ADVERTISEMENT

ಸಂಗತ: ವಾಯುಗುಣ ಶುದ್ಧೀಕರಿಸಲಿದೆ ಒಣ ಹುಲ್ಲು!

ಪೆಟ್ರೋಲಿಯಂ ಇಂಧನದ ಹಂಗಿಲ್ಲದಂತೆ ಮಾಡಲಿದೆ ಕಂಪ್ರೆಸ್ಡ್‌ ಬಯೊಗ್ಯಾಸ್

ಶ್ರೀಗುರು
Published 24 ಮಾರ್ಚ್ 2021, 19:31 IST
Last Updated 24 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಇಸ್ರೊದವರು ಹಾರಿಸಿದ ರಾಕೆಟ್‍ಗಳಂತೆ ಮೇಲಕ್ಕೇರು ತ್ತಿರುವಾಗ ಜರ್ಮನಿಯ ವರ್ಬಯೋ ಕಂಪನಿಯು ವಾಹನ ಸವಾರರಿಗೆ, ಗೃಹಿಣಿಯರಿಗೆ ಸಂತಸದ ಸುದ್ದಿ ನೀಡಿದೆ. ಅದೇನೆಂದರೆ, ನಿಮ್ಮ ವಾಹನಗಳನ್ನು ಓಡಿಸಲು ಇನ್ನು ಮುಂದೆ ಪೆಟ್ರೋಲ್, ಡೀಸೆಲ್‍ ಬೇಕಿಲ್ಲ! ಬದಲಿಗೆ ಭತ್ತದ ಗದ್ದೆಯ ಒಣ ಹುಲ್ಲೇ ಸಾಕು!

ಪಂಜಾಬ್‍ನ ಸಂಗ್ರೂರ ಜಿಲ್ಲೆಯ ಭೂತಲ್ ಕಲನ್ ಹಳ್ಳಿಯ ಭತ್ತದ ಗದ್ದೆಯ ನಡುವೆಯೇ ಭತ್ತದ ಕೂಳೆಯಿಂದ ಒತ್ತಡೀಕರಿಸಿದ ಜೈವಿಕ ಅನಿಲ (ಕಂಪ್ರೆಸ್ಡ್ ಬಯೊ ಗ್ಯಾಸ್) ತಯಾರಿಸುವ ಘಟಕ ಸ್ಥಾಪಿಸಿರುವ ಕಂಪನಿ, ಎರಡು ಟನ್ ಭತ್ತದ ಹುಲ್ಲಿನಿಂದ ವರ್ಷವಿಡೀ ಕಾರು ಓಡಿಸಬಹುದು ಎಂಬ ಭರವಸೆ ನೀಡಿದೆ. ಹಾಗೇನಾದರೂ ಆದಲ್ಲಿ ಎರಡು ನೇರ ಲಾಭಗಳಿವೆ. ಒಂದು, ದಿನೇ ದಿನೇ ದುಬಾರಿಯಾಗುತ್ತಿರುವ ಪೆಟ್ರೋಲ್, ಡೀಸೆಲ್‍ಗಳನ್ನು ಮರೆತು, ಬಯೊಗ್ಯಾಸ್ ಬಳಸಿ ಹಾಯಾಗಿ ವಾಹನ ಓಡಿಸಬಹುದು. ಎರಡನೆಯದು, ದೆಹಲಿ, ಹರಿಯಾಣ, ಪಂಜಾಬ್‍ನಲ್ಲಿ ಭತ್ತದ ಕೂಳೆ ಸುಡುವುದನ್ನು ನಿಲ್ಲಿಸಿ, ಹಬ್ಬುತ್ತಿರುವ ವಾಯುಮಾಲಿನ್ಯವನ್ನು ತಡೆಯಬಹುದು.

ಯೋಜಿಸಿದಂತೆ ಎಲ್ಲವೂ ನಡೆದರೆ, ಬರುವ ಜೂನ್ ವೇಳೆಗೆ ಕಂಪನಿ ಸ್ಥಾಪಿಸುವ ಬಯೊಗ್ಯಾಸ್ ಘಟಕಗಳು ಕಾರ್ಯಾರಂಭ ಮಾಡಿ ಇಂಧನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಪರಿಹರಿಸುತ್ತವೆ. ಭತ್ತದ ಕೂಳೆಯಿಂದ ತಯಾರಾಗುವ ಕಂಪ್ರೆಸ್ಡ್ ಬಯೊಗ್ಯಾಸ್ ಈಗ ಬಳಕೆಯಲ್ಲಿರುವ ಪೆಟ್ರೋಲಿಯಂ ಇಂಧನ ಮೂಲದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಅನ್ನು ರಿಪ್ಲೇಸ್ ಮಾಡುತ್ತದೆ. ರಾಜ್ಯ ಹಾಗೂ ಕೇಂದ್ರ
ಸರ್ಕಾರಗಳೆರಡೂ ಸರಿಯಾಗಿ ಯೋಚಿಸಿದರೆ ಇನ್ನೆರಡು ವರ್ಷಗಳಲ್ಲಿ 5,000 ಸಿಬಿಜಿ ಘಟಕಗಳು ತಲೆ ಎತ್ತುತ್ತವೆ.

