ADVERTISEMENT

ಸಂಗತ: ಅರಿವಿನ ಬೆಳಕು ಮೂಡಲಿ

ನಿಸರ್ಗ ನಿಯಮದ ಪ್ರಕಾರ ಬರುವ ಸಾವನ್ನು ಸ್ವಾಗತಿಸಬೇಕು. ಆದರೆ ಬದುಕಿಗೆ ತಾವಾಗಿಯೇ ಅಂತ್ಯ ಹಾಡುವ ಅವಿವೇಕತನವನ್ನು ಕೈಬಿಡಬೇಕು

ರಾಮಕೃಷ್ಣ ಶಾಸ್ತ್ರಿ
Published 27 ಡಿಸೆಂಬರ್ 2024, 23:22 IST
Last Updated 27 ಡಿಸೆಂಬರ್ 2024, 23:22 IST
   

ಹೊಸ ವರ್ಷದ ಹೊಸಿಲಲ್ಲಿ ನಾವಿದ್ದೇವೆ. ‘ಹಳೆಯದನ್ನು ಮರೆತುಬಿಡು ಕಹಿಯ ನೆನಹನು, ಹೊಸ ಮಣೆ ಏರುವಾಗ ನೆನಪಿಡು ಬರುವ ಬದುಕನು’ ಎಂಬ ಕವಿವಾಣಿಯ ಹಾಗೆ ಹಳೆಯ ಕಹಿ ನೆನಪುಗಳನ್ನು ಮರೆತುಬಿಡಬೇಕು ನಿಜ. ಆದರೆ ಎಷ್ಟೇ ಪ್ರಯತ್ನಿಸಿದರೂ ಮನವ ಕಾಡುವ ದುರ್ಘಟನೆಗಳು ‘ಮುಂದಿನ ಹಾದಿಯಲ್ಲೂ ಮುಳ್ಳುಗಳಿವೆ, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು’ ಎಂದು ಮತ್ತೆ ಮತ್ತೆ ಎಚ್ಚರಿಸುತ್ತವೆ. 

ಎಷ್ಟೊಂದು ನಿಷ್ಪಾಪಿ ಮಕ್ಕಳು ತಂದೆ– ತಾಯಿಯ ಅರೆಕ್ಷಣದ ಮಾನಸಿಕ ಗೋಜಲಿನ ಪರಿಣಾಮವಾಗಿ ಕ್ರೂರ ಸಾವನ್ನು ಪಡೆಯುವಂತಾಯಿತು. ಅರೆಕ್ಷಣ ಮನಸ್ಸನ್ನು ನಿಯಂತ್ರಿಸಿದ್ದರೂ ಆತ್ಮಹತ್ಯೆಯ ನಿರ್ಧಾರ ಬದಲಾಗುತ್ತಿತ್ತು. ಬದುಕಿ ಬಾಳಬೇಕಾದ ಜೀವಗಳು ಅರ್ಧದಲ್ಲೇ ಅಂತ್ಯವಾಗುತ್ತಿರಲಿಲ್ಲ. ಗಂಡನ ಹತ್ಯೆಗೆ ಸಂಚು ಹೂಡಿದ ಪತ್ನಿ, ಸತಿಯನ್ನು ಕೊಲೆಗೈದ ಪತಿ ಇಬ್ಬರೂ ಸೆರೆಮನೆ ಸೇರಿ ಅವರ ಮಕ್ಕಳು ತಬ್ಬಲಿಗಳಾಗುವ ದುಃಸ್ಥಿತಿ ಬೇಕಾಗಿರಲಿಲ್ಲ.

ಮನೆಯಿಂದ ಹೊರಟಾಗ ಪ್ರವಾಸದ ಸಂಭ್ರಮ. ಸವಿನೆನಪಿಗಾಗಿ ಕಾತರಿಸುವ ಮನಸ್ಸು. ಆದರೆ ಆದದ್ದೇನು? ಸೆಲ್ಫಿ ತೆಗೆಯುವ ಹವ್ಯಾಸ ಹರಿವ ನೀರಿಗೆ ನೂಕುವಂತಾಯಿತು. ಕಡಲರಾಜನ ಅಬ್ಬರವನ್ನು ಸನಿಹದಿಂದ ನೋಡಿ ಖುಷಿಪಡುತ್ತೇವೆ ಎಂದು ತೆರೆಗಳೊಂದಿಗೆ ಆಟವಾಡಲು ಹೋದ ವಿದ್ಯಾರ್ಥಿಗಳು ಬೊಬ್ಬಿರಿಯುವ ತೆರೆಗಳ ಅಪ್ಪುಗೆಯಲ್ಲಿ ಮೈಮರೆತರಲ್ಲ! ತಪ್ಪಿಸಬಹುದಿತ್ತು ಎಂದು ಆನಂತರ ಎಷ್ಟೇ ಪರಿತಪಿಸಿದರೂ ಅನಾಹುತಗಳು ನಡೆದೇಹೋದವು.

