ADVERTISEMENT

ಸಂಗತ | ಕಾಲ್ತುಳಿತ: ದುರ್ಬಲ ತನಿಖಾ ವರದಿ 

ಐಪಿಎಲ್‌ ಕ್ರಿಕೆಟ್‌ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯ ಕುರಿತಾದ ತನಿಖಾ ವರದಿಯಲ್ಲಿ ಗುಪ್ತಚರ ಇಲಾಖೆಯ ಪ್ರಸ್ತಾಪವೇ ಇಲ್ಲ. ಏಕೆ?

ಸಿ.ಎಚ್.ಹನುಮಂತರಾಯ
Published 24 ಜುಲೈ 2025, 22:30 IST
Last Updated 24 ಜುಲೈ 2025, 22:30 IST
   

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ತಂಡ ‘ಐಪಿಎಲ್‌’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಸಂಭ್ರಮವನ್ನು ಆಚರಿಸುವ ವಿಜಯೋತ್ಸವದ ವೇಳೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟರು. ಆ ದುರಂತಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ನೇತೃತ್ವದ ಆಯೋಗದ ವರದಿ ಈಗಾಗಲೇ ರಾಜ್ಯ ಸಚಿವ ಸಂಪುಟದ ಕೈಸೇರಿದೆ.

ವರದಿಯಲ್ಲಿ ಘಟನೆಗೆ ಆರ್‌ಸಿಬಿ, ಡಿಎನ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಮತ್ತು ಪೊಲೀಸ್ ಅಧಿಕಾರಿಗಳು ಕಾರಣ ಎಂದು ಹೇಳಲಾಗಿದೆ.

ತನಿಖಾ ವರದಿಯಲ್ಲಿ ಪೊಲೀಸ್ ಇಲಾಖೆಯ ಕಾರ್ಯ ವಿಧಾನಗಳಲ್ಲಿ ಅಂತರ್ಗತವಾಗಿರುವ ಮುಖ್ಯ ವಿಚಾರವೊಂದನ್ನು ಆಯೋಗ ಪರಿಗಣಿಸದೇ ಇರುವುದು ಕಂಡುಬಂದಿದೆ. ಇದೊಂದು ದೊಡ್ಡ ಒಗಟಾಗಿ ಮತ್ತು ನಿಗೂಢವಾಗಿ ಕಾಣಿಸುವಷ್ಟು ದುರ್ಬಲವಾದ ವರದಿಯಾಗಿ ಕಾಣಿಸುತ್ತಿದೆ. ‘ಕರ್ನಾಟಕ ಪೊಲೀಸ್ ಕೈಪಿಡಿ–2011’ರ ಹೊಸ ಆವೃತ್ತಿಗೆ ಮುನ್ನುಡಿ ಬರೆದಿದ್ದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಕೆ.ಎಸ್‌. ಸುರೇಶ್ ಬಾಬು ಅವರು, ಪೊಲೀಸ್‌ ಇಲಾಖೆಯ ಕಾರ್ಯವ್ಯಾಪ್ತಿ ಕುರಿತು ಸೂಚ್ಯವಾಗಿ ವ್ಯಾಖ್ಯಾನಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ADVERTISEMENT

‘ಪೊಲೀಸ್ ಇಲಾಖೆಯ ಕರ್ತವ್ಯಗಳ ವ್ಯಾಪ್ತಿಯಲ್ಲಿ– ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಆಂತರಿಕ ಶಾಂತಿ ಮತ್ತು ಭದ್ರತೆಯನ್ನು ರಕ್ಷಿಸುವುದು, ಅಪರಾಧಗಳ ತಡೆಗಟ್ಟುವಿಕೆ ಮತ್ತು ಪತ್ತೆ ಹಚ್ಚುವುದು, ನಿಯಂತ್ರಣ ಮತ್ತು ಕಾನೂನುಗಳ ಜಾರಿ ಮಾಡುವ ಜವಾಬ್ದಾರಿಯಷ್ಟೇ ಇಲ್ಲ. ಆ ವ್ಯಾಪ್ತಿ ಇವೆಲ್ಲಕ್ಕಿಂತಲೂ ಹೆಚ್ಚು ವಿಸ್ತಾರವಾಗಿದ್ದು, ಅವರು ಏನು ಮಾಡಬೇಕು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ಸುರೇಶ್‌ ಬಾಬು ಅವರ ಮಾತುಗಳಲ್ಲಿ ಅಡಕವಾಗಿದೆ. ಈ ಮಾರ್ಮಿಕ ಮಾತುಗಳ ವಿಚಾರ ಗುಪ್ತಚರ ಇಲಾಖೆ ಮತ್ತು ಅದು ವ್ಯಾಪಕವಾಗಿ ಹೊಂದಿರುವ ಗುಪ್ತಚರರು ಹಾಗೂ ಬಾತ್ಮೀದಾರರಿಗೆ ಸಂಬಂಧಿಸಿದ್ದು ಎಂಬುದನ್ನು ನಾವು ಗಮನಿಸಬೇಕು.

ಕ್ರಿಕೆಟ್ ಸ್ಟೇಡಿಯಂನ ಆಗ್ನೇಯ ದಿಕ್ಕಿಗೆ ಕೇವಲ ಒಂದು ಫರ್ಲಾಂಗ್ ಅಂತರದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಸರ್ಕಲ್ ಇನ್‌ಸ್ಪೆಕ್ಟರ್‌ ಮತ್ತು ಎಸಿಪಿ ಕಚೇರಿಗಳಿವೆ. ಪಶ್ಚಿಮಕ್ಕೆ ಅರ್ಧ ಕಿ.ಮೀ ಅಂತರದಲ್ಲಿ ಹೈಗ್ರೌಂಡ್ಸ್‌ ಪೊಲೀಸ್ ಠಾಣೆ, ನೈರುತ್ಯ ಭಾಗದಲ್ಲಿ ವಿಧಾನಸೌಧ ಪೊಲೀಸ್ ಠಾಣೆ, ಸರ್ಕಲ್ ಇನ್‌ಸ್ಪೆಕ್ಟರ್‌ ಹಾಗೂ ಎಸಿಪಿಯವರ ಕಚೇರಿಗಳಿವೆ. ಉತ್ತರ ದಿಕ್ಕಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಇದೆ. ಇವಿಷ್ಟೂ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ನೂರಾರು ಗುಪ್ತಚರರು ಮತ್ತು ಬಾತ್ಮೀದಾರರು ಇರುತ್ತಾರೆ.ವಿಪರ್ಯಾಸವೆಂದರೆ, ಗುಪ್ತಚರ ಇಲಾಖೆ ಗೃಹ ಸಚಿವರ ನಿರ್ವಹಣೆಯಲ್ಲಿ ಇರಬೇಕು. ಆದರೆ, ಅದು ಮುಖ್ಯಮಂತ್ರಿ ಬಳಿಯಿರುವ ಎಂಟು ಖಾತೆಗಳಲ್ಲಿ ಒಂದಾಗಿದೆ!

ಕಾಲ್ತುಳಿತ ಸಂಭವಿಸುವ ಕೆಲವೇ ಗಂಟೆಗಳ ಮೊದಲು ವಿಧಾನಸೌಧದ ಮುಂಭಾಗದಲ್ಲಿ ಸೇರಿದ್ದ ಭಾರೀ ಜನಸ್ತೋಮದ ಎದುರು ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭವನ್ನು ಗಮನಿಸಿದಾಗ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

ವಿಜಯೋತ್ಸವಕ್ಕೆ ಸಂಬಂಧಪಟ್ಟ ಪ್ರಕಟಣೆ ಪ್ರಾರಂಭವಾದ ಸಮಯದಿಂದ ಗುಪ್ತಚರರು ಮತ್ತು ಬಾತ್ಮೀದಾರರು ತಮ್ಮ ಕರ್ತವ್ಯದಲ್ಲಿ ನಿರತರಾಗಿರಲಿಲ್ಲವೇ? ಹಾಗಾಗಿದ್ದಲ್ಲಿ, ಗುಪ್ತಚರ ಇಲಾಖೆಯ ವರಿಷ್ಠ ಅಧಿಕಾರಿಗಳು ಕ್ಷಣ ಕ್ಷಣದಲ್ಲೂ ಪಡೆದುಕೊಂಡ ಮಾಹಿತಿಗೆ ಮಹತ್ವ ಇಲ್ಲವೇ? ಲಕ್ಷಾಂತರ ಮಂದಿ ವಿಧಾನಸೌಧದ ಮುಂದಿದ್ದಾಗ, ಅವರ ಮಧ್ಯೆ ಮಫ್ತಿಯಲ್ಲಿ ಗುಪ್ತಚರರು ಮತ್ತು ಮೂರೂ ಪೊಲೀಸ್ ಠಾಣೆಗಳಿಗೆ ಸೇರಿರುವ ನೂರಾರು ಬಾತ್ಮೀದಾರರು ಕಂಡದ್ದು ಹಾಗೂ ಕೇಳಿಸಿಕೊಂಡ ಸಂಗತಿಗಳು ಯಾವುದಾಗಿದ್ದವು? ವಿಧಾನಸೌಧದ ಮುಂದೆ ಕಾರ್ಯಕ್ರಮ ಮುಗಿದ ಕೂಡಲೇ ವಿಧಾನಸೌಧದ ಮುಂದೆ ಜಮಾಯಿಸಿದ್ದ ಜನಸ್ತೋಮ ಕ್ರೀಡಾಂಗಣದ ಕಡೆಗೆ ಧಾವಿಸಿದ್ದು ಎಲ್ಲರಿಗೂ ತಿಳಿದಿರುವ ಸತ್ಯ. ಹೀಗಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಂಗಣದಲ್ಲಿ ಜರುಗಲಿರುವ ಕಾರ್ಯಕ್ರಮದ ಕುರಿತು ಬರುತ್ತಿದ್ದ ಪ್ರಕಟಣೆಗಳು ಗುಪ್ತಚರರು ಮತ್ತು ಬಾತ್ಮೀದಾರರ ಗಮನಕ್ಕೆ ಬರಲಿಲ್ಲವೇ? ಅವರ ಮುಖಾಂತರ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಲಭ್ಯವಾಗಲಿಲ್ಲವೇ?

ಗುಪ್ತಚರರಿಗೆ ಈ ಮಾಹಿತಿಗಳು ಲಭ್ಯವಾಗಿದ್ದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಕಾರಣರಾಗಿರಬೇಕಾಗಿತ್ತು. ನಿಜವಾದ ದುರಂತ ಏನೆಂದರೆ, ಈ ಎಲ್ಲಾ ಗುಪ್ತಚರರು ಕಾರ್ಯೋನ್ಮುಖರಾಗಿದ್ದ ಬಗ್ಗೆ ಎಲ್ಲಿಯೂ ಯಾವ ಸುದ್ದಿಯೂ ಕಂಡುಬರದೇ ಇರುವುದು.

ಆಯೋಗ ನಡೆಸಿದ ತನಿಖಾ ವರದಿಯಲ್ಲಿ ಮೇಲಿನ ಪ್ರಶ್ನೆಗಳ ಕುರಿತಂತೆ ಎಳ್ಳಷ್ಟೂ ವಿವರ ಕಂಡುಬರುತ್ತಿಲ್ಲ. ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ವ್ಯಾಪ್ತಿಗೆಬರುತ್ತದೆ ಎಂಬ ಕಾರಣಕ್ಕಾಗಿಯೇ ಇದನ್ನು ಮುಚ್ಚಿಡಲಾಗಿದೆಯೇ? ಒಂದು ವೇಳೆ ಈ ದಿಸೆಯಲ್ಲಿ ತನಿಖೆ ನಡೆದಿದ್ದರೂ ಮುಖ್ಯಮಂತ್ರಿ ಅವರಿಗೆ ಎದುರಿಸಲಾಗದ ಮುಜುಗರ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಅದನ್ನು ಗೋಪ್ಯವಾಗಿ ಇರಿಸಲಾಗಿದೆಯೇ? ಈ ಅಂಶಗಳ ಹಿನ್ನೆಲೆಯಲ್ಲಿ ಆಯೋಗದ ವರದಿ ದೌರ್ಬಲ್ಯಪೂರಿತ ಎಂದೇ ಭಾವಿಸಬೇಕಾಗುತ್ತದೆ.

(ಲೇಖಕರು ಹೈಕೋರ್ಟ್‌ನ ಹಿರಿಯ ವಕೀಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.