ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳ ಕಾರ್ಯನಿರ್ವಹಣೆಯ ಕುರಿತು ಮಹಾಲೇಖಪಾಲರು (ಸಿಎಜಿ) ರಾಜ್ಯದ ಆಯ್ದ ಎಂಟು ಜಿಲ್ಲೆಗಳ 16 ಶೈಕ್ಷಣಿಕ ವಲಯಗಳ 128 ಶಾಲೆಗಳಲ್ಲಿ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ (ಪರ್ಫಾರ್ಮೆನ್ಸ್ ಆಡಿಟ್) ಕೈಗೊಂಡು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ವರದಿಯು ಸಿಎಜಿ ಜಾಲತಾಣದಲ್ಲಿ ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ.
ಪ್ರಾಥಮಿಕ ಶಾಲಾ ಶಿಕ್ಷಣ ವ್ಯವಸ್ಥೆ ಕುರಿತಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಇದರಿಂದ ಕಂಡುಕೊಂಡ ಅಂಶಗಳನ್ನು ಒಳಗೊಂಡಂತೆ 155 ಪುಟಗಳ ವಿಸ್ತೃತ ವರದಿಯನ್ನು ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ವ್ಯವಸ್ಥೆಯ ಭಾಗವಾಗಿರುವ ವ್ಯಕ್ತಿಗಳಿಗೆ ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಅಥವಾ ಇಲಾಖೆಯ ಕುರಿತಂತೆ ವಿಮರ್ಶಾತ್ಮಕವಾದ ಒಳನೋಟಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ. ಸಿಎಜಿಯಂತಹ ಯಾವುದೇ ಬಾಹ್ಯ ಸ್ವತಂತ್ರ ಸಂಸ್ಥೆಯು ವಸ್ತುನಿಷ್ಠ ಅವಲೋಕನದ ಮೂಲಕ ತುಸು ಕಠಿಣ ಎನಿಸಬಹುದಾದ ವಿಚಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಸಂಬಂಧಿಸಿದ ಸಂಸ್ಥೆ ಅಥವಾ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವ ಮೂಲಕ ಗುಣಮಟ್ಟ ಹೆಚ್ಚಳಕ್ಕೆ ಬೆಂಬಲ ನೀಡಲು ಸಹಾಯವಾಗುತ್ತದೆ. ಇದಕ್ಕೆ ಪೂರಕವಾಗಿ, ಸಿಎಜಿ ವರದಿಯು ಅನೇಕ ಸಲಹೆ ಹಾಗೂ ಶಿಫಾರಸುಗಳನ್ನು ನೀಡಿದೆ.
ಸಿಎಜಿಯು ಅಧ್ಯಯನ ಕೈಗೊಂಡ 16 ಶೈಕ್ಷಣಿಕ ವಲಯಗಳಲ್ಲಿ ಕಂಡುಕೊಂಡ ಎರಡು ಉತ್ತಮ ಪ್ರಯತ್ನಗಳ ಮಾಹಿತಿಯನ್ನು ವರದಿಯಲ್ಲಿ ಅಡಕಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಶೈಕ್ಷಣಿಕ ವಲಯದ ಭಾಶೆಟ್ಟಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ನೀಡಲಾಗುವ ನಿಧಿಯನ್ನು (ಸಿಎಸ್‌ಆರ್) ಬಳಸಿಕೊಂಡು ಶಾಲೆಯ ಕಟ್ಟಡ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯದಂತಹ ಎಲ್ಲಾ ಸೌಲಭ್ಯಗಳನ್ನು ಉತ್ತಮೀಕರಿಸಲಾಗಿದೆ. ಇದರ ಪರಿಣಾಮವಾಗಿ, ಶಾಲೆಯ ದಾಖಲಾತಿಯು 2018- 19ರಲ್ಲಿ 386 ಇದ್ದದ್ದು 2022- 23ರಲ್ಲಿ 831 ಆಗಿರುವುದನ್ನು ವರದಿಯಲ್ಲಿ ತಿಳಿಸಲಾಗಿದೆ.
