ADVERTISEMENT

ಸಂಗತ| ಎಂಜಿನಿಯರಿಂಗ್: ಗೊಂದಲ ಬೇಡ

ಆರ್ಥಿಕ ಸಂಕಷ್ಟದ ಈಗಿನ ಪರಿಸ್ಥಿತಿಯಲ್ಲಿ, ಈ ಶಿಕ್ಷಣದ ಮೇಲೆ ಅಧಿಕ ಹೂಡಿಕೆ ಮಾಡಲು ಹೊರಡುವವರು ಸೂಕ್ತ ಮಾಹಿತಿ, ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ

ಎಚ್.ಕೆ.ಶರತ್
Published 7 ಸೆಪ್ಟೆಂಬರ್ 2020, 19:30 IST
Last Updated 7 ಸೆಪ್ಟೆಂಬರ್ 2020, 19:30 IST
ರರ
ರರ   

ಸಿಇಟಿಯಲ್ಲಿ ಮೂವತ್ತೊಂದು ಸಾವಿರದ ರ‍್ಯಾಂಕ್ ಪಡೆದಿರುವ ಮಗನಿಗೆ, ತಾವು ಸೇರಿಸಲು ಬಯಸಿರುವ ಕಾಲೇಜಿನಲ್ಲಿ ಸೀಟು ಸಿಗುವುದೋ ಇಲ್ಲವೋ ಅಂತ ಪರಿಚಿತರೊಬ್ಬರು ಇತ್ತೀಚೆಗೆ ವಿಚಾರಿಸಿದರು. ಕೊರೊನಾ ಕಾರಣದಿಂದ ಮಗನನ್ನು ಬೇರೆ ಊರಿಗೆ ಕಳಿಸಲು ಸಿದ್ಧರಿಲ್ಲದ ಅವರು, ಮನೆಗೆ ಸಮೀಪದಲ್ಲೇ ಇರುವ ಕಾಲೇಜಿಗೆ ಸೇರಿಸುವುದೇ ಸೂಕ್ತವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಹೆಚ್ಚು ಹಣ ನೀಡಿ ಮ್ಯಾನೇಜ್‍ಮೆಂಟ್ ಕೋಟಾದಡಿ ಸೀಟು ಪಡೆಯುವುದೋ ಅಥವಾ ಸಿಇಟಿ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸರ್ಕಾರಿ ಕೋಟಾದಡಿ ಸೀಟು ಪಡೆಯುವುದೋ ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ. ಒಂದು ವೇಳೆ ಆತನ ರ‍್ಯಾಂಕ್‍ಗೆ ಸರ್ಕಾರಿ ಕೋಟಾದಡಿ ತಾವು ಬಯಸಿದ ಕಾಲೇಜಿನಲ್ಲಿ ಸೀಟು ಸಿಗದೇ ಹೋದರೆ ಏನು ಮಾಡುವುದು ಎನ್ನುವ ದುಗುಡವೂ ಅವರನ್ನು ಆವರಿಸಿದೆ.

ದ್ವಿತೀಯ ಪಿಯುಸಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಹೊರಬಿದ್ದ ನಂತರ, ಎಂಜಿನಿಯರಿಂಗ್ ಪದವಿಗೆ ಸೇರಲು ಬಯಸಿರುವ ಹಲವು ವಿದ್ಯಾರ್ಥಿಗಳು ಮತ್ತವರ ಪೋಷಕರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ದೊರಕದೇ ಹೋದಲ್ಲಿ, ತಮ್ಮ ತಪ್ಪು ನಿರ್ಧಾರದಿಂದ ಅವರು ಅನಗತ್ಯ ಆರ್ಥಿಕ ಹೊರೆ ಹೊತ್ತುಕೊಳ್ಳುವ ಸನ್ನಿವೇಶವೂ ಎದುರಾಗಲಿದೆ.

