ಸಂಗತ: ಅಲೆಮಾರಿಗಳ ಬದುಕುವ ