
ಜನಸಂಖ್ಯೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ನ್ಯಾಯಯುತ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಲು ಗಡಿಗಳನ್ನು ಮರುರೂಪಿಸುವ ಪ್ರಕ್ರಿಯೆಯೇ ಕ್ಷೇತ್ರಗಳ ಮರುವಿಂಗಡಣೆ. ಲೋಕಸಭೆಯ ಸ್ಥಾನಗಳನ್ನು ಹಂಚಿಕೆ ಮಾಡಲು ಜನಸಂಖ್ಯೆಯೇ ಮೂಲ ಆಧಾರ. ಇದೇ ದಕ್ಷಿಣ ಭಾರತದ ಪಾಲಿಗೆ ಶಾಪವಾಗಿ, ಉತ್ತರ ಭಾರತದವರಿಗೆ ವರವಾಗಿದೆ.
ಸಂವಿಧಾನದ 82ನೇ ಅನುಚ್ಛೇದದ ಪ್ರಕಾರ, ಪ್ರತಿಯೊಂದು ಜನಗಣತಿಯ ಬಳಿಕ ಸಂಸತ್ತು ಕಾನೂನಿನ ಮೂಲಕ ಸೀಮಾನಿರ್ಣಯ ಕಾಯ್ದೆಯನ್ನು ಜಾರಿಗೆ ತರುತ್ತದೆ. ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಕೇಂದ್ರ ಸರ್ಕಾರವು ಸೀಮಾನಿರ್ಣಯ ಆಯೋಗವನ್ನು ರಚಿಸುತ್ತದೆ. ಈ ಸೀಮಾನಿರ್ಣಯ ಆಯೋಗವು, ಲೋಕಸಭಾ ಕ್ಷೇತ್ರಗಳ ಗಡಿಗಳನ್ನು ನಿರ್ಣಯಿಸುತ್ತದೆ. ಈಗಿನ ಕ್ಷೇತ್ರಗಳ ಗಡಿ ನಿರ್ಣಯವನ್ನು 2001ರ ಜನಗಣತಿಯ ಆಧಾರದಲ್ಲಿ, 2002ರ ‘ಸೀಮಾ ನಿರ್ಣಯ ಕಾಯ್ದೆ’ಯ ಅವಕಾಶಗಳ ಪ್ರಕಾರ ಮಾಡಲಾಗಿದೆ. ಮೇಲಿನ ಅಂಶಗಳ ಹೊರತಾಗಿಯೂ 2002ರಲ್ಲಿ ಭಾರತದ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿಯನ್ನು ಮಾಡಿ, 2026ರ ಬಳಿಕ ನಡೆಯುವ ಮೊದಲ ಜನಗಣತಿಯ ತನಕ ಕ್ಷೇತ್ರಗಳ ಸೀಮಾ ನಿರ್ಣಯ ಮಾಡುವುದನ್ನು ನಿರ್ಬಂಧಿಸಿದೆ.
ಭಾರತದಲ್ಲಿ ಸ್ವಾತಂತ್ರ್ಯಾನಂತರ ನಾಲ್ಕು ಬಾರಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿದೆ. 1951ರ ಜನಗಣತಿಯನ್ನು ಆಧರಿಸಿ 1952ರಲ್ಲಿ ಮೊದಲ ಮರುವಿಂಗಡಣೆ ನಡೆಯಿತು. ಆಗ ಲೋಕಸಭಾ ಕ್ಷೇತ್ರಗಳ ಸಂಖ್ಯೆ 494. ರಾಜ್ಯಗಳ ಮರುಸಂಘಟನೆಯ (1956) ನಂತರ 1963ರಲ್ಲಿ 1961 ಜನಗಣತಿ ಆಧರಿಸಿ ಮರುವಿಂಗಡಣೆ ಪ್ರಕ್ರಿಯೆ ನಡೆದು, ಕ್ಷೇತ್ರಗಳ ಸಂಖ್ಯೆ 522 ಆಯಿತು. 1973ರಲ್ಲಿ ಮರುವಿಂಗಡಣೆ ನಡೆದು ಕ್ಷೇತ್ರಗಳ ಸಂಖ್ಯೆ 543ಕ್ಕೇರಿತು. 2002ರಲ್ಲಿ ಲೋಕಸಭೆ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಈಗ 5ನೇ ಬಾರಿಗೆ 2026ರಲ್ಲಿ ನಡೆಯುವ ಜನಗಣತಿಯ ಆಧಾರದ ಮೇಲೆ ಮರುವಿಂಗಡಣೆ ನಡೆಯಲಿದೆ.
ಮರುವಿಂಗಡಣೆ ಮೇಲ್ನೋಟಕ್ಕೆ ಸಹಜ ಪ್ರಕ್ರಿಯೆ ಅನ್ನಿಸುತ್ತದೆ. ಲೋಕಸಭಾ ಕ್ಷೇತ್ರಗಳನ್ನು 753ಕ್ಕೆ ಹೆಚ್ಚಿಸುವ ಸಾಧ್ಯತೆ ಇರುವುದರಿಂದ (ಹೊಸ ಸಂಸತ್ ಭವನದಲ್ಲಿ 888 ಆಸನ ವ್ಯವಸ್ಥೆ ಮಾಡಿದೆ) ಕೇಂದ್ರ ಗೃಹ ಸಚಿವರು ಹೇಳಿರುವಂತೆ, ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳು ಕಮ್ಮಿಯಾಗುವುದಿಲ್ಲ. ಆದರೆ, ಉದ್ದೇಶಿತ ಕ್ಷೇತ್ರ ಮರುವಿಂಗಡಣೆಯಲ್ಲಿ ಉತ್ತರ ರಾಜ್ಯಗಳಿಗೆ ಹೋಲಿಸಿದರೆ, ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ನಿಧಾನಗತಿಯ ಜನಸಂಖ್ಯಾ ಬೆಳವಣಿಗೆಯಿಂದಾಗಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ.
ಪ್ರಸಕ್ತ, ದಕ್ಷಿಣ ರಾಜ್ಯಗಳು 543 ಲೋಕಸಭಾ ಸ್ಥಾನಗಳಲ್ಲಿ 129 ಸ್ಥಾನಗಳನ್ನು ಹೊಂದಿವೆ: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣ ಕ್ರಮವಾಗಿ 28, 39, 25, 20 ಮತ್ತು 17 ಸ್ಥಾನ ಹೊಂದಿವೆ. ಉದ್ದೇಶಿತ ಮರುವಿಂಗಡಣೆ ನಡೆದರೆ ಅದು 36, 41, 28, 19 ಮತ್ತು 20 ಆಗುತ್ತದೆ. ಪರಿಣಾಮಕಾರಿಯಾಗಿ ಕುಟುಂಬ ಯೋಜನೆ ಅನುಷ್ಠಾನಗೊಳಿಸಿದ ತಪ್ಪಿಗಾಗಿ ಕೇರಳ 1 ಸ್ಥಾನ ಕಳೆದುಕೊಳ್ಳುತ್ತದೆ.
753 ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷಿಣದ ಕ್ಷೇತ್ರಗಳು 144 ಆಗುತ್ತದೆ. ಸ್ಥಾನಗಳು ಹೆಚ್ಚಿದರೂ ಪ್ರಾತಿನಿಧ್ಯದಲ್ಲಿ ಶೇ 2ರಷ್ಟು ಕಡಿಮೆ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಜನಸಂಖ್ಯೆಯನ್ನು ನಿಯಂತ್ರಿಸದ ಉತ್ತರದ ಹಿಂದಿ ರಾಜ್ಯಗಳು 150ಕ್ಕೂ ಅಧಿಕ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಸ್ಥಾನಗಳು 80ರಿಂದ 128 ಆಗಿ ಅತಿ ದೊಡ್ಡ ಏರಿಕೆ ಕಾಣಲಿದೆ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ, ಬಿಹಾರದಲ್ಲಿ ಸ್ಥಾನಗಳು 40ರಿಂದ 70ಕ್ಕೆ ಏರಲಿದೆ. ಮಧ್ಯಪ್ರದೇಶದ ಪ್ರಾತಿನಿಧ್ಯ 29ರಿಂದ 47ಕ್ಕೆ ಹೆಚ್ಚಾಗಲಿದೆ. ಮಹಾರಾಷ್ಟ್ರದಲ್ಲಿ 20 ಸ್ಥಾನಗಳು ಹೆಚ್ಚುವ ನಿರೀಕ್ಷೆಯಿದ್ದು, 48ರಿಂದ 68ಕ್ಕೆ ಏರಲಿದೆ. ರಾಜಸ್ಥಾನದಲ್ಲಿ 25ರಿಂದ 44 ಸ್ಥಾನಗಳಿಗೆ ಏರಿಕೆಯಾಗಲಿದೆ. ಚುನಾವಣೆಯ ಗೆಲುವಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ರಾಜಕೀಯ ಪಕ್ಷಗಳು ಈ ರಾಜ್ಯಗಳ ಜನರ ಮನವೊಲಿಸಲು ಸಹಜವಾಗಿ ಗಮನಹರಿಸುತ್ತವೆ.
ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದ ಹಾಗೂ ಮಾನವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆ ದಂಡನೆಯಾಗಬಾರದು. ಈಗಾಗಲೇ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಉಲ್ಲೇಖಿಸಲು ಕಳೆದ ಕೆಲವು ದಶಕಗಳಲ್ಲಿ ಸಂಕ್ಷಿಪ್ತ ರೂಪವಾಗಿ ‘ಬಿಮಾರು’ (ಬಿಐಎಂಎಆರ್‌ಯು) ಪದ ಬಳಸಲಾಗುತ್ತಿದೆ. ‘ಬಿಮಾರು’ ಎಂದರೆ ಹಿಂದಿಯಲ್ಲಿ ‘ಅಸ್ವಸ್ಥ’ ಎಂದರ್ಥ. ಈ ರಾಜ್ಯಗಳಿಗೆಗೋಸ್ಕರ ಸಾಕಷ್ಟು (ತೆರಿಗೆ ಹಂಚಿಕೆ, ಕೇಂದ್ರದ ನೆರವು, ಇತ್ಯಾದಿ) ಕಳೆದುಕೊಳ್ಳುತ್ತಿರುವ ದಕ್ಷಿಣದ ರಾಜ್ಯಗಳು ಮರುವಿಂಗಡಣೆಯಿಂದ ಇನ್ನಷ್ಟು ಅನ್ಯಾಯ, ನಿರ್ಲಕ್ಷ್ಯಗಳಿಗೆ ಒಳಗಾಗಲಿವೆ.
ನಾವು ಎಚ್ಚತ್ತುಕೊಂಡು ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸದಿದ್ದರೆ, ದಕ್ಷಿಣ ಭಾರತವು ದೇಶದ ರಾಜಕಾರಣದಲ್ಲಿ ನಗಣ್ಯವಾಗುತ್ತದೆ. ಇದು ಕನ್ನಡಿಗರ (ದಕ್ಷಿಣ ಭಾರತೀಯರ) ಅಳಿವು–ಉಳಿವಿನ ಪ್ರಶ್ನೆ. ನಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಅವಕಾಶಗಳನ್ನು ಉಳಿಸಿಕೊಳ್ಳಲು ದನಿ ಎತ್ತಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.