ADVERTISEMENT

ಮಳೆಗಾಲದ ಮೇಘಮಾಲೆ ಆಳೆತ್ತರದ ಗುಡ್ಡವನ್ನೇ ಮುಂದೆ ನೂಕಿ, ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಜೀವಗಳು ಹಾಗಿರಲಿ ದೇಹಗಳೂ ಸಿಗದೆ ಜಲ ಸಮಾಧಿಯಾಗುವಂತೆ ಮಾಡಿತು. ಪತ್ರಿಕೆಗಳಲ್ಲೋ ವಾಹಿನಿಗಳಲ್ಲೋ ಸುದ್ದಿಯನ್ನು ಓದಿ ಅರೆಕ್ಷಣ ಮರುಕಪಟ್ಟವರು ಇರಬಹುದು. ಆದರೆ ಸಂಬಂಧಿಕರನ್ನು ಕಳೆದುಕೊಂಡು ಬದುಕಿಡೀ ಕಂಬನಿಯ ಗುಟುಕನ್ನು ನುಂಗುತ್ತಿರುವ ಆಪ್ತರಿಗೆ ಜೋರು ಮಳೆ ಎಂದರೆ ಘೋರ ನೆನಪುಗಳ ಬುತ್ತಿಯನ್ನು ಕೆದಕಬಹುದು.

ಹೃದಯಾಘಾತ ಅದೆಷ್ಟೋ ಮಂದಿ ಯುವಕರ ಬದುಕಿಗೆ ಕೊಳ್ಳಿಯಿಟ್ಟಿತು. ಮದುವೆಗೆ ಒಡವೆ– ವಸ್ತ್ರ ಖರೀದಿಸಲು ಹೊರಟಿದ್ದ ಯುವಕ ದಾರಿಯಲ್ಲಿ ಕುಸಿದು ಸಾವು, ಬಸ್‌ ಚಾಲಕ ಕರ್ತವ್ಯನಿರತನಾಗಿದ್ದಾಗಲೇ ಕುಸಿದು ಸಾವು...  ಯಮ ಎಷ್ಟೊಂದು ನಿರ್ದಯಿ ಅನಿಸುವಂತಹ ಪ್ರಕರಣಗಳು. ಬಾಳಿ ಬದುಕಬೇಕಿದ್ದ ವರು ಎಂದು ನಾವು ತೀರ್ಮಾನಿಸಬಹುದು. ಆದರೆ ಕಾಲಪುರುಷನಿಗೆ ಕರುಣೆ ಇಲ್ಲ. ಯಮ ಕೊಡಲಿ ಹಿಡಿದು ಹೊರಟನೆಂದರೆ ಫಲ ಬರುವ ಮರವನ್ನೇ ಕತ್ತರಿಸಿಯಾನು.

ಅಪಘಾತಗಳೂ ಹಾಗೆಯೇ. ಎದುರಿನ ರಸ್ತೆಯಲ್ಲಿ ಸಾಗುತ್ತಿದ್ದ ಯಮಭಾರದ ಕಂಟೇನರ್‌, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಚಲಿಸುತ್ತಿದ್ದ ಕಾರೊಂದರ ಮೇಲೆಯೇ ಉರುಳಿ ಇಡೀ ಕುಟುಂಬವನ್ನು ಸರ್ವನಾಶ ಮಾಡಬೇಕಾಗಿರಲಿಲ್ಲ. ಸರಿದು ಹೋದ ಈ ವರ್ಷದ ದಿನಗಳತ್ತ ಕಣ್ಣುಹಾಯಿಸಿದರೆ ಬೇಜವಾಬ್ದಾರಿಯ ವಾಹನ ಚಾಲನೆ ಅನೇಕ ಮನೆಗಳ ಬೆಳಗುವ ಜ್ಯೋತಿಯನ್ನೇ ಆರಿಸಿಬಿಟ್ಟಿರುವುದು ತಿಳಿಯುತ್ತದೆ. ಸೌಲಭ್ಯಗಳು ಹೆಚ್ಚಿದಷ್ಟೂ ಜನಸಂಖ್ಯಾ ನಿಯಂತ್ರಣಕ್ಕೆ ಅದುವೇ ಮೂಲವಾಗುತ್ತಿದೆ. ವಿದ್ಯುತ್‌ ತಂತಿ ತುಳಿದುಪ್ರವಹಿಸುತ್ತಿರುವ ವಿದ್ಯುತ್‌ಗೆ ಬಲಿಯಾದವರಿದ್ದಾರೆ. ಮರಣಮೃದಂಗ ಬಾರಿಸಿದಾಗ, ಬೆಳಗುವ ವಿದ್ಯುತ್ತೇ ಹಲವು ಮನೆಗಳನ್ನು ಶಾಶ್ವತವಾಗಿ ಕತ್ತಲಿಗೆ ದೂಡಿಬಿಟ್ಟಿದೆ.

