ಈಚೆಗೆ ಪರಿಚಿತರೊಬ್ಬರು ಸಿಕ್ಕಿದ್ದರು. ಮಾತಿನ ಮಧ್ಯ ದಲ್ಲಿ ‘ಈಗ ನಾನು ರಾತ್ರಿ ಹೊತ್ತು ಬಸ್ಸಿನಲ್ಲಿ ಪ್ರಯಾಣಿ ಸೋದನ್ನೇ ಬಿಟ್ಟಿದ್ದೇನೆ’ ಎಂದರು. ‘ರಾತ್ರಿ ಆಗಾಗ ಎದ್ದು ಮೂತ್ರ ವಿಸರ್ಜನೆಗೆ ಹೋಗುವ ಅನಿವಾರ್ಯ ಇರುವವರಿಗೆ ಮತ್ತು ವಿಶೇಷವಾಗಿ ಮಹಿಳೆಯರ ಪಾಲಿಗೆ ರಾತ್ರಿ ಬಸ್ ಪ್ರಯಾಣ ನರಕವಾಗಿಬಿಟ್ಟಿದೆ’ ಎಂದು ತಮ್ಮ ನಿರ್ಧಾರಕ್ಕೆ ಕಾರಣವನ್ನೂ ಕೊಟ್ಟರು.
ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಅಲ್ಲದೇ ಅದು ಅವರೊಬ್ಬರದೇ ಅನುಭವವಲ್ಲ, ಬಹಳಷ್ಟು ಪ್ರಯಾಣಿಕರ ಅನುಭವವೂ ಹೌದು. ಮಧುಮೇಹದಂತಹ ಆರೋಗ್ಯ ಸಮಸ್ಯೆ ಇರುವವರು, ವಯಸ್ಸಾದವರು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದು ಸಹಜ. ಮಳೆಗಾಲ, ಚಳಿಗಾಲದಲ್ಲಿ ಆರೋಗ್ಯವಂತರಿಗೂ ಈ ತೊಂದರೆ ಬಾಧಿಸುತ್ತದೆ.
ರೈಲುಗಳಲ್ಲಾದರೆ ಶೌಚಾಲಯದ ವ್ಯವಸ್ಥೆ ಇದೆ. ಅಲ್ಲೇನೂ ಸಮಸ್ಯೆ ಇಲ್ಲ. ಆದರೆ ಬಸ್ಸುಗಳಲ್ಲಿ ಹಾಗಲ್ಲ. ಇತ್ತೀಚಿನ ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಬಸ್ಸುಗಳಲ್ಲಿ ಶೌಚಾಲಯ ಅಳವಡಿಸಲಾಗಿದೆ. ನಮ್ಮ ರಾಜ್ಯದ ವಿಷಯಕ್ಕೆ ಬರುವುದಾದರೆ ಫ್ಲೈಬಸ್ ಎಂದು ಕರೆಯುವ ಕೆಎಸ್ಆರ್‌ಟಿಸಿಯ ವಿಮಾನ ನಿಲ್ದಾಣ ಸೇವೆ ಬಸ್ಸುಗಳಲ್ಲಿ ಮಾತ್ರ ಚಿಕ್ಕ ಶೌಚಾಲಯಗಳು ಅಥವಾ ವಾಷ್‌ರೂಮ್‌ಗಳಿವೆ. ಆದರೆ ಅತ್ಯಾಧುನಿಕ ಮತ್ತು ಅತ್ಯಂತ ಐಷಾರಾಮಿ ಎನ್ನುವ ‘ಅಂಬಾರಿ ಉತ್ಸವ’ ಸರಣಿಯ ಬಸ್ಸುಗಳಲ್ಲೇ ಇಂಥ ಸೌಕರ್ಯ ಇಲ್ಲ. ಅದರಲ್ಲೇ ಇಲ್ಲ ಎಂದ ಮೇಲೆ ಇನ್ನಿತರ ಬಸ್ಸುಗಳಲ್ಲಿ ಅದನ್ನು ನಿರೀಕ್ಷೆ ಮಾಡುವಂತೆಯೂ ಇಲ್ಲ.
