ADVERTISEMENT

ಸಂಗತ | ಹಲ್ಲಿ: ಏಕೀ ಸಮೂಹ ಸನ್ನಿ?

ಅಪಾಯಕಾರಿ ಅಲ್ಲದ ಈ ಜೀವಿಗಳ ಬಗ್ಗೆ ವಿದ್ಯಾವಂತರಲ್ಲೇ ಮೂಢನಂಬಿಕೆ ಹೆಚ್ಚು!

ಡಾ.ಮುರಳೀಧರ ಕಿರಣಕೆರೆ
Published 5 ಜನವರಿ 2022, 19:31 IST
Last Updated 5 ಜನವರಿ 2022, 19:31 IST
sangata 06-01-22
sangata 06-01-22   

ಹಳ್ಳಿಯ ಒಬ್ಬ ಮಹಿಳೆ ಗಾಬರಿಯಿಂದ ಕರೆ ಮಾಡಿದ್ದಳು. ‘ಜಾನುವಾರು ಮುರದ ಡಬ್ರಿಲಿ ಸತ್ತ ಹಲ್ಲಿ ಸಿಕ್ತು ಸ್ಸಾರ್. ದನ, ಕರುಗೆಲ್ಲಾ ತಿನ್ನಕ್ಕೆ ಕೊಟ್ಟಾಗಿತ್ತು. ಏನಾದ್ರೂ ತೊಂದ್ರೆ ಆಗುತ್ತೇನೋ ಅಂತ ತುಂಬಾ ಹೆದ್ರಿಕೆ ಆಗ್ತಿದೆ. ಇಂಜಕ್ಷನ್ ಮಾಡ್ತೀರಾ ಅಂತ ಕೇಳಕ್ಕೆ ಫೋನು ಮಾಡ್ದೆ’ ತುಸು ನಡುಕದಿಂದಲೇ ವಿಷಯ ಅರುಹಿದ್ದಳು.

‘ಇಲ್ಲಮ್ಮ ಏನೂ ಆಗಲ್ಲ. ಹಲ್ಲಿ ವಿಷ ಅಲ್ಲ. ಮಂಡೆ ಕೆಡಿಸ್ಕೋಬೇಡಿ’ ಎನ್ನುತ್ತಾ ಧೈರ್ಯ ಹೇಳಿದರೂ ಆಕೆಗೆ ನಂಬಿಕೆ ಬಂದಿರಲಿಲ್ಲ.

‘ಆಹಾರಕ್ಕೆ ಹಲ್ಲಿ ಬಿದ್ರೆ ಕೆಟ್ಟ ವಿಷ ಆಗುತ್ತೆ ಅಂತಾರೆ ಎಲ್ರೂ. ಒಂದು ದನ ಬಾಣಂತಿ ಬೇರೆ. ನಾವೂ ಹಾಲು ಕುಡಿತೀವಿ. ಅದಕ್ಕೆ ಒಂಥರಾ ಹೆದ್ರಿಕೆ’. ಹಲ್ಲಿ ವಿಷವೆಂದು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದವಳಿಗೆ ಮನವರಿಕೆ ಮಾಡಿಸಲು ನಾನೂ ಹೆಣಗಾಡಬೇಕಾಯಿತು. ‘ನಿಮ್ಮನೆ ಬೆಕ್ಕು ಹಲ್ಲಿ ತಿನ್ನಲ್ವಾ? ಅದು ವಿಷಕಾರಿಯಾಗಿದ್ದರೆ ಬೆಕ್ಕಿಗೂ ಅಪಾಯ ಆಗ್ಲೇಬೇಕಿತ್ತಲ್ವಾ? ಇದೆಲ್ಲಾ ತಪ್ಪುಗ್ರಹಿಕೆ ಅಷ್ಟೆ’ ಅವಳಿಗೆ ತಿಳಿಸಿ ಹೇಳಲು ನಾನೂ ಬಹಳಷ್ಟು ಸಮಯ ವ್ಯಯಿಸಬೇಕಾಯಿತು.

ADVERTISEMENT

ಹೌದು, ಹಲ್ಲಿ ವಿಷಪೂರಿತ ಜಂತು ಎಂಬುದೊಂದು ಸಾರ್ವತ್ರಿಕ ನಂಬಿಕೆ. ಅದರಲ್ಲೂ ಆಹಾರ ಪದಾರ್ಥಗಳಿಗೆ ಹಲ್ಲಿ ಬಿದ್ದರೆ ವಿಷ ಎಂಬ ಭಾವನೆಯಂತೂ ವ್ಯಾಪಕವಾಗಿದೆ. ಇದು ಕೇವಲ ಮಿಥ್ಯೆಯಷ್ಟೆ. ಮನೆಯ ಗೋಡೆ, ಮಾಳಿಗೆಯ ಸಂದಿ ಮೂಲೆಗಳಲ್ಲಿ ಹರಿದಾಡುವ ಈ ಪುಟ್ಟ ಜಂತುಗಳು ಖಂಡಿತಾ ವಿಷಕಾರಿಗಳಲ್ಲ. ಸರೀಸೃಪಗಳ ಸಮೂಹಕ್ಕೆ ಸೇರಿದ ಈ ನಿರುಪದ್ರವಿಗಳಿಂದ ಜನ, ಜಾನುವಾರುಗಳಿಗೆ ಯಾವುದೇ ಅಪಾಯವಿಲ್ಲ.