ಸಾವು ಗೆಲ್ಲಲಾಗದ್ದು ಎಂಬುದು ನಿಜ. ಆದರೆ ಮಾನವಕೃತ ತಪ್ಪುಗಳೇ ನಿರಪರಾಧಿಗಳ ಬದುಕನ್ನು ಕಮರಿಸುವಂತಹ ಪ್ರಕರಣಗಳು ನಡೆಯಬಾರದಿತ್ತು ಎಂದು ಅನ್ನಿಸಿದರೆ ಖಂಡಿತ ತಪ್ಪಲ್ಲ.

ನಿಸರ್ಗ ನಿಯಮದ ಪ್ರಕಾರ ಬರುವ ಸಾವನ್ನು ಸ್ವಾಗತಿಸಬೇಕು. ಆದರೆ ಕೈಯ್ಯಾರೆ ಬದುಕಿಗೆ ಅಂತ್ಯ ಹಾಡುವ ಅವಿವೇಕತನವನ್ನು ಕೈಬಿಡಬೇಕು. ಬದುಕಿ ಸಾಧಿಸಬೇಕು. ಇದ್ದು ಗೆಲ್ಲಬೇಕು. ‘ಕತ್ತಲು ಕಂಡು ಭಯಪಡುವುದೇತಕೆ, ಕತ್ತಲ ಹಿಂದೆ ಬೆಳಕಿಹುದು, ಕಾಯುವ ತಾಳ್ಮೆಯ ಸಾಧಿಸಿಕೊಂಡರೆ ಅಂತಿಮ ಗೆಲುವು ನಿನಗಿಹುದು’ ಎನ್ನುವ ಕವಿವಾಣಿಯ ಹಾಗೆ ನಮಗೆ ನಾವೇ ಅರಿವಿನ ಬೆಳಕು ಮೂಡಿಸಿಕೊಳ್ಳಬೇಕು. ಎಷ್ಟೋ ಮಂದಿಯ ಆತ್ಮಹತ್ಯೆಗೆ ಹೇಡಿತನ ಬಿಟ್ಟರೆ ಅನ್ಯ ಕಾರಣವಿರುವುದಿಲ್ಲ. ಸಾಯುವ ಮೊದಲು ಹೇಳಿಕೆಯನ್ನು ಧ್ವನಿಮುದ್ರಣ ಮಾಡಿ ಬಳಿಕ ಸಾವಿಗೆ ಶರಣಾಗುವವರು ಸಾಧಿಸುವುದಾದರೂ ಏನಿದೆ? ಬದುಕಿ ತೋರಿಸಬೇಕು. ಸಾವನ್ನು ಸೋಲಿಸಬೇಕು.

ಹೊಸ ವರ್ಷ ಸಾವು ಗೆಲ್ಲುವ ದಿನಗಳನ್ನು ತರುವಂತಾಗಬೇಕು. ಆತ್ಮಹತ್ಯೆ ಮತ್ತು ಕೊಲೆ ಎರಡೂ ಸ್ವಯಂಕೃತ ಅಪರಾಧಗಳು. ಅದಕ್ಕೆ ಎಡೆ ನೀಡಬಾರದು. ಒಂದೇ ಒಂದು ಆಸೆಯ ಎಳೆ ವಿವೇಕವಾಗಿ ನಮ್ಮನ್ನು ಎಚ್ಚರಿಸಬೇಕು. ಕೊಂದವ ಜೈಲು ಸೇರಿ, ಬಳಿಕ ಬಿಡುಗಡೆಯಾಗಿ ಹೊರಬರಬಹುದು. ಆದರೆ ಒಂದು ಸ್ನೇಹದ ಅನುಬಂಧದಲ್ಲಿ, ಪ್ರೀತಿಯ ಮಾತಿನಲ್ಲಿ, ಶಾಂತಿ, ಸಮಾಧಾನದಿಂದ ನಡೆಸುವ ಬದುಕಿನಲ್ಲಿ ಇರುವ ಸುಖ, ಜೀವಹರಣದಲ್ಲಿ ಯಾವತ್ತಿಗೂ ಲಭಿಸಲಾರದು. ಯಾರದೋ ಬದುಕನ್ನು ಕಿತ್ತುಕೊಂಡು ಹಗೆ ತೀರಿಸುವ ಮನೋವೃತ್ತಿ ಶಾಶ್ವತ ಸಮಾಧಾನದ ಬುತ್ತಿಯನ್ನು ಕಟ್ಟಿಕೊಡಲಾರದು.

ಬರುವ ವರ್ಷ ಸಾವನ್ನು ಗೆಲ್ಲುವ ಸಂವತ್ಸರವಾಗಲಿ. ಸಾವಿನ ಮನೆಯ ಕದ ತಟ್ಟದ, ಬದುಕಿನ ಚಿಗುರು ನಳನಳಿಸುವ ನವ ವಸಂತದ ಹರುಷ ತರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.