ADVERTISEMENT

ಸಂಗತ: ಮಂಗಳನಲ್ಲಿ ಜೀವಾಂಕುರದ ಭರವಸೆ

ನಿಖರವಾದ ಸಾಕ್ಷ್ಯ ಸಂಗ್ರಹಕ್ಕೆ ನಡೆದಿದೆ ತಯಾರಿ

ಗುರುರಾಜ್ ಎಸ್.ದಾವಣಗೆರೆ
Published 30 ನವೆಂಬರ್ 2020, 19:15 IST
Last Updated 30 ನವೆಂಬರ್ 2020, 19:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳನಲ್ಲಿ ಜೀವಾಂಕುರದ ಭರವಸೆ. ಹೌದು! ಬಹಳ ದಿನಗಳಿಂದಲೂ ಇಂಥದ್ದೊಂದು ಸುದ್ದಿಗಾಗಿ ಕಾಯುತ್ತಿದ್ದ ವಿಜ್ಞಾನಿಗಳೀಗ ಆ ದಿನ ಶೀಘ್ರದಲ್ಲಿ ಬರಲಿದೆ ಎಂದು ರೋಮಾಂಚಿತರಾಗಿದ್ದಾರೆ. ಭೂಮಿಯನ್ನು ಹೊರತುಪಡಿಸಿ ಸೌರಮಂಡಲದ ಇನ್ನೊಂದು ಗ್ರಹದಲ್ಲಿ ಮನುಷ್ಯವಾಸಕ್ಕೆ ಸಾಧ್ಯತೆ ಇದೆ ಎಂದಾದರೆ, ಅದು ಮಂಗಳ ಗ್ರಹದಲ್ಲಿ ಎಂಬ ಮಾತಿಗೆ ಬಲವಾದ ಪುಷ್ಟಿ ದೊರೆತಿದೆ.

ಮಂಗಳನ ಅಂಗಳಕ್ಕೆ ಬಾಹ್ಯಾಕಾಶ ನೌಕೆ ಕಳಿಸಿ, ಅಲ್ಲಿನ ವಾತಾವರಣ, ಮಣ್ಣು, ಕಲ್ಲು, ಮೇಲ್ಮೈಗಳ ಚಿತ್ರ ತರಿಸಿಕೊಂಡು, ಹಲವು ಮಟ್ಟದ ಚರ್ಚೆ– ವಿಶ್ಲೇಷಣೆಗಳು ಶುರುವಾಗಿ ದಶಕಗಳೇ ಕಳೆದಿವೆ. ನಾಸಾ ಮತ್ತು ಯುರೋಪಿನ ಸ್ಪೇಸ್ ಏಜೆನ್ಸಿಗಳು ತಾವು ಉಡಾಯಿಸಿದ ಬಾಹ್ಯಾಕಾಶ ನೌಕೆಗಳ ಮೂಲಕ ಖಚಿತ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನನ್ನೇ ಅಲ್ಲಿಗೆ ಕಳಿಸಿ ನಿಖರವಾದ ಸಾಕ್ಷ್ಯಗಳನ್ನು ಸಂಗ್ರಹಿಸಲು ತಯಾರಿ ನಡೆಸಿವೆ.

ಈ ಮಧ್ಯೆ, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಾರ್ಸ್ ಎಕ್ಸ್‌ಪ್ರೆಸ್ ನೌಕೆ ತನ್ನ ಅತ್ಯಾಧುನಿಕ ರಡಾರ್ ಆದ ‘ಮಾರ್ಸ್ ಅಡ್ವಾನ್ಸ್ಡ್ ರಡಾರ್ ಫಾರ್ ಸಬ್ ಸರ್ಫೇಸ್ ಆ್ಯಂಡ್ ಅಯೊನೊಸ್ಫಿಯರಿಕ್‌ ಸೌಂಡಿಂಗ್’ (MARSIS) ಅನ್ನು ಬಳಸಿ, ಮಂಗಳನ ದಕ್ಷಿಣ ಧ್ರುವದ ಹಿಮಹಾಸುಗಳ ಕೆಳಗಿನ ‘ಅಲ್ಬಿಮಿ ಸ್ಕೊಪುಲಿ’ ಎಂಬ ವಲಯದಲ್ಲಿ 30 ಚದರ ಕಿ.ಮೀ. ವಿಸ್ತೀರ್ಣದ ಒಂದು ಬೃಹತ್ ಉಪ್ಪಿನ ಸರೋವರ ಮತ್ತು ಅದರ ಸುತ್ತಲಿನ ಮೂರು ಚಿಕ್ಕ ನೀರಿನ ತಾಣಗಳ ಇರುವಿಕೆಯನ್ನು ಪತ್ತೆ ಹಚ್ಚಿದೆ. ಇವುಗಳ ಒಟ್ಟು ವಿಸ್ತೀರ್ಣ 75,000 ಚದರ ಕಿ.ಮೀ. ಎಂಬ ಮಾಹಿತಿ ದೊರೆತಿದೆ.

ADVERTISEMENT

29 ರಡಾರ್ ವೀಕ್ಷಣೆಗಳನ್ನಾಧರಿಸಿ 2018ರಲ್ಲಿ ವರದಿ ಪ್ರಕಟಿಸಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿ, ದಕ್ಷಿಣ ಧ್ರುವದ ಒಂದು ವಿಶಾಲ ನೀರಿನ ತಾಣದ ಕುರಿತು ಮಾಹಿತಿ ನೀಡಿತ್ತು. ನಂತರದ ಅವಧಿಯಲ್ಲಿ ಮಾರ್ಸ್ ಎಕ್ಸ್‌ಪ್ರೆಸ್ ನಡೆಸಿದ ಹೆಚ್ಚುವರಿ 129 ವೀಕ್ಷಣೆಗಳ ದತ್ತಾಂಶವನ್ನಾಧರಿಸಿ, ಮೊದಲೇ ಪತ್ತೆಯಾಗಿದ್ದ ಲವಣಯುಕ್ತ ನೀರಿನ ತಾಣದ ಜೊತೆಗೆ ಇನ್ನೂ ಮೂರು ತಾಣಗಳು ಇವೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಅತ್ಯಂತ ಕಡಿಮೆ ಒತ್ತಡದ ಕಾರಣದಿಂದ ಯಾವುದೇ ‘ವಾತಾವರಣ’ವನ್ನು ಹೊಂದಿರದ ಗ್ರಹದಲ್ಲಿ ದ್ರವರೂಪದ ನೀರಿರುವುದು ಅಸಾಧ್ಯ ಎಂದಿರುವ ಇಟಲಿಯ ರೋಮಾ ಟ್ರೆ ವಿಶ್ವವಿದ್ಯಾಲಯದ ಮಹಿಳಾ ವಿಜ್ಞಾನಿ ಎಲೆನಾ ಪೆಟ್ಟಿನೆಲ್ಲಿ, ರಡಾರ್ ನಮಗೆ ಕಳಿಸಿರುವ ಮಾಹಿತಿಯನ್ನು ಹಲವು ಕೋನಗಳಲ್ಲಿ ವಿಶ್ಲೇಷಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.

ರಡಾರ್‌ಗಳ ರೇಡಿಯೊ ಅಲೆಗಳು ವಿವಿಧ ವಸ್ತು, ಮೇಲ್ಮೈಗಳನ್ನು ಅಪ್ಪಳಿಸಿದ ನಂತರ ಪ್ರತಿಫಲನಗೊಂಡು, ತಾವು ಅಪ್ಪಳಿಸಿದ ವಸ್ತು ಭೂಮಿಯೆ, ಶಿಲೆಯೆ, ನೀರೆ, ಪರ್ವತವೆ, ಲೋಹವೆ, ಸಾಗರ ತಳವೆ ಎಂಬ ಖಚಿತ ಮಾಹಿತಿ ನೀಡುತ್ತವೆ. ಇಲ್ಲೂ ಮಂಗಳನ ತಳದ ಹಿಮಹಾಸುಗಳ ಕೆಳಗಿನ ಪದರಗಳ ಭಾಗದಲ್ಲಿನ ತಾಣಗಳನ್ನು ತಲುಪಿ ಹಿಂದಿರುಗಿದ ರಡಾರ್ ಅಲೆಗಳು, ಭೂಮಿಯ ಮೇಲೆ ನೀರಿದ್ದರೆ ಯಾವ ರೀತಿಯ ಪ್ರತಿಫಲನ ನೀಡುತ್ತವೋ ಅದೇ ರೀತಿಯ ಪ್ರತಿಫಲನ ನೀಡಿವೆಯಾದ್ದರಿಂದ, ಮಂಗಳನ ದಕ್ಷಿಣಧ್ರುವದಲ್ಲಿ ನೀರಿದೆ ಎಂದು ಖಚಿತವಾಗಿ ಹೇಳಲಾಗುತ್ತಿದೆ. ಇದೊಂದು ಸಂಕೀರ್ಣ ವ್ಯವಸ್ಥೆ ಎಂದಿರುವ ಎಲೆನಾ, ಈಗ ನೀರಿರುವ ತಾಣದ ಮೇಲ್ಮೈಯನ್ನಷ್ಟೇ ಗುರುತಿಸಿದ್ದೇವೆ, ನೆಲಗುಡುಗಿನ (ಭೂಕಂಪ ಅಳೆಯುವ) ತಂತ್ರಜ್ಞಾನ ಬಳಸಿ ರಡಾರ್ ಪತ್ತೆ ಮಾಡಿರುವ ತಾಣದ ತಳದಲ್ಲೇನಿದೆ ಮತ್ತು ಇಡೀ ಪ್ರದೇಶದ ಆಕಾರ ಹೇಗಿದೆ ಎಂಬುದನ್ನು ಕಂಡುಹಿಡಿಯುವುದು ಬಾಕಿ ಇದ್ದು ನಿಖರ ಅಧ್ಯಯನ ನಡೆಯಬೇಕು ಎಂದಿದ್ದಾರೆ.

ಸಮುದ್ರಗಳಲ್ಲಿರುವ ಉಪ್ಪಿನ ಪ್ರಮಾಣಕ್ಕಿಂತ ಐದು ಪಟ್ಟು ಉಪ್ಪಿನಂಶ ಇದ್ದರೂ ಮಂಗಳನ ಆಳದಲ್ಲಿರುವ ಬಿಸಿ ಅದನ್ನು ಕರಗಿಸಬಲ್ಲದು. ಹಾಗೇನಾದರೂ ಆದರೆ ಅಲ್ಲಿ ಜೀವಾಂಕುರದ ಎಲ್ಲ ಸಾಧ್ಯತೆ ಇದೆ ಮತ್ತು ಅತೀ ಲವಣಾಂಶದ ವಿಷಮ ಪರಿಸ್ಥಿತಿಯಲ್ಲಿ ಭೂಮಿಯ ಮೇಲಿನ ಸಾಗರಗಳಲ್ಲಿ ಬದುಕುವ ಹ್ಯಾಲೊಫೈಲ್‌ಗಳಂತೆ ಮಂಗಳನ ತಳದ ಉಪ್ಪಿನ ಸರೋವರಗಳಲ್ಲೂ ಜೀವಿಗಳಿರಬಹುದು ಎಂಬ ವಾದವೂ ಇದೆ. ರಡಾರ್ ತರಂಗಗಳು ನೀಡಿರುವ ಮಾಹಿತಿಯಂತೆ, ಮಂಗಳನ ಹಿಮಹಾಸಿನ ಒಂದು ಕಿ.ಮೀ. ಆಳದವರೆಗೂ ದ್ರವರೂಪದ ನೀರಿನಂಶ ಸಿಲುಕಿಕೊಂಡಿದೆ ಎನ್ನಲಾಗಿದೆ.

2018ರ ಮಾಹಿತಿಯ ಪ್ರಕಾರ, ಅಲ್ಲಿರುವುದು ಉಪ್ಪಿನ ಕೊಚ್ಚೆಯೇ ಹೊರತು ನೀರಲ್ಲ ಎಂದಿರುವ ಪರ್‌ಡ್ಯೂ ವಿಶ್ವವಿದ್ಯಾಲಯದ ಗ್ರಹಭೌತ ವಿಜ್ಞಾನಿ ಮೈಡ್ ಸೋರಿ, ಖಚಿತ ಅಧ್ಯಯನ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ನಾಸಾದ ಮಾರ್ಸ್ ಶ್ಯಾಲೊ ರಡಾರ್ ಸೌಂಡರ್ (SHARAD) ನೀಡಿರುವ ಮಾಹಿತಿಯಂತೆ, ಅಲ್ಲಿನ ಉಪ್ಪನ್ನು ಕರಗಿಸುವಷ್ಟು ಬಿಸಿ ಮಂಗಳನಲ್ಲಿದೆಯೇ ಎಂಬ ಬಗ್ಗೆ ಅನುಮಾನಗಳಿವೆ ಎಂದಿರುವ ಅರಿಜೋನಾ ವಿಶ್ವವಿದ್ಯಾಲಯದ ಜಾಡ್ ಹೋಲ್ಟ್, ಚೀನಾದ ಟಿಯನ್‍ವೆನ್-1, ಫೆಬ್ರುವರಿಯಲ್ಲಿ ಮಂಗಳನ ಕಕ್ಷೆ ಸೇರಲಿದೆ, ಅದು ಮಾರ್ಸಿಸ್ ಮತ್ತು ಶರದ್ ನೌಕೆಗಳಿಗಿಂತ ಅತ್ಯಾಧುನಿಕ ಪ್ರಯೋಗ ಪರಿಕರ ಹೊಂದಿದ್ದು, ದೊರೆತಿರುವ ಮಾಹಿತಿಯನ್ನು ದೃಢಪಡಿಸಿ, ನಮಗಿರುವ ಅನುಮಾನಗಳನ್ನು ಬಗೆಹರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.