ಈ ರೀತಿಯ ಪ್ರಯತ್ನಗಳನ್ನು ಇತರ ಜಿಲ್ಲೆಗಳ ಹೆಚ್ಚಿನ ಶಾಲೆಗಳಲ್ಲಿ ಅನುಷ್ಠಾನ ಮಾಡಲು ಶಿಫಾರಸು ಮಾಡಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಈ ಹಿಂದೆ ಒಟ್ಟಾರೆ ವಿದ್ಯಾರ್ಥಿಗಳ ದಾಖಲಾತಿಯು 1,500 ಇತ್ತು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣ ಕಡಿಮೆಯಾಗುತ್ತಾ ಬಂದಿತು. ಕೊನೆಗೆ 2018- 19ರ ವೇಳೆಗೆ ಅದು 140ಕ್ಕೆ ಕುಸಿಯಿತು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಒಟ್ಟುಗೂಡಿಸಿ, ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಎಂದು ಮಾರ್ಪಡಿಸಲಾಯಿತು. ಕೆಪಿಎಸ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಿ, ಮೂಲ ಸೌಕರ್ಯಗಳನ್ನು ಉತ್ತಮಪಡಿಸಲಾಯಿತು. ಇದರ ಪರಿಣಾಮವಾಗಿ, 2021- 22ನೇ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣವು 658ಕ್ಕೆ ಏರಿಕೆ ಆಗಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ ಇದೆ. ಅದೆಂದರೆ, ವಿದ್ಯಾರ್ಥಿಗಳ ಕಲಿಕಾ ಮಾಪನ ಮಾಡಲು ಅಗತ್ಯವಾದ ಸಾಧನಗಳನ್ನು ಶಿಕ್ಷಣ ಇಲಾಖೆಯ ತಂಡದ ಸಹಾಯದಿಂದ ಸಿದ್ಧಪಡಿಸಿಕೊಳ್ಳಲಾಯಿತು. ಅದನ್ನು ಮುಂದಿಟ್ಟು, ಸಿಎಜಿ ತಂಡದ ಕಣ್ಗಾವಲಿನಲ್ಲಿ ಅಧ್ಯಯನಕ್ಕೆ ಒಳಪಟ್ಟ ಶೈಕ್ಷಣಿಕ ವಲಯಗಳ ಶಾಲೆಗಳಲ್ಲಿ ನಾಲ್ಕು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಾಪನವನ್ನು ಮಾಡಲಾಯಿತು.
ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಕ್ಲಸ್ಟರ್‌ಗಳ ಶಿಕ್ಷಕರ ಸಹಾಯದಿಂದ ಮೌಲ್ಯಮಾಪನ ಮಾಡಿಸಿ, ಕಲಿಕಾ ಮಾಪನ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯ ಅನುಸಾರ, ನಾಲ್ಕು ಮತ್ತು ಏಳನೇ ತರಗತಿಗಳಲ್ಲಿ ಕ್ರಮವಾಗಿ ಶೇ 68.22 ಮತ್ತು ಶೇ 72.90ರಷ್ಟು ವಿದ್ಯಾರ್ಥಿಗಳು ಶೇ 50ಕ್ಕಿಂತ ಕಡಿಮೆ ಅಂಕಗಳನ್ನು ತೆಗೆದುಕೊಂಡಿದ್ದಾರೆ. ನಾಲ್ಕನೇ ತರಗತಿಯಲ್ಲಿ ಶೇ 46.55 ಮತ್ತು ಏಳನೇ ತರಗತಿಯಲ್ಲಿ ಶೇ 37.16ರಷ್ಟು ವಿದ್ಯಾರ್ಥಿಗಳು ಶೇ 30ಕ್ಕಿಂತ ಕಡಿಮೆ ಸಾಧನೆ ಮಾಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಮನಿಸಿದರೆ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಉತ್ತಮಪಡಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇರುವುದು ಕಂಡುಬರುತ್ತದೆ.
ಸಿಎಜಿ ವರದಿಯಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕಾಗಿ ಕೈಗೊಂಡ ಸಮೀಕ್ಷೆಯಲ್ಲಿ 400 ವಿದ್ಯಾರ್ಥಿಗಳು ತಮಗೆ ಪರಿಹಾರ ಬೋಧನೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಉಳಿದ 1,100 ವಿದ್ಯಾರ್ಥಿಗಳು ತಮಗೆ ಪರಿಹಾರ ಬೋಧನೆ ದೊರೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶಗಳು ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಸಂಘಟಿತ ಪ್ರಯತ್ನದ ಅಗತ್ಯವನ್ನು ತಿಳಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.