ADVERTISEMENT

ಸಂಗತ ಅಂಕಣ | ನಂದಿನಿ: ಕಂಟಕಕ್ಕೆ ಕಾರಣ ಬೇರೆ

ನಂದಿನಿ ಉತ್ಪನ್ನಗಳ ಮಾರುಕಟ್ಟೆ ಪಾಲು ಕುಸಿಯದಂತೆ ನೋಡಿಕೊಳ್ಳಬೇಕಿದ್ದರೆ ಲಭ್ಯತೆ ಖಾತರಿಪಡಿಸಬೇಕು

ಡಾ.ಮುರಳೀಧರ ಕಿರಣಕೆರೆ
Published 14 ಏಪ್ರಿಲ್ 2023, 1:59 IST
Last Updated 14 ಏಪ್ರಿಲ್ 2023, 1:59 IST
.
.   

ನಮ್ಮ ದೇಶದ ಹೆಮ್ಮೆಯ ಎರಡು ಹೈನು ಬ್ರ್ಯಾಂಡ್‌ಗಳಾದ ನಂದಿನಿ ಮತ್ತು ಅಮೂಲ್ ಉತ್ಪನ್ನಗಳ ಆರೋಗ್ಯಕರ ಪೈಪೋಟಿಗೆ ವಿವಾದದ ಸ್ವರೂಪ ನೀಡಲಾಗಿದೆ. ರಾಜ್ಯವು ಚುನಾವಣೆಯ ಹೊಸ್ತಿಲಿನಲ್ಲಿರುವ ಈ ಹೊತ್ತಿನಲ್ಲಿ, ಸಮಸ್ಯೆಯ ಆಳಕ್ಕಿಳಿಯದೆ ರಾಜಕೀಯ ಕೆಸರೆರಚಾಟವಷ್ಟೇ ನಡೆಯುತ್ತಿರುವುದು ದುರದೃಷ್ಟಕರ.

ವರ್ಷದ ಹಿಂದೆ 96 ಲಕ್ಷ ಕೆ.ಜಿ.ವರೆಗೆ ಏರಿ ದಾಖಲೆ ಬರೆದಿದ್ದ ಕೆಎಂಎಫ್‍ನ ಪ್ರತಿನಿತ್ಯದ ಹಾಲು ಸಂಗ್ರಹ ಪ್ರಮಾಣ ಈಗ 76 ಲಕ್ಷ ಕೆ.ಜಿಗೆ ಕುಸಿದಿರುವ ಬಗ್ಗೆ ಕಾರಣಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳುವತ್ತ ಸಾಗಬೇಕಾದ ಚರ್ಚೆ ಭಾವನಾತ್ಮಕವಾಗಿ
ಕೆರಳಿಸುವ ಹಾದಿ ಹಿಡಿದಿರುವುದು ಆತಂಕಕಾರಿ. ಹಾಲು ಸಂಗ್ರಹದ ಇಂದಿನ ಕಳವಳಕಾರಿ ಸ್ಥಿತಿಗೆ ಬಹುಮುಖ್ಯ ಕಾರಣವಾಗಿರುವುದು ಮಾರುಕಟ್ಟೆಯಲ್ಲಿನ ಪೈಪೋಟಿಯಲ್ಲ, ಬದಲಿಗೆ ಪಶುಆಹಾರ ಮತ್ತು ಹುಲ್ಲಿನ ಬೆಲೆಯಲ್ಲಾಗುತ್ತಿರುವ ಭಾರಿ ಹೆಚ್ಚಳ.

ಹೌದು, ಹಾಲಿನ ಉತ್ಪಾದನಾ ವೆಚ್ಚ ಏರುತ್ತಲೇ ಇದೆ. ಭತ್ತ ಬೆಳೆಯುವುದು ನಷ್ಟದ ಬಾಬ್ತು ಎಂಬುದು ರೈತರ ಒಕ್ಕೊರಲಿನ ಮಾತು. ಹಾಗಾಗಿಯೇ ವಾಣಿಜ್ಯ ಬೆಳೆಗಳತ್ತ ಹೊರಳುತ್ತಿದ್ದಾರೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತಿತವಾಗುತ್ತಿವೆ. ಕೆಲವೆಡೆ
ಸಾಗುವಳಿಯಿಲ್ಲದೆ ಹಾಳು ಬಿದ್ದಿವೆ. ಇದರ ನೇರ ಪರಿಣಾಮ ಆಗುತ್ತಿರುವುದು ಪಶುಪಾಲನೆ ಮೇಲೆ. ಮೂರ್ನಾಲ್ಕು ಕೆ.ಜಿ.ಯಷ್ಟಿರುವ ಒಂದು ಪಿಂಡಿ ಹುಲ್ಲಿನ ದರ ಈಗ ಎಂಬತ್ತರಿಂದ ನೂರು ರೂಪಾಯಿ! ರಾಗಿಹುಲ್ಲು, ಜೋಳದ ದಂಟಿನ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಾನುವಾರುಗಳ ಸಾಂಪ್ರದಾಯಿಕ ಮೇವಿನ ತಾಣಗಳೆಲ್ಲಾ ಅತಿಕ್ರಮಣಗೊಂಡು ಮೇಯಲು ಕರಡವೂ ಸಿಗದಾಗಿದೆ.

