ADVERTISEMENT

#MeToo: ಗಡಿ ವಿಸ್ತರಿಸಿಕೊಳ್ಳಲಿ

ತಾರತಮ್ಯದ ರೋಗದಿಂದ ಬಳಲುತ್ತಿರುವ ಈ ಸಮಾಜದ ಪ್ರತಿಯೊಂದು ಸಮಸ್ಯೆಯನ್ನೂ ನಾವು ಎಲ್ಲಾ ಅಸಮಾನತೆಗಳ ಹಿನ್ನೆಲೆಯಲ್ಲೇ ಗ್ರಹಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:00 IST
Last Updated 25 ಅಕ್ಟೋಬರ್ 2018, 20:00 IST
   

ಸುಶಿಕ್ಷಿತ, ಆಧುನಿಕ, ಪ್ರಸಿದ್ಧ ಮಹಿಳೆಯರು ಕೂಡ ಈ ಶೋಷಕ- ಶೋಷಿತ ಸಮಾಜದ ಭಾಗವಾಗಿ, ಲೈಂಗಿಕ ದೌರ್ಜನ್ಯಗಳಿಂದ ಹೊರತಾಗಿಲ್ಲ ಎಂಬುದು ನಿಜ. ಅಮೆರಿಕದಲ್ಲಿ ಸದ್ದು ಮಾಡಿದ್ದ #Me Too ಅಭಿಯಾನ ಈಗ ಭಾರತದಲ್ಲಿಯೂ ಪ್ರಚಾರದಲ್ಲಿದೆ. ಈ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯಗಳು ದಾಖಲಾಗುವುದನ್ನು ಖಂಡಿತ ಸ್ವಾಗತಿಸೋಣ. ಅವರ ಸಂಕಟಗಳನ್ನು ಸಹಾನುಭೂತಿಯಿಂದ ನೋಡೋಣ. ಆದರೆ, ಸೆಲೆಬ್ರಿಟಿಗಳ ಈ ಅಭಿಯಾನ ಕೆಲವು ಮಿತಿಗಳನ್ನೂ ಹೊಂದಿದೆ ಎಂಬುದರ ಬಗ್ಗೆಯೂ ತಿಳಿದಿರೋಣ.

ಗಂಡು- ಹೆಣ್ಣು, ಮೇಲು- ಕೀಳು, ಬಡವ- ಶ್ರೀಮಂತ, ಅಕ್ಷರಸ್ಥ- ನಿರಕ್ಷರಿ, ಆಧುನಿಕ- ಸಂಪ್ರದಾಯಸ್ಥ... ಹೀಗೆ ಹತ್ತು ಹಲವು ಜಾತಿ, ಶ್ರೇಣಿ, ವರ್ಗ, ಧರ್ಮಗಳ ಕೂಪವಾಗಿರುವ ಭಾರತವೆಂಬ ಈ ಅತಿ ಸಂಕೀರ್ಣ ದೇಶದಲ್ಲಿ ಇಂಥದ್ದೊಂದು ಅಭಿಯಾನವನ್ನು ಗ್ರಹಿಸಬೇಕಾದದ್ದು ಹೇಗೆ?

ಇರುವೆಯನ್ನು ಆನೆಯಂತೆಯೂ, ಆನೆಯನ್ನು ಇರುವೆಯಂತೆಯೂ ಬಿಂಬಿಸಬಲ್ಲ ಅತಿರಂಜಿತ ಸುದ್ದಿ ಮಾಧ್ಯಮಗಳು ಮುಖ್ಯ- ಅಮುಖ್ಯ ವಿಷಯಗಳೆಲ್ಲವನ್ನೂ ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ಇಂಥದ್ದೊಂದು ಅಭಿಯಾನವನ್ನು ನಾವು ನೋಡಬೇಕಾದದ್ದು ಹೇಗೆ ಎಂಬುದನ್ನು ಯೋಚಿಸಬೇಕಿದೆ. ಸೆಲೆಬ್ರಿಟಿಗಳ ವೈಯಕ್ತಿಕ ವಿಷಯಗಳನ್ನು, ಅದರಲ್ಲೂ ಅವರ ಲೈಂಗಿಕ ಸಂಬಂಧಗಳು ಅಥವಾ ಲೈಂಗಿಕ ಹಗರಣಗಳನ್ನು ಕುರಿತ ಸಣ್ಣ ವಿವರವನ್ನೂ ಮೀಟರುಗಟ್ಟಲೆ ಎಳೆದೆಳೆದು, ದಿನಗಟ್ಟಲೆ, ವಾರಗಟ್ಟಲೆ ಸುದ್ದಿ ಚಪ್ಪರಿಸುವ ಮೀಡಿಯಾಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತವೆ ಎಂಬುದು ಸ್ಪಷ್ಟವಾಗಿ ಅರ್ಥವಾಗಬಲ್ಲ ವಿಚಾರ.

