ADVERTISEMENT

ಸಂಗತ | ಫುಟ್‌ಪಾತ್‌: ನಡಿಗೆ ಹಿತಕರವಾಗಲಿ

ಬಳಕೆಗೆ ಯೋಗ್ಯ ರೀತಿಯಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ವಹಿಸಬೇಕಾದ ಹೊಣೆಯನ್ನು ನಮ್ಮ ಸ್ಥಳೀಯ ಸರ್ಕಾರಗಳು ಮರೆತೇಬಿಟ್ಟಿವೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 23:30 IST
Last Updated 5 ಡಿಸೆಂಬರ್ 2024, 23:30 IST
Sangatha 
Sangatha    

ರಸ್ತೆ ಬದಿಯ ಫುಟ್‌ಪಾತ್‌ ಅಥವಾ ಪಾದಚಾರಿ ಮಾರ್ಗವು ಸಾರ್ವಜನಿಕರ ಸುರಕ್ಷಿತ ನಡಿಗೆಗೆ ಒದಗಿಸಿದ ಹಾದಿ. ಮನೆಯಿಂದ ನಡೆದು ಹೊರಟವರಿಗೆ ಫುಟ್‌ಪಾತ್‌ ಮೇಲೆಯೇ ಜೋಪಾನವಾಗಿ ಹೋಗುವಂತೆ ಹಿತನುಡಿ ಸಲ್ಲಿರುತ್ತದೆ. ಆಫೀಸಿಗೆ, ಶಾಲೆಗೆ, ಅಂಗಡಿಗೆ, ಆಸ್ಪತ್ರೆಗೆ ತೆರಳುವ ಮಾತಿರಲಿ ಬಸ್ಸು, ರೈಲು ಹಿಡಿಯಲೂ  ಪಾದಚಾರಿ ಮಾರ್ಗ ಅನಿವಾರ್ಯ. ಬ್ಯಾಂಕ್‌ ಅಥವಾ ಅಂಚೆ ಕಚೇರಿಯು ಮನೆಗೆ ಹತ್ತಿರವಿದ್ದರೂ ಅದನ್ನು ತಲುಪಲು ಸಹ ಫುಟ್‌ಪಾತ್‌ ಸುಗಮವಾಗಿರಬೇಕಲ್ಲವೇ?

ಸ್ವಚ್ಛ ಪಾದಚಾರಿ ಮಾರ್ಗವು ಪರಿಸರ ಹಾಗೂ ಆರೋಗ್ಯಸ್ನೇಹಿ. ರಸ್ತೆಯ ಬದಿಯಲ್ಲಿ ನಡೆಯಬಯಸುವ ಅಥವಾ ನಡೆಯುವ ಅಗತ್ಯವುಳ್ಳ ಎಲ್ಲರಿಗೂ ಫುಟ್‌ಪಾತ್‌ ಕಲ್ಪಿಸಲೇಬೇಕು. ಅದು ಮೂಲಭೂತ ಅಗತ್ಯಗಳಲ್ಲೊಂದು. ಸುಸ್ಥಿರ ಫುಟ್‌ಪಾತ್‌ಗಳಿಲ್ಲದ ನಾಗರಿಕತೆ ಅಪೂರ್ಣ. ಆದರೆ, ಆಗಿರುವುದೇನು? ಅಷ್ಟೊ ಇಷ್ಟೊ ಅಗಲದ ಪಾದಚಾರಿ ಮಾರ್ಗಗಳು ಬಹುಬಗೆಗಳಲ್ಲಿ ಒತ್ತುವರಿಯಾಗಿರುತ್ತವೆ. ಬೈಕ್‌, ಕಾರು, ಮಿನಿಬಸ್‌ಗಳು ಅಲ್ಲಿ ನಿಂತಿರುತ್ತವೆ. ಫುಟ್‌ಪಾತ್‌ಗಳಲ್ಲೇ ವಾಹನಗಳನ್ನು ತೊಳೆಯುವ ಮತ್ತು ಜಾನುವಾರುಗಳನ್ನು ಕಟ್ಟುವ ಉದಾಹರಣೆಗಳೇನು ಕಡಿಮೆಯೇ? ದೃಷ್ಟಿ ಹಾಯಿಸಿದ ಕಡೆಯೆಲ್ಲಾ ಇಟ್ಟಾಡುವ ಕಟ್ಟಡ ಸಾಮಗ್ರಿಗಳು, ಕೇಬಲ್‌ಗಳು. ಕಬ್ಬಿಣದ ಸರಳುಗಳಿಂದ ಹಂದರ ತಯಾರಿಸಲು, ಮರಗೆಲಸಕ್ಕೂ ಪಾದಚಾರಿ ಮಾರ್ಗವೇ ಆಗಬೇಕು.

ತಮ್ಮ ಮನೆ ವಿಶಾಲವಾಗಿದ್ದರೂ ಅದರ ಮಾಲೀಕರು ಫುಟ್‌ಪಾತ್‌ ಒತ್ತುವರಿ ಮಾಡಿರುವ ನಿದರ್ಶನಗಳು ವಿರಳವೇನಲ್ಲ. ವಿಲೇವಾರಿಯಾಗದ ತ್ಯಾಜ್ಯಕ್ಕೂ ಪಾದಚಾರಿ ಮಾರ್ಗದ ಮೋಹ! ಮಲಿನ ನೀರನ್ನು ನಗರದ ಹೊರಕ್ಕೆ ಹರಿಸುವ ಚರಂಡಿ ನಗರದ ಜೀವನಾಡಿ. ಬಿಟ್ಟ ಬಿರುಕಿನ ಮೂಲಕ ತ್ಯಾಜ್ಯದಿಂದ ಚರಂಡಿ ಭರ್ತಿಗೊಂಡರೆ ಆಗುವ ರಂಪ ಗೊತ್ತಿರುವುದೇ. ಅವೈಜ್ಞಾನಿಕ ರಚನೆಯಿಂದಾಗಿ ಫುಟ್‌ಪಾತ್‌ನಲ್ಲಿ ಅಲ್ಲಲ್ಲಿ ನೀರು ನಿಲ್ಲುವುದುಂಟು. ಮಳೆಗಾಲದಲ್ಲಿ ಅಲ್ಲಲ್ಲಿ ಹಳ್ಳಕೊಳ್ಳಗಳ ಸೃಷ್ಟಿ! 

ADVERTISEMENT

ರಸ್ತೆಯಲ್ಲಿ ಸಂಚಾರ ತೀವ್ರ ದಟ್ಟಣೆ ಅಥವಾ ಕೆಂಪು ಸಿಗ್ನಲ್‌ನಿಂದ ಪಾರಾಗಲು ಕೆಲವು ಬೈಕ್‌ ಸವಾರರಿಗೆ ಫುಟ್‌ಪಾತ್‌ ರಾಜಮಾರ್ಗವಾಗುತ್ತದೆ. ಅವರು ಅಲ್ಲಿ ಅಪಾಯಕಾರಿ ವೇಗದಿಂದ ಸಾಗುತ್ತಾರೆ. ಸಾರ್ವಜನಿಕರ ಸುರಕ್ಷತೆಗೆ ಇರುವ ಹಾದಿಯಲ್ಲೇ ಅಪಘಾತದ ಸಂಭವವೆಂದರೆ ಅದೆಂಥ ವಿಪರ್ಯಾಸ? ವಾಹನಗಳು ದೀರ್ಘಾವಧಿಗೆ ನಿಂತರೆ ಫುಟ್‌ಪಾತ್‌ಗೆ ಹೊಂದಿಸಿದ ಚಪ್ಪಡಿಕಲ್ಲುಗಳು, ಹಾಸುಬಿಲ್ಲೆಗಳು ಸೀಳಿ ಭಾರಿ ಕಂಟಕಕ್ಕೆ ಬಾಗಿಲು ತೆರೆದಿರುತ್ತದೆ. ಮುಸ್ಸಂಜೆಯ ನಂತರ ದೀಪಗಳ ವ್ಯವಸ್ಥೆಯಿರದಿದ್ದರಂತೂ ಆತಂಕ ಅಧಿಕ. ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲವೆಡೆ ಫುಟ್‌ಪಾತ್‌ ಮೇಲಿನ ನಡಿಗೆ ಒಂದು ಸೂಕ್ಷ್ಮ ಸರ್ಕಸ್.

