ಗೋವಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ನಿರ್ದೇಶಕ ತಪನ್ ಸಿನ್ಹಾ ಅವರ ಕುರಿತು ‘ಸಿನ್ಹಾ ತಮ್ಮ 48 ಸಿನಿಮಾಗಳನ್ನು 48 ವಿಭಿನ್ನ ವಿಷಯಗಳನ್ನಾಧರಿಸಿ ರೂಪಿಸಿದ್ದಾರೆ. ಮನುಷ್ಯನ ಜೀವನಾನುಭವ ಅವರ ಸಿನಿಮಾಗಳ ಪ್ರಧಾನ ವಿಷಯವಸ್ತುವಾಗಿದೆ. ಅವರು ಪ್ರತಿ ಹಂತದಲ್ಲಿ ತಮ್ಮನ್ನು ತಾವು ವಿಶ್ಲೇಷಿಸಿಕೊಂಡಿ ದ್ದಾರೆ. ಪ್ರೇಕ್ಷಕರು ಮತ್ತು ಸಿನಿಮಾ ಮಾಧ್ಯಮದವರು ಅವರನ್ನು ಮರೆತಿರುವುದು ದುರದೃಷ್ಟಕರ’ ಎನ್ನುವ ಮಾತುಗಳು ಕೇಳಿಬಂದವು. ಈ ಮಾತಿಗೆ ನಿದರ್ಶನ ಎನ್ನುವಂತೆ, ಸಿನಿಮಾ ಮಂದಿರದಲ್ಲಿ ಭೇಟಿಯಾದ ಹಿರಿಯ ಮಿತ್ರರೊಬ್ಬರು ಇಂದಿನ ಸಿನಿಮಾಗಳ ಕುರಿತು ತುಂಬ ಬೇಸರದಿಂದ ಮಾತನಾಡಿದರು.
ಸಿನಿಮಾ ಮಾಧ್ಯಮ ಸಂಪೂರ್ಣವಾಗಿ ತನ್ನ ಮೈ ಹೊರಳಿಸಿದೆ. ಅದು ವಾಸ್ತವದಿಂದ ಅವಾಸ್ತವದತ್ತ ಪಯಣಿಸುತ್ತಿದೆ. ಬದುಕಿಗೆ ಹತ್ತಿರವಲ್ಲದ ಸಿನಿಮಾಗಳು ಪುಂಖಾನುಪುಂಖವಾಗಿ ನಿರ್ಮಾಣಗೊಳ್ಳುತ್ತಿವೆ. ಇದು ಕಾಲದ ವ್ಯಂಗ್ಯವೋ ಪ್ರೇಕ್ಷಕರ ಬದಲಾದ ಅಭಿರುಚಿಯೋ ಉತ್ತರ ಇಲ್ಲದ ಪ್ರಶ್ನೆಯಾಗಿದೆ.
‘ನಿರ್ದೇಶಕನು ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ’ ಎಂದಿದ್ದರು ಲಂಕೇಶ್. ಸಿನಿಮಾ ಎನ್ನುವುದು ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಮಾಧ್ಯಮವಾದಾಗಲೇ ಉತ್ತಮ ಸಿನಿಮಾಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಅವರ ನಂಬಿಕೆಯಾಗಿತ್ತು. ಒಟ್ಟಾರೆ, ಸಿನಿಮಾ ಎನ್ನುವುದು ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿಯಾಗಬೇಕು ಎಂದು ಲಂಕೇಶ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾದ ಯಶಸ್ಸಿಗೆ ಕಥೆಗಿಂತ ವೈಭವಪೂರ್ಣ ದೃಶ್ಯಗಳೇ ಹೆಚ್ಚು ಪ್ರಸ್ತುತ ಎನ್ನುವ ಮನೋಭಾವ ಇಂದು ಸಿನಿಮಾಲೋಕದಲ್ಲಿ ಮನೆಮಾಡಿದೆ. ಆಧುನಿಕ ತಂತ್ರಜ್ಞಾನ ಬಳಸಿ ರೀಲು ಸುತ್ತುತ್ತಿರುವ ಸಿನಿಮಾ ಮಾಧ್ಯಮದವರು ಕಥೆಗಿಂತ ಮೈನವಿರೇಳಿಸುವ ದೃಶ್ಯಗಳಿಗೇ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕೆಲವು ಸಿನಿಮಾಗಳು ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ಭಾರಿ ಯಶಸ್ಸು ಗಳಿಸಿರುವುದರ ಹಿಂದೆ ಕಥೆಗಿಂತ ಗ್ರಾಫಿಕ್ ತಂತ್ರಜ್ಞಾನ ಬಳಸಿ ರೂಪಿಸಿದ ದೃಶ್ಯಗಳೇ ಮುಖ್ಯ ಕಾರಣ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.
ಸಿನಿಮಾ ಪರದೆಯ ಮೇಲಿನ ಪ್ರೇಕ್ಷಕರ ನೋಟವನ್ನು ಅತ್ತಿತ್ತ ಕದಲದಂತೆ ಎರಡೂವರೆ ತಾಸು ಹಿಡಿದಿಟ್ಟರೆ ಯಶಸ್ಸು ಖಂಡಿತ ಎನ್ನುವುದು ಇಂದು ಸಿನಿಮಾ ಮಾಧ್ಯಮದ ಸಿದ್ಧಸೂತ್ರವಾಗಿದೆ. ಆಕಾಶ ದೆತ್ತರದ ಬೆಟ್ಟಗಳನ್ನು ಸಲೀಸಾಗಿ ಏರಿಳಿಯುವುದು, ಬೃಹತ್ ಗಾತ್ರದ ಕಲ್ಲಿನ ವಿಗ್ರಹವನ್ನು ನಿರಾಯಾಸವಾಗಿ ಎತ್ತುವುದು, ಧುಮ್ಮಿಕ್ಕುವ ಜಲಪಾತವನ್ನು ಏಣಿಯಾಗಿಸಿಕೊಂಡು ಅದರ ಮೂಲಕ್ಕೆ ಹೋಗಿ ನಿಲ್ಲುವುದು, ಸಾವಿರಾರು ಸೈನಿಕರನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸುವುದು... ಹೀಗೆ ಕಲ್ಪನೆಗೂ ನಿಲುಕದ ದೃಶ್ಯಗಳು ಇಂದಿನ ಸಿನಿಮಾಗಳಲ್ಲಿ ಇರುತ್ತವೆ.
ಸಿನಿಮಾಗಳ ಕಥಾವಸ್ತು ನೈಜತೆಗೆ ಹತ್ತಿರವಾಗಿರಬೇಕು ಎನ್ನುವ ಸೈದ್ಧಾಂತಿಕ ಚೌಕಟ್ಟಿನಿಂದ ನಮ್ಮ ಬಹುಪಾಲು ನಿರ್ದೇಶಕರು ಮತ್ತು ನಿರ್ಮಾಪಕರು ಹೊರಬಂದಾಗಿದೆ. ಪ್ರೇಕ್ಷಕರಿಗೆ ಮನರಂಜನೆ ಯನ್ನು ಒದಗಿಸುವ ಭರಾಟೆಯಲ್ಲಿ ತರ್ಕಕ್ಕೆ ಸಿಗದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ದೈವ ಮತ್ತು ದೆವ್ವ ಎರಡನ್ನೂ ತಂತ್ರಜ್ಞಾನದ ನೆರವಿನಿಂದ ಕಲಾತ್ಮಕವಾಗಿ ತೋರಿಸುವಲ್ಲಿಯೇ ನಮ್ಮ ನಿರ್ದೇಶಕರು ತಮ್ಮ ಜಾಣ್ಮೆ ಮೆರೆಯುತ್ತಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳು ರೂಪುಗೊಳ್ಳುತ್ತಿದ್ದರೂ ಬಿಡುಗಡೆಯ ಸಂದರ್ಭದಲ್ಲಿ ಚಿತ್ರಮಂದಿರದ ಸಮಸ್ಯೆ ಎದುರಾಗುತ್ತದೆ. ಕಲಾತ್ಮಕ ಸಿನಿಮಾಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಹಂಬಲ ಹೆಚ್ಚಿನ ಪ್ರೇಕ್ಷಕರಲ್ಲಿ ಕಾಣದಿರುವುದು ಈ ಸಿನಿಮಾಗಳು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ.
ಅವಾಸ್ತವಿಕ ಕಥೆಯ ಸಿನಿಮಾಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇಂತಹ ವಿಪರ್ಯಾಸಕ್ಕೆ ಪ್ರೇಕ್ಷಕರೇ ಕಾರಣ. ಪರಿಣಾಮವಾಗಿ, ಸಿನಿಮಾ ಮಾಧ್ಯಮವು ಪ್ರೇಕ್ಷಕರನ್ನು ಬೌದ್ಧಿಕವಾಗಿ ಬೆಳೆಸುತ್ತಿಲ್ಲ ಎನ್ನುವ ಗಂಭೀರ ಆರೋಪ ಎದುರಿಸುವಂತಾಗಿದೆ. ನಿರ್ದೇಶಕ ಸತ್ಯಜಿತ್ ರೇ ‘ನಾವು
ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ, ಸಿನಿಮಾಗಳನ್ನು ಬೆಳೆಸುತ್ತಿ ದ್ದೇವೆ’ ಎಂದು ಖಾರವಾಗಿ ನುಡಿದು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದರು. ಸಿನಿಮಾ ಮಾಧ್ಯಮ ಪ್ರೇಕ್ಷಕ
ರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕು. ಆದರೆ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸುವ ಭರಾಟೆಯಲ್ಲಿ ಸಿನಿಮಾ ಮಾಧ್ಯಮದ ಜನ ಪ್ರೇಕ್ಷಕರಿಗೆ ಬರೀ ರಂಜನೆಯನ್ನು ನೀಡುತ್ತಿದ್ದಾರೆ ವಿನಾ ಬೌದ್ಧಿಕ ಕಸರತ್ತಿಗೆ ಆಸ್ಪದವೇ ಇಲ್ಲದಂತಾಗಿದೆ.
ಬೆರಳೆಣಿಕೆಯಷ್ಟು ಸಿನಿಮಾ ತರಬೇತಿ ಸಂಸ್ಥೆಗಳನ್ನು ಹೊರತುಪಡಿಸಿದರೆ ಮೂಲ ಶಿಕ್ಷಣ ವ್ಯವಸ್ಥೆಯಲ್ಲಿ ಸಿನಿಮಾ ಅಧ್ಯಯನಕ್ಕೆ ಅವಕಾಶವಿಲ್ಲ. ಸಾಹಿತ್ಯ, ವಿಜ್ಞಾನ, ಕಲೆ, ಕೈಗಾರಿಕೆ, ಪತ್ರಿಕೋದ್ಯಮದಂತಹ ವಿಷಯಗಳನ್ನೆಲ್ಲ ಅಧ್ಯಯನ ಮಾಡಲು ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ಪಠ್ಯಕ್ರಮವಿದೆ. ಅದೇರೀತಿ ಸಿನಿಮಾವನ್ನು ವಿಶ್ಲೇಷಿಸುವ ಮತ್ತು ವಿಮರ್ಶಿಸುವ ವೈಚಾರಿಕ ಪ್ರಜ್ಞೆಯುಳ್ಳ ಪ್ರೇಕ್ಷಕರನ್ನು ರೂಪಿಸುವಂಥ ಪಠ್ಯಕ್ರಮಕ್ಕೆ ಶಿಕ್ಷಣದಲ್ಲಿ ಅವಕಾಶ ಇರಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಿನಿಮಾಗಳ ಕುರಿತು ಚರ್ಚೆ, ಸಂವಾದ, ಗೋಷ್ಠಿಗಳನ್ನು ಆಯೋಜಿಸುವಂತಹ ವಾತಾವರಣ ನಿರ್ಮಾಣವಾಗ ಬೇಕು. ಒಟ್ಟಾರೆ, ಸಿನಿಮಾ ಅಸಂಗತದಿಂದ ಸಂಗತಕ್ಕೆ ಪಲ್ಲಟಗೊಂಡು ಆ ಮೂಲಕ ಅದು ವಾಸ್ತವ ಬದುಕಿನ ದರ್ಪಣವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.