ADVERTISEMENT

ಜಾತ್ರೆ, ಜನರ ಸಹಭಾಗಿತ್ವ, ಮಠ

ಗ್ರಾಮಗಳ ಮೇಲೆ ಮಠಗಳ ಪ್ರಭಾವ ಹೆಚ್ಚಾದರೆ, ರಾಜಶಾಹಿ ಆಡಳಿತದಂತೆ ಜನರು ಮಠಶಾಹಿ ಆಡಳಿತಕ್ಕೆ ಒಳಗಾಗಬೇಕಾದೀತು

ಅರುಣ್ ಜೋಳದ ಕೂಡ್ಲಿಗಿ
Published 30 ಜನವರಿ 2020, 8:49 IST
Last Updated 30 ಜನವರಿ 2020, 8:49 IST
   

ಈ ಎರಡು ದಶಕಗಳ ಕರ್ನಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಠಗಳು ಊರಿನ ರಾಜಕೀಯ ಬೆಳವಣಿಗೆಗಳ ಮೇಲೆ ಬೀರುತ್ತಿರುವ ಪ್ರಭಾವಹೆಚ್ಚಾಗುತ್ತಿರುವುದು ಕಂಡುಬರುತ್ತದೆ.

ಪ್ರತೀ ಊರಿನ ಎಲ್ಲ ಜಾತಿಗಳ ಹಿರಿಯ ಮುಖಂಡರ ನಿರ್ಣಾಯಕ ತಂಡವೇ ‘ಊರದೈವ’.

ಈ ದೈವದ ತೀರ್ಮಾನಕ್ಕೆ ಇಡೀ ಊರು ತಲೆಬಾಗುತ್ತದೆ. ಸಾಮಾನ್ಯವಾಗಿ ಈ ದೈವದಲ್ಲಿ ಆ ಊರಿನ ಪ್ರಭಾವಿ ಜಾತಿಯವರ ಹೆಚ್ಚುಗಾರಿಕೆ ಇದ್ದರೂ ಮಹಿಳೆಯರ ಪ್ರಾತಿನಿಧ್ಯ ಹೊರತುಪಡಿಸಿ ಎಲ್ಲ ಜಾತಿಗಳ ಪ್ರಾತಿನಿಧ್ಯವಂತೂ ಇದ್ದೇ ಇರುತ್ತದೆ. ಈ ಊರದೈವವೇ ಆಯಾ ಊರಿನ ಜಾತ್ರೆಗಳನ್ನು ನಡೆಸಿಕೊಂಡು ಹೋಗುತ್ತದೆ. ಈ ಜಾತ್ರೆಗಾಗಿ ಊರಿನ ಪ್ರತೀ ಮನೆಯಿಂದ ಹಣ ಸಂಗ್ರಹಿಸಲಾಗುತ್ತದೆ. ಕುಟುಂಬ ಹೊಂದಿರುವ ಹೊಲ, ಎತ್ತು ಮುಂತಾದವು ಗಳನ್ನು ಮಾನದಂಡ ಮಾಡಿಕೊಂಡು ದೇಣಿಗೆನಿಗದಿಗೊಳಿಸಲಾಗುತ್ತದೆ. ಅಂದರೆ, ಜಾತ್ರೆಯಲ್ಲಿ ಊರಿನ ಪ್ರತೀ ಮನೆಯ ಹಣದ ಪಾಲೂ ಮಿಳಿತವಾಗಿರುತ್ತದೆ.

ADVERTISEMENT

ಕರ್ನಾಟಕದಲ್ಲಿ ಜಿಲ್ಲಾ, ತಾಲ್ಲೂಕು, ನಗರ ಕೇಂದ್ರ ಗಳಲ್ಲಿ ತಲೆ ಎತ್ತಿರುವ ಜಾತಿವಾರು ಹೊಸ ಮಠಗಳು, ನವೀಕರಣಗೊಂಡ ಕೆಲವು ಹಳೆಯ ಮಠಗಳು ನಿಧಾನಕ್ಕೆ ಆಯಾ ಭಾಗದ ಜಾತ್ರೆಗಳನ್ನು ಊರ ದೈವದಿಂದ ತಮ್ಮ ಹಿಡಿತಕ್ಕೆ ಪಡೆದು, ಊರ ದೈವವನ್ನು ತಮ್ಮ ಕಾಲಡಿ ಕೂರುವ ಭಕ್ತಮಂಡಳಿಯನ್ನಾಗಿಸಿಕೊಂಡಿವೆ. ಇದಕ್ಕೆ ಅಪವಾದ ಎನ್ನುವ ಬೆರಳೆಣಿಕೆಯ ಕೆಲವು ಮಠಗಳು ಇವೆ. ಅಂತಹ ಮಠಗಳನ್ನು ಈ ಚರ್ಚೆಯಿಂದ ಹೊರಗಿಟ್ಟು, ಬಹುಪಾಲು ಮಠಗಳ ಈ ಹೊತ್ತಿನ ಪ್ರವೃತ್ತಿಯನ್ನು ಆಧರಿಸಿ ವಿಶ್ಲೇಷಿಸಬೇಕಾಗಿದೆ.

ದೇವರು– ದೈವದ ಹೆಸರಿನಲ್ಲಿ ಒಂದೆಡೆ ಸೇರುತ್ತಿದ್ದ ಅಸಂಖ್ಯಾತ ಜನರು ಇದೀಗ ಆಯಾ ಭಾಗದ ಶ್ರೀಮಠದ ಭಕ್ತವೃಂದವಾಗಿ ಬದಲಾಗುತ್ತಾರೆ. ಇಡೀ ಊರಿನ ಜನರು ಊರ ದೈವಕ್ಕೆ ಅಂದರೆ ಜಾತ್ರೆಗೆ ತಮ್ಮ ತಮ್ಮ ಶಕ್ತ್ಯಾನುಸಾರ ಕೊಡುತ್ತಿದ್ದ ಹಂಚಿಕೆಯು ಊರಿನ ಸಹಕಾರವನ್ನು ಬಿಂಬಿಸುತ್ತಿತ್ತು. ಹೀಗಾಗಿ ಜನರು ಹಾಕಿದ ಹಂಚಿಕೆಗೆ ಉತ್ತರದಾಯಿತ್ವ ಇತ್ತು. ಅಂತೆಯೇ ದೈವವು ಊರಿಗೆ ಲೆಕ್ಕ ಒಪ್ಪಿಸುತ್ತಿತ್ತು. ಆದರೆ ಮಠಗಳು ಎತ್ತುವ ದೇಣಿಗೆಯು ಭಕ್ತಿಯ ಅರ್ಪಣೆಯಾಗಿರುತ್ತದೆ. ಹೀಗಾಗಿ ಅದಕ್ಕೆ ಉತ್ತರದಾಯಿತ್ವ ಇಲ್ಲ. ಹಾಗಾಗಿ ಮಠವು ಜನರಿಗೆ ಲೆಕ್ಕ ಕೊಡಬೇಕಂತಿಲ್ಲ. ಲೆಕ್ಕ ಕೊಡಿ ಎಂದು ಜನರೂ ಕೇಳುವಂತಿಲ್ಲ.

ಹೀಗಾಗಿ ಮಠಗಳನ್ನು ಜಾತ್ರೆಗಳು ಆರ್ಥಿಕವಾಗಿ ಮತ್ತಷ್ಟು ಬಲಗೊಳಿಸುತ್ತಿವೆ. ಅದಕ್ಕಿಂತ ಮುಖ್ಯವಾಗಿ ಮಠಗಳು ಜಾತ್ರೆಗೆ ಬರುವ ಅಸಂಖ್ಯಾತ ಭಕ್ತ ಜನರನ್ನು ತನ್ನ ಮಠ ಬೆಂಬಲಿತ ‘ಮತ’ಗಳನ್ನಾಗಿಸಿಕೊಂಡಿವೆ. ಹಾಗಾಗಿಯೇ ಈ ಜನಬೆಂಬಲ ತೋರಿಸಲು ಜಾತ್ರೆಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸಲಾಗುತ್ತಿದೆ. ಅಂತೆಯೇ ರಾಜಕಾರಣಿಗಳು ಕೂಡ ಮಠಗಳ ಸ್ವಾಮಿಗಳನ್ನು ಸಂತೈಸಿದರೆ ಆ ಭಾಗದ ಅಥವಾ ಆಯಾ ಮಠದ ಜಾತಿಯ ವೋಟುಗಳು ತಮಗೆ ಬಂದಂತೆ ಎಂದು ಭಾವಿಸುತ್ತಿದ್ದಾರೆ. ಕೆಲವು ಮಠಗಳು ಗೋಪ್ಯವಾಗಿಯೂ, ಒಮ್ಮೊಮ್ಮೆ ಬಹಿರಂಗವಾಗಿಯೂ ‘ಇಂತಹ ಪಕ್ಷಗಳಿಗೆ ಮತ ಚಲಾಯಿಸಿ’ ಎಂದು ಮಠದ ಭಕ್ತಾದಿಗಳಿಗೆ ನಿರ್ದೇಶನ ನೀಡುತ್ತಿವೆ. ಮುಂದುವರಿದು, ಚುನಾವಣೆಗಳಲ್ಲಿ ಮಠ ಬೆಂಬಲಿತ ಅಭ್ಯರ್ಥಿಗಳು ಸ್ವರ್ಧಿಸುತ್ತಿದ್ದಾರೆ.

ಮೊದಲಾದರೆ ರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬಂದರೆ ಊರಿನ ದೈವದ ಮುಂದೆ ಮತ ಯಾಚನೆ ಮಾಡುತ್ತಿದ್ದರು. ಇಡೀ ಊರಿನ ಜನರು ಒಂದೆಡೆ ಸೇರುತ್ತಿದ್ದರು. ಮತಕ್ಕಾಗಿ ಹಣ ಹಂಚಿದರೂ ಅದನ್ನು ಊರ ದೈವಕ್ಕೆ ಕೊಡುತ್ತಿದ್ದರು. ಈ ದೈವ ಆ ಹಣವನ್ನು ಊರಿನ ದೇಗುಲಗಳ ಜೀರ್ಣೋದ್ಧಾರಕ್ಕೋ, ಊರಿನ ಮತ್ಯಾವುದೋ ಕಾರ್ಯಕ್ಕೋ ಬಳಸುತ್ತಿತ್ತು.

ಕೆಲವೊಮ್ಮೆ ಎಲ್ಲಾ ಪಕ್ಷದ ಸ್ಪರ್ಧಿಗಳು ದೈವಕ್ಕೆ ಕೊಟ್ಟ ಹಣವನ್ನು ಕೂಡಿಸಿ ಇಡೀ ಊರಿನ ಮತದಾರರಿಗೆ ಸಮಾನವಾಗಿ ಹಂಚಿ, ಮನೆಯಲ್ಲಿರುವ ಮತಗಳಲ್ಲಿ ಒಬ್ಬೊಬ್ಬರು ಒಂದೊಂದು ಪಕ್ಷಕ್ಕೆ ಮತ ಹಾಕಿ ಎಂದೋ ಹೇಳಲಾಗುತ್ತಿತ್ತು.

ಹೀಗೆ ಜಾತ್ರೆಗಳು ಊರ ದೈವದಿಂದ ಮಠಗಳೆಡೆಗೆ ಚಲಿಸುತ್ತಿರುವ ಈ ವಿದ್ಯಮಾನವು ಆಯಾ ಗ್ರಾಮಗಳ ಸ್ವಾಯತ್ತತೆಯನ್ನು ನಾಶ ಮಾಡುತ್ತಿದೆ. ಮಠಗಳು ಸಾಮಾನ್ಯವಾಗಿ ಧಾರ್ಮಿಕ ನಂಬಿಕೆಗಳಿಗೆ ಜನರನ್ನು ಮತ್ತಷ್ಟು ಒಗ್ಗಿಸುವ ಕೆಲಸ ಮಾಡುತ್ತವೆ. ಇದರಿಂದಾಗಿ ಗ್ರಾಮಗಳ ಜನರಲ್ಲಿ ಮೂಡಬೇಕಾದ ಸಾಂವಿಧಾನಿಕ ಪ್ರಜಾಪ್ರಭುತ್ವದ ಆಶಯಗಳು ದುರ್ಬಲಗೊಂಡು ಜಾತಿಕಟ್ಟುಗಳು ಮತ್ತಷ್ಟು ಬಿಗಿಯಾಗುವ ಸಾಧ್ಯತೆಇದೆ.

ಅಂತಿಮವಾಗಿ ಎಲ್ಲ ಬಗೆಯ ಜಾತ್ರೆಗಳು ಜಾತಿಪದ್ಧತಿಯ ವಾರ್ಷಿಕ ನವೀಕರಣದ ಸ್ವರೂಪ ಪಡೆದ ಕಾರಣ ಈ ಎಲ್ಲಾ ಮಠಗಳು, ಜಾತ್ರೆಗಳು ಹಿಂದುತ್ವದ ವಿಸ್ತರಣೆಗೆ ತಕ್ಕ ವೇದಿಕೆಗಳೂ ಆಗಲಿವೆ. ಇದರ ಪ್ರಭಾವ ಹೆಚ್ಚಾದರೆ ರಾಜಶಾಹಿ ಆಡಳಿತದಂತೆ ಜನರು ಮಠಶಾಹಿ ಆಡಳಿತಕ್ಕೆ ಒಳಗಾಗಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.