ಕಳೆದ ವರ್ಷ ಸಿಇಟಿಯಲ್ಲಿ ಅರವತ್ತೇಳು ಸಾವಿರದ ರ‍್ಯಾಂಕ್ ಪಡೆದಿದ್ದ ಮಗನಿಗೆ ಸಿಇಟಿ ಫಲಿತಾಂಶ ಪ್ರಕಟವಾದ ಕೂಡಲೇ, ಆ ರ‍್ಯಾಂಕ್‍ಗೆ ತಮ್ಮ ಮಗನಿಗೆ ಸರ್ಕಾರಿ ಕೋಟಾದ ಸೀಟು ದೊರಕುವುದಿಲ್ಲವೆಂದು ಭಾವಿಸಿದ ಸ್ನೇಹಿತನ ಸಂಬಂಧಿಯೊಬ್ಬರು, ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾನೇಜ್‍ಮೆಂಟ್ ಕೋಟಾದಡಿ ಸೀಟು ಕೊಡಿಸಿದ್ದರು. ಅವರ ಮಗ ಆಯ್ದುಕೊಂಡಿರುವ ವಿಭಾಗದಲ್ಲಿದ್ದ 120 ಸೀಟುಗಳ ಪೈಕಿ ಕಳೆದ ವರ್ಷ ಭರ್ತಿಯಾದದ್ದು ಕೇವಲ 17 ಸೀಟುಗಳು. ಸರ್ಕಾರಿ ಕೋಟಾದಡಿಯ ಸೀಟುಗಳೂ ತುಂಬಿರಲಿಲ್ಲ.

ADVERTISEMENT

ಆರ್ಥಿಕ ಸಂಕಷ್ಟ ಬಹುತೇಕರನ್ನು ತಟ್ಟಲಾರಂಭಿಸಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಪಡೆದುಕೊಳ್ಳುವ ವ್ಯವಧಾನ ತೋರದೆ, ಎಂಜಿನಿಯರಿಂಗ್ ಶಿಕ್ಷಣದ ಮೇಲೆ ಅಧಿಕ ಹೂಡಿಕೆ ಮಾಡಲು ಹೊರಡುವವರು ವಾಸ್ತವ ಸ್ಥಿತಿಯನ್ನು ಮನಗಾಣಬೇಕಿದೆ. ಆರ್ಥಿಕವಾಗಿ ಸಬಲರಲ್ಲದವರು ದುಡುಕಿ ತಮ್ಮ ಮಕ್ಕಳಿಗೆ ಹೆಚ್ಚುವರಿ ಶುಲ್ಕ ಪಾವತಿಸಿ ಮ್ಯಾನೇಜ್‍ಮೆಂಟ್ ಕೋಟಾದಡಿಯ ಸೀಟುಗಳನ್ನು ಕೊಡಿಸುವ ಬದಲು, ಸಿಇಟಿ ರ‍್ಯಾಂಕುಗಳ ಆಧಾರದಲ್ಲಿ ನಡೆಯುವ ಸರ್ಕಾರಿ ಕೋಟಾದಡಿಯ ಸೀಟುಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಅಂತಿಮ ಸುತ್ತಿನವರೆಗೂ ತಾಳ್ಮೆಯಿಂದ ಕಾದು ನೋಡುವ ಸಂಯಮ ಪ್ರದರ್ಶಿಸುವುದು ಒಳ್ಳೆಯದು. ಇದರಿಂದ, ಅನಗತ್ಯವಾಗಿ ಆರ್ಥಿಕ ಹೊರೆ ಹೊತ್ತು
ಕೊಳ್ಳಬೇಕಾದ ಸಂದರ್ಭ ಉದ್ಭವಿಸದು.