ADVERTISEMENT

ನಿರ್ದಿಷ್ಟ ರಾಜಕೀಯ ಪಕ್ಷಗಳ, ಸಿದ್ಧಾಂತಗಳ, ಲಾಬಿಗಳ ಮುಖವಾಣಿಗಳಾಗಿ ಕೆಲಸ ಮಾಡುವ ಇಂಥ ಮೀಡಿಯಾಗಳಿಗೆ ಸಾಮಾನ್ಯ ಜನರ ಗೋಳನ್ನು ಫೋಕಸ್ ಮಾಡುವತ್ತ ಯಾವ ಆಸಕ್ತಿಯೂ ಇರುವುದಿಲ್ಲ. ಇಂಥ ನಿರ್ದಿಷ್ಟ ಲಾಬಿಗಳ ಹಿಂದೆ ಕೆಲಸ ಮಾಡುತ್ತಿರುವ ಮನಸುಗಳು ಎಂಥವು ಎಂಬುದನ್ನೂ ನಾವು ಗಮನಿಸಬೇಕು. ದೆಹಲಿಯ ನಿರ್ಭಯಾ ಪ್ರಕರಣಕ್ಕೆ ಮಿಡಿಯುವ ಮಾಧ್ಯಮಗಳು, ವಿಜಯಪುರದ ದಲಿತ ಹೆಣ್ಣುಮಗಳು ಅಥವಾ ಖೈರ್ಲಾಂಜಿಯಂಥ ಪ್ರಕರಣಗಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿಬಿಡುತ್ತವೆ. ಇಂಥ ನಿಯೋಜಿತ ತಾರತಮ್ಯಗಳ ಹಿನ್ನೆಲೆಯಲ್ಲಿ ಈ #ಮೀ ಟೂ ಅಭಿಯಾನ ಅತ್ಯಂತ ಸೀಮಿತ ವಲಯದ್ದು ಎಂಬುದು ಢಾಳಾಗಿ ರಾಚುತ್ತಿರುವ ಸತ್ಯ.

ಒಂದೆರಡು ಪರ್ಸೆಂಟ್ ಇರಬಹುದಾದ ಈ ದನಿಗಳು, ಈ ನೆಲದ, ಉಳಿದ ಶೇ 99ರಷ್ಟು ಶೋಷಿತ ಮಹಿಳೆಯರ ಪ್ರಾತಿನಿಧಿಕ ದನಿಗಳಲ್ಲ ಎಂಬುದನ್ನೂ ಗಮನಿಸಬೇಕು. ಹೀಗಿರುವಾಗ, ಇದನ್ನೇ ದೊಡ್ಡಮಟ್ಟದ ಕ್ರಾಂತಿ ಎಂಬಂತೆ ಬಿಂಬಿಸುವ ಮಾಧ್ಯಮಗಳು ಹಾಗೂ ಇದೇ ಆತ್ಯಂತಿಕ ಸತ್ಯವೆಂಬಂತೆ ಉದಾಹರಿಸುವ ಸ್ತ್ರೀವಾದಿಗಳು ನಿಜಕ್ಕೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಈಗ ಚಾಲ್ತಿಯಲ್ಲಿರುವ ‘ಸ್ತ್ರೀವಾದ’ ಮೆಟ್ರೊ ಕೇಂದ್ರಿತವಾದುದು ಎಂಬ ಅಭಿಪ್ರಾಯ ಮತ್ತಷ್ಟು ಗಟ್ಟಿಗೊಳ್ಳತೊಡಗುತ್ತದೆ.

