ಪ್ರಾತಿನಿಧಿಕ ಚಿತ್ರ
ಲ್ಯಾಪ್‌ಟಾಪ್, ಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಲೀಥಿಯಂ ಅಯಾನ್ ಬ್ಯಾಟರಿಗೆ ಬೇಕಾದ ಕೊಬಾಲ್ಟ್ ಲೋಹದ ನಿಕ್ಷೇಪಗಳು ಕ್ಷುದ್ರ ಗ್ರಹಗಳಲ್ಲಿ ಹೇರಳವಾಗಿವೆ. ಹಾಗಾಗಿ, ಆಗೊಮ್ಮೆ ಈಗೊಮ್ಮೆ ಭೂಮಿಯ ವಾತಾವರಣಕ್ಕೆ ನುಗ್ಗಿ, ಅಪ್ಪಳಿಸಿ ಅಪಾಯ ತಂದೊಡ್ಡುವ ಕ್ಷುದ್ರ ಗ್ರಹಗಳನ್ನು ಇಲ್ಲಿಯವರೆಗೆ ವಿಲನ್‌ನಂತೆ ನೋಡುತ್ತಿದ್ದವರು ಈಗ ಅವುಗಳ ಕಡೆಗೆ ಪ್ರೀತಿ ತೋರಿಸುತ್ತಿದ್ದಾರೆ.
ಶಿಲೆ ಮತ್ತು ಲೋಹಗಳಿಂದ ಕೂಡಿರುವ ಕ್ಷುದ್ರ ಗ್ರಹಗಳು ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕಕ್ಷೆಯಲ್ಲಿ ಸೂರ್ಯನ ಸುತ್ತ 20 ಕೋಟಿಯಿಂದ 80 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿವೆ. ಒಂದು ಅಡಿಯಿಂದ ನೂರು ಕಿ.ಮೀ.ಗಟ್ಟಲೆ ವ್ಯಾಸ ಹೊಂದಿರುವ 20 ಲಕ್ಷ ಕ್ಷುದ್ರ ಗ್ರಹಗಳು ನಮ್ಮ ಸೌರಮಂಡಲದಲ್ಲಿ ಇರಬಹುದು ಎಂಬ ಲೆಕ್ಕಾಚಾರವಿದೆ. ಇವುಗಳ ಪೈಕಿ ಶೇ 8ರಷ್ಟು ಕ್ಷುದ್ರ ಗ್ರಹಗಳಲ್ಲಿ ಅಪರೂಪದ ಲೋಹಗಳಿವೆ. 30 ಮೀಟರ್ ಉದ್ದದ ಪ್ಲಾಟಿನಂಯುಕ್ತ ಕ್ಷುದ್ರ ಗ್ರಹದಲ್ಲಿ 70ರಿಂದ 100 ಶತಕೋಟಿ ಡಾಲರ್ ಮೌಲ್ಯದ ಪ್ಲಾಟಿನಂ ಇರುತ್ತದೆ ಎಂದು ‘ಕೆಕ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸ್ಟಡೀಸ್’ ವರದಿ ಮಾಡಿದೆ.
ಕ್ಷುದ್ರ ಗ್ರಹಗಳಲ್ಲಿ ಎಂ ಟೈಪ್ (ಮೆಟಾಲಿಕ್), ಸಿ ಟೈಪ್ (ಕಾರ್ಬನೇಶಿಯಸ್) ಮತ್ತು ಎಸ್ ಟೈಪ್ (ಕಲ್ಲಿನ) ಎಂಬ ಮೂರು ವಿಧಗಳಿವೆ. ಎಂ ಟೈಪ್ ಕ್ಷುದ್ರ ಗ್ರಹಗಳಲ್ಲಿ ವಿರಳಲೋಹಗಳಾದ ಪ್ಲಾಟಿನಂ, ಪಲೇಡಿಯಂ, ರೋಡಿಯಂ, ಬೆಳ್ಳಿ, ಬಂಗಾರ, ಕೊಬಾಲ್ಟ್, ನಿಕ್ಕಲ್ ಮತ್ತು ಕಬ್ಬಿಣದ ಅದಿರುಗಳ ಖಜಾನೆಯೇ ಇದೆ. ಭೂಮಿಯ ಆಳದ ಅದಿರಿನ ಗಣಿಗಾರಿಕೆಯಿಂದ ಬಹಳಷ್ಟು ಅಪಾಯಗಳಿವೆ. ಹಾಗಾಗಿ, ಆಕಾಶ
ಕಾಯಗಳಲ್ಲಿ ಗಣಿಗಾರಿಕೆ ನಡೆಸಿದರೆ ಹೇಗೆ ಎಂಬ ಆಲೋಚನೆಯಲ್ಲಿ, ಪ್ರತಿಷ್ಠಿತ ದೇಶಗಳ ಕಾರ್ಪೊರೇಟ್ ಉದ್ಯಮಗಳು ಬಾಹ್ಯಾಕಾಶ ಗಣಿಗಾರಿಕೆಗೆ ಒಲವು ತೋರುತ್ತಿವೆ. ಆಸ್ಟ್ರೋ ಫೋರ್ಜ್, ಟ್ರಾನ್ಸ್ ಆಸ್ಟ್ರೋನಾಟಿಕ ಕಾರ್ಪೊರೇಷನ್ ಮತ್ತು ಕಾರ್ಮನ್ ಪ್ಲಸ್ ಕಂಪನಿಗಳು ತಮ್ಮ ಗಣಿ ತಂತ್ರಜ್ಞಾನವನ್ನು ಆಕಾಶಕಾಯಗಳ ಮೇಲೆ ಪ್ರಯೋಗಿಸುವ ತರಾತುರಿಯಲ್ಲಿವೆ.
2023ರ ಅಕ್ಟೋಬರ್‌ನಲ್ಲಿ ಬಾಹ್ಯಾಕಾಶದಲ್ಲಿ ನಡೆಸಬಹುದಾದ ಆರ್ಥಿಕ ಚಟುವಟಿಕೆಗಳ ಕುರಿತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಸರಣಿ ಲೇಖನಗಳು ಪ್ರಕಟಗೊಂಡವು. ಲೇಖನ ಬರೆದವರು ವಿಜ್ಞಾನಿಗಳಲ್ಲ, ಆರ್ಥಿಕ ತಜ್ಞರು! ಸೌರ ಫಲಕ, ಪವನ ವಿದ್ಯುತ್ ಉತ್ಪಾದನೆಯ ಟರ್ಬೈನ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ವಿರಳಲೋಹಗಳ ದೊಡ್ಡ ದಾಸ್ತಾನು ಕ್ಷುದ್ರ ಗ್ರಹಗಳಲ್ಲಿದೆ ಎಂದು ಕೋಲರಾಡೊ ಸ್ಕೂಲ್ ಆಫ್ ಮೈನ್ಸ್‌ನ ಪ್ರೊ. ಇಯಾನ್ ಲಾಂಗೆ ತಮ್ಮ ಸಂಶೋಧನಾ ಅಧ್ಯಯನದಲ್ಲಿ ತಿಳಿಸಿದ್ದರು.
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ತಜ್ಞರೊಬ್ಬರ ಸಹಯೋಗದಲ್ಲಿ ಸಂಶೋಧನಾ ವರದಿ ತಯಾರಿಸಿರುವ ಲಾಂಗೆ, ಮುಂದಿನ 30–40 ವರ್ಷಗಳಲ್ಲಿ ಭೂ ಗಣಿಗಾರಿಕೆಗಿಂತ ಆಕಾಶಕಾಯಗಳ ಗಣಿಗಾರಿಕೆ ಹೆಚ್ಚಾಗಲಿದೆ ಹಾಗೂ ಕ್ಷುದ್ರ ಗ್ರಹ ಗಣಿಗಾರಿಕೆ ವೆಚ್ಚವು ಭೂ ಗಣಿಗಾರಿಕೆಯ ಖರ್ಚಿಗಿಂತ ಕಡಿಮೆ ಇರಲಿದೆ ಎಂದಿದ್ದಾರೆ.
ಸದ್ಯದ ಅಂದಾಜಿನ ಪ್ರಕಾರ ಉತ್ಪಾದನಾ ವಲಯಕ್ಕೆ ವಾರ್ಷಿಕ 10 ಲಕ್ಷ ಟನ್ ಕೊಬಾಲ್ಟ್ ಮತ್ತು ನಿಕ್ಕಲ್ ಲೋಹಗಳ ಅವಶ್ಯಕತೆ ಇದೆ. ಭೂಮಿಯ ಮೇಲೆ ಕೊಬಾಲ್ಟ್ ಗಣಿಗಳು ಕಾಂಗೊ ಗಣರಾಜ್ಯದಲ್ಲಿವೆ. ಜಗತ್ತಿನ ಶೇ 70ರಷ್ಟು ಕೊಬಾಲ್ಟ್ ಅಲ್ಲಿಂದಲೇ ದೊರಕುತ್ತಿದೆ. ಇಂಡೊನೇಷ್ಯಾ, ರಷ್ಯಾ, ಫಿಲಿಪ್ಪೀನ್ಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಿಕ್ಕಲ್ ನಿಕ್ಷೇಪಗಳು ಹೆಚ್ಚಾಗಿವೆ. ಭೂಮಿ ಮತ್ತು ಸಾಗರ ಗಣಿಗಾರಿಕೆಯಿಂದ ಜೀವರಾಶಿಗೆ ದೊಡ್ಡ ಅಪಾಯಗಳಿರುವಾಗ, ಭೂಮಿಯಿಂದ ದೂರವಿರುವ ಕ್ಷುದ್ರ ಗ್ರಹ ಗಣಿಗಾರಿಕೆ ಕ್ಷೇಮ ಎನ್ನುವ ಅಭಿಪ್ರಾಯ ಬಲವಾಗುತ್ತಿದೆ.
