ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ, ಸುವರ್ಣ ಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರದ ಅನಾವರಣ ಮಾಡಲಾಯಿತು. ಈ ಮೂಲಕ, ಯಾವುದನ್ನು ಪ್ರಜಾಪ್ರಭುತ್ವದ ಉದ್ಘಾಟನೆ ಎಂದು ನಾವು ಹೆಮ್ಮೆಯಿಂದ ಹೇಳಿ ಹೇಳಿ ಬೀಗುತ್ತೇವೆಯೋ ಅದರ ಮಹತ್ವ ಮತ್ತು ಪ್ರಸ್ತುತತೆಯನ್ನು ನಮಗೆ ನಾವೇ ಮನದಟ್ಟು ಮಾಡಿಕೊಳ್ಳುವ ಸಾಂಕೇತಿಕ ಕ್ರಿಯೆಯಾಗಿ ಅದು ಕಂಡಿತ್ತು. ಆದರೆ ಅದೇ ಅಧಿವೇಶನದಲ್ಲಿ ಆ ಆಶಯಕ್ಕೆ ತದ್ವಿರುದ್ಧವಾದ ದುರಂತವೊಂದು ಘಟಿಸಿದೆ. ಆ ಆಶಯಗಳ ದಾರಿಯಲ್ಲಿ ನಡೆಯುವುದು ಅದೆಷ್ಟು ಕಷ್ಟದ್ದು ಎನ್ನುವುದನ್ನೂ ಅದು ನಮಗೆ ತೋರಿಸಿಕೊಟ್ಟಿದೆ.
ಪ್ರಶ್ನೆ ಇರುವುದು ಸಚಿವೆಯ ಕುರಿತಂತೆ ಅವರು ಎಷ್ಟು ಬಾರಿ ಅಗೌರವದ ಹಾಗೂ ಅವಾಚ್ಯ ಪದ ಬಳಸಿದರು ಎನ್ನುವುದರಲ್ಲಿ ಅಲ್ಲ. ಆ ಪದವು ಗಂಡಿನ ಆಳದಲ್ಲಿ ಇರುವ ವಿಕಾರವನ್ನು ಸಾರ್ವಜನಿಕವಾಗಿ ನಿರ್ಲಜ್ಜೆಯಿಂದ ಪ್ರಕಟಪಡಿಸುತ್ತದೆಯಲ್ಲ ಆ ಭಂಡತನದಲ್ಲಿ.
ಬಹುಶಃ ಕಳೆದ ಬಾರಿಯ ಅಧಿವೇಶನದಲ್ಲಿ ಎನ್ನಿಸುತ್ತದೆ, ಶಾಸಕರೊಬ್ಬರು ಹೇಳುತ್ತಾರೆ, ‘ನಮ್ಮಲ್ಲಿ ಕೆಲವರು ನಿತ್ಯ ಸುಮಂಗಲಿಯರಿದ್ದಾರೆ. ಏನು ಮಾಡುವುದು...’ ಎಂದು ವ್ಯಂಗ್ಯ, ಗೇಲಿ ಬೆರೆತ ಧ್ವನಿಯಲ್ಲಿ ಅವರು ತಮ್ಮ ಮಾತನ್ನು ಮುಂದುವರಿಸುತ್ತಾರೆ.
ಇಂಥ ಮಾತುಗಳನ್ನಾಡುವಾಗ ಈ ಮಹಾಶಯರಿಗೆ ಆ ನಿತ್ಯ ಸುಮಂಗಲಿಯರು ಯಾರ ಸೃಷ್ಟಿ ಎನ್ನುವ ವಿಷಯ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಅವರನ್ನು ನಿತ್ಯ ಸುಮಂಗಲಿಯರನ್ನಾಗಿಸಿರುವ ಗಂಡಾಳಿಕೆಯ ಮೂಲ ಧೋರಣೆಯೇ ಇದರ ಮೂಲ. ಹೆಣ್ಣನ್ನು ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ನೋಡಲು ಬೇಕಾದ ನಾಗರಿಕತೆಯಾಗಲಿ, ಸಂಸ್ಕೃತಿಯಾಗಲಿ ಇಲ್ಲದೇ ಇರುವವರೇ ಅವಳನ್ನು ನಿತ್ಯ ಸುಮಂಗಲಿಯನ್ನಾಗಿಸಿರುವುದು.
ಇಷ್ಟಕ್ಕೂ ಎಲ್ಲ ಹೆಣ್ಣುಮಕ್ಕಳೂ ಎಲ್ಲ ಕಾಲಕ್ಕೂ ನಿತ್ಯ ಸುಮಂಗಲಿಯರೇ. ಸುಮಂಗಲಿ ಎಂದರೆ ಮುತ್ತೈದೆ ಎನ್ನುವ ಕುಬ್ಜಾರ್ಥದಲ್ಲಿ ಅಲ್ಲ, ಮಂಗಳವಾದ ಎಲ್ಲವನ್ನೂ ಒಳಗೊಳ್ಳುವವಳು ಎನ್ನುವ ಅರ್ಥದಲ್ಲಿ. ಕಿಚ್ಚಿಲ್ಲದ ಬೇಗೆಯಲ್ಲಿ, ಏರಿಲ್ಲದ ಗಾಯದಲ್ಲಿ ಕಾಡಿಸುವ ಬದುಕಿನ, ಗಂಡಾಳಿಕೆಯ ನೂರು ಕಾಡಾಟಗಳನ್ನು ತನ್ನ ಅಂತಃಕರಣದಿಂದಲೇ ಗೆಲ್ಲಬಲ್ಲ ಮಂಗಳಕರವಾದ ಗುಣಗಳೆಲ್ಲವೂ ಹೆಣ್ಣಿನಲ್ಲಿ ಇವೆ. ಈ ಅರ್ಥದಲ್ಲಿ ಅವಳು ನಿತ್ಯವೂ ಸುಮಂಗಲಿಯೇ.
ಈ ಇಂಥ ಕಲ್ಮಶಕ್ಕೆ, ಕೊನೆಯೇ ಇಲ್ಲದ ಆತ್ಮವಂಚನೆಗೆ ಸರಿಯಾದ ಉತ್ತರ ಕೊಟ್ಟವಳು ಸೂಳೆ ಸಂಕವ್ವೆ. ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ ಹಿಡಿದಡೆ ಬತ್ತಲೆ ನಿಲ್ಲಿಸಿ ಕೊಲುವರಯ್ಯಾ ವ್ರತಹೀನನರಿದು ಬೆರೆದಡೆ ಕಾದ ಕತ್ತಿಯಲಿ ಕೈ ಕಿವಿ ಮೂಗ ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ ಗಂಡಿನ ಭಂಡತನಕ್ಕೆ ಘನವಾದ ನೈತಿಕ ಉತ್ತರ ಇಲ್ಲಿದೆ. ಯಾವ ವೇಶ್ಯೆಯರನ್ನು ಹೀನಾಯವಾದ ಅಗೌರವದಲ್ಲಿ ಕಾಣುತ್ತದೆಯೋ ಆ ಲೋಕಕ್ಕೆ ಸಂಕವ್ವೆ ತನಗೆ ಸಿಕ್ಕಿದ, ತನ್ನ ಮೇಲೆ ಬಲವಂತವಾಗಿ ಹೊರಿಸಲಾದ ಅಥವಾ ತನ್ನ ಆಯ್ಕೆಯದ್ದೇ ಆದರೂ ಆಗಿರಬಹುದಾದ ಇದನ್ನು ತಾನೊಂದು ವೃತ್ತಿಯಾಗಿ, ವೃತ್ತಿ ಘನತೆಯನ್ನೂ ವ್ಯಕ್ತಿ ಗೌರವವನ್ನೂ ಉಳಿಸಿಕೊಂಡ ನೈತಿಕ ಎಚ್ಚರದಲ್ಲಿ ಕಾಪಾಡಿಕೊಂಡದ್ದರ ಬಗೆಗೆ ಇಲ್ಲಿ ಹೇಳುತ್ತಿದ್ದಾಳೆ. ಹಣದಾಸೆಗೋ ಮತ್ತೊಂದಕ್ಕೋ ತನ್ನನ್ನು ಮಾರಿಕೊಳ್ಳದೆ ಒಪ್ಪಿಕೊಂಡದ್ದಕ್ಕೆ ಬದ್ಧವಾಗಿರುವುದನ್ನು ಹೇಳುತ್ತಾ, ಅದು ತಾನು ದೇವರನ್ನು ಮುಟ್ಟಬಲ್ಲಷ್ಟು ನೈತಿಕ ಎತ್ತರದಲ್ಲಿ ಇರುವುದನ್ನು ಒತ್ತಿ ಹೇಳುತ್ತಾಳೆ. ಆತ್ಮಸಾಕ್ಷಿಯ ಎಚ್ಚರದಲ್ಲಿ ತಾನು ಉಳಿಸಿಕೊಂಡ ಎಚ್ಚರವು ನಿರ್ಲಜ್ಜರಲ್ಲಿ ಇರುವುದು ಸಾಧ್ಯವಿಲ್ಲ ಎನ್ನುವುದನ್ನೂ ಇಲ್ಲಿ ಸೂಚಿಸುತ್ತಿದ್ದಾಳೆ. ಆ ನಿರ್ಲಜ್ಜರ ನಿರ್ಲಜ್ಜೆ ಬಯಲು ಮಾಡುವುದೇ ಪ್ರತ್ಯಸ್ತ್ರ.
