ADVERTISEMENT

ಸಂಗತ: ಗೋವು, ಎಲ್ಲಿದೆ ಮೇವಿನ ತಾವು?

ಪಶುಪಾಲನೆಗೆ ಉತ್ತೇಜನಕಾರಿ ದೃಢ ಹೆಜ್ಜೆಗಳನ್ನಿಡುವುದು ಸದ್ಯದ ಅನಿವಾರ್ಯ

ಡಾ.ಮುರಳೀಧರ ಕಿರಣಕೆರೆ
Published 11 ನವೆಂಬರ್ 2021, 19:31 IST
Last Updated 11 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹೆಚ್ಚು ಸದ್ದು ಮಾಡಿದ್ದು ‘ಗೋಪೂಜೆ’. ನಾಡಿನೆಲ್ಲೆಡೆ ಗೋಮಾತೆಯನ್ನು ಪೂಜಿಸಿ ಅದರ ಉಪಯುಕ್ತತೆ, ಸಾಂಸ್ಕೃತಿಕ ಮಹತ್ವವನ್ನು ಸಾರಲಾಗಿದೆ. ದೇಸಿ ಹಸುಗಳ ಕ್ಷೀರ, ಕ್ಷೀರೋತ್ಪನ್ನಗಳು, ಗೋಮಯ, ಗೋಮೂತ್ರಗಳಿಗಿರುವ ಆರೋಗ್ಯಕಾರಿ, ಔಷಧೀಯ ಗುಣಗಳ ಬಗ್ಗೆ ಹಲವು ಅಧ್ಯಯನಗಳು ಬೆಳಕು ಚೆಲ್ಲಿವೆ. ನಮ್ಮ ಆಕಳು ತಳಿಗಳ ಸಂರಕ್ಷಣೆಯ ಪ್ರಾಮುಖ್ಯತೆಯ ಅರಿವಿದ್ದರೂ ಅಗತ್ಯಕ್ಕೆ ತಕ್ಕಷ್ಟು ಮೇವು ಒದಗಿಸುವಲ್ಲಿ ಸೋಲುವ ಕಾರಣ ರೈತರು ಹತಾಶೆಯಿಂದ ಕೈಚೆಲ್ಲುತ್ತಿದ್ದಾರೆ.

ಮಲೆನಾಡು, ಕರಾವಳಿ ಭಾಗಗಳಲ್ಲಿ ಮುಂಜಾನೆ ಹೊತ್ತಿನಲ್ಲಿ ಸಾಗುವಾಗ ಕರುಣಾಜನಕ ನೋಟಗಳು ಕಾಣಸಿಗುತ್ತವೆ. ಹೆಗಲಲ್ಲಿ ಉದ್ದನೆಯ ಮರದ ತುಂಡು ಜೋತಾಡಿಸಿಕೊಂಡು ಮೇಯಲು ಹೋಗುತ್ತಿರುವ ನಾಟಿ ಹಸುಗಳು, ಕೆಲವು ಆಕಳುಗಳ ಕತ್ತಿನಲ್ಲಿ ಕವಲಾಗಿರುವ ಮರದ ಕೋಲು, ದೂರದಿಂದ ನೋಡಿದರೆ ಏನಪ್ಪಾ ಇಷ್ಟು ಉದ್ದದ ಕೋಡುಗಳು ಎನಿಸುವಷ್ಟು! ಮತ್ತೆ ಕೆಲವಕ್ಕೆ ಮುಂಗಾಲಿಗೂ ಕುತ್ತಿಗೆಗೂ ಹಗ್ಗದಿಂದ ಬಿಗಿದು ತಲೆ ತಗ್ಗಿಸಿ ನಡೆಯುವ ವ್ಯವಸ್ಥೆ. ದಪ್ಪ ಕುಂಟೆಯ ಒಂದು ತುದಿಯನ್ನು ಕತ್ತಿಗೆ ಕಟ್ಟಿಸಿಕೊಂಡು ಅದನ್ನೆಳೆಯುತ್ತಾ ಕಷ್ಟದಿಂದ ಹೆಜ್ಜೆ ಹಾಕುವ ದನಗಳೂ ಕಂಡಾವು. ಇಂಥ ದೃಶ್ಯವನ್ನು ನೋಡುತ್ತಿದ್ದರೆ ಒಮ್ಮೆಲೆ ಎದೆ ಭಾರವಾಗಿ ‘ಛೇ! ಮೂಕ ಪಶುಗಳ ಮೇಲೆ ಇದೆಂತಹ ಕ್ರೌರ್ಯ’ ಎನಿಸದಿರದು!

