
ಸಂಗತ
ಅನ್ಯಜಾತಿಯ ಹುಡುಗನನ್ನು ಮದುವೆಯಾದ ಬಸುರಿ ಮಗಳನ್ನು ತವರಿನವರೇ ಕೊಚ್ಚಿ, ಕೊಂದು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಿಂದೆ ನಡೆದ ಹೀನಕೃತ್ಯಗಳೇ ಈಗಲೂ ನಡೆಯುತ್ತಿದ್ದರೆ, ನಾಗರಿಕರಾಗಿ ನಮ್ಮ ನಡಿಗೆ ಹಿಮ್ಮುಖವಾಗಿದೆ ಎಂದರ್ಥ.
ಕೊಲೆ, ಅತ್ಯಾಚಾರ, ಯಾರದೇ ಮೇಲಾಗುವ ದೌರ್ಜನ್ಯವನ್ನು ಜಾತಿ–ಧರ್ಮದ ಹಿನ್ನೆಲೆಯಲ್ಲಿ ನೋಡದೆ, ಮಾನವಧರ್ಮದ ಆಧಾರದಿಂದಲೇ ಎಲ್ಲರೂ ಯೋಚಿಸ ಬೇಕು. ಸಮಾಜದ ಸ್ಥಿತಿ ಹೇಗಾಗಿದೆ ಅಂದರೆ, ಕೊಂದವನ ಜಾತಿ ಯಾವುದು? ನೊಂದವನ ಜಾತಿ ಯಾವುದು? ಎಂಬುದರ ಆಧಾರದ ಮೇಲೆ ಕ್ರಿಯೆ ಪ್ರತಿಕ್ರಿಯೆ ಮತ್ತು ಪ್ರತಿಭಟನೆ ನಿರ್ಧಾರವಾಗುತ್ತಿದೆ. ಕೃತ್ಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಭಿನ್ನ ಧರ್ಮದವರಾದರೆ, ಆಗ ಪ್ರತಿಭಟನೆಯ ಸ್ವರೂಪವೇ ಬೇರೆ.
ಸಮಾಜದಲ್ಲಿ ದಿನಬೆಳಗಾದರೆ ಅಪರಾಧ ಕೃತ್ಯಗಳು ನಡೆಯುತ್ತವೆ. ಅದು ವ್ಯಕ್ತಿಗಳ ತಪ್ಪು. ಅದಕ್ಕೆ ಯಾವುದೇ ಸಮುದಾಯ ಹೊಣೆಯಲ್ಲ. ಆದರೆ, ಜಾತಿಕಾರಣಕ್ಕಾಗಿಯೇ ನಡೆದ ಕೊಲೆಗಳ ಹೊಣೆಯನ್ನು ಸಂಬಂಧಿಸಿದ ಸಮುದಾಯ ಹೊರಬೇಕಾಗುತ್ತದೆ. ಇಂತಹ ಕೃತ್ಯಗಳಾದಾಗ ಆಯಾ ಜಾತಿಮುಖಂಡರು, ಮಠಾಧೀಶರು ಮಾತಾಡಬೇಕಾಗುತ್ತದೆ. ನಿಜವಾದ ಬಸವ ಧರ್ಮಪಾಲಕರಿಗೆ, ಹುಬ್ಬಳ್ಳಿಯ ಘಟನೆ ನೋವು, ನಾಚಿಕೆ ಉಂಟುಮಾಡಬೇಕಾಗಿತ್ತು. ಇದು ಅಮಾನವೀಯ, ಶರಣ ಸಂಸ್ಕೃತಿಗೆ ವಿರುದ್ಧವಾದ ನಡೆ ಎಂದವರು ಹೇಳಬೇಕಿತ್ತು. ಆದರೆ, ಯಾರೂ ಬಾಯಿ ಬಿಡುತ್ತಿಲ್ಲ.
ಧಾರ್ಮಿಕ ಮುಖಂಡರು ಈ ಘಟನೆಯನ್ನು ಖಂಡಿಸಿದರೆ ಪರೋಕ್ಷವಾಗಿ ಅವರು ಅಂತರ್ಜಾತಿ ವಿವಾಹಕ್ಕೆ ಪರವಾನಗಿ ಕೊಟ್ಟಂತೆ ಆಗುವುದಿಲ್ಲವೆ? ಮಕ್ಕಳಿಗೆ ಯಾರನ್ನು ಬೇಕಾದರೂ ಪ್ರೇಮಿಸಲು ಉತ್ತೇಜನ ಕೊಟ್ಟಂತಾಗುವುದಿಲ್ಲವೆ? ಎನ್ನುವುದು ಬಸವಧರ್ಮದವರೆಂದು ಹೇಳಿಕೊಳ್ಳುವ ಕೆಲವರ ಜಿಜ್ಞಾಸೆ. ಶತಮಾನಗಳ ಹಿಂದೆಯೇ ಜಾತಿ ತೊಡೆಯಲು ಹೇಳಿದ್ದ ಬಸವಣ್ಣ, ಅಂತರ್ಜಾತಿ ಮದುವೆ ಮಾಡಿಸಿದ್ದ. ಕಡೆಗೆ ಅದೇ ಒಂದು ಜಾತಿಯಾದದ್ದು ಕರ್ನಾಟಕಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಆದ ನಷ್ಟ. ಈಗ ಜಾತಿಗಾಗಿ ಗರ್ಭಿಣಿ ಜೀವ, ಅವಳ ಹೊಟ್ಟೆಯ ಪುಟ್ಟ ಜೀವ ಎರಡನ್ನೂ ತೆಗೆದ ಘಟನೆಗೆ ಬಸವ ನೋಯಲಾರನೆ?
ಅನೇಕ ಜಾತಿ ಜನಾಂಗಗಳನ್ನು ಕೂಡಿಸಿಯೇ ಹುಟ್ಟಿದ ಧರ್ಮದ ಮೂಲತತ್ತ್ವವನ್ನೇ ಮೂಲೆಗೆ ತಳ್ಳಿದರೆ ಹೇಗೆ? ಬಸವನ ಸಮಾನತೆಯ ತತ್ವವನ್ನೇ ನಿರಾಕರಿಸಿದ ಮೇಲೆ ಸಮುದಾಯಕ್ಕಾಗಲೀ, ಸಮುದಾಯದ ಮುಖಂಡರಿಗಾಗಲೀ, ಮಠಪೀಠಗಳಿಗಾಗಲೀ ಬಸವನ ಹೆಸರೇಕೆ? ಧರ್ಮವೇಕೆ? ಭಾಷಣಕ್ಕೆ, ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗೆ ಒಂದು ಟೂಲ್ ಆಗಿ ಮಾತ್ರ ಬಳಕೆಯಾಗಲು ಇರುವುದೇ ಆ ಹೆಸರು? ಜನರು ಒಪ್ಪುವುದಿಲ್ಲ ಎಂದು ಸತ್ಯವನ್ನು ಮಾತನಾಡದೆ ಹೋದರೆ, ಜಾತಿ ಹೆಸರಲ್ಲಿ ಜೀವಹಾನಿಯಾದಾಗಲೂ ಮೌನವಹಿಸಿ ಕೂತರೆ, ಮಠ–ಪೀಠಗಳು ಇರುವುದು ಏಕೆ ಎಂಬ ಪ್ರಶ್ನೆ ಹುಟ್ಟುವುದಿಲ್ಲವೆ?
ನಮ್ಮ ಸಮಾಜದ ಯೋಚನೆಗಳೇ ವಿಚಿತ್ರ. ಸ್ವಂತ ಸಮುದಾಯದವರೇ ಆ ಹುಡುಗಿಯ ಕೊಲೆಗೆ ನ್ಯಾಯ ಕೇಳುವುದಿಲ್ಲ. ಯಾಕೆಂದರೆ, ಕೊಂದವನು ನಮ್ಮದೇ ಜಾತಿಯವನು. ಅಂದರೆ, ಹೊಟ್ಟೆಯ ಕೂಸಿನ ಸಮೇತ ಕೊಲೆಗೀಡಾದ ಹೆಣ್ಣುಮಗಳ ಜೀವ ಇಲ್ಲಿ ಏನೂ ಅಲ್ಲ. ಅತ್ಯಾಚಾರ, ಅನ್ಯಾಯ, ಕೊಲೆ, ಏನಾದರೂ ನ್ಯಾಯ ಕೇಳಲು ಇಲ್ಲಿ ಜಾತಿ ಬಾವುಟ ಬೇಕು. ಮನುಷ್ಯರಾಗಿ ನಾವದನ್ನು ಪ್ರಶ್ನಿಸುವುದಿಲ್ಲ.
ದೊಡ್ಡ ನಗರಗಳ, ಶ್ರೀಮಂತರ, ಗಣ್ಯರ ಸಮಾಜದಲ್ಲಿ ಅಂತರ್ಜಾತಿ, ದೇಶ–ಖಂಡಾಂತರ ಮದುವೆಗಳೂ ಆಗುತ್ತವೆ. ಆಯ್ಕೆಯ ಅವಕಾಶವಿರದೆ, ಕೊಲೆಯ ಹಂತಕ್ಕೆ ಹೋಗುವುದು, ಹಳ್ಳಿ ಮತ್ತು ಬಡ–ಮಧ್ಯಮವರ್ಗದ ಮನೆ ಗಳಲ್ಲಿ. ಅಲ್ಲಿ ಜಾತಿಯ ಜೊತೆಗೆ ಮಗಳನ್ನು ನಿಯಂತ್ರಿಸಲು ಆಗದಂತಹ ಅಹಂ, ಅವಮಾನಕ್ಕೊಳಗಾದ ಭಾವನೆಯೂ ಕೆಲಸ ಮಾಡುತ್ತದೆ. ಇದು ಸಮಾಜದ ಮಾನಸಿಕ ಸಮಸ್ಯೆ ಗಳಲ್ಲೊಂದು ಎನಿಸುತ್ತಿದೆ.
ಹಿಂದೆ ಕುಟುಂಬದವರೇ ಗಂಡು ಹೆಣ್ಣುಗಳನ್ನು ನೋಡುತ್ತಿದ್ದರು. ಒಂದೇ ಸಂಸ್ಕೃತಿ, ಆಚರಣೆ ಇದ್ದಾಗ ಹೊಂದಾಣಿಕೆ ಸುಲಭ ಎಂಬ ಕಾರಣಕ್ಕೆ ತಮ್ಮದೇ ಜಾತಿಯಲ್ಲಿ ಮದುವೆಗಳಾಗುತ್ತಿದ್ದಿರಬಹುದು. ಈಗ ಎಲ್ಲರ ಕೈಯಲ್ಲೂ ಮೊಬೈಲಿದೆ. ನಮ್ಮದು ಈಗ ತೆರೆದ ಮತ್ತು ಸಂಪರ್ಕಾಧಾರಿತ ಸಮಾಜ. ಮುಂದೆ ಇಂತಹ ಅಂತರ್ಜಾತಿ ವಿವಾಹಗಳು ಇನ್ನೂ ಹೆಚ್ಚಾಗುತ್ತವೆ. ಆಗ ಇಷ್ಟವಿಲ್ಲದಿದ್ದರೆ ಬಿಟ್ಟು ಸುಮ್ಮನಿರಬಹುದೇ ಹೊರತು ಕೊಲ್ಲುವ ಹಂತಕ್ಕೆ ಹೋಗಬಾರದು.
‘ಹಲವು ಜಾತಿ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ? ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ?’ ಎಂದು ಕೇಳುತ್ತಾನೆ ಚೆನ್ನಬಸವಣ್ಣ. ಇಂತಹ ಶರಣಪರಂಪರೆಯ ಹೆಸರಿನಲ್ಲಿ, ಕೃತಕ ಬುದ್ಧಿಮತ್ತೆಯ ಹೊಚ್ಚ ಹೊಸ ಕಾಲದಲ್ಲಿ, ತಂದೆಯೊಬ್ಬ ಮಗಳನ್ನು ಕೊಂದಿದ್ದಾನೆ ಅಂದರೆ, ನಾವು 12ನೇ ಶತಮಾನದಿಂದ ಹಿಂದೆ ಚಲಿಸಿದ್ದೇವೆಯೆ?
ಭವಿಷ್ಯದ ಸಾವಿರ ಕನಸಿನೊಂದಿಗೆ ನಗುತ್ತಿರುವ ಆ ಸೀಮಂತಿನಿಯ ಫೋಟೋ ಎಂತಹವರ ಹೃದಯವನ್ನೂ ಕಲಕುವಂತಿದೆ. ಅಪ್ಪನೇ ಬೀಸಿದ ಜಾತಿಕೊಡಲಿಯ ಪೆಟ್ಟಿಗೆ, ಅವಳ ಹೊಟ್ಟೆಯ ಹಸುಳೆಯೂ ಇಲ್ಲವಾಗಿದೆ. ಏನು ತಪ್ಪು ಮಾಡಿದ್ದವು ಆ ಜೀವಗಳು?
ಪೂರ್ಣಚಂದ್ರ ತೇಜಸ್ವಿ ಅವರು ಅಂದಂತೆ, ‘ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಿದೆ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.