೀರವಾಗಿ ಪರಿಗಣಿಸುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.