ADVERTISEMENT

ಒಣಮೇವಿನ ಪರಿಸ್ಥಿತಿ ಇದಾದರೆ, ಹಸಿಮೇವನ್ನು ಬೆಳೆಯಲು ಜಾಗ, ನೀರಿನ ಸಮಸ್ಯೆ. ಹೆಚ್ಚಾಗಿ ಕೆಳ ಮಧ್ಯಮವರ್ಗದವರು, ಬಡವರೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಹಸಿರು ಮೇವು ಬೆಳೆಯಲು ಸ್ಥಳಾಭಾವ ಎದುರಿಸುತ್ತಿದ್ದಾರೆ. ಮೇವಿನ ಕೊರತೆಯ ಜೊತೆಗೆ ದುಬಾರಿ ಪಶುಆಹಾರವೂ (ಹಿಂಡಿ) ಗೋಪಾಲಕರನ್ನು ಹೈರಾಣ ಮಾಡುತ್ತಿದೆ. ಕೆ.ಜಿ. ಪಶುಆಹಾರದ ಬೆಲೆ ₹ 40 ದಾಟಿದೆ. ಕೆಎಂಎಫ್ ಪಶುಆಹಾರದ ಬೆಲೆ ತುಸು ಕಡಿಮೆಯಿದ್ದರೂ ಇದು ಸಿಗುವುದು ಹಾಲು ಉತ್ಪಾದಕರ ಸಂಘದ ಸದಸ್ಯರಿ
ಗಷ್ಟೇ. ಸಂಘಕ್ಕೆ ಹಾಲು ಹಾಕದೆ ಮನೆಬಳಕೆ, ಸ್ಥಳೀಯ ಮಾರಾಟಕ್ಕಾಗಿ ಜಾನುವಾರು ಸಾಕುವವರು ದುಬಾರಿ ಹಿಂಡಿಯಲ್ಲಿಯೇ ಹೈನುಗಾರಿಕೆ ಮಾಡಬೇಕಿದೆ.

ಇಷ್ಟೆಲ್ಲಾ ಕಷ್ಟದಲ್ಲಿ ಗೋಪಾಲನೆ ಮಾಡಿದರೂ ಲೀಟರ್ ಹಾಲಿಗೆ ಸಿಗುವುದು 35ರಿಂದ 40 ರೂಪಾಯಿ ಮಾತ್ರ, ಅದೂ ಉತ್ಪಾದಕರಿಗೆ ಸರ್ಕಾರ ನೀಡುವ ಸಹಾಯಧನ ಸೇರಿ. ಹಾಲು ಸೊಸೈಟಿಗಳಿಗೆ ಸದಸ್ಯರು ಹಾಕುವ ಪ್ರತೀ ಲೀಟರ್ ಹಾಲಿಗೆ ಸರ್ಕಾರ ₹ 5 ಪ್ರೋತ್ಸಾಹಧನ ನೀಡದಿದ್ದರೆ ಹಾಲು ಸಂಗ್ರಹ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು!

ಚರ್ಮಗಂಟು ರೋಗವೆಂಬ ಸಾಂಕ್ರಾಮಿಕವೂ ಗಾಯದ ಮೇಲೆ ಬರೆ ಎಳೆದಿದೆ. ನಿಧಾನವಾಗಿ ಸುಧಾರಿಸಿಕೊಂಡ ಹಸುಗಳಲ್ಲಿನ್ನೂ ಉತ್ಪಾದನೆ ಹಿಂದಿನ ಮಟ್ಟಕ್ಕೆ ಮರಳಿಲ್ಲ. ಗರ್ಭ ಕಟ್ಟದಿರುವುದು, ಗರ್ಭಪಾತ ಸಾಮಾನ್ಯವಾಗಿದೆ. ಈ ಕಷ್ಟ ನಷ್ಟಗಳಿಗೆ ಹೆದರಿರುವ ಬಹಳಷ್ಟು ರೈತರು ತಮ್ಮ ಜಾನುವಾರುಗಳನ್ನು ಮಾರುತ್ತಿದ್ದಾರೆ. ಜೊತೆಗೆ ಬೇಸಿಗೆಯ ಉರಿ ಬಿಸಿಲೂ ಇಳುವರಿ ಕುಸಿತಕ್ಕೆ ಕೊಡುಗೆ ನೀಡಿದೆ.

ಕರ್ನಾಟಕದ ಅಸ್ಮಿತೆ ನಂದಿನಿ ಬ್ರ್ಯಾಂಡಿಗೆ ಅಮೂಲ್‍ನಿಂದ ಕಂಟಕ ಎದುರಾಗುವ ಸಾಧ್ಯತೆ ಖಂಡಿತಾ ಇಲ್ಲ. ಕಾರಣ, ನಂದಿನಿ ಉತ್ಪನ್ನಗಳ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆ. ಹಾಗಾಗಿ ನಮ್ಮ ನೆರೆಯ ರಾಜ್ಯಗಳಲ್ಲದೆ ಹೊರ ದೇಶಗಳಲ್ಲೂ ನಂದಿನಿ ಜನಪ್ರಿಯ. ಆದರೆ, ಬೇಡಿಕೆಯಷ್ಟು ಪೂರೈಕೆಯಾಗದಾಗ ಇತರ ನಂಬಿಕೆಯ ಬ್ರ್ಯಾಂಡ್‍ನತ್ತ ಹೊರಳುವುದು ಗ್ರಾಹಕನಿಗೆ ಅನಿವಾರ್ಯ. ಆಗ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವ ಅಮೂಲ್ ಆಯ್ಕೆಯಾಗಬಹುದು. ಇದೂ ಅಷ್ಟು ಸುಲಭವಲ್ಲ. ಅಮೂಲ್ ಹಾಲು ನಂದಿನಿಗಿಂತ ದುಬಾರಿ. ಲೀಟರ್‌ಗೆ ₹ 14 ಹೆಚ್ಚಿಗೆ ಕೊಡಬೇಕು. ಇನ್ನು ಮುಕ್ತ ಮಾರುಕಟ್ಟೆ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಸಹೋದರ ರಾಜ್ಯಕ್ಕೆ ತನ್ನ ಉತ್ಪನ್ನಗಳನ್ನು ಮಾರುವುದಕ್ಕೆ ನಿರ್ಬಂಧ ಹೇರುವುದೂ ಸಾಧ್ಯವಿಲ್ಲದ ಮಾತು.

ಹೌದು, ನಂದಿನಿ ಉತ್ಪನ್ನಗಳ ಮಾರುಕಟ್ಟೆ ಪಾಲಿನ ಕುಸಿತವನ್ನು ತಡೆಯಬೇಕಿದ್ದರೆ ಲಭ್ಯತೆ ಖಾತರಿಪಡಿಸಬೇಕು. ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜಕ ಕ್ರಮ ಕೈಗೊಳ್ಳುವುದು ಈಗಿನ ತುರ್ತು. ಹಾಲಿನ ಉತ್ಪಾದನಾ ವೆಚ್ಚ ಕಡಿತಗೊಳಿಸಲು ಸರ್ಕಾರವೇ ಎಲ್ಲ ಜಿಲ್ಲೆಗಳಲ್ಲೂ ಪಶುಆಹಾರ ಘಟಕಗಳನ್ನು ಸ್ಥಾಪಿಸಿ ಈಗಿನ ಅರ್ಧ ಬೆಲೆಗಾದರೂ ಹಿಂಡಿ ಸಿಗುವಂತೆ ಮಾಡಬೇಕು. ಲಭ್ಯವಿರುವ ಜಾಗದಲ್ಲೆಲ್ಲಾ ಮೇವಿನ ಬೆಳೆಗಳನ್ನು ಬೆಳೆಯಲು ಮೇವಿನ ಬೀಜ, ಸಸಿಗಳ ವಿತರಣೆಗೆ ಆದ್ಯತೆ ನೀಡಬೇಕು. ಗ್ರಾಹಕರಿಗೂ ಹೊರೆಯಾಗದೆ ಉತ್ಪಾದಕ ರೈತರಿಗೂ ನ್ಯಾಯೋಚಿತ ಉತ್ತಮ ಬೆಲೆ ಸಿಗುವಂತಹ ಕಾರ್ಯಸಾಧು ಯೋಜನೆಯನ್ನು ಸರ್ಕಾರ ರೂಪಿಸಬೇಕು. ಹಾಲು ಒಕ್ಕೂಟಗಳೂ ತಮ್ಮ ಆಡಳಿತಾತ್ಮಕ ವೆಚ್ಚವನ್ನು ಕಡಿಮೆಗೊಳಿಸಿ ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸಬೇಕಿದೆ.

ಚುನಾವಣೆಯ ಹೊತ್ತಿನಲ್ಲಿ ಈ ವಿಚಾರಗಳು ಚರ್ಚೆಯಾಗಿ, ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರಿ ಮುಂದೆ ಅನುಷ್ಠಾನಗೊಂಡಾಗ ಮಾತ್ರ ನಂದಿನಿ ವಿಚಾರದಲ್ಲಿ ಗೋಪಾಲಕರ ಹಿತಾಸಕ್ತಿ ಕಾಪಾಡಬಹುದೇ ವಿನಾ ಭಾವನಾತ್ಮಕ ಪ್ರತಿಕ್ರಿಯೆಗಳಿಂದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.