ಪಾದಚಾರಿ ಮಾರ್ಗವು ಯಾವಾಗ ಅಪಾಯಕರ ಎನ್ನಿಸುವುದೊ ಆಗ ನಡಿಗೆಗೆ ಜನ ರಸ್ತೆಯನ್ನೇ ಅವ ಲಂಬಿಸತೊಡಗುತ್ತಾರೆ. ವೃದ್ಧರೆಂದರೆ ವಾಹನಗಳಿಂದ ತಪ್ಪಿಸಿಕೊಡು ಓಡಾಡುವವರು ಎಂದಾಗಬಾರದು! ದೂಡುಗಾಡಿಗಳಲ್ಲಿ ಹಣ್ಣು, ತರಕಾರಿ, ಹೂವು, ಸೊಪ್ಪು ಸದೆಯಿಟ್ಟು ಮಾರುವವರ ಹಿತಾಸಕ್ತಿ ಕಡೆಗಣಿಸಲಾಗದು. ಮಂದಿಗೆ ಅಗತ್ಯ ವಸ್ತುಗಳು ನ್ಯಾಯಯುತ ಬೆಲೆಗೆ ದೊರಕಿಸುವ ಅವರು ತಮಗೂ ಜೀವನೋಪಾಯಕ್ಕೆ ದಾರಿ ಮಾಡಿಕೊಂಡವರು. ಅವರಿಗೆ ‘ಬೈಸಿಕಲ್‌ ಲೇನ್‌’ ಮಾದರಿಯಲ್ಲಿ ಕೆಲವೆಡೆಯಾದರೂ ಫುಟ್‌ಪಾತ್‌ನಲ್ಲೇ ವಿಶೇಷ ಸ್ಥಳಾವಕಾಶ ಕಲ್ಪಿಸಿದರೆ ಸುಸ್ಥಿರ ಫುಟ್‌ಪಾತ್‌ಗೆ ಅಡ್ಡಿಯೇನಾಗದು.

ರಸ್ತೆಗಳಲ್ಲಿ ಜನರ ಸಂಚಾರ ಗಮನಿಸಿ ಅದಕ್ಕೆ ತಕ್ಕಂತೆ ಸಮರ್ಪಕ ವಿನ್ಯಾಸಗಳಲ್ಲಿ ನಿರ್ಮಾಣಗೊಂಡ ಪಾದಚಾರಿ ಮಾರ್ಗಗಳು ಸಹಜವಾಗಿಯೇ ಪಾದಚಾರಿ ಸ್ನೇಹಿಯಾಗಿರುತ್ತವೆ. ಅಂದಹಾಗೆ ಹಲವು ಬಡಾವಣೆ
ಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳು ನಿಂತಿರುವುದರಿಂದ ಬೀದಿಗಳಲ್ಲೂ ಕಾಲುದಾರಿ ಎನ್ನುವುದು ಇರುವುದಿಲ್ಲ. ಕಾರು ಖರೀದಿಸುವ ಮುನ್ನ ಅದಕ್ಕೆ ಪಾರ್ಕಿಂಗ್‌ ಸ್ಥಳ ಯೋಜಿಸದಿದ್ದರೆ ಎಡವಟ್ಟು ಕಟ್ಟಿಟ್ಟಿ ಬುತ್ತಿ. ಕೊಳ್ಳುವ ವಾಹನದ ಉದ್ದ, ಅಗಲ ಕನಿಷ್ಠವಾದಷ್ಟೂ ಅನ್ಯರಿಗಾಗುವ ಕಿರಿಕಿರಿ ತಪ್ಪುವುದು. ಅದೇ ರೀತಿ, ಮನೆ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯವಾಗಬೇಕು. ಬೀದಿ, ರಸ್ತೆಗಳು ವಾಹನಗಳ ‘ಶೋರೂಮ್‌’ ಅಲ್ಲ.