ADVERTISEMENT

ಕೇಂದ್ರ ಸರ್ಕಾರವು ಸತತ್ (SATAT)- ಸಸ್ಟೇನಬಲ್ ಆಲ್ಟರ್ನೇಟಿವ್ ಟುವರ್ಡ್ಸ್‌ ಅಫೋರ್ಡಬಲ್ ಟ್ರಾನ್ಸ್‌ಪೊರ್ಟೇಶನ್ ಯೋಜನೆಯ ಅಡಿ ಈ ಸಾಲಿನಲ್ಲಿ 900 ಕಂಪ್ರೆಸ್ಡ್ ಬಯೊಗ್ಯಾಸ್ ಘಟಕಗಳನ್ನು ದೇಶದ ವಿವಿಧೆಡೆ ಸ್ಥಾಪಿಸಲು ಜೆಬಿಮ್, ಅದಾನಿ ಗ್ಯಾಸ್, ಪೆಟ್ರೊನೆಟ್ ಎಲ್‍ಎನ್‍ಜಿ ಟೊರೆಂಟ್ ಗ್ಯಾಸ್‌ನಂಥ ಬೃಹತ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ. 2023ರ ವೇಳೆಗೆ ದೇಶದಾದ್ಯಂತ ಒಟ್ಟು 15 ದಶಲಕ್ಷ ಮೆಟ್ರಿಕ್ ಟನ್ ಅನಿಲವನ್ನು ಉತ್ಪಾದಿಸುವ ಗುರಿಯೂ ಇದ್ದು ಲಕ್ಷಾಂತರ ಉದ್ಯೋಗಾವಕಾಶಗಳು ತೆರೆದು
ಕೊಳ್ಳಲಿವೆ.

ಸಿಬಿಜಿಯನ್ನು ಕೃಷಿ ತ್ಯಾಜ್ಯ, ಜಾನುವಾರು ಸಗಣಿ, ಹಿಂಡಿ ಬಿಸಾಕಿದ ಕಬ್ಬಿನ ಚರಟ, ಡಿಸ್ಟಿಲರಿ ಘಟಕಗಳ ತ್ಯಾಜ್ಯ, ಗಟಾರದ ನೀರು, ಊರು- ನಗರಗಳ ಘನ ತ್ಯಾಜ್ಯ, ಕಾರ್ಖಾನೆಗಳ ಸಂಸ್ಕರಿಸಬಹುದಾದ ತ್ಯಾಜ್ಯ ಮತ್ತು ಅರಣ್ಯ ತ್ಯಾಜ್ಯಗಳನ್ನು ಬಳಸಿ ತಯಾರಿಸ
ಲಾಗುತ್ತದೆ. ಅಡುಗೆ ಅನಿಲದಷ್ಟೇ ದಹನ ಸಾಮರ್ಥ್ಯ (ಕ್ಯಾಲೋರಿಫಿಕ್ ವ್ಯಾಲ್ಯು) ಹೊಂದಿರುವ ಸಿಬಿಜಿಯನ್ನು ವಾಹನ, ಕಾರ್ಖಾನೆ, ಅಡುಗೆ ಮತ್ತು ಇತರ ವಾಣಿಜ್ಯ ಅಗತ್ಯಗಳಿಗೆ ಅನಾಯಾಸವಾಗಿ ಬಳಸಬಹುದು.

