ADVERTISEMENT

ಸಂಗತ | ಪತ್ನಿಗೂ ಸಿಗಲಿ ಸಾಧನೆಯ ಗೌರವ

ಸಾಧಕನ ಪತ್ನಿಯ ಶ್ರಮದ ಬಗ್ಗೆಯೂ ಉಲ್ಲೇಖಿಸುವ ಸಂಸ್ಕೃತಿ ರೂಪುಗೊಳ್ಳಬೇಕು

ಮಲ್ಲಿಕಾರ್ಜುನ ಹೆಗ್ಗಳಗಿ
Published 29 ಜನವರಿ 2025, 23:30 IST
Last Updated 29 ಜನವರಿ 2025, 23:30 IST
   

‘ಪೋರಬಂದರ್‌ ನಗರಕ್ಕೆ ಹೋದ ಎಲ್ಲ ಪ್ರವಾಸಿಗರು, ದೇಶ–ವಿದೇಶಗಳ ಗಣ್ಯರು ಗಾಂಧೀಜಿ ಜನಿಸಿದ ಮನೆ ನೋಡಲು ಆಸಕ್ತಿಯಿಂದ ಭೇಟಿ ನೀಡುತ್ತಾರೆ. ಆದರೆ ಅದೇ ನಗರದ ಇನ್ನೊಂದು ಮಗ್ಗುಲಲ್ಲಿರುವ ಕಸ್ತೂರ ಬಾ ಜನಿಸಿದ ಮನೆ ನೋಡಲು ಬೆರಳೆಣಿಕೆಯಷ್ಟು ಜನರೂ ಹೋಗುವುದಿಲ್ಲ. ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಎರಡೂ ಮನೆಗಳ ರಕ್ಷಣೆ ಮತ್ತು ನಿರ್ವಹಣೆ ಕಾರ್ಯವನ್ನು ವಹಿಸಲಾಗಿದೆ. ವಿಶೇಷ ದಿನಗಳಲ್ಲಿಯೂ ಬಾ ಅವರ ಮನೆಗೆ ಗಣ್ಯರು ಬರುವುದಿಲ್ಲ. ಚರಿತ್ರೆಯಲ್ಲಿ ಪುರುಷರು ಮಾತ್ರ ಕಾಣುತ್ತಾರೆ. ಅವರ ಪತ್ನಿಯರ ನೆರಳು ಕೂಡ ಕಾಣುವುದಿಲ್ಲ’ ಎಂಬ ನೋವಿನ ಮಾತನ್ನು ಲೇಖಕಿ ಡಾ. ಎಚ್.ಎಸ್.ಅನುಪಮಾ ತಮ್ಮ ‘ನಾನು... ಕಸ್ತೂರ್’ ಕೃತಿಯಲ್ಲಿ ದಾಖಲಿಸಿದ್ದಾರೆ.

ಈಚೆಗೆ ಗೌರವ ಡಾಕ್ಟರೇಟ್ ಪಡೆದ ಹಿರಿಯ ವೈದ್ಯರೊಬ್ಬರ ಸನ್ಮಾನ ಕಾರ್ಯಕ್ರಮಕ್ಕೆ ಹೋಗಿದ್ದೆ. ವೈದ್ಯರನ್ನು ಅಭಿಮಾನಿಗಳು ಸನ್ಮಾನಿಸಿದರು. ಹಲವು ಸಂಘ– ಸಂಸ್ಥೆಗಳೂ ಸನ್ಮಾನಿಸಿದವು. ನಂತರ ಮಹಿಳೆಯರ ದೊಡ್ಡ ಗುಂಪೊಂದು ವೇದಿಕೆಗೆ ಬಂದು, ‘ವೈದ್ಯರ ಪತ್ನಿಯನ್ನೂ ನಾವು ಹೆಮ್ಮೆಯಿಂದ ಸನ್ಮಾನಿಸುತ್ತೇವೆ’ ಎಂದು ಹೇಳಿ ಇಬ್ಬರನ್ನೂ ಜೊತೆಯಾಗಿ ಸನ್ಮಾನಿಸಿತು.

ಪುರುಷರು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಕ್ರಿಯಾಶೀಲರಾಗಿ, ನೆಮ್ಮದಿಯಿಂದ ಕೆಲಸ ಮಾಡುವುದಕ್ಕೆ ಅವರಿಗೆ ಬೆನ್ನೆಲುಬಾಗಿ ಅವರ ಪತ್ನಿ ನಿಂತಿರುತ್ತಾರೆ. ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ– ಪೋಷಣೆ, ಹಿರಿಯರ ರಕ್ಷಣೆಯಂತಹ ಕಠಿಣ ಮತ್ತು ಜವಾಬ್ದಾರಿಯುತ ಕೆಲಸಗಳನ್ನು ಪತ್ನಿ ನಿರ್ವಹಿಸುತ್ತಾಳೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳನ್ನು ಗೃಹಿಣಿಯರೇ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಪತಿಯ ಸಾಧನೆಯ ಹಿಂದೆ ಪತ್ನಿಯ ದುಡಿಮೆಯೂ ಇರುತ್ತದೆ. ಆದ್ದರಿಂದ ಸಭೆ, ಸನ್ಮಾನ ಸಮಾರಂಭಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಧಕನ ಜೊತೆಗೆ ಆತನ ಪತ್ನಿಗೂ ಸೂಕ್ತ ಗೌರವ ಸಲ್ಲಬೇಕು. ಇದರಿಂದ ಆಕೆಗೆ ನ್ಯಾಯ ಒದಗಿಸಿದಂತೆ ಆಗುತ್ತದೆ. ಸಾಧಕನೊಂದಿಗೆ ಆತನ ಪತ್ನಿಯನ್ನೂ ಸನ್ಮಾನಿಸುವ, ಆಕೆಯ ಶ್ರಮದ ಬಗ್ಗೆ ಉಲ್ಲೇಖಿಸುವ ಸಂಸ್ಕೃತಿ ರೂಪುಗೊಳ್ಳಬೇಕು. ಇದರಿಂದ ಸಮಾನತೆಯನ್ನು ಗಟ್ಟಿಗೊಳಿಸಲು ನೆರವಾಗುತ್ತದೆ ಎಂಬುದನ್ನು ಮರೆಯಬಾರದು.

ADVERTISEMENT

‘ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರು ಇರುತ್ತಾರೆ, ಆದರೆ ಕಾಣಿಸುವುದಿಲ್ಲ, ಅಂಚಿಗೆ ತಳ್ಳಲ್ಪ ಟ್ಟಿರುತ್ತಾರೆ’ ಎಂದು ನಿಯತಕಾಲಿಕವೊಂದರಲ್ಲಿ ಕೆಲ ದಿನಗಳ ಹಿಂದೆ ಓದಿದ್ದು ಗಮನಾರ್ಹ. ‘ಮಹಿಳೆಯರೆಲ್ಲ ಶೋಷಿತರು, ಮಹಿಳೆಯರೆಲ್ಲರೂ ದಲಿತರೇ’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಿದ್ದರು. ಅಂಬೇಡ್ಕರ್ ಅವರ ಮೊದಲ ಪತ್ನಿ ರಮಾಬಾಯಿ ಅವರ ತ್ಯಾಗ ಬಹಳ ದೊಡ್ಡದು. ಹಾಗೆಯೇ ಅವರ ಎರಡನೇ ಪತ್ನಿ ಸವಿತಾ ಅವರ ತ್ಯಾಗವೂ ಅಷ್ಟೇ ದೊಡ್ಡದು. ಅಂಬೇಡ್ಕರ್ ಅವರು ಇಬ್ಬರಿಗೂ ತಮ್ಮ ಒಂದೊಂದು ಪುಸ್ತಕವನ್ನು ಅರ್ಪಿಸಿ ಕೃತಜ್ಞತೆ ತಿಳಿಸಿದ್ದಾರೆ. ಇಬ್ಬರನ್ನೂ ಸಮಾನ ಗೌರವದಿಂದ ಕಂಡಿದ್ದಾರೆ. ಅಂಬೇಡ್ಕರ್ ಅವರ ಜನ್ಮದಿನ ಹಾಗೂ ಸ್ಮರಣೀಯ ಕಾರ್ಯಕ್ರಮಗಳಲ್ಲಿ ರಮಾಬಾಯಿ ಹಾಗೂ ಸವಿತಾ ಅವರನ್ನೂ ಸ್ಮರಿಸುವ ಕೆಲಸ ನಡೆಯಬೇಕು.

‘ನಾನು ಹೆಣ್ಣಾಗಬೇಕಿತ್ತು’ ಎಂದು ಗಾಂಧೀಜಿ ಆಗಾಗ ಹೇಳುತ್ತಿದ್ದರು. ಅವರಿಗೆ ಮಹಿಳೆಯರ ಶಕ್ತಿ, ಸಾಮರ್ಥ್ಯ, ತ್ಯಾಗ ಮನೋಭಾವದ ಪರಿಚಯವಿತ್ತು. ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಹಾಗೂ ಅವರ ಸಾಮಾಜಿಕ ಕಾರ್ಯಗಳನ್ನು ಬೆಂಬಲಿಸಿ ಸ್ವದೇಶಿ ಮಹಿಳೆಯರು ಮಾತ್ರವಲ್ಲ ವಿದೇಶಿ ಮಹಿಳೆಯರ ದೊಡ್ಡ ದಂಡೇ ಹರಿದುಬಂದಿತ್ತು. ಮಹಿಳೆಯರು ಮುಂದಿದ್ದರೆ ಯಶಸ್ಸು ಖಂಡಿತ ಎನ್ನುವುದು ಅವರ ಭಾವನೆಯಾಗಿತ್ತು.

ಮಹಿಳೆಯರಿಗೆ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ಶೇ 33ರಷ್ಟು ಮೀಸಲಾತಿ ದೊರೆತಿದೆ. ಆದರೆ ಅವರಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಅನೇಕ ಕಡೆ ಪತಿಯ ಕಾರಭಾರವೇ ನಡೆಯುತ್ತದೆ.

‘ನಾನೊಬ್ಬನ ಪತ್ನಿ. ಮೂರು ಮಕ್ಕಳ ತಾಯಿ. ಇನ್ನೂ ನನ್ನ ಸೀರೆ, ಕುಪ್ಪಸ ಬಟ್ಟು, ಬೈತಲೆ ಎಲ್ಲ ನನ್ನ ಅತ್ತೆ, ಮಾವಂದಿರ ಮರ್ಜಿ. ನನ್ನದೇ ಮಕ್ಕಳ ಚಪ್ಪಲಿ ಚಾಕಲೇಟು, ಸ್ಲೇಟುಗಳೂ ನನ್ನ ಪರಿಧಿ ಮೀರಿದ ವಿಷಯಗಳು. ನನ್ನವರದು ಅಪ್ಪ, ಅಮ್ಮನ ಮಾತು ಮೀರದ ಭಕ್ತಿ... ಹಾಗಾಗಿ ಇದ್ದಲ್ಲೇ ಇರುತ್ತೇನೆ, ಹಾಗೇ ಕೆಸರೊಳಗೆ ಮುಳುಗುತ್ತಾ ಕೊನೆಗೊಮ್ಮೆ ಇಲ್ಲವಾಗುತ್ತೇನೆ’– ಇವು, ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರ ‘ನಾನು’ ಕವಿತೆಯ ಸಾಲುಗಳು. ಕವಿತೆಯು ಹೆಂಡತಿಯ ಸ್ಥಿತಿಗತಿಯನ್ನು ವ್ಯಂಗ್ಯವಾಗಿ ಮನಕ್ಕೆ ತಟ್ಟುವಂತೆ ಕಟ್ಟಿಕೊಡುತ್ತದೆ. ಆಕೆಗೆ ಮನೆಯಲ್ಲಿಯೂ ಸ್ವಂತದ ವ್ಯಕ್ತಿತ್ವ ಇಲ್ಲ ಎಂಬುದನ್ನು ಹೇಳುತ್ತದೆ.

ಪುರುಷನ ನೈತಿಕತೆಯನ್ನು ಕಾಪಾಡುವಲ್ಲಿಯೂ ಪತ್ನಿಯ ಪಾತ್ರ ಬಹಳ ದೊಡ್ಡದಿದೆ. ಗಂಡ ವ್ಯಸನಿ, ಭ್ರಷ್ಟ, ಕೆಲಸಗೇಡಿ ಆಗದಂತೆ ಜಾಗ್ರತೆ ವಹಿಸುತ್ತಾಳೆ. ಹಳ್ಳಿಗಳಲ್ಲಿ ಬಹಳಷ್ಟು ಗಂಡಸರು ಕುಟುಂಬ ನಿರ್ವಹಣೆಗೆ ಹಣ ನೀಡುವುದಿಲ್ಲ. ಎಮ್ಮೆ, ಹಸುಗಳನ್ನು ಸಾಕಿ, ಹಾಲು, ಮೊಸರು ಮಾರಿ ಮನೆ ನಡೆಸುತ್ತಾಳೆ. ಗಂಡ ಉಚಿತವಾಗಿ ಉಂಡು ಕಟ್ಟೆಯ ಮೇಲೆ ಕುಳಿತು ಕಾಲ ಕಳೆಯುತ್ತಾನೆ. ವಿಪರ್ಯಾಸ ಎಂದರೆ ಯಜಮಾನಿಕೆ ಅವನದೇ ಆಗಿರುತ್ತದೆ.

ಪತ್ನಿಗೂ ಪತಿಯಷ್ಟೇ ಸಮಾನ ಸ್ಥಾನಮಾನ ಸಿಗಬೇಕು. ಮಹಿಳಾಮಂಡಲಗಳು, ಮಹಿಳಾ ಸಂಘಟನೆಗಳು ಈ ದಿಸೆಯಲ್ಲಿ ಜನರಲ್ಲಿ ಒಲವು ಮೂಡಿಸುವ, ಗಮನ ಸೆಳೆಯುವ ಕೆಲಸವನ್ನು ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.