ಸಿಇಟಿ ಪ್ರವೇಶ ಪ್ರಕ್ರಿಯೆಯ ಮೊದಲ ಹಂತವಾದ ದಾಖಲಾತಿಗಳ ಪರಿಶೀಲನೆಗೆ ಈಗಾಗಲೇ ಚಾಲನೆ ದೊರೆತಿದ್ದು, ಅಕ್ಟೋಬರ್‌ನಲ್ಲಿ ಸೀಟು ಹಂಚಿಕೆ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಕಾಲೇಜು ಮತ್ತು ವಿಭಾಗದ ಆಯ್ಕೆಗೆ ಆದ್ಯತೆ ನೀಡುವ ವೇಳೆ ಹೆಚ್ಚು ಮುತುವರ್ಜಿ ತೋರಬೇಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಹಿಂದಿನ ವರ್ಷಗಳ ಕಟ್‌ ಆಫ್‌ ರ‍್ಯಾಂಕುಗಳ ವಿವರವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ನಿರ್ದಿಷ್ಟ ರ‍್ಯಾಂಕಿಂಗ್‍ಗೆ ಯಾವೆಲ್ಲ ಕಾಲೇಜುಗಳಲ್ಲಿ ಸೀಟು ಲಭ್ಯವಾಗಬಹುದು ಎನ್ನುವ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.

ತಮ್ಮ ಮೂಗಿನ ನೇರಕ್ಕೆ ಸಲಹೆ, ಸೂಚನೆಗಳನ್ನು ನೀಡುವವರಿಗಿಂತ ಕಳೆದ ವರ್ಷದ ಕಟ್‌ ಆಫ್‌ ರ‍್ಯಾಂಕಿಂಗ್ ಹೆಚ್ಚು ವಿಶ್ವಾಸಾರ್ಹವೆನ್ನುವುದು ಗಮನಾರ್ಹ. ಕಳೆದ ಕೆಲ ವರ್ಷಗಳಿಂದ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಉಳಿದ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಸೀಟುಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ನಾಲ್ಕೈದು ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನದ್ದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗಾಗಿ ಇಂದಿನ ವಸ್ತುಸ್ಥಿತಿ ಅರಿಯದವರಿಂದ ದೊರೆಯುವ ಮಾರ್ಗದರ್ಶನವನ್ನು ಅಲಕ್ಷಿಸುವುದೇ ಉತ್ತಮ.

ಮತ್ತೊಂದು ಅಂಶವೂ ಇಲ್ಲಿ ಗಮನಾರ್ಹ. ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದೇ ವಿಭಾಗದಲ್ಲಿ ಅನುದಾನಿತ ಹಾಗೂ ಅನುದಾನರಹಿತ ಸೀಟುಗಳು ಲಭ್ಯವಿರಲಿವೆ. ಆದ್ಯತೆ ನೀಡುವಾಗ ಅನುದಾನಿತ ಸೀಟಿಗೆ ಮೊದಲ ಪ್ರಾಮುಖ್ಯ ನೀಡುವುದು ಸೂಕ್ತ. ಏಕೆಂದರೆ, ಸರ್ಕಾರಿ ಕೋಟಾದಡಿ ಹಂಚಿಕೆಯಾಗುವ ಅನುದಾನರಹಿತ ಸೀಟಿಗಿಂತ ಅನುದಾನಿತ ಸೀಟಿನ ಶುಲ್ಕ ತೀರಾ ಕಡಿಮೆ ಇರಲಿದೆ.

ಯಾವ ವಿಭಾಗ ಆರಿಸಿಕೊಳ್ಳಬೇಕೆಂಬ ಪ್ರಶ್ನೆಗೆ, ಆಸಕ್ತಿಯ ಆಧಾರದಲ್ಲಿ ಉತ್ತರ ಕಂಡುಕೊಳ್ಳುವುದು ಸಮಂಜಸ. ಇನ್ನು ನಾಲ್ಕು ವರ್ಷಗಳ ನಂತರ ಯಾವ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಲಿದೆ? ಯಾವ ಕ್ಷೇತ್ರ ನೆಲ ಕಚ್ಚಲಿದೆ? ಯಾವೆಲ್ಲ ಕ್ಷೇತ್ರಗಳು ಚೇತರಿಕೆ ಕಾಣಲಿವೆ ಎಂಬುದನ್ನು ಸರಿಯಾಗಿ ಊಹಿಸಲು ಇಂದಿನ ಅನಿಶ್ಚಿತ ಪರಿಸ್ಥಿತಿಯಲ್ಲಿ ಯಾರಿಗೆ ಸಾಧ್ಯವಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.