ಅಂದುಕೊಂಡಂತೆ ಕೆಲಸ ನಡೆದರೆ ಇದೇ ವರ್ಷಾಂತ್ಯಕ್ಕೆ ಕಚ್ಚಾ ತೈಲದ ಆಮದನ್ನು ಶೇ 10ರಷ್ಟು ಕಡಿಮೆ ಮಾಡಬಹುದಾಗಿದೆ. ಉತ್ಪಾದನೆಗೆ ಬೇಕಾದ ತಂತ್ರಜ್ಞಾನ ಪಡೆಯಲು ಇಂಡಿಯನ್ ಆಯಿಲ್, ಪ್ರಜ್ ಇಂಡಸ್ಟ್ರೀಸ್, ಭಾರತ್ ಬಯೊಗ್ಯಾಸ್ ಮತ್ತು ಸಿಇಐಡಿ ಕನ್‌ಸಲ್ಟೆಂಟ್‌ಗಳ ಜೊತೆಯೂ ಒಪ್ಪಂದಕ್ಕೆ ಸಹಿ ಮಾಡಿರುವ ಕೇಂದ್ರ ಸರ್ಕಾರ, ನಿರೀಕ್ಷಿತ ಬಂಡವಾಳ ಸಿಕ್ಕೇ ಸಿಗುತ್ತದೆ ಎಂಬ ಉಮೇದಿನಲ್ಲಿದೆ. ಯೋಜನೆಯನ್ನು ಯಶಸ್ವಿಗೊಳಿಸಲು ಸ್ಪಷ್ಟ ಕ್ರಿಯಾಯೋಜನೆ ತಯಾರಾಗಿದ್ದು, ಸಿಬಿಜಿ ತಯಾರಿಕೆಯಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ನಾವು ಮಾಡುತ್ತಿರುವ ಖರ್ಚಿನಲ್ಲಿ ಶೇ 40ರಷ್ಟನ್ನು ಉಳಿಸಬಹುದೆಂಬ ಲೆಕ್ಕಾಚಾರವಿದೆ.

ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ಶುರು ಮಾಡಿರುವ ಜರ್ಮನಿಯ ವರ್ಬಯೋ, ಉತ್ತರ ಭಾರತದ ಭತ್ತದ ಬೆಳೆಗಾರರಿಂದ ಭತ್ತದ ಹುಲ್ಲು ಖರೀದಿಸಲು ಟನ್‍ಗೆ ₹ 600 ನಿಗದಿ ಮಾಡಿ, ಹುಲ್ಲನ್ನು ಸುಡದೆ ತಮಗೇ ನೀಡುವಂತೆ ಮನವಿ ಮಾಡಿದೆ. ದಿನಕ್ಕೆ 350 ಟನ್ ಬೆಳೆ ತ್ಯಾಜ್ಯವನ್ನು ಬಳಸಿಕೊಂಡು 33 ಟನ್ ಸಿಬಿಜಿಯನ್ನು ಉತ್ಪಾದಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಅನಿಲ ಉತ್ಪಾದನೆಯ ನಂತರ ಉಳಿಯುವ ತ್ಯಾಜ್ಯದಿಂದ ವಾರ್ಷಿಕ 5 ಕೋಟಿ ಟನ್ ಜೈವಿಕ ಗೊಬ್ಬರ ತಯಾರಿಸಬಹುದು. ಬೆಳೆ ಬೆಳೆಯಲು ಇದನ್ನು ಉಪಯೋಗಿಸಿದರೆ ಇಳುವರಿ ಶೇ 20ರಷ್ಟು ಹೆಚ್ಚುತ್ತದೆ ಎಂದಿರುವ ಪಂಜಾಬ್ ಅಗ್ರಿ ಯೂನಿವರ್ಸಿಟಿಯ ವಿಜ್ಞಾನಿಗಳು, ತ್ಯಾಜ್ಯದಲ್ಲಿ ಉಳಿಯುವ ಸಿಲಿಕಾ, ಬೆಳೆ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಭಾರದ ಲೋಹ ಗಳಾದ ಆರ್ಸೆನಿಕ್, ಕ್ಯಾಡ್ಮಿಯಂ, ಸೀಸಗಳು ಸಸ್ಯಕ್ಕೆ ಸೇರ್ಪಡೆಯಾಗದಂತೆ ನೋಡಿಕೊಂಡು ರಸಗೊಬ್ಬರಗಳ ಬಳಕೆಯನ್ನೂ ತಡೆಯುತ್ತದೆ ಎಂದು ಖಚಿತವಾಗಿ ಹೇಳುತ್ತಾರೆ. ಜೈವಿಕ ಗೊಬ್ಬರದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಜಾಸ್ತಿ ಇರುವುದರಿಂದ ಹೊಲ ಗದ್ದೆಗಳಿಗೆ ಹೆಚ್ಚಿನ ನೀರೂ ಬೇಕಾಗುವುದಿಲ್ಲ.

ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ ವಾಯುಗುಣ ಶುದ್ಧೀಕರಣಕ್ಕೆ ಪಣ ತೊಟ್ಟಿರುವ ನಾವು, ಸಿಬಿಜಿ ಬಳಕೆಯಿಂದ ಪೆಟ್ರೋಲಿಯಂ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಸಿಕ್ಕಿರುವ ಸದವಕಾಶವನ್ನು ಯಾವ ಕಾರಣಕ್ಕೂ ಕೈಚೆಲ್ಲಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.