ಆಧುನಿಕತೆಯ ಗಂಧಗಾಳಿ ಇರದ, ತಮ್ಮ ಸಂಕಟಗಳನ್ನು ಅಭಿವ್ಯಕ್ತಿಸಬಹುದಾದ ಭಾಷೆಯಾಗಲೀ ಮಾಧ್ಯಮವಾಗಲೀ ಸ್ವಾತಂತ್ರ್ಯವಾಗಲೀ ಪಡೆದಿರದ ಮಹಿಳೆಯರ ಸಂಕಟದ ಕತೆಗಳು ನಮ್ಮ ಊಹೆಗೂ ನಿಲುಕದಷ್ಟು ದೊಡ್ಡ ಮಟ್ಟದವು. ‘#Me Too’ ಎಂಬ hash tag ಹಾಕಿ ಹೇಳಿಬಿಡುವಷ್ಟು ಸರಳವಾದದ್ದಲ್ಲ. ತಮ್ಮ ಮೇಲಾಗಿರುವ ದೌರ್ಜನ್ಯಗಳನ್ನೆಲ್ಲ ಬಾಯಿ ಮಾತಲ್ಲಿ ಹೇಳಿಬಿಡುವುದು ಕೂಡ ಸುಲಭದ್ದಲ್ಲ ಅವರಿಗೆ. ಶತಶತಮಾನಗಳಿಂದ ದೇವದಾಸಿ ಎಂಬ ಅನಿಷ್ಟ ಪದ್ಧತಿಯ ಬಲಿಪಶುಗಳಾಗಿ, ‘ದೇವರ’(!) ಹೆಸರಲ್ಲಿ ಲೈಂಗಿಕ ಶೋಷಣೆಗೊಳಗಾದವರು ದಲಿತ ಮಹಿಳೆಯರು. ಅವರ ಸಂಕಟಗಳನ್ನು ಎರಡು ಸಾಲಲ್ಲಿ ಹೇಳಿಬಿಡುವುದು ಸಾಧ್ಯವೇ?! ಸ್ವಾವಲಂಬನೆ, ಆತ್ಮಗೌರವ ಅವರಲ್ಲಿ ಬರುವವರೆಗೂ ಅವರ ಸಂಕಟಗಳು ಗುಪ್ತಗಾಮಿನಿಯಾಗೇ ಉಳಿದುಬಿಡಬಹುದು. ಹೀಗಿರುವಾಗ, ಸ್ತ್ರೀವಾದಿಗಳು, ಮಹಿಳಾಪರ ಚಿಂತಕರು ಹೆಚ್ಚು ಇನ್‌ಕ್ಲೂಸಿವ್‌ ಆಗಿರಬೇಕಾದದ್ದು ಇಂದಿನ ತುರ್ತು.

ಮೀ ಟೂ ಕ್ಯಾಂಪೇನ್ ಬಗ್ಗೆ ತುಂಬಾ ಅಕ್ಕರೆ ತೋರುತ್ತಿರುವವರು, ಇಂಥ ಚರ್ಚೆಗಳ ಕಾರಣದಿಂದಾದರೂ ‘ಮೆಟ್ರೊ ಕೇಂದ್ರಿತ ಸ್ತ್ರೀವಾದ’ದ ಮಿತಿಗಳ ಬಗ್ಗೆ ಯೋಚಿಸುವಂತಾಗಬೇಕು. ಮೈಕು- ಕ್ಯಾಮೆರಾಗಳಿಗೆ ಪ್ರಿಯರಾದ ಸೆಲೆಬ್ರಿಟಿ ಮಹಿಳೆಯರ ಸಣ್ಣ ನೋವಿಗೂ ಮಿಡಿಯುವ ಮೀಡಿಯಾಗಳು ಮತ್ತು ಸ್ತ್ರೀವಾದಿಗಳು, ಈ ದೇಶದಲ್ಲಿ ಅವ್ಯಾಹತವಾಗಿ, ರಾಜಾರೋಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಗಳನ್ನೂ ಅಷ್ಟೇ ಕಾಳಜಿಯಿಂದ ನೋಡುವಂತಾಗಬೇಕು. ಜಾತಿ, ಶ್ರೇಣಿ, ವರ್ಗಗಳ ಹಿನ್ನೆಲೆಯಲ್ಲಿ ತಾರತಮ್ಯದ ರೋಗದಿಂದ ಬಳಲುತ್ತಿರುವ ಈ ಸಮಾಜದ ಪ್ರತಿಯೊಂದು ಸಮಸ್ಯೆಯನ್ನೂ ನಾವು ಎಲ್ಲಾ ಅಸಮಾನತೆಗಳ ಹಿನ್ನೆಲೆ ಯಲ್ಲೇ ಗ್ರಹಿಸಬೇಕಿದೆ. ಎಲ್ಲಿಯವರೆಗೆ ಜಾತಿ, ವರ್ಗ, ಧರ್ಮದ ಅಸಮಾನತೆಗಳಿವೆಯೋ ಅಲ್ಲಿಯವರೆಗೂ ಈ ಬಗೆಗಿನ ಪ್ರಶ್ನೆಗಳೂ ಇದ್ದೇ ಇರುತ್ತವೆ.

ಆದರೆ ಜಾತಿ, ವರ್ಗ, ಧರ್ಮದ ಪ್ರಶ್ನೆಗಳನ್ನೂ ಮೀರಿ, ಮಾನವೀಯತೆಯ ಗಡಿಯೊಳಗೆ ಲೆಕ್ಕಕ್ಕೂ ಇರದವರ ಬಗ್ಗೆ ಯೋಚಿಸಬೇಕಾದ ಸಂದರ್ಭ ಇದು. ಮುಖ್ಯವಾಗಿ mainstream feminist ಗಳು ಈ ಬಗ್ಗೆ ಯೋಚಿಸಬೇಕಿದೆ. ದೆಹಲಿಯ ‘ನಿರ್ಭಯಾ’ದಂಥ ಪ್ರಕರಣದಲ್ಲಿ ತುಂಬಾ ಬದ್ಧತೆ ತೋರುವವರು, ವಿಜಯಪುರದ ಬಾಲಕಿಯ ಪ್ರಕರಣದ ಬಗ್ಗೆ ಒಂದೇ ಒಂದು ಹೇಳಿಕೆ ಕೂಡ ಕೊಡುವುದಿಲ್ಲ. ಇದು ಏನನ್ನು ಸೂಚಿಸುತ್ತದೆ? ಮತ್ತದೇ ಜಾತಿಗ್ರಸ್ತ ವ್ಯವಸ್ಥೆಯನ್ನೇ ತಾನೆ? ಈ ನಿಟ್ಟಿನಲ್ಲಿ ಪ್ರಚಲಿತ ಸ್ತ್ರೀವಾದ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳಬೇಕಿದೆ. ಸ್ತ್ರೀವಾದ ಎಂಬುದು ಮಾನವೀಯ ನೆಲೆಯಲ್ಲಿ ಇನ್ನೂ ಹೆಚ್ಚು ಇನ್‌ಕ್ಲೂಸಿವ್‌ ಆಗಬೇಕಿದೆ.

ಈ ಹಿನ್ನೆಲೆಯಲ್ಲಿ # Me Too ಅಭಿಯಾನ ಜಾತಿ, ವರ್ಗ, ಧರ್ಮ, ಶ್ರೇಣಿಗಳ ಗಡಿಗಳನ್ನೂ ಮೀರಿ, ಈ ನೆಲದ ಪ್ರತಿಯೊಬ್ಬ ಮಹಿಳೆಯ ಪ್ರಾತಿನಿಧಿಕ ದನಿಯಾಗಬಲ್ಲುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.