ಇಲ್ಲಿ ಆತಂಕ ಹುಟ್ಟಿಸುತ್ತಿರುವ ಅಂಶವೆಂದರೆ ಹೀನ ನಡವಳಿಕೆಯ ಸಮರ್ಥನೆ. ಇದು ಎಷ್ಟು ಹೇಯವಾದುದು ಎಂದು ಗೊತ್ತಿದ್ದೂ ಸಾರ್ವಜನಿಕವಾಗಿ ನಾಯಕರು ಮತ್ತು ಅವರ ಬೆಂಬಲಿಗರು ಕಣ್ಣಿದ್ದೂ ಕುರುಡರಂತೆ, ಸಚಿವೆಯೊಬ್ಬರಿಗಾದದ್ದು ತಮ್ಮ ಮನೆಯ ಹೆಣ್ಣುಮಕ್ಕಳಿಗೂ ಆಗಬಹುದು ಎನ್ನುವ ನೆದರಿಲ್ಲದವರಂತೆ ವರ್ತಿಸುತ್ತಿರುವುದು. ಸ್ವಾರ್ಥ, ದುರಾಸೆ ಮತ್ತು ಅನಾಗರಿಕತೆಗೆ ಒಂದು ಹದ್ದಿಲ್ಲವೆ? ನಿತ್ಯ ಸಮಂಗಲಿ ಎಂದದ್ದಕ್ಕೆ ಅಧಿವೇಶನದಲ್ಲಿ ಶಾಸಕಿಯೊಬ್ಬರು ವಿರೋಧಿಸಿದರೆ ಆತ ಹೇಳುತ್ತಾರೆ ‘ಇದೇನು ಅನ್‌ಪಾರ್ಲಿಮೆಂಟರಿ ಪದ ಅಲ್ಲ’ ಎಂದು. ಅನ್‌ಪಾರ್ಲಿಮೆಂಟರಿಗಿಂತ ಹೀನವಾದದ್ದು ಇದು ಎಂದು ಅವರ ಜೊತೆಗಾರರೇ ಹೇಳಬೇಕಲ್ಲವೆ? ಪಕ್ಷಾತೀತವಾಗಿ ಎಲ್ಲರೂ ಹೆಣ್ಣಿನ ಬಗೆಗಿನ ಇಂತಹ ಕೊಳಕು ಮಾತು ಮತ್ತು ನಡವಳಿಕೆಯನ್ನು ವಿರೋಧಿಸ ಬೇಕಾದ್ದು ನಿಜವಾಗಿ ಪಾರ್ಲಿಮೆಂಟರಿ ನಡವಳಿಕೆ. ಜನಪ್ರತಿನಿಧಿಗಳಿಂದ ಇಂತಹ ಕನಿಷ್ಠ ನಡವಳಿಕೆಯನ್ನಾದರೂ ನಿರೀಕ್ಷಿಸುವುದು ನಮ್ಮೆಲ್ಲರ ಮೂಲಭೂತ ಹಕ್ಕು.
ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ ಕೊಲ್ಲುವ ಗಂಡಾಳಿಕೆಯ ನೂರು ಹತ್ಯಾರಗಳಲ್ಲಿ ಅತ್ಯಂತ ಪ್ರಬಲವಾದುದು ಮತ್ತು ಅಪಾಯಕಾರಿಯಾದುದೆಂದರೆ ಭಾಷೆಯೇ. ಅವಳನ್ನು ಕಂಗಾಲಾಗಿಸಿದರೆ ಅರ್ಧ ಗೆಲುವು ತಮ್ಮದು ಎನ್ನುವುದನ್ನು ಕಾಲದಿಂದಲೂ ಅರಿತಿರುವ ಪುರುಷ ಮೃಗಗಳು ಮೃಗೀಯವಾದ ಭಾಷೆಯನ್ನೇ ಇದಕ್ಕೆ ಬಳಸಿ ಬಳಸಿ ಗೆಲ್ಲುತ್ತಿವೆ. ಇದಕ್ಕೆ ಎದುರಾಗಿ ನಾವು ಕಟ್ಟಬೇಕಾಗಿರುವುದು ಆತ್ಮಬಲದ ಭಾಷೆಯನ್ನು, ಅವರ ಹುನ್ನಾರಗಳಿಗೆ ಬಲಿಯಾಗದ ಸ್ವಗೌರವದ ಭಾಷೆಯನ್ನು. ಕಣ್ಣು ಕಾಣದ ಗಾವಿಲರ ಕಣ್ಣು ತೆರೆಯಿಸುವುದು ಸಾಧ್ಯವಾಗದಿದ್ದರೂ ಗಾವಿಲರಿಗೆ ಬಲಿಯಾಗದಿರುವ ಎಚ್ಚರ ನಮ್ಮಲ್ಲಿ ಸದಾ ಇರಬೇಕು.
ಹೆಣ್ಣಿನ ಅಂತಃಕರಣವನ್ನು ಮನದಣಿಯೆ ಉಂಡೂ ಉಳಿದೇ ಇರುವ ಈ ರಾಕ್ಷಸತ್ವ ಮಾತ್ರ ಗಂಡಿನ ಸ್ವಯಾರ್ಜಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.