ಅಲ್ಲ, ಬಸ್ಸುಗಳಲ್ಲಿ ಚಾಲಕರು– ನಿರ್ವಾಹಕರು ಇರುತ್ತಾರೆ, ಅವರೂ ಮನುಷ್ಯರೇ ತಾನೆ. ಅವರಿಗೂ ಜಲಬಾಧೆಗೆ ಹೋಗಬೇಕು ಅಂತ ಅನಿಸುತ್ತದೆ. ಆಗಾಗ ನಿಲ್ಲಿಸುತ್ತಾರಲ್ಲ, ಮತ್ತೇನು ತೊಂದರೆ ಎಂದು ಅನಿಸಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಸಮಸ್ಯೆ ಇಷ್ಟು ಸರಳವಾಗಿಲ್ಲ. ಅವರು ಬಸ್ ನಿಲ್ದಾಣ ಗಳಲ್ಲಿ, ಉಪಾಹಾರ ಗೃಹಗಳು ಇರುವಲ್ಲಿ ಅಥವಾ ಟೋಲ್ ಕೇಂದ್ರಗಳಲ್ಲಿ (ಎಲ್ಲ ಟೋಲ್‌ಗಳಲ್ಲೂ ಶೌಚಾಲಯಗಳಿವೆ) ನಿಯಮಿತವಾಗಿ ಕೊನೇ ಪಕ್ಷ ಮೂರು ತಾಸಿಗೊಮ್ಮೆಯಾದರೂ ನಿಲ್ಲಿಸಿದರೆ ಇಷ್ಟೆಲ್ಲ ಗೊಣಗಾಡುವ ಅಗತ್ಯವೇ ಬರುತ್ತಿರಲಿಲ್ಲ.
ಯಾಕೆಂದರೆ ಬಹಳಷ್ಟು ಬಸ್ಸುಗಳ ಚಾಲಕರು ವಾಹನ ನಿಲ್ಲಿಸುವುದು ಅವರಿಗೆ ತುರ್ತು ಇದ್ದಾಗ ಮಾತ್ರ. ಅದಕ್ಕೊಂದು ನಿರ್ದಿಷ್ಟ ಸಮಯ, ನಿರ್ದಿಷ್ಟ ಸ್ಥಳ ಅಂತ ಏನೂ ಇಲ್ಲವೇ ಇಲ್ಲ. ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರ ಪರಿಣಾಮ ಏನೆಂದರೆ, ರಾತ್ರಿ ವೇಳೆಯಲ್ಲಿ ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ಕಷ್ಟ ಹೇಳತೀರದು. ಪುರುಷರಾದರೆ ಎಲ್ಲೆಂದರಲ್ಲಿ ದೇಹ ಬಾಧೆ ತೀರಿಸಿಕೊಳ್ಳಬಹುದು. ಆದರೆ ಮಹಿಳೆಯರು ಏನು ಮಾಡಬೇಕು? ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಲೇ ಬೇಕಾಗಿರುವ ಅನೇಕ ಮಹಿಳೆಯರು ಸಂಜೆ ನಂತರ ನೀರು ಕುಡಿಯುವುದನ್ನೇ ಬಿಡುತ್ತಾರೆ.
ಖಾಸಗಿ ಬಸ್ಸುಗಳ ವಿಚಾರ ಒತ್ತಟ್ಟಿಗಿರಲಿ, ಸರ್ಕಾರಿ ಒಡೆತನದ ಕೆಎಸ್ಆರ್‌ಟಿಸಿ, ಕಲ್ಯಾಣ ಕರ್ನಾಟಕ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮಗಳ
ಬಸ್ಸುಗಳಲ್ಲಾದರೂ ಈ ವಿಷಯದಲ್ಲಿ ಬಡಪಾಯಿ ಪ್ರಯಾಣಿಕರ ಬಗ್ಗೆ ಕರುಣೆ ತೋರುತ್ತಾರೇನೋ ಎಂದರೆ ಅದೂ ಇಲ್ಲ. ಖಾಸಗಿಯವರಿಗೆ ಹೋಲಿಸಿದರೆ ಸರ್ಕಾರಿ ಬಸ್ಸುಗಳ ಸಂಖ್ಯೆ ಹಲವು ಪಟ್ಟು ಹೆಚ್ಚು. ಇವುಗಳಲ್ಲಿ ಪ್ರಯಾಣಿಸುವವರ ಪ್ರಮಾಣ ಕೂಡ ಅಧಿಕ. ಇವು ಮೇಲ್ಪಂಕ್ತಿ ಹಾಕಬೇಕಾಗಿತ್ತು. ಆದರೆ ಬೆರಳೆಣಿಕೆಯಷ್ಟು ಬಸ್ ಚಾಲಕ, ನಿರ್ವಾಹಕರನ್ನು ಹೊರತುಪಡಿಸಿದರೆ ಈ ನಿಗಮಗಳ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ಈ ಅತಿ ಮುಖ್ಯ ಅಗತ್ಯದ ಕಡೆ ಗಮನವನ್ನೇ ಕೊಡುತ್ತಿಲ್ಲ.
