ADVERTISEMENT

ಸಂಗತ: ಮಾನವ ಹಕ್ಕು ಮತ್ತು ಹೊಣೆಗಾರಿಕೆ

ಮಾನವ ಹಕ್ಕುಗಳ ಸುಗಮ ಪರಿಪಾಲನೆಗೆ ಜವಾಬ್ದಾರಿಯೇ ಅಂಬಾರಿ

ಯೋಗಾನಂದ
Published 11 ಡಿಸೆಂಬರ್ 2022, 19:31 IST
Last Updated 11 ಡಿಸೆಂಬರ್ 2022, 19:31 IST
   

ಬೀದಿಯಲ್ಲಿ ತರಕಾರಿ ವ್ಯಾಪಾರಿ ಮತ್ತು ಮನೆ ಮಾಲೀಕನ ನಡುವೆ ವಾಗ್ವಾದ ನಡೆದಿತ್ತು. ದೂಡುಗಾಡಿಗೆ ಲಗತ್ತಾಗಿದ್ದ ಧ್ವನಿವರ್ಧಕಕ್ಕೆ
ಮಾಲೀಕನ ಆಕ್ಷೇಪ. ಮಕ್ಕಳು ಹೋಂವರ್ಕ್ಮಾಡುತ್ತಿರುತ್ತಾರೆ, ವೃದ್ಧರು ಏರುಧ್ವನಿಯಿಂದ ಕಿರಿಕಿರಿಗೆ ಒಳಗಾಗುತ್ತಾರೆ ಎನ್ನುವ ವಾದ ಸರಿಯಾಗಿಯೇ ಇತ್ತು. ಉಳಿದ ಮನೆಯವರಿಗೆ ಈ ದೃಶ್ಯವು ರಂಜನೆಯಾಗಿತ್ತೇ ವಿನಾ ಯಾರೂ ಸಾಥ್ ನೀಡಲಿಲ್ಲ. ನಿಜ, ತರಕಾರಿ ಮಾರಾಟ ಆ ವ್ಯಾಪಾರಿಯ ಹಕ್ಕು. ಆದರೆ ಶಾಂತ ಪರಿಸರದಲ್ಲಿ ವಾಸಿಸುವ ಹಕ್ಕು ಆ ನಿವಾಸಿಗಳಿಗಿದೆ ಎನ್ನುವುದನ್ನು ಆತ ಅಲಕ್ಷಿಸಿದ್ದೇ ಬಂತು. ಪರರ ಹಕ್ಕುಗಳನ್ನು ಗೌರವಿಸುವುದರಲ್ಲಿ ನಮ್ಮ ಹಕ್ಕು ಅಂತರ್ಗತವಾಗಿದೆ ಎನ್ನುವುದು ಸಾರಾಂಶ.

ಹೇಳಿ ಕೇಳಿ ಮಾಹಿತಿ ಸುನಾಮಿ ದಿನಮಾನಗಳಿವು. ನಮ್ಮ ಮನಸ್ಸನ್ನು ಗಲಿಬಿಲಿಗೊಳಿಸುವ ಸಂಗತಿಗಳಿಗೆ ಲೆಕ್ಕವಿಲ್ಲ. ದೃಶ್ಯ ಮಾಧ್ಯಮಗಳಿಗೋ ಪ್ರಸರಿಸಿದ್ದನ್ನೇ ಪ್ರಸರಿಸುವ ಗೀಳು. ಸೆಲೆಬ್ರಿಟಿಗಳು ಆಸ್ಪತ್ರೆಗೆ ದಾಖಲಾಗುವುದೇ ತಡ ರೋಚಕತೆಗಿಳಿಯುತ್ತವೆ. ಇಲಿ ಹುಲಿಯಾಗುತ್ತದೆ. ಬಸ್ಸು, ರೈಲನ್ನು ಹತ್ತುವಾಗ ಅಥವಾ ಅವುಗಳಿಂದ ಇಳಿಯುವಾಗ ಏಕಾಗ್ರತೆಯೂ ಇರದಷ್ಟು ನಮ್ಮ ಸ್ವಾತಂತ್ರ್ಯವನ್ನು ಮೊಬೈಲ್‌ ಕಸಿದಿದೆ. ಸಾಮಾನ್ಯ ಪ್ರಜ್ಞೆಯೇ ಯಾವುದೇ ಕಾನೂನು, ಕಟ್ಟಲೆಗೆ ಮೂಲ.

ಮನುಷ್ಯರಾಗಿರುವುದೇ ಮಾನವ ಹಕ್ಕುಗಳನ್ನು ಪಡೆಯಲು ಇರುವ ಅರ್ಹತೆ. ಬಾಳು, ಬಾಳಗೊಡು ಎಂಬ ದಿವ್ಯ ತತ್ವಾಧಾರಿತ ನೆಲೆಯಲ್ಲಿ ಗುಲಾಮಗಿರಿ ಯಿರದು, ಹಿಂಸೆಯಿರದು, ನಿಂದನೆಯಿರದು, ಮೇಲು ಕೀಳೆಂಬುದಿರದು. ಸೌಕರ್ಯ, ಅನುಕೂಲ ಕಲ್ಪಿಸಿ ಹಂಗಿಗೊಳಪಡಿಸುವುದೂ ಸ್ವಾತಂತ್ರ್ಯಹರಣದ ಒಂದು ರೂಪ. ಕವಿ ಜಾನ್ ಮಿಲ್ಟನ್ ತನ್ನ ‘ಪ್ಯಾರಡೈಸ್ ಲಾಸ್ಟ್’ ಕೃತಿಯಲ್ಲಿ ‘ಸ್ವರ್ಗದಲ್ಲಿ ಒಬ್ಬರ ಆಳಾಗಿರುವುದಕ್ಕಿಂತ ನರಕದಲ್ಲಿ ರಾಜನಾಗಿರುವುದೇ ಲೇಸು’ ಎನ್ನುತ್ತಾನೆ.

ADVERTISEMENT

ಬಳುವಳಿ ಅಥವಾ ಸೌಲಭ್ಯಕ್ಕೂ ಹಕ್ಕಿಗೂ ಇರುವ ವ್ಯತ್ಯಾಸ ಅರಿಯಬೇಕಿದೆ. ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿ ಜಗತ್ತನ್ನೇ ಒಂದು ಕುಟುಂಬವಾಗಿ ಇರಿಸುತ್ತವೆ. ಹಾಗಾಗಿ ‘ಮಾನವ ಹಕ್ಕು’ ಏಕೈಕ ಶ್ರೇಷ್ಠ ವಿಶ್ವಭಾಷೆ. ಬಿ.ಆರ್‌. ಅಂಬೇಡ್ಕರ್ ಅವರು ‘ಮಾನವ ಹಕ್ಕುಗಳನ್ನು ಮಾನ್ಯ ಮಾಡದೆ ಸಮ ಸಮಾಜ ಅಸಾಧ್ಯ’ ಎಂದರು. ಹಕ್ಕುಗಳು ನಿರ್ವಾತದಲ್ಲಿ ಹುಟ್ಟುವುದಿಲ್ಲ. ಕರ್ತವ್ಯ
ಪ್ರಜ್ಞೆ, ಸಹಿಷ್ಣುತೆ ಕಾರ್ಯರೂಪಕ್ಕೆ ತರದೆ ಹಕ್ಕುಗಳ ನಿರೀಕ್ಷೆ ಬತ್ತಿದ ಕೆರೆಯಲ್ಲಿ ನೀರು ಬಯಸಿದಂತೆ. ಹಕ್ಕು ಮತ್ತು ಹೊಣೆಗಾರಿಕೆ ಒಂದೇ ನಾಣ್ಯದ ಎರಡು ಮುಖಗಳು. ಮಾನವ ಹಕ್ಕುಗಳ ಆಶ್ರಯದಲ್ಲಿ ನಮಗೆ ಭಯಕ್ಕಿಂತ ಬಂದೀಖಾನೆಯಿಲ್ಲ ಅನ್ನಿಸುವುದು, ನಿರ್ಭಯವೇ ನಿಜ ಸ್ವಾತಂತ್ರ್ಯ ಎಂಬ ಭಾವ ಮೂಡುವುದು.

1948ರ ಡಿಸೆಂಬರ್ 10ರಂದು ಸಭೆ ಸೇರಿದ್ದ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಬಗ್ಗೆ ಗಹನವಾದ ಚರ್ಚೆ ನಡೆಸಿತು. ಮೂಡಿಬಂದ ನಿರ್ಣಯಗಳನ್ನು ‘ಯೂನಿವರ್ಸಲ್ ಡಿಕ್ಲರೇಷನ್ ಅಫ್ ಹ್ಯೂಮನ್ ರೈಟ್ಸ್’ (ಯುಡಿಎಚ್‌ಆರ್‌) ಎನ್ನಲಾಗುತ್ತದೆ. ಮಾನವ ಹಕ್ಕುಗಳ ಕುರಿತ ವಿಶ್ಲೇಷಣೆಯನ್ನು 500 ಭಾಷೆಗಳಲ್ಲಿ ಹೊತ್ತಿಗೆಯಾಗಿ ಹೊರತರಲಾಯಿತು. ಭಾಷಾಂತರದ್ದೇ ಒಂದು ವಿಶ್ವದಾಖಲೆ. ಮಹತ್ತರ ಸಭೆಯ ಗೌರವಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 10 ‘ವಿಶ್ವ ಮಾನವ ಹಕ್ಕುಗಳ ದಿನ’ ಎಂದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ಬಾರಿಯ ಘೋಷಣಾ ವಾಕ್ಯ ‘ಪ್ರತಿಯೊಬ್ಬರಿಗೂ ಘನತೆ, ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ’. ಹಕ್ಕುಗಳು ಅಂದರೆ ಜವಾಬ್ದಾರಿಗಳು ಎಂದೇ ಅರ್ಥ. ಖಾಸಗಿತನ, ವಿವಾಹವಾಗುವುದು ಮತ್ತು ಕುಟುಂಬ ಹೊಂದುವುದು, ಸಮಾಜಸೇವೆ, ಅಭಿಪ್ರಾಯ ಮಂಡನೆ, ಧರ್ಮಾಚರಣೆ... ಇವೆಲ್ಲವೂ ಮಾನವ ಹಕ್ಕುಗಳು.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಸೂಕ್ಷ್ಮವೂ ಗಂಭೀರವೂ ಆದ ಅಂಶಗಳನ್ನು ಮನಗಾಣಬೇಕು. ಮೂಲತಃ ಶಿಕ್ಷಣ ಪಡೆಯುವುದು ಮಾನವ ಹಕ್ಕು. ಅದೇ ಶಿಕ್ಷಣವು ಮಾನವ ಹಕ್ಕುಗಳನ್ನು ತಿಳಿಯಲು ನೆರವಾಗಬೇಕು. ಅಷ್ಟಕ್ಕೇ ನಿಂತರೆ ಶಿಕ್ಷಣದ ಸಾರ್ಥಕ್ಯ ಅಪೂರ್ಣವಾದೀತು. ಶಿಕ್ಷಣವು ಮಾನವ ಹಕ್ಕುಗಳನ್ನು ಅನುಷ್ಠಾನಕ್ಕೆ ತರಲು ಉಪಯೋಗವಾಗುವುದು ಹೇಗೆ ಎನ್ನುವುದು ಮುಖ್ಯವಾಗುತ್ತದೆ. ಎಂದರೆ ಶಿಕ್ಷಣವು ಮಾನವ ಹಕ್ಕುಗಳ ಕುರಿತಲ್ಲ, ಮಾನವ ಹಕ್ಕುಗಳಿಗಾಗಿ. ರಸಾಯನ ಶಾಸ್ತ್ರದ ವ್ಯಾಸಂಗ ಒಂದೆಡೆ ಆಗಲಿ. ಇನ್ನೊಂದೆಡೆ, ಕೈಗಾರಿಕೆಗಳಿಂದ ಅದೆಷ್ಟು ಹಾನಿಕಾರಕ ಹೊಗೆ, ಕಲುಷಿತ ನೀರು ಬಿಡುಗಡೆಯಾಗಿ ಸುತ್ತಲ ಜನಜೀವನಕ್ಕೆ ಕಂಟಕವಾಗುತ್ತಿದೆ ಎನ್ನುವುದನ್ನು ಅವಲೋಕಿಸುವುದರ ಜೊತೆಗೆ ಪರಿಹಾರಾರ್ಥ ಕಾರ್ಯಯೋಜನೆಯೂ ಆಗಬೇಕು.‌

ಭಾರತೀಯ ಪರಂಪರೆಯಲ್ಲೇ ‘ಸರ್ವೇ ಜನಾಃ ಸುಖಿನೋ ಭವಂತು’– ಎಲ್ಲರೂ ಸುಖದಿಂದ ಬಾಳಲಿ ಎಂಬ ದಿವ್ಯಾಶಯ ಬೆಸೆದುಹೋಗಿದೆ. ಆದರೆ ಮಹಿಳೆಯು ತನ್ನ ಮನೆಯಲ್ಲೇ, ತನ್ನ ಮನೆಯವರಿಂದಲೇ ನಾಗರಿಕತೆ ನಾಚುವಷ್ಟು ನಾನಾ ಬಗೆಯ ವಿಕೃತ ಕ್ರೌರ್ಯಕ್ಕೆ ಒಳಗಾಗುತ್ತಿದ್ದಾಳೆ.

ಇದು ಸಮಾಜದ ಅತಿ ದೊಡ್ಡ ದುರಂತ. ಮಾನವ ಹಕ್ಕುಗಳಿಂದ ಮಹಿಳೆಯರ ಹಕ್ಕುಗಳನ್ನು ಪ್ರತ್ಯೇಕಿಸಲಾಗದು. ಎಲ್ಲಿಯವರೆಗೂ ಮಹಿಳೆಯ ಹಕ್ಕುಗಳೇ ಮಾನವ ಹಕ್ಕುಗಳು ಮತ್ತು ಮಾನವ ಹಕ್ಕುಗಳೇ ಮಹಿಳೆಯ ಹಕ್ಕುಗಳು ಎನ್ನುವುದು ಮನವರಿಕೆಯಾಗದೋ ಅಲ್ಲಿತನಕ ಯಾವುದೇ ದೇಶದ, ಯಾವುದೇ ಆಳ್ವಿಕೆಯಲ್ಲಿ ಸುಖ, ನೆಮ್ಮದಿ ಕೈಗೂಡದು.

ಹಣ, ಆಸ್ತಿ, ಅಂತಸ್ತಿಗಿಂತ ನಿರ್ಭೀತಿ, ಘನತೆ, ನಿರೋಗ ಬದುಕನ್ನು ಕಟ್ಟುವ ಧಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.