ADVERTISEMENT

ಸಂಗತ: ಪರಿಶಿಷ್ಟರ ಹಣ ವರ್ಗಾವಣೆ– ಯಾವುದು ವಾಸ್ತವ?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸಾಮಾಜಿಕ ನ್ಯಾಯವಲ್ಲ.

ವಾದಿರಾಜ್
Published 6 ಮಾರ್ಚ್ 2025, 23:37 IST
Last Updated 6 ಮಾರ್ಚ್ 2025, 23:37 IST
<div class="paragraphs"><p>ಪರಿಶಿಷ್ಟರ ಹಣ ವರ್ಗಾವಣೆ: ಯಾವುದು ವಾಸ್ತವ?</p></div>

ಪರಿಶಿಷ್ಟರ ಹಣ ವರ್ಗಾವಣೆ: ಯಾವುದು ವಾಸ್ತವ?

   

ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುವುದನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸಮರ್ಥಿಸಿಕೊಂಡಿದ್ದಾರೆ (ಸಂಗತ, ಮಾರ್ಚ್‌ 5). 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಐದು ಗ್ಯಾರಂಟಿಗಳನ್ನು ಘೋಷಿಸಿತು. ಅದನ್ನು ಮತದಾರರಿಗೆ ನಂಬಿಸಲು ಹರಸಾಹಸ ನಡೆಸಿತು. ಆಗ ಸಿದ್ದರಾಮಯ್ಯ ಅವರು ‘ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ ನಿಂಗೂ ಫ್ರೀ, ನಂಗೂ ಫ್ರೀ, ನನ್ನ ಹೆಂಡತಿಗೂ ಫ್ರೀ’ ಅಂತ ಹೇಳಿದ್ದು ವ್ಯಾಪಕ ಪ್ರಚಾರ ಪಡೆದಿತ್ತು.

ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಯಾವ ನಾಯಕರೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯ (ಟಿಎಸ್‌ಪಿ) ಹಣವನ್ನು ಬಳಸುವುದಾಗಿ ಹೇಳಿರಲಿಲ್ಲ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ತರುವಾಯ ಕಾಂಗ್ರೆಸ್‌ ಮಾಡಿದ್ದೇನು?

ADVERTISEMENT

2023ರಲ್ಲಿ ಈ ಉಪ ಯೋಜನೆಗಳಿಗೆ ಸೇರಿದ ₹ 11,144 ಕೋಟಿಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತು. ಪರಿಶಿಷ್ಟರ ಮೀಸಲು ನಿಧಿಗೆ ಮೊದಲ ಸಲ ಅನೈತಿಕವಾಗಿ ಕೈಹಾಕುವಾಗ ಮುಖ್ಯಮಂತ್ರಿ ಹಿಂಜರಿದಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸರ್ಕಾರ ಸಂವೇದನೆ ಕಳೆದುಕೊಂಡು ಅನ್ಯಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿ ತಲುಪಿದೆ.

2024ರಲ್ಲೂ ಇದೇ ಚಾಳಿಯನ್ನು ಮುಂದುವರಿಸಿದ ಸರ್ಕಾರ, ಈ ಎರಡೂ ನಿಧಿಗಳಿಂದ ₹ 14,282.68 ಕೋಟಿಯನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿಕೊಂಡಿತು. ಆದರೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮಾತ್ರ ಇಲ್ಲ, ಪ್ರಬಲ ವರ್ಗಗಳಿಗೆ ಸೇರಿದವರು, ಹಿಂದುಳಿದವರು, ಅಲ್ಪಸಂಖ್ಯಾತರ ಜೊತೆಗೆ ಸರ್ಕಾರಿ ನೌಕರರು, ಆದಾಯ ತೆರಿಗೆ ಕಟ್ಟುವವರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಪರಿಶಿಷ್ಟರಿಗೆ ಕೊಡಲು ಮಾತ್ರ ಅವರ ಮೀಸಲು ನಿಧಿಗೆ ಕನ್ನ ಹಾಕುತ್ತದೆ ಎಂದರೆ ಇದನ್ನು ಸಾಮಾಜಿಕ ನ್ಯಾಯ ಎನ್ನಲು ಸಾಧ್ಯವೇ?

ಅಲ್ಪಸಂಖ್ಯಾತರಿಗೆಂದೇ ಬಜೆಟ್ಟಿನಲ್ಲಿ ಪ್ರತ್ಯೇಕವಾಗಿ ಸಾವಿರಾರು ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.
ಆದರೆ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆ ಹಣವನ್ನು ಮುಟ್ಟುವುದಿಲ್ಲ ಎಂದರೆ, ಸರ್ಕಾರ ದಲಿತದ್ರೋಹಿ ಅಲ್ಲದೆ ಮತ್ತೇನು?

ವಾಸ್ತವದಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಯೋಜನೆಗಳ ಮೂಲ ಉದ್ದೇಶವಾದರೂ ಏನು? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ. ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿ ಸುವುದು. ದಲಿತ ಕೇರಿ, ಕಾಲೊನಿಗಳು, ಆದಿವಾಸಿಹಾಡಿಗಳಿಗೆ ಮೂಲ ಸೌಕರ್ಯ ಒದಗಿಸುವುದು. ಭೂ ಒಡೆತನ, ಭೂಮಿಗೆ ನೀರು, ಸ್ವಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿಶಾಲೆ, ಹಾಸ್ಟೆಲ್ ನಿರ್ಮಾಣ ಮಾಡುವುದು.

ಆದರೆ ಈಗ ಏನಾಗಿದೆ? ಯಾವುದೇ ನೀತಿ, ನಿಯಮ ಇಲ್ಲದೆ, ಪೂರ್ವಯೋಜನೆ ಇಲ್ಲದೆ ಇದ್ದಬದ್ದವರಿಗೆಲ್ಲ ಗ್ಯಾರಂಟಿ ಘೋಷಿಸಿ, ತನ್ನ ಕೈಗೆ ತಾನೇ ಹಗ್ಗ ಕಟ್ಟಿಕೊಂಡ ಸರ್ಕಾರ, ಪರಿಶಿಷ್ಟರ ಮೀಸಲು ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.

ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಇರುವ ಡಾ. ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ
ಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್), ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಅಲೆಮಾರಿ ಹಾಗೂ ಅರೆಅಲೆಮಾರಿ ಅಭಿವೃದ್ಧಿ ನಿಗಮ ಎಲ್ಲಕ್ಕೂ ಸೇರಿ ಸರ್ಕಾರ ಹಂಚಿಕೆ ಮಾಡಿದ್ದು ಬರೀ ₹ 332 ಕೋಟಿ. ಅದರಲ್ಲಿ ಬಿಡುಗಡೆ ಆದದ್ದು ₹ 88 ಕೋಟಿ. ಸರ್ಕಾರದ ಹಣಕಾಸಿನ ನೆರವಿಲ್ಲದೆ ಈ ನಿಗಮಗಳು ಸೊರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿ
ಯಾಗುತ್ತಿಲ್ಲ. ಸಾರಿಗೆ, ಸಂಬಳಕ್ಕೂ ಕಾಸಿಲ್ಲದ ದಿವಾಳಿ ಸ್ಥಿತಿ ಇದೆ.

ಅನ್ಯ ಯೋಜನೆಗಳಿಗೆ ಹಣ ವರ್ಗಾವಣೆಗೆ ಅವಕಾಶ ಇಲ್ಲದಂತೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7(ಡಿ) ರದ್ದು ಮಾಡಿದ್ದು ತಾನೇ ಎಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರ, 7(ಸಿ) ಸೆಕ್ಷನ್‌ ರದ್ದು ಮಾಡಿಲ್ಲ ಎಂದು ಪಿಸುಗುಟ್ಟುತ್ತಿದೆ. ವಿಶೇಷ ಸಂದರ್ಭದಲ್ಲಿ ಉತ್ತಮ ಕಾರ್ಯಕ್ಕೆ ಈ ಅನುದಾನ ಬಳಸಬಹುದು ಎಂಬ 7(ಸಿ) ಸೆಕ್ಷನ್‌ ರದ್ದು ಮಾಡಿ, ಪರಿಶಿಷ್ಟರು, ಆದಿವಾಸಿಗಳ ಮೀಸಲು ಹಣ ಪೂರ್ತಿಯಾಗಿ ಅವರ ಸಬಲೀಕರಣಕ್ಕೆ ಸಲ್ಲುವಂತೆ ಮಾಡಬೇಕಾದದ್ದು ಆದ್ಯತೆ ಆಗಬೇಕು.

ಕಾಕಾ ಪಾಟೀಲರಿಗೆ ಯಾವ ಖಜಾನೆಯಿಂದ ಗ್ಯಾರಂಟಿ ಹಣ ಸಂದಾಯ ಆಗುತ್ತಿದೆಯೋ ಅದೇ ಬಾಬ್ತಿನಲ್ಲೇ ಮಹದೇವಪ್ಪನವರಿಗೂ ಗ್ಯಾರಂಟಿ ಹಣ ದಕ್ಕಲಿ ಎಂದು ಕೇಳುವುದರಲ್ಲಿ ತಪ್ಪೇನಿದೆ?

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.