ಇರುವುದರಲ್ಲಿ ಒಂದಿಷ್ಟು ಸಮಾಧಾನದ ಸಂಗತಿ ಎಂದರೆ, ಬೆಂಗಳೂರು– ಕುಂದಾಪುರ ಮಾರ್ಗದಲ್ಲಿ ರಾತ್ರಿ ಸಂಚರಿಸುವ ಸರ್ಕಾರಿ ಬಸ್‌ಗಳು ಉಡುಪಿ, ಮಂಗಳೂರು, ಸಕಲೇಶಪುರ, ಮಡಿಕೇರಿ ಬಸ್ ನಿಲ್ದಾಣಗಳಲ್ಲಿ ಕೆಲ ಕಾಲ ನಿಲ್ಲುವ ಅಭ್ಯಾಸ ಮಾಡಿಕೊಂಡಿವೆ. ಇಲ್ಲಿ ಶೌಚಾಲಯ ವ್ಯವಸ್ಥೆಯೂ ಪರವಾಗಿಲ್ಲ. ಆದರೆ ಬೆಂಗಳೂರಿನಿಂದ ಶಿವಮೊಗ್ಗ ಕಡೆ ಮತ್ತು ಹುಬ್ಬಳ್ಳಿ, ಕಲಬುರಗಿ, ವಿಜಯಪುರ ದಂತಹ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಮಾರ್ಗಗಳಲ್ಲಿ ಓಡಾಡುವ ಬಸ್‌ಗಳಲ್ಲಿ ಮಾತ್ರ ಯಮಯಾತನೆ. ದಾರಿ ಮಧ್ಯೆ ಬರುವ ಬಸ್ ನಿಲ್ದಾಣಗಳ ಒಳಗೆ ಇವು ಹೋಗುವುದೇ ಇಲ್ಲ. ಬಳ್ಳಾರಿಯಲ್ಲಿ ನಿಲ್ದಾಣದ ಹೊರಗೆ ನಿಲ್ಲಿಸುತ್ತಾರೆ. ಒಳಗೆ ಹೋಗಲು ಅದೇನು ಉದಾಸೀನವೋ ಗೊತ್ತಿಲ್ಲ. ರಾತ್ರಿ ಹೊತ್ತು ಬೇರೆ, ಬಸ್ ಎಲ್ಲಿ ಬಿಟ್ಟು ಹೋಗುತ್ತದೋ ಎಂಬ ಆತಂಕದಿಂದ ಪುರುಷ ಪ್ರಯಾಣಿಕರು ಧಡಬಡ ಇಳಿದು ರಸ್ತೆ ಪಕ್ಕದಲ್ಲೇ ದೇಹಬಾಧೆ ತೀರಿಸಿಕೊಂಡರೆ, ಮಹಿಳೆಯರು ಇಳಿಯುವ ಉಸಾಬರಿಯೇ ಬೇಡ ಎಂದು ಸುಮ್ಮನಾಗುತ್ತಾರೆ.
ಈ ಸಮಸ್ಯೆ ಸಂಬಂಧಿಸಿದವರ ಗಮನಕ್ಕೆ ಬರದಿರಲು ಮುಖ್ಯ ಕಾರಣ, ಜನಪ್ರತಿನಿಧಿಗಳು ಮತ್ತು ನಿಗಮಗಳ ಅಧಿಕಾರಿಗಳು ಬಸ್ಸುಗಳಲ್ಲಿ ಪ್ರಯಾಣಿಸುವುದು ಕಡಿಮೆ ಆಗಿರುವುದು. ಹಿಂದೆಲ್ಲ ಶಾಸಕರು ಬಸ್ಸುಗಳಲ್ಲೇ ಓಡಾಡುತ್ತಿದ್ದರು. ಈಗ ಅದು ಬಹಳ ಅಪರೂಪ. ಆದ್ದರಿಂದ ಇದರ ಪರಿಹಾರಕ್ಕೆ ಇರುವುದು ಒಂದೇ ದಾರಿ. ಪ್ರತಿ ಬಸ್ಸಿಗೂ ಕಡ್ಡಾಯವಾಗಿ ಶೌಚಾಲಯ ನಿಲುಗಡೆ ನಿಲ್ದಾಣವನ್ನು ನಿಗದಿಪಡಿಸ ಬೇಕು. ಅದು ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.