ಬಾಹ್ಯಾಕಾಶ ಕರಾರುಗಳ ಪ್ರಕಾರ ಭೂಮಿ ಮೇಲಿನ ಆಕಾಶದಲ್ಲಿ ಇಂತಿಷ್ಟು ಜಾಗ ನನ್ನದು ಎಂದು ಯಾರೂ ಅಧಿಕಾರ ಚಲಾಯಿಸುವಂತಿಲ್ಲ. ಆದರೆ, ತಾವು ನಡೆಸುವ ಪ್ರಯೋಗ ಮತ್ತು ಕೆಲಸಗಳಿಗಾಗಿ ಒಂದು ಕ್ಷೇಮಕರ ವಲಯವನ್ನು ರೂಪಿಸಿಕೊಳ್ಳಬಹುದು. ಸದ್ಯಕ್ಕೆ ಬಾಹ್ಯಾಕಾಶದಲ್ಲಿ ಯಾವುದೇ ಬಗೆಯ ಉತ್ಪನ್ನಗಳು ವಾಣಿಜ್ಯ ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಪ್ರಯೋಗಕ್ಕಾಗಿ ತರಕಾರಿ ಬೆಳೆದಿದ್ದೇವೆ. 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಚಿಕ್ಕ ವಸ್ತುಗಳನ್ನು ಸೃಷ್ಟಿಸಿದ್ದೇವೆ. ಕ್ಷುದ್ರ ಗ್ರಹಗಳು ನಮಗೆ ಡಿಕ್ಕಿ ಹೊಡೆಯುವುದಿರಲಿ ನಾವೇ ಅವುಗಳಿಗೆ ನಮ್ಮ ಆಕಾಶನೌಕೆಯನ್ನು ಡಿಕ್ಕಿ ಹೊಡೆಸಿದರೆ ಏನಾಗುತ್ತದೆ ಎಂಬ ಪ್ರಯೋಗವನ್ನು ಮಾಡಿ ಹೊಸ ದಾಖಲೆ ಬರೆದಿದ್ದೇವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವುಗಳ ಮೇಲೆ ನಾಜೂಕಾಗಿ ನೌಕೆಗಳನ್ನು ಇಳಿಸಿದ್ದೇವೆ ಹಾಗೂ ಅಲ್ಲಿನ ದೂಳು, ಮಣ್ಣು, ಬೆಣಚುಕಲ್ಲುಗಳನ್ನು ಭೂಮಿಗೆ ತಂದು ಕೂಲಂಕಷ ಅಧ್ಯಯನ ಮಾಡಿದ್ದೇವೆ. ಕೃತಕ ಉಪಗ್ರಹಗಳಿಂದ ಚಿತ್ರ ರವಾನೆ ಮತ್ತು ಜಿಪಿಎಸ್ ತಂತ್ರಜ್ಞಾನಗಳು ಬಾಹ್ಯಾಕಾಶ ಗಣಿಗಾರಿಕೆಗೂ ನೆರವು ನೀಡಲಿವೆ.
ವಿಶ್ವದ ಅನೇಕ ಕಂಪನಿಗಳು ಕ್ಷುದ್ರ ಗ್ರಹಗಳಲ್ಲಿ ಗಣಿಗಾರಿಕೆಗೆ ದೊಡ್ಡ ಬಂಡವಾಳ ಹೂಡಲು ಸಜ್ಜಾಗಿವೆ. ಅವರು ಮಾಡುವ ಗಣಿಗಾರಿಕೆಯಿಂದ ಭೂಮಿಯ ಆರೋಗ್ಯ ಕೆಡದಿದ್ದರೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.