ADVERTISEMENT

‘ಕಂಚಿನ ನಕ್ಷತ್ರ’ಕ್ಕೆ ಸುವರ್ಣ ಸಂಭ್ರಮ

ಭಾರತ ಕಾದಾಡಿದ ಪ್ರಮುಖ ಯುದ್ಧಗಳಲ್ಲಿ ಭಾಗಿಯಾಗಿದ್ದ ಸೈನಿಕರಲ್ಲಿ 14 ಮಂದಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ

ಗುರುರಾಜ್ ಎಸ್.ದಾವಣಗೆರೆ
Published 17 ಜನವರಿ 2021, 20:33 IST
Last Updated 17 ಜನವರಿ 2021, 20:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅದು 50 ವರ್ಷಗಳ ಹಿಂದಿನ ಮಾತು. ಡೆಹ್ರಾಡೂನ್‍ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ತರಬೇತಿ ಮೈದಾನದಲ್ಲಿ ಸಂಭ್ರಮವೋ ಸಂಭ್ರಮ. ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ವಿಭಾಗಗಳಲ್ಲಿ ಎರಡು ವರ್ಷಗಳ ಕಠಿಣ ಹಾಗೂ ಉನ್ನತ ತರಬೇತಿ ಮುಗಿಸಿದ 470ಕ್ಕೂ ಹೆಚ್ಚು ಯುವ ಸೈನಿಕರು ‘ಪಾಸಿಂಗ್ ಔಟ್ ಪರೇಡ್’ನಲ್ಲಿ ಒಬ್ಬೊಬ್ಬರಾಗಿ ಎದೆಯುಬ್ಬಿಸಿ ನಡೆದು, ಧರಿಸಿದ ಹೊಸ ಯೂನಿಫಾರ್ಮ್‌ಗೆ ಉನ್ನತಾಧಿಕಾರಿಗಳಿಂದ ಹೊಳೆಯುವ ‘ಕಂಚಿನ ನಕ್ಷತ್ರ’ವನ್ನು ಸಿಕ್ಕಿಸಿಕೊಂಡು, ಆರ್ಮಿ ಸಲ್ಯೂಟ್ ಮಾಡಿ, ಗತ್ತಿನಿಂದ ಹೆತ್ತವರ ಕಡೆ ಕೈ ಬೀಸಿ ಹಸನ್ಮುಖರಾಗಿ ಬ್ಯಾರಕ್‍ಗಳಿಗೆ ತೆರಳಿದ್ದರು. ಇದನ್ನೆಲ್ಲ ನೆನಪಿಸಿಕೊಳ್ಳುವ ರಿಟೈರ್ಡ್ ಲೆಫ್ಟಿನೆಂಟ್ ಕರ್ನಲ್ ರಾಜಾರಾಂ, ಬೆಂಗಳೂರಿನ ರಾಜಾಜಿನಗರದ ತಮ್ಮ ಮನೆಯಲ್ಲಿ ಯೌವನದ ದಿನಗಳ ನೆನಪಿಗೆ ಜಾರದ ಕ್ಷಣವೇ ಇಲ್ಲ.

ಪಾಸಿಂಗ್ ಔಟ್ ಪರೇಡ್‍ನಲ್ಲಿ ಕ್ರಮಿಸುವ ಹೆಜ್ಜೆಗಳನ್ನು ಸೈನಿಕ ಭಾಷೆಯಲ್ಲಿ ‘ಅಂತಿಮ್ ಪಗ್’ ಎನ್ನುತ್ತಾರೆ. ಸೇನಾ ಸೇವೆಯಿಂದ ನಿವೃತ್ತರಾದ ನಂತರ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ರಾಜಾರಾಂ, ತರಬೇತಿ ಮುಗಿಯುತ್ತಲೇ ನಡೆದ ಬಾಂಗ್ಲಾ ವಿಮೋಚನೆಯ ಯುದ್ಧದ ಘಟನೆಗಳನ್ನು ಸವಿವರವಾಗಿ ಕೇಳುಗರ ಮುಂದಿಡುತ್ತಾರೆ. ಐವತ್ತು ವರ್ಷಗಳ ಹಿಂದೆ ತಮ್ಮ ಸಹವರ್ತಿಗಳೊಂದಿಗೆ ಡೆಹ್ರಾಡೂನಿನ ತರಬೇತಿ ಕೇಂದ್ರದಿಂದ ನೇರ ರಣರಂಗಕ್ಕೆ ಧುಮುಕಿ ಸಾಧನೆ ತೋರಿ, ದೇಶದ ತ್ರಿವರ್ಣ ಧ್ವಜವನ್ನು ಎತ್ತೆತ್ತರಕ್ಕೆ ಹಾರಿಸಿದ ಕೀರ್ತಿಯಲ್ಲಿ ತಮ್ಮ ಗೆಳೆಯರ ತ್ಯಾಗ- ಬಲಿದಾನಗಳೂ ಇವೆ ಎಂದು ಹನಿಗಣ್ಣಾಗುತ್ತಾರೆ.

ಭಾರತೀಯ ಸೇನೆ ಸೇರಿ ದೇಶಸೇವೆ ಮಾಡಬೇಕೆನ್ನುವುದು ಲಕ್ಷಾಂತರ ಯುವಕ– ಯುವತಿಯರ ಕನಸು. ಯುದ್ಧಗಳಲ್ಲಿ, ರಕ್ಷಣಾ ಕಾರ್ಯಗಳಲ್ಲಿ ಮಡಿದು ಹುತಾತ್ಮರಾದ ಸಾವಿರಾರು ಸೈನಿಕರು ಎಲ್ಲರ ಗೌರವಕ್ಕೆ ಪಾತ್ರರಾಗುತ್ತ ಪರಮ ಪದವಿಯನ್ನು ಪಡೆದಿದ್ದಾರೆ. ಪರಮವೀರ ಚಕ್ರ ಮುಡಿಗೇರಿಸಿಕೊಂಡು ಎಲ್ಲರ ಮನಸ್ಸುಗಳಲ್ಲೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಅಂದು ಡೆಹ್ರಾಡೂನ್‍ನಲ್ಲಿ ತರಬೇತಿ ಮುಗಿಸಿದ 470 ಜನರ ಪೈಕಿ 14 ಜನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ.

ADVERTISEMENT

ಒಬ್ಬೊಬ್ಬರದೂ ಒಂದೊಂದು ವಿಶಿಷ್ಟ ಸಾಧನೆ. ಅವರ ಪೈಕಿ ತರಬೇತಿಯ ದಿನಗಳಲ್ಲಿ ‘ಅತ್ಯುತ್ತಮ ಕೆಡೆಟ್’ ಮತ್ತು ‘ಸ್ವೋರ್ಡ್ ಆಫ್ ಆನರ್’ ಗೌರವ ಗಳಿಸಿದ್ದ ಸ್ವಪನ್‌ಭದ್ರ ಅವರಿಗೆ ಈಗ 75ರ ಹರೆಯ. ಆಜಾನುಬಾಹು ನಿಲುವಿನ, ತೀಕ್ಷ್ಣ ದೃಷ್ಟಿಯ ಸ್ವಪನ್ ‘ಅವಕಾಶವಿತ್ತರೆ ಈಗಲೂ ಸೇನೆಗೆ ಹಿಂತಿರುಗಲು ಸಿದ್ಧ’ ಎನ್ನುತ್ತಾರೆ. ಬಾಂಗ್ಲಾಯುದ್ಧ, ಕಾರ್ಗಿಲ್ ಕದನ, ಚೀನಾ, ಪಾಕಿಸ್ತಾನ ಕಾಳಗ, ಸ್ವರ್ಣಮಂದಿರ, ಈಶಾನ್ಯ ರಾಜ್ಯ ಮತ್ತು ಭಯೋತ್ಪಾದನೆ, ಜಮ್ಮು– ಕಾಶ್ಮೀರಗಳಲ್ಲಿನ ಭಯೋತ್ಮಾದನೆ ನಿಗ್ರಹಗಳ ಜೊತೆ ಶ್ರೀಲಂಕಾದಲ್ಲಿ ನೆಲೆಗೊಂಡಿದ್ದ ಶಾಂತಿಪಾಲನಾ ಪಡೆಯ ಕರ್ತವ್ಯವನ್ನೂ ನಿಭಾಯಿಸಿದ ತೃಪ್ತಿ ಹೊಂದಿರುವ ರಾಜಾರಾಂ, ಭಂಡಾರಿ, ಸ್ವಪನ್‍ಭದ್ರ, ಅಬ್ರಹಾಂ ಚಾಕೊ, ದೇಶಸೇವೆಗೆ ಸೇನೆಯಷ್ಟು ಸಮರ್ಥ ಜಾಗ ಇನ್ನೊಂದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಇಪ್ಪತ್ತರ ಹರೆಯದ ಆಸುಪಾಸಿನಲ್ಲಿ ಸೈನ್ಯಕ್ಕೆ ಸ್ಪೆಷಲ್ ಸೆಲೆಕ್ಷನ್ ಬೋರ್ಡ್‌ನ ಪರೀಕ್ಷೆಯ ಮೂಲಕ ಆಯ್ಕೆಯಾದ ಇವರೆಲ್ಲ ಹೆಚ್ಚೂ ಕಡಿಮೆ ಭಾರತ ಕಾದಾಡಿದ ಯುದ್ಧಗಳಲ್ಲೆಲ್ಲ ಭಾಗಿಯಾಗಿದ್ದಾರೆ. ದೇಶಪ್ರೇಮ, ದೇಶಸೇವೆ, ಸಾಮಾಜಿಕ ಬದ್ಧತೆ ಕುರಿತು ಹೆಚ್ಚು ಮಾತನಾಡುವ ಇವರೆಲ್ಲ ತಮ್ಮ ಸೇನಾನುಭವದ ಗೋಲ್ಡನ್ ಜ್ಯುಬಿಲಿ ಆಚರಿಸಲು ಕಳೆದ ಡಿಸೆಂಬರ್ 22ರಂದು ಬೆಂಗಳೂರಿನ ‘ವಾರ್ ಮೆಮೊರಿಯಲ್’ನಲ್ಲಿ ಸಂಧಿಸಿ, ಅಗಲಿದ ತಮ್ಮ ವೀರ ಗೆಳೆಯರಿಗೆ ಶ್ರದ್ಧಾಂಜಲಿ ಅರ್ಪಿಸಿ, ಗೌರವ ಸಮರ್ಪಣೆ ಮಾಡಿ ಸಾರ್ಥಕ ಭಾವ ತಳೆದರು. ದಣಿವರಿಯದೆ ದೇಶಸೇವೆ ಮಾಡಿದ ಎಲ್ಲರೂ 70ರ ಹರೆಯ ಕಳೆದು ಮಾಗಿದ್ದಾರೆ. ನೋವಿನ, ನಲಿವಿನ ಕ್ಷಣಗಳಿಗೆ ಸಾಕ್ಷಿಯಾದ ಕಣ್ಣುಗಳ ಸುತ್ತ ಗೆರೆಗಳು ಮೂಡಿವೆಯಾದರೂ ದೃಷ್ಟಿಯ ತೇಜಸ್ಸು ಕಡಿಮೆಯಾಗಿಲ್ಲ. ‌

ಇಂದು ಭಾರತೀಯ ಭೂ ಸೇನೆಯಲ್ಲಿ 14 ಲಕ್ಷ ಸೈನಿಕರಿದ್ದಾರೆ. ಸವಲತ್ತುಗಳ ಜೊತೆ ಸವಾಲುಗಳೂ ಇವೆ. ಯೋಧರ ಮಕ್ಕಳಿಗೆ, ಪತ್ನಿಯರಿಗೆ ಅನುಕೂಲ ಕಲ್ಪಿಸುವ ಹಲವು ಯೋಜನೆಗಳಿವೆ. ಭಾರಿ ಪ್ರಮಾಣದ ಹಣ ಮೀಸಲಿಡಲಾಗುತ್ತದೆ ಎನ್ನುವ ರಾಜಾರಾಂ, ನಾವೆಲ್ಲ ಹೋರಾಡುವಾಗ ಬಳಕೆಯಲ್ಲಿದ್ದ ಶಸ್ತ್ರಾಸ್ತ್ರಗಳು ಅನೇಕ ಮಿತಿಗಳನ್ನು ಹೊಂದಿದ್ದವು. ಆದರೂ ನಮ್ಮ ಧೈರ್ಯ ಮತ್ತು ಶತ್ರುಗಳನ್ನು ಮಣಿಸಲೇಬೇಕೆನ್ನುವ ಮನೋಬಲಕ್ಕೆ ಯಾವ ಕೊರತೆಯೂ ಇರಲಿಲ್ಲ ಎಂದು ಸ್ಮರಿಸುತ್ತಾರೆ.

ತರಬೇತಿ ದಿನಗಳ ಮುಕ್ತಾಯದ ನೆನಪಿಗೆ ನಡೆಯುವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಾರಾಂ ಮತ್ತು ಗೆಳೆಯರು ಅಂದಿನ ಭಾರತೀಯ ಸೇನೆಯ ‘46 ರೆಗ್ಯುಲರ್ ಕೋರ್ಸ್’ ಮತ್ತು ‘30 ಟೆಕ್ನಿಕಲ್ ಕೋರ್ಸ್’ಗೆ ಸೇರಿದವರಾಗಿದ್ದರು. ಭಾರತದ ಸೇನಾ ವಿಭಾಗಗಳು ಎಲ್ಲೆಲ್ಲಿ ಸಂಕಷ್ಟಗಳನ್ನೆದುರಿಸಿ ವಿಜಯಲಕ್ಷ್ಮಿಯನ್ನು ಮುಡಿಗೇರಿಸಿಕೊಂಡಿದ್ದವೋ ಅಲ್ಲೆಲ್ಲ ಸ್ವಪನ್‍ಭದ್ರ ಮತ್ತು ಸಹವರ್ತಿಗಳು ತಮ್ಮ ಸೇವೆಯ ಗುರುತುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿರುವ ಎಲ್ಲ 14 ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವ ರಾಜಾರಾಂ, ತಮ್ಮ ಬ್ಯಾಚಿಗೆ ಸೇರಿದವರಲ್ಲಿ ಈಗ ಜೀವಂತವಿರುವ ಎಲ್ಲ ಅಧಿಕಾರಿಗಳನ್ನೂ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಒಂದೆಡೆ ಸೇರಿಸಿ ಸಂಭ್ರಮಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.