ಪಾದಚಾರಿಗಳ ಅನುಕೂಲಕ್ಕಿರುವ ಮೇಲ್ಸೇತುವೆಗಳನ್ನು ಬಳಸದೇ ಇರುವುದು ಸಹ ಫುಟ್‌ಪಾತ್‌ಗಳ ಮೇಲೆ ಒತ್ತಡ ಹೆಚ್ಚಲು ಕಾರಣವಾಗುತ್ತದೆ. ದಾರಿಗಳನ್ನು ಉಪಯೋಗಿಸುವುದೂ ಅವುಗಳ ನಿರ್ವಹಣೆಯ ಒಂದು ಭಾಗ. ನಡಿಗೆ– ಪಾದಚಾರಿ ಮಾರ್ಗ ಹಾಗೂ ಆರೋಗ್ಯದ ನಡುವೆ ದೃಢವಾದ ನಂಟಿದೆ. ಎಲ್ಲರೂ ಜಿಮ್‌ಗೆ ಹೋಗುವಷ್ಟು ಆರ್ಥಿಕವಾಗಿ ಶಕ್ತರಲ್ಲ. ಶ್ರೀಸಾಮಾನ್ಯನ ಜಿಮ್‌ ಆದ ಫುಟ್‌ಪಾತ್‌ ನಡಿಗೆ ಹಿತಾನುಭವ ನೀಡಬೇಕು. ಬ್ರಿಟನ್ನಿನ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಹೆಲ್ತ್ ಕೇರ್ ಫಾರ್‌ ಎಕ್ಸಲೆನ್ಸ್’ ದಿನಕ್ಕೆ 10,000 ಹೆಜ್ಜೆಗಳ ನಡಿಗೆ ನಮ್ಮ ದಿನಚರಿಯಲ್ಲಿರಬೇಕು ಎಂದಿದೆ. ರಮಣೀಯವೂ ಶಾಂತವೂ ಆದ ಹಾದಿಯಲ್ಲಿ ನಮ್ಮನ್ನು ನಡೆಯುವಂತೆ ಮಾಡುವ ಫುಟ್‌ಪಾತ್‌ ಕಳೆದುಹೋಗದಂತೆ ನೋಡಿಕೊಳ್ಳುವುದು ಸರ್ಕಾರದ್ದಷ್ಟೆ ಅಲ್ಲ, ಸಾರ್ವಜನಿಕರದ್ದೂ ಹೊಣೆ.

ಸರ್ಕಾರಗಳು ರಸ್ತೆಗಳ ನಿರ್ಮಾಣಕ್ಕೆ ಅಪಾರವಾಗಿ ಹಣ ವೆಚ್ಚ ಮಾಡುತ್ತವೆ. ಇದಕ್ಕೆ ಹೋಲಿಸಿದರೆ ಪಾದಚಾರಿ ಮಾರ್ಗಗಳಿಗೆ ವಿನಿಯೋಗಿಸುವ ಹಣ ತೀರಾ ಕಡಿಮೆ. ಬಳಕೆಗೆ ಯೋಗ್ಯ ರೀತಿಯಲ್ಲಿ ಪಾದಚಾರಿ ಮಾರ್ಗಗಳನ್ನು  ನಿರ್ವಹಿಸಬೇಕಾದ ಹೊಣೆಯನ್ನು ನಮ್ಮ ಸ್ಥಳೀಯ ಸರ್ಕಾರಗಳು ಮರೆತೇಬಿಟ್ಟಿವೆ. ಆಗಿಂದಾಗ್ಗೆ ನೆನಪಿಸುವ ಜವಾಬ್ದಾರಿಯನ್ನು ನಾಗರಿಕರು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.