ADVERTISEMENT

ಸಂಗತ | ಸಾಹಿತ್ಯ ‘ಮ್ಯೂಸಿಯಂ’ಗೆ ಸೀಮಿತ ಆಗದಿರಲಿ

ಸದಾಶಿವ ಸೊರಟೂರು
Published 10 ಡಿಸೆಂಬರ್ 2025, 21:37 IST
Last Updated 10 ಡಿಸೆಂಬರ್ 2025, 21:37 IST
   

ಹೆಚ್ಚು ಮಾರಾಟವಾಗುವ ಪುಸ್ತಕಗಳು ಯಾರವು? ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರನ್ನು ಈ ಪ್ರಶ್ನೆ ಕೇಳಿದರೆ ಅವರು ಬೆರಳು ಮಾಡಿ ತೋರಿಸುವುದು ಹಿರಿಯ ಸಾಹಿತಿಗಳ ಕೃತಿಗಳತ್ತ. ಈ ಉತ್ತರ, ಈ ಹೊತ್ತಿನ ಬರಹಗಾರರ ಪುಸ್ತಕಗಳಿಗೆ ದೊಡ್ಡ ಓದುಗ ಸಮೂಹವಿಲ್ಲ ಎನ್ನುವ ಕಹಿಸತ್ಯವನ್ನು ಹೇಳುವಂತಿದೆ.

ಹಳಬರ ಪುಸ್ತಕಗಳ ಸತ್ತ್ವದ ಬಗ್ಗೆ ಮಾತನಾಡುತ್ತಿದ್ದ ಗೆಳೆಯರೊಬ್ಬರು, ‘ಹೊಸಬರ ಪುಸ್ತಕದಲ್ಲಿ ಏನಿದೆ ಎಂದು ಓದಬೇಕು? ಅವರ ಪುಸ್ತಕಗಳನ್ನು ಓದುವುದರಿಂದ ಹಣ ಮತ್ತು ಸಮಯ ಎರಡೂ ವ್ಯರ್ಥ’ ಎಂದರು. ಅವರ ಮಾತಿಗೆ ಪ್ರತಿಯಾಗಿ, ‘ಹೊಸಬರ ಯಾವ ಪುಸ್ತಕಗಳನ್ನು ನೀವು ಓದಿದ್ದೀರಿ?’ ಎಂದು ಕೇಳಿದೆ. ತಡಬಡಾಯಿಸಿದರು. ‘ಹಳೆಯದೆಲ್ಲ ಸರಿ, ಹೊಸದೆಲ್ಲಾ ಸರಿಯಿಲ್ಲ’ ಎನ್ನುವ ರೂಢಿಗತ ಧೋರಣೆಯಲ್ಲಿ ಅವರ ಓದು ವರ್ತಮಾನಕ್ಕೆ ತೆರೆದುಕೊಂಡಿರಲಿಲ್ಲ. ಇದು ಯಾವುದೋ ಒಬ್ಬ ಓದುಗ, ಬರಹಗಾರನ ಸಮಸ್ಯೆಯಲ್ಲ. ಬಹುತೇಕರು ಹೊಸಬರನ್ನು ಓದದೆಯೇ ಅವರ ಸಾಹಿತ್ಯದ ಬಗ್ಗೆ ತೀರ್ಮಾನಗಳನ್ನು ಕೊಡುತ್ತಾರೆ. ಇದೊಂದು ಬಗೆಯ ಬೌದ್ಧಿಕ ಜಡತ್ವ.

ಹೊಸಬರು ಗಟ್ಟಿಯಾದದ್ದು ಏನನ್ನೂ ಬರೆಯುತ್ತಿಲ್ಲ ಎನ್ನುವ ತಪ್ಪುಕಲ್ಪನೆ ಚಾಲ್ತಿಯಲ್ಲಿರು ವುದರಿಂದಲೇ, ಹೊಸ ಬರಹಗಾರರ ಪುಸ್ತಕಗಳು ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗುತ್ತಿಲ್ಲ ಎನ್ನಿಸುತ್ತದೆ. ಇಲ್ಲೊಂದು ಸಂಗತಿಯನ್ನು ನಾವು ಗಮನಿಸಬೇಕು: ಹಳಬರು ಕೂಡ ಒಂದು ಕಾಲದಲ್ಲಿ ಹೊಸಬರೇ ಅಲ್ಲವೇ? 

ADVERTISEMENT

ವಿಲಿಯಂ ಷೇಕ್ಸ್‌ಪಿಯರ್ ನಾಟಕಗಳನ್ನು ಬರೆಯಲು ಆರಂಭಿಸಿದಾಗ, ಆ ಕಾಲದ ವಿಶ್ವವಿದ್ಯಾಲಯಪೋಷಿತ ಬರಹಗಾರರು– ‘ಕಾಗೆಯ ಪುಕ್ಕ ಸಿಕ್ಕಿಸಿಕೊಂಡವನು’ ಎಂದು ಗೇಲಿ ಮಾಡಿದ್ದರಂತೆ. ಅಂದಿನ ಸಹೃದಯರು ಷೇಕ್ಸ್‌ಪಿಯರ್‌ನ ಹೊಸ ಪ್ರಯೋಗಗಳನ್ನು ಬೆಂಬಲಿಸದೆ ಹೋಗಿದ್ದಿದ್ದರೆ, ಇಂಗ್ಲಿಷ್ ಸಾಹಿತ್ಯ ಖಂಡಿತ ಬಡವಾಗುತ್ತಿತ್ತು. ಹ್ಯಾರಿ ಪಾಟರ್ ಸರಣಿಯ ಮೂಲಕ ಇಡೀ ಜಗತ್ತನ್ನೇ ಮೋಡಿ ಮಾಡಿದ ಜೆ.ಕೆ. ರೌಲಿಂಗ್ ಅವರ ಮೊದಲ ಹಸ್ತಪ್ರತಿಯನ್ನು 12 ಪ್ರಕಾಶಕರು ತಿರಸ್ಕರಿಸಿದ್ದರು! ಆಮೇಲೆ ಅದು ಇತಿಹಾಸವನ್ನೇ ಸೃಷ್ಟಿಸಿತು. 

ಹಿಂದಿನ ಅಸಂಖ್ಯ ಲೇಖಕರಲ್ಲಿ ಇಂದಿಗೂ ಉಳಿದಿರುವವರು ಬೆರಳೆಣಿಕೆಯಷ್ಟು ಮಂದಿ. ಆ ಕಾಲದಲ್ಲೂ ಸಾವಿರಾರು ಕಳಪೆ ಪುಸ್ತಕಗಳು ಬಂದಿದ್ದವು, ಅವೆಲ್ಲವೂ ಕಾಲಗರ್ಭದಲ್ಲಿ ಕಳೆದುಹೋಗಿವೆ. ​ನಾವು ಇಂದಿನ ಹೊಸ
ಬರಹಗಾರರನ್ನು, ನಮ್ಮ ಪರಂಪರೆಯ ಮೇರು ಲೇಖಕ ರೊಂದಿಗೆ ಹೋಲಿಸುತ್ತಿದ್ದೇವೆ. ಇದು ತರ್ಕಬದ್ಧವಲ್ಲದ ಹಾಗೂ ನ್ಯಾಯಸಮ್ಮತವಲ್ಲದ ಹೋಲಿಕೆ. ಇಂದಿನ ನೂರು ಲೇಖಕರಲ್ಲಿ ಅರವತ್ತು ಜನ ಸಾಧಾರಣ ಇರಬಹುದು. ಆದರೆ, ಉಳಿದ ನಲವತ್ತು ಜನರನ್ನು ಗುರುತಿಸಿ ಉಳಿಸಿಕೊಳ್ಳದಿದ್ದರೆ, ಮುಂದಿನ ತಲೆಮಾರಿಗೆ ‘ಉತ್ತಮ ಲೇಖಕರು’ ಸಿಗುವುದಾದರೂ ಎಲ್ಲಿಂದ? 

ವರ್ತಮಾನದ ಸಂಕೀರ್ಣ ಬದುಕಿನ ಸಮಸ್ಯೆಗಳಿಗೆ ಹಳೆಯ ಕೃತಿಗಳಲ್ಲಿ ಉತ್ತರ ಕಂಡುಕೊಳ್ಳು ವುದು ಸಾಧ್ಯವಿಲ್ಲ. ​ಸಾಮಾಜಿಕ ಜಾಲತಾಣಗಳು ಸೃಷ್ಟಿಸಿರುವ ಒಂಟಿತನ, ​ಕಾರ್ಪೊರೇಟ್ ಜಗತ್ತಿನ ಒತ್ತಡ, ​ಲಿವ್-ಇನ್ ಸಂಬಂಧಗಳ ಸಂಕೀರ್ಣತೆ, ​ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮನುಷ್ಯನ ಅಸ್ತಿತ್ವದ ಪ್ರಶ್ನೆ– ​ಈ ವಿಷಯಗಳ ಬಗ್ಗೆ ಅರ್ಧ ಶತಮಾನದ ಹಿಂದಿನ ಕಾದಂಬರಿಗಳು ಮಾತನಾಡಲು ಸಾಧ್ಯವೆ? 

ಇಂದಿನ ಯುವಜನರ ಭಾಷೆ, ಆಲೋಚನಾಕ್ರಮ ಮತ್ತು ಸಂಕಟಗಳನ್ನು ಹಿಡಿದಿಡಲು ಸಮಕಾಲೀನ ಬರಹಗಾರರಿಂದಲೇ ಸಾಧ್ಯ. ಹಳೆಯ ಸಾಹಿತ್ಯವು ಇತಿಹಾಸವನ್ನು ಕಲಿಸಿದರೆ, ಹೊಸ ಸಾಹಿತ್ಯವು ಪ್ರಸ್ತುತ ಬದುಕನ್ನು ಎದುರಿಸುವುದನ್ನು ಕಲಿಸುತ್ತದೆ. ಎರಡೂ ಬೇಕು.

ಭಾಷೆ ಹರಿಯುವ ನದಿ. ಈ ಹಿಂದಿನ ಸಾಹಿತ್ಯದ ಕ್ಲಿಷ್ಟ ವಿಚಾರಗಳು, ಕ್ಲಿಷ್ಟ ಪದಗಳು ಇಂದಿನ ಓದುಗರಿಗೆ ಅರ್ಥವಾಗುವುದಿಲ್ಲ. ಇಂಥ ಸಮಯದಲ್ಲಿ, ಸರಳವಾದ, ಆಡುಭಾಷೆಗೆ ಹತ್ತಿರವಾದ ಕನ್ನಡದಲ್ಲಿ ಬರೆಯುವ ಹೊಸ ಲೇಖಕರು ‘ಸೇತುವೆ’ಯಂತೆ ಕೆಲಸ ಮಾಡುತ್ತಾರೆ.

​‘ಹೊಸಬರ ಭಾಷೆ ಚೆನ್ನಾಗಿಲ್ಲ’ ಎಂದು ಮೂಗು ಮುರಿಯುವವರು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ– ಹೊಸಬರ ಪುಸ್ತಕಗಳೇ ಇಲ್ಲದಿದ್ದರೆ, ಯುವಪೀಳಿಗೆ ಕನ್ನಡ ಓದುವುದನ್ನೇ ಬಿಟ್ಟು ಇಂಗ್ಲಿಷ್‌ಗೆ ವಲಸೆ ಹೋಗುತ್ತದೆ. ಕನ್ನಡ ಉಳಿಯಬೇಕಾದರೆ, ಭಾಷೆಯಲ್ಲಿನ ಬದಲಾವಣೆ ಮತ್ತು ಹೊಸ ಶೈಲಿಯನ್ನು ನಾವು ಒಪ್ಪಿಕೊಳ್ಳಬೇಕು. ಹೊಸಗಾಲದ ಭಾಷೆಗೆ ಈ ಕಾಲದ ಸಂಕೀರ್ಣತೆಯ ಸ್ವರೂಪವಿದೆ. 

ಬಟ್ಟೆಗೆ, ಊಟಕ್ಕೆ ಯಾಕಿಷ್ಟು ದುಬಾರಿ ಬೆಲೆ ಎಂದು ಕೇಳದ ನಾವು ​ಹೊಸಬರ ಪುಸ್ತಕಕ್ಕೆ ನೂರಿನ್ನೂರು ರೂಪಾಯಿ ಕೊಡಲು ಯೋಚಿಸುತ್ತೇವೆ. ಒಂದು ಪುಸ್ತಕ ಕೆಲವು ಹಾಳೆಗಳ ಕಂತೆ ಅಲ್ಲ; ಅದೊಂದು ಸಾಂಸ್ಕೃತಿಕ ಹೂಡಿಕೆ. ​ನಾವು ಕೊಳ್ಳುವ ಪ್ರತಿಯೊಂದು ಪುಸ್ತಕವೂ, ಒಬ್ಬ ಹೊಸ ಲೇಖಕನಿಗೆ, ಪ್ರಕಾಶಕನಿಗೆ, ಮತ್ತು ಅಂತಿಮವಾಗಿ ಕನ್ನಡ ಭಾಷೆಗೆ ನೀಡುವ ಆಮ್ಲಜನಕ.

ಎಲ್ಲ ಪುಸ್ತಕಗಳೂ ಉತ್ತಮ ಕೃತಿಗಳಾಗಲು ಸಾಧ್ಯವಿಲ್ಲ. ಆದರೆ, ಓದುಗನಾಗಿ ನಾವು ಪುಸ್ತಕವನ್ನು ಕೊಂಡು, ಓದಿ, ‘ಇಲ್ಲಿ ತಪ್ಪಾಗಿದೆ, ಇದನ್ನು ತಿದ್ದಿಕೊಳ್ಳಬೇಕು’ ಎಂದು ಹೇಳುವ ಸಹೃದಯರಾಗಬೇಕು. ಓದದೆಯೇ ತಿರಸ್ಕರಿಸುವ ತೀರ್ಪುಗಾರ ಆಗಬಾರದು. ಹಳೆಯ ಸಾಹಿತ್ಯದ ವೈಭವವನ್ನೇ ಮೆಲುಕು ಹಾಕುತ್ತಾ ಕುಳಿತರೆ, ಕನ್ನಡ ಸಾಹಿತ್ಯವು ಮ್ಯೂಸಿಯಂ ಆಗಿಬಿಡುವ ಅಪಾಯವಿದೆ. ಸಾಹಿತ್ಯವು ಮ್ಯೂಸಿಯಂ ಆಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.