ಹಾಗಂತ ರೈತರು ತಮ್ಮ ಸಾಕುಪ್ರಾಣಿಗಳನ್ನು ಈ ಪರಿಯಾಗಿ ನಿಯಂತ್ರಿಸುವುದು ಹಿಂಸೆ ನೀಡಿ ವಿಕೃತಾನಂದ ಪಡೆಯುವ ಉದ್ದೇಶಕ್ಕಲ್ಲ. ತುಡು ದನಗಳೆಂಬ ಹಣೆಪಟ್ಟಿಯ ಮಲೆನಾಡು ಗಿಡ್ಡಗಳು ಕಂಡ ಕಂಡವರ ತೋಟ, ಗದ್ದೆಗಳಿಗೆ ನುಗ್ಗದಿರಲೆಂದು ಕುತ್ತಿಗೆಗೆ ಕೊಕ್ಕೆ, ಕುಂಟೆ ಇಲ್ಲವೆ ಕುಂಟುಗಾಲು ಮಾಡಿ ಮೇಯಲಟ್ಟುವ ಪದ್ಧತಿಯಿದು.

ADVERTISEMENT

ದೇಸಿ ಜಾನುವಾರುಗಳು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ದನಕರುಗಳು ಎಂಥದ್ದೇ ಬೇಲಿಯನ್ನು ಸುಲಭವಾಗಿ ಹಾರಬಲ್ಲವು. ಹೊಟ್ಟೆಪಾಡಿಗಾಗಿ ಇಂಥದ್ದೊಂದು ಕೌಶಲ ಇವುಗಳಿಗೆ ಕರಗತ. ಹೀಗೆ ಕತ್ತಿನಲ್ಲಿ ಅಡಚಣೆಯಿದ್ದಾಗ ಹೈಜಂಪ್‍ಗಾಗಿ ಶರೀರವನ್ನು ಪೊಸಿಷನ್‍ಗೆ ತಂದುಕೊಳ್ಳಲು ಆಗದ ಕಾರಣ ಬೇಲಿ ಹಾರುವುದು ಇಲ್ಲವೇ ಕಂಡಿ ಮಾಡಿಕೊಂಡು ಒಳನುಸುಳಲು ಸಾಧ್ಯವಾಗದು.

ಬೆಳೆ, ಮರ, ಗಿಡಗಳು ತುಡು ದನಗಳ ಪಾಲಾದಾಗ ಜಮೀನು, ಜಾನುವಾರು ಮಾಲೀಕರ ಮಧ್ಯೆ ಜಗಳ ಸಾಮಾನ್ಯ. ಒಮ್ಮೊಮ್ಮೆ ಅತಿರೇಕಕ್ಕೆ ಹೋಗಿ ಹೊಡೆದಾಟ, ಬಡಿದಾಟ, ದನಕರುಗಳ ಕೈಕಾಲು ಕಡಿಯುವ, ಅವುಗಳ ಪ್ರಾಣ ತೆಗೆಯುವ ಘಟನೆಗಳೂ ನಡೆಯುವುದುಂಟು. ಇಂತಹದ್ದಕ್ಕೆಲ್ಲಾ ಅವಕಾಶ ಆಗದಿರಲೆಂಬ ಕಾರಣಕ್ಕೆ ಹಸುಗಳನ್ನು ಹೀಗೆ ನಿರ್ಬಂಧಿಸುವುದು ಕೃಷಿಕರ ದೃಷ್ಟಿಯಲ್ಲಿ ಅನಿವಾರ್ಯ.

ಗೋವುಗಳ ಈ ಸಂಕಷ್ಟದ ಬದುಕಿಗೆ ಕಾರಣ ಗೋಮಾಳಗಳು ಕಣ್ಮರೆಯಾಗಿರುವುದು. ಮೇವಿಗಾಗಿಯೇ ನಿರ್ದಿಷ್ಟ ಪ್ರದೇಶವನ್ನು ಕಾಯ್ದಿರಿಸುವ ಕ್ರಮ ಲಾಗಾಯ್ತಿನಿಂದಲೂ ಬಂದಿದ್ದು. ಮಾನವನ ಹಸ್ತಕ್ಷೇಪವಿಲ್ಲದೆ ತಮಗಾಗಿ ಮೀಸಲಿಟ್ಟ ಜಾಗದಲ್ಲಿನ ಹುಲ್ಲು, ಸೊಪ್ಪುಸದೆಗಳನ್ನು ದಿನವಿಡೀ ಮೇಯ್ದು ಅವುಗಳ ಆರೋಗ್ಯ, ಹಾಲಿನ ಇಳುವರಿ ಜೊತೆಗೆ ಗುಣಮಟ್ಟವೂ ಚೆನ್ನಾಗಿರುತ್ತಿತ್ತು. ಜನಸಂಖ್ಯೆಯ ಹಠಾತ್ ಹೆಚ್ಚಳ, ಮಾನವನ ಅತಿಯಾಸೆ, ದುರಾಸೆಯಿಂದಾಗಿ ಈ ಕಾಯ್ದಿಟ್ಟ ಜಾಗದ ಕಬಳಿಕೆಯಾಗಿ ಪರಿಸ್ಥಿತಿ ಹದಗೆಟ್ಟಿದೆ.

ಹುಲ್ಲುಗಾವಲಿಗೆ ಮೀಸಲಾದ ಜಾಗವು ಮನೆ, ಗದ್ದೆ, ತೋಟ, ದೇವಸ್ಥಾನ, ಸ್ಮಶಾನ, ರೆಸಾರ್ಟ್, ಗಣಿಗಾರಿಕೆ ಎಂದೆಲ್ಲಾ ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಹಾಗಾಗಿಯೇ ಹಸು, ಕರುಗಳಿಗೆ ಮೇಯಲು ಜಾಗವಿಲ್ಲ. ಈಗೇನಿದ್ದರೂ ಗೋಮಾಳಗಳು ಕಂದಾಯ ಇಲಾಖೆಯ ದಾಖಲೆಗಳಲ್ಲಷ್ಟೇ ಕಾಣಸಿಗುವುದು! ಪ್ರತಿಯೊಂದು ಗ್ರಾಮದಲ್ಲೂ ಪ್ರತೀ ನೂರು ಜಾನುವಾರುಗಳಿಗೆ 12 ಹೆಕ್ಟೇರ್ ಜಾಗವನ್ನು ಮೇವಿಗಾಗಿಯೇ ಮೀಸಲಿರಿಸಬೇಕು ಎನ್ನುತ್ತದೆ ನಿಯಮ. ಈ ಕಾನೂನೂ ಕಡತದ ಒಳಗಷ್ಟೇ ಉಳಿದಿದೆ.

ಮೇವಿನ ಕೊರತೆ, ಗಗನಕ್ಕೇರುತ್ತಿರುವ ಪಶು ಆಹಾರದ (ಹಿಂಡಿ) ಬೆಲೆಯಿಂದಾಗಿ ಜಾನುವಾರು ಸಾಕಣೆ ಈಗ ತೀರಾ ವೆಚ್ಚದ ಬಾಬತ್ತು. ಜರ್ಸಿ, ಎಚ್.ಎಫ್. ಮಿಶ್ರತಳಿಗಳಂತೆ ದೇಸಿ ಹಸುಗಳನ್ನು ಕಟ್ಟಿಹಾಕಿ ಸಾಕಲಾಗದು. ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ಹುಲ್ಲು, ಕರಡ, ಕಸಕಡ್ಡಿಗಳನ್ನು ತಿಂದು ಕೊಟ್ಟಿಗೆಗೆ ಮರಳುವುದು ಇವುಗಳ ಜೀವನಕ್ರಮ. ಹುಲ್ಲುಗಾವಲುಗಳ ಕಣ್ಮರೆಯೊಂದಿಗೆ ಈ ಪದ್ಧತಿಯಲ್ಲಿ ವ್ಯತ್ಯಯವಾಗಿದೆ. ಮೇವಿನ ಅಭಾವದ ಜೊತೆಗೆ ಚಾಕರಿ ಮಾಡುವವರ ಕೊರತೆ, ಬದಲಾದ ಮನಃಸ್ಥಿತಿಯ ಕಾರಣ ದೇಸಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ನಾಟಿ ತಳಿಗಳ ಮಹತ್ವ, ಸಂರಕ್ಷಣೆಯ ಬಗ್ಗೆ ಎಷ್ಟೇ ಮಾತನಾಡಿದರೂ ಅರಿವು ಮೂಡಿಸಿದರೂ ಮೂಲಭೂತ ಅಗತ್ಯವಾದ ಹುಲ್ಲು ಒದಗಿಸಲಾಗದಿದ್ದರೆ ಉಳಿವಾದರೂ ಹೇಗೆ ಸಾಧ್ಯ? ಒತ್ತುವರಿಯಾದ ಗೋಮಾಳಗಳನ್ನು ಸಾಧ್ಯವಿದ್ದಲ್ಲೆಲ್ಲಾ ತೆರವುಗೊಳಿಸಿ ಕಟ್ಟುನಿಟ್ಟಾಗಿ ಮೇವಿಗಾಗಿ ಮೀಸಲಿಟ್ಟರೆ ಮಾತ್ರ ಕಷ್ಟಸಹಿಷ್ಣುಗಳಾದ ನಮ್ಮ ದೇಸಿ ಆಕಳುಗಳು ಉಳಿದಾವು. ಈ ಬಗ್ಗೆ ಹೆಚ್ಚು ಚರ್ಚೆಯಾಗದಿರುವುದು ನಿಜಕ್ಕೂ ದುರದೃಷ್ಟಕರ.

ಜನರಿಗಾಗಿ ಅನ್ನಭಾಗ್ಯ ಯೋಜನೆಯಂತೆ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ಪಡಿತರ ವ್ಯವಸ್ಥೆಯ ಮೂಲಕ ನೀಡುವುದು ಪಶುಪಾಲನೆಗೆ ಉತ್ತೇಜನಕಾರಿ. ಗೋಸಂಪತ್ತಿನ ರಕ್ಷಣೆಗಾಗಿ ಈ ದಿಸೆಯಲ್ಲಿ ದೃಢ ಹೆಜ್ಜೆಗಳ
ನ್ನಿಡುವುದು ಸದ್ಯದ ಅನಿವಾರ್ಯವೂ ಹೌದು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.