ADVERTISEMENT

ತಲ್ಲಣದ ಕಾಲದ ಚಿಲುಮೆಗಳು

ಕೈದಿಗಳ ಸೇವೆಯಿಂದ ಸ್ಫೂರ್ತಿ ಪಡೆದು, ಅಸಹಾಯಕ ಜನರಿಗೆ ನೆರವಾಗಬೇಕೆಂಬ ಒರತೆ ಎಲ್ಲರ ಹೃದಯಗಳಲ್ಲೂ ಉಕ್ಕಲಿ

ನಟರಾಜ ಹುಳಿಯಾರ್
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST
   

ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ತಲೆಗೆ ಬಂದಂತೆ ಮಾತಾಡುತ್ತಿರುವ ಜನರ ನಡುವೆ, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಂದಿರುವ ಸುದ್ದಿ ಎಲ್ಲರ ಕಣ್ಣು ತೆರೆಸುವಂತಿದೆ. ಈಗ ಮನೆಯಲ್ಲಿ ಬಂದಿಗಳಾಗಿರುವ ಜನ ತಂತಮ್ಮ ಸುರಕ್ಷತೆಯ ಬಗ್ಗೆ ಯೋಚಿಸುತ್ತಿದ್ದರೆ, ಹಿಂಡಲಗಾದ ಬಂದಿಗಳು ನಮ್ಮೆಲ್ಲರ ಸುರಕ್ಷತೆಗಾಗಿ ಉತ್ತಮ ಗುಣಮಟ್ಟದ ಮಾಸ್ಕ್ ತಯಾರಿಸುತ್ತಿದ್ದಾರೆ.

ಭಾನುವಾರ ಮಧ್ಯಾಹ್ನದ ವೇಳೆಗೆ 16,000ಕ್ಕೆ ತಲುಪಿದ್ದ ಈ ಮಾಸ್ಕ್‌ಗಳ ಸಂಖ್ಯೆ ಈ ವಾರ ಮೂವತ್ತು ಸಾವಿರ ಮುಟ್ಟಬಹುದು. ಮೊದಲು ಜೈಲು ಸಿಬ್ಬಂದಿ, ಕೈದಿಗಳಿಗಾಗಿ ಶುರುವಾದ ಯೋಜನೆಯನ್ನು ಈ ಹಂತಕ್ಕೆ ವಿಸ್ತರಿಸಿದವರು ಎಡಿಜಿಪಿ ಅಲೋಕ್ ಮೋಹನ್. ಕೈದಿಗಳನ್ನು ಈ ಅರ್ಥಪೂರ್ಣ ಕೆಲಸಕ್ಕೆ ಹಚ್ಚಿದವರು, ಈಗಾಗಲೇ ರಾಜ್ಯದ ವಿವಿಧ ಜೈಲುಗಳಲ್ಲಿ ಕೈದಿಗಳನ್ನು ಸೃಜನಶೀಲವಾಗಿ ತೊಡಗಿಸಿರುವ ಹಿಂಡಲಗಾದ ಜೈಲ್ ಸೂಪರಿಂಟೆಂಡೆಂಟ್ ಕೃಷ್ಣಕುಮಾರ್.

ಕೈದಿಗಳು ಮಾಸ್ಕ್ ತಯಾರಿಸಿದರೆ ಕೊಂಚ ಪ್ರೋತ್ಸಾಹಧನವೂ ಸಿಗುತ್ತದೆ. ಈ ಮಾಸ್ಕ್‌ಗಳನ್ನು 6 ರೂಪಾಯಿಗೆ ರೆಡ್‍ಕ್ರಾಸ್ ಮತ್ತಿತರ ಸಂಸ್ಥೆಗಳು ಕೊಳ್ಳುತ್ತವೆ. ಹಿಂಡಲಗಾ ಜೈಲಿನ ಹೊರಗೂ ಈ ಮಾಸ್ಕ್‌ಗಳು ಮಾರಾಟಕ್ಕಿವೆ.

ADVERTISEMENT

ಅದೇ ಭಾನುವಾರ ಬಂದ ಮತ್ತೊಂದು ವರದಿ: ರಾಜಸ್ಥಾನದ ಕುನ್ಹಾಡಿ ಎಂಬ ಊರಿನ ಬಳಿಯ ರಸ್ತೆಯಲ್ಲಿ ಚಲಿಸುತ್ತಿದ್ದ ಮಿನಿ ಟ್ರಕ್ಕೊಂದರ ಬೆನ್ನು ಹತ್ತಿದ ಜನರು, ಗೋಧಿಹಿಟ್ಟಿನ ಪ್ಯಾಕೆಟ್ಟುಗಳನ್ನು ಹೊತ್ತುಕೊಂಡು ಓಡತೊಡಗಿದ ವಿಡಿಯೊ ಎಲ್ಲೆಡೆ ಹಬ್ಬತೊಡಗಿತು. ಈ ವಿಡಿಯೊ ನಿಜವಾದದ್ದೇ ಎಂದು ಟ್ರಕ್ ಮಾಲೀಕ- ಡ್ರೈವರ್ ಜಿತೇಂದ್ರ ಭಾಟಿಯಾರನ್ನು ‘ದ ವೈರ್’ ಜಾಲತಾಣ ಕೇಳಿತು. ಆಗ ಭಾಟಿಯಾ ಹೇಳಿದ ಮಾತನ್ನು ಸಮಾಜ, ಸರ್ಕಾರ, ಪೊಲೀಸರು ಕಿವಿಗೊಟ್ಟು ಕೇಳಿಸಿಕೊಳ್ಳಬೇಕು: ‘ಹೌದು, ರಿಯಲ್ ವಿಡಿಯೊ. ಜನ ಓಡೋಡಿ ಬಂದು ಗೋಧಿಹಿಟ್ಟಿನ ಪ್ಯಾಕೆಟ್ಟುಗಳನ್ನು ಹೊತ್ಕೊಂಡು ಹೋದ್ರು. ಅವರು ಮಾಡಿದ್ರಲ್ಲಿ ತಪ್ಪೇನೂ ಇಲ್ಲ. ಎಲ್ಲ ಕಡೆ ಜನ ಹಸಿದಿದ್ದಾರೆ; ಅಸಹಾಯಕರಾಗಿದ್ದಾರೆ.

ನಿತ್ಯ ಬೇಕಾದ ಗೋಧಿಹಿಟ್ಟಿನಂಥ ಸಾಮಾನುಗಳು ಎಲ್ಲರಿಗೂ ಸಿಗೋ ಥರ ಸರ್ಕಾರ ನೋಡ್ಕೋಬೇಕು.’ ಭಾಟಿಯಾ ಇಷ್ಟು ಉದಾರವಾಗಿ ಹೇಳಿದ ಮೇಲೂ, ಜಿಲ್ಲೆಯ ಪೊಲೀಸ್‌ ವರಿಷ್ಠ, ‘ಜನರನ್ನು ಬಂಧಿಸುತ್ತೇನೆ, ದರೋಡೆ ಕೇಸ್ ಹಾಕುತ್ತೇನೆ’ ಎನ್ನುತ್ತಿದ್ದಾರೆ.

‘ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ’ ಎನ್ನುವವರಿರಬಹುದು. ಆದರೆ ಈ ಪ್ರಕರಣವನ್ನು ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ, ಡ್ರೈವರ್ ಭಾಟಿಯಾರ ದೃಷ್ಟಿಕೋನದಿಂದ ನೋಡದಿದ್ದರೆ ಸಮಾಜ, ಸರ್ಕಾರ, ಪೊಲೀಸರೇ ಮುಖ್ಯ ಅಪರಾಧಿಗಳಾಗುತ್ತಾರೆ.

ಈ ಎರಡು ಪ್ರಕರಣಗಳು ಮೇಲ್ನೋಟಕ್ಕೆ ವಿರುದ್ಧವಾಗಿರುವಂತೆ ಕಂಡರೂ ಅವುಗಳ ನಡುವೆ ಸಂಬಂಧವಿದೆ. ಹಿಂಡಲಗಾ ಜೈಲಿನಲ್ಲಿ ‘ಅಪರಾಧಿ’ಗಳೆಂದು ಕರೆಸಿಕೊಂಡವರು ನಮ್ಮ ಆರೋಗ್ಯಕ್ಕಾಗಿ ಮಾಸ್ಕ್ ಹೊಲೆಯುತ್ತಿದ್ದಾರೆ. ರಾಜಸ್ಥಾನದ ಹೆದ್ದಾರಿಯಲ್ಲಿ ಕೊರೊನಾ ಭಯದ ನಡುವೆಯೂ ಯಾವ ಮಾಸ್ಕೂ ಇಲ್ಲದೆ, ಗೋಧಿಹಿಟ್ಟಿನ ಪ್ಯಾಕೆಟ್ ಹೊತ್ತುಕೊಂಡು ಹೋಗಿ ‘ಅಪರಾಧಿ’ಗಳಾಗಲೂ ಜನ ತಯಾರಿದ್ದಾರೆ. ಇದು, ಇದೀಗ ಇಂಡಿಯಾದಲ್ಲಿ ಸ್ಫೋಟಗೊಳ್ಳುತ್ತಿರುವ ಜನರ ಅಸಹಾಯಕತೆ ಹಾಗೂ ಸಿಟ್ಟಿನ ಒಂದು ಮಾದರಿಯಷ್ಟೆ. ಇದು ಜಗತ್ತಿನ ಎಲ್ಲೆಡೆ ಸ್ಫೋಟಗೊಳ್ಳತೊಡಗಿದೆ.

ಮೊನ್ನೆ ಕೊರೊನಾದಿಂದಾಗಿ ಇಟಲಿಯ ಸಿಸಿಲಿಯಲ್ಲಿ, ಮನೆಯಿಂದ ಹೊರಹೋಗಿ ದುಡಿಯಲಾಗದ ಜನ ಮಾರ್ಕೆಟ್ಟುಗಳಿಗೆ ನುಗ್ಗಿ, ‘ನಮ್ಮ ಹತ್ರ ದುಡ್ಡಿಲ್ಲ; ಹಾಗಂತ ನಾವು ಹಸಿವಿನಿಂದ ಸಾಯಬೇಕೇನು?’ ಎಂದು ಕೈಗೆ ಸಿಕ್ಕ ಸಾಮಾನೆತ್ತಿಕೊಂಡು ಹೊರಟರು. ಅವತ್ತು ಸಂಜೆ ಇಟಲಿಯ ಪ್ರಧಾನಮಂತ್ರಿ, ‘ನಿಮ್ಮ ಮನೆಗೇ ಊಟದ ವೋಚರ್ ಕಳಿಸುತ್ತೇವೆ’ ಎಂದು ಜನರನ್ನು ಸಮಾಧಾನ ಮಾಡಿದರು; ನಮ್ಮ ಕ್ರೂರ ರಾಜಕಾರಣಿಗಳಂತೆ ‘ಒದ್ದು ಒಳಗೆ ಹಾಕಿ’ ಎಂದು ಚೀರಲಿಲ್ಲ.

ಇಂಥ ತಲ್ಲಣದ ಕಾಲದಲ್ಲಿ ಹಿಂಡಲಗಾದ ಕೈದಿಗಳು ತಯಾರಿಸುತ್ತಿರುವ ಮಾಸ್ಕ್, ನಾವೆಲ್ಲರೂ ಏನನ್ನಾದರೂ ಮಾಡಬೇಕೆಂದು ಪ್ರೇರೇಪಿಸುವಂತಿದೆ. ಜೈಲುಗಳಿಂದ ಹೊರಗೆ ಬದುಕುತ್ತಿರುವ ಜನರ ಆರೋಗ್ಯಕ್ಕಾಗಿ ಕೈದಿಗಳು ಹೊಲೆಯುತ್ತಿರುವ ಮಾಸ್ಕ್‌ಗಳನ್ನು ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಮಾರುಕಟ್ಟೆ ಬೆಲೆಗೆ ಕೊಳ್ಳಬೇಕು. ಶ್ರಮದ ಲಾಭ ಕೈದಿಗಳಿಗೂ ಸಿಗುವಂತಾಗಬೇಕು. ಜೊತೆಗೆ ಅಪರಾಧ ಹಾಗೂ ಕೈದಿಗಳ ಬಗ್ಗೆ ಪೂರ್ವಗ್ರಹಗಳ ಸ್ಟೀರಿಯೊಟೈಪಿನಲ್ಲೇ ಯೋಚಿಸುವ ಜನ, ಕೈದಿಗಳ ಮನಸ್ಸುಗಳನ್ನೂ ಅರಿಯಲೆತ್ನಿಸಬೇಕು. ಬಿಡುಗಡೆಯಾಗಿ ಎಲ್ಲರಂತೆ ಬದುಕಬಯಸುವ ಕೈದಿಗಳ ಈ ಉದಾರ ಸೇವೆಯಿಂದ ಸ್ಫೂರ್ತಿ ಪಡೆದು, ಅಸಹಾಯಕ ಜನರಿಗೆ ನೆರವಾಗಬೇಕೆಂಬ ಒರತೆಗಳು ಎಲ್ಲರ ಹೃದಯಗಳಲ್ಲೂ ಉಕ್ಕಲಿ.

ಈ ಲೇಖನ ಅಚ್ಚಿಗೆ ಹೋಗುವ ವೇಳೆಗೆ, ಹಸಿವಿನಿಂದಾಗಿ ಹಾಗೂ ದೂರದ ಊರುಗಳಿಗೆ ಹಿಂತಿರುಗುವ ದಾರಿಯಲ್ಲಿ ಒಂದು ಮಗುವೂ ಸೇರಿದಂತೆ 22 ಜನ ತೀರಿಕೊಂಡಿದ್ದಾರೆ. ಕೊರೊನಾಕ್ಕೆ ತುತ್ತಾಗಿರುವವರ ಸಾವಿಗೆ ನಿರ್ದಯ ವೈರಸ್ ಕಾರಣವಾಗಿದ್ದರೆ, ಹಸಿವಿನಿಂದ, ಕಾಲ್ನಡಿಗೆಯಿಂದ ಉಂಟಾಗುತ್ತಿರುವ ಸಾವುಗಳಿಗೆ ನಮ್ಮ ಹಾಗೂ ನಮ್ಮ ಸರ್ಕಾರಗಳ ಸಂಪೂರ್ಣ ಬೇಜವಾಬ್ದಾರಿಯೇ ಕಾರಣ.

ಜಾತಿ, ಧರ್ಮಗಳ ಗಡಿ ಮೀರಿ, ಹಸಿದವರಿಗೆ ಊಟದ ಪೊಟ್ಟಣ ಕೊಡುತ್ತಿರುವ ಮೈಸೂರಿನ ಪೊಲೀಸರ, ನೂರಾರು ಉದಾರಿಗಳ ನಡೆ ನಮ್ಮೆಲ್ಲರಿಗೂ ದಾರಿ ತೋರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.