ಅದ್ಯಾಕೊ ಮೊದಲಿನಿಂದಲೂ ಮಾನವರಿಗೆ ಹಲ್ಲಿಗಳ ಬಗ್ಗೆ ಒಂಥರಾ ಅಸಹ್ಯಮಿಶ್ರಿತ ಭಯ. ಚಿಕ್ಕ ಮಕ್ಕಳು ಹೋಗಲಿ ದೊಡ್ಡವರೂ ಇದಕ್ಕೆ ಹೊರತಲ್ಲ. ಹಾವು, ಹರಣೆ, ಹಲ್ಲಿಗಳಂತಹ ಸರೀಸೃಪಗಳ ಕುರಿತಾದ ಈ ಭಯವೇ ಹರ್ಪಿಟೊಫೋಬಿಯ. ಎಂಬಿಎ ಮಾಡುತ್ತಿರುವ ನನ್ನ ಮಗ ಕೋಣೆಯೊಳಗೆ ಅಕಸ್ಮಾತ್ ಹಲ್ಲಿ ಕಂಡರೆ ಹೊರ ಓಡಿಸುವಂತೆ ದುಂಬಾಲು ಬೀಳುವುದೂ ಇದೇ ಫೋಬಿಯಾದಿಂದ!

ಶಾಲಾ ಮಕ್ಕಳ ಬಿಸಿಯೂಟ, ಹಾಸ್ಟೆಲ್ ಅಡುಗೆಯಲ್ಲಿ ಹಲ್ಲಿ ಸಿಗುವುದು, ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರುವುದು ಈಗೊಂಥರಾ ಸಾಮಾನ್ಯ ಸಂಗತಿ. ಹಲ್ಲಿ ಬಿದ್ದ ಆಹಾರ ತಿಂದ ಮಕ್ಕಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡು ಒಮ್ಮೆಲೇ ನಿತ್ರಾಣರಾದಾಗ ತುರ್ತು ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಹಾಗಂತ ಈ ಅನಾರೋಗ್ಯಕ್ಕೆ ಹಲ್ಲಿ ನೇರವಾಗಿ ಕಾರಣವಲ್ಲ. ಆದರೆ ಹಲ್ಲಿ ಬಿದ್ದ ಆಹಾರ ತಿಂದ ವಿಷಯ ಗೊತ್ತಾಗುತ್ತಿದ್ದಂತೆ ಸೇವಿಸಿದವರಲ್ಲಿ ಮಾನಸಿಕ ಅಸ್ವಸ್ಥತೆ ಕಾಣಿಸುತ್ತದೆ. ಈ ಜಂತು ಬಗೆಗಿನ ಅಸಹ್ಯ ಭಾವನೆ, ಭಯ, ವಿಷಮಯವೆಂಬ ಭೀತಿಯ ಕಾರಣದಿಂದಲೇ ಹೊಟ್ಟೆ ತೊಳೆಸುವುದು, ವಾಕರಿಕೆ, ವಾಂತಿ, ಭೇದಿಯಾಗುವುದು. ಇದು ಒಮ್ಮೆಲೇ ಸಮೂಹ ಸನ್ನಿಯ ರೂಪ ಪಡೆದು ದೊಡ್ಡ ಸಂಖ್ಯೆಯ ಮಕ್ಕಳು ಪೀಡಿತರಾಗುವರು. ಒಂದು ವೇಳೆ ಆಹಾರಕ್ಕೆ ಹಲ್ಲಿ ಬಿದ್ದದ್ದು ಗೊತ್ತಾಗದಿದ್ದರೆ ಇಂತಹ ಲಕ್ಷಣಗಳು ಕಾಣಿಸುವ ಸಂಭಾವ್ಯತೆ ತುಂಬಾ ಕಮ್ಮಿ.

ವಾಸ್ತವವಾಗಿ ಕೆಲವು ವನ್ಯವಾಸಿ ಪ್ರಭೇದಗಳನ್ನು ಹೊರತುಪಡಿಸಿದರೆ ಮಾನವ ವಸತಿ ಪ್ರದೇಶದಲ್ಲಿ ಕಾಣಸಿಗುವ ಹಲ್ಲಿಗಳು ನಿರಪಾಯಕಾರಿ ಜಂತುಗಳು. ಮನೆಯಲ್ಲಿನ ನೊಣ, ಸೊಳ್ಳೆ, ಇರುವೆ, ಜೇಡ, ಜಿರಲೆಗಳನ್ನು ತಿಂದು ಬದುಕುವ ಈ ನಿಶಾಚರಿಗಳ ಕೀಟ ನಿಯಂತ್ರಣದಲ್ಲಿನ ಕೊಡುಗೆ ದೊಡ್ಡದು. ಹಲ್ಲಿ ವಿಷಕಾರಿಯಲ್ಲದಿದ್ದರೂ ಅದರ ದೇಹದಲ್ಲಿನ ರೋಗಾಣುಗಳ ಸಂಪರ್ಕದಿಂದ ನಂಜಾಗಬಹುದು. ಹಲ್ಲಿಗಳ ಶರೀರದ ಸಾಮಾನ್ಯ ವಾಸಿಗಳಾದ ಸಾಲ್ಮೊನೆಲ್ಲಾ, ಇ-ಕೋಲೈಯಂತಹ ಬ್ಯಾಕ್ಟೀರಿಯಾಗಳು
ಮಾನವನ ದೇಹ ಸೇರಿದಾಗ ಟೈಫಾಯಿಡ್‍ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ ಬಿಸಿ ಆಹಾರದಲ್ಲಿ ರೋಗಾಣುಗಳು ನಾಶವಾಗುವ ಸಂಭವವೇ ಜಾಸ್ತಿ.

ಹಲ್ಲಿಯ ಹಿಕ್ಕೆಯಲ್ಲಿನ ಯೂರಿಕ್ ಆಮ್ಲದ ಹರಳು, ರೋಗಾಣುಗಳು, ತಿನ್ನುವ ಆಹಾರ, ಹಾಲು, ಕುಡಿಯುವ ನೀರಿಗೆ ಸೇರಿ ಕಲುಷಿತಗೊಳಿಸಿದಾಗಲೂ
ಅನಾರೋಗ್ಯ ಉಂಟಾಗಬಹುದು. ಹಾಗಾಗಿ ಸ್ವಚ್ಛತೆಯ ಜೊತೆಯಲ್ಲಿ ಆಹಾರ ಪದಾರ್ಥಗಳನ್ನು
ಮುಚ್ಚಿಡುವುದು, ಹಲ್ಲಿ ಮೈಮೇಲೆ ಬಿದ್ದರೆ ಆ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಅಕಸ್ಮಾತ್ ಕಚ್ಚಿದರೆ ಸೂಕ್ತ ಮದ್ದು ತೆಗೆದುಕೊಳ್ಳುವುದು ಖಂಡಿತಾ ಅಗತ್ಯ.

ಹಲ್ಲಿಯ ಬಗ್ಗೆ ಎಷ್ಟೇ ಅಸಹ್ಯ ಭಾವನೆಯಿದ್ದರೂ ನಮ್ಮ ದೇಶ ಸೇರಿದಂತೆ ವಿಶ್ವದ ಹಲವೆಡೆ ಇದು ದೇವರ ಅವತಾರ, ವಾಹನವೆಂಬ ನಂಬಿಕೆಯಿಂದ ಪೂಜೆಯೂ ಸಲ್ಲುತ್ತದೆ! ಹಲ್ಲಿ ಲೊಚಗುಟ್ಟುವ ದಿಕ್ಕು, ಸಮಯ, ಮೈಮೇಲೆ ಬಿದ್ದರೆ ಅದು ಯಾವ ಭಾಗ, ಯಾವ ವೇಳೆ ಎಂಬುದರ ಆಧಾರದ ಮೇಲೆ ಶುಭಾಶುಭಗಳನ್ನು ಹೇಳುವ ಹಲ್ಲಿ ಪಂಚಾಂಗ (ಗೌಳಿಶಾಸ್ತ್ರ) ನಂಬುವವರಲ್ಲಿ ವಿದ್ಯಾವಂತರ ಸಂಖ್ಯೆಯೇ ದೊಡ್ಡದು!

ಈ ಜೀವಿಗಳ ಕುರಿತಾದ ಜನರ ಅಜ್ಞಾನ, ತಪ್ಪು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಅಪಶಕುನ, ದೋಷ ಪರಿಹಾರದ ನೆಪದಲ್ಲಿ ಸುಲಿಗೆ ಮಾಡುವ, ಮತ್ತಷ್ಟು ಮೌಢ್ಯ ಬಿತ್ತುವ ಕಾರ್ಯ ವ್ಯವಸ್ಥಿತ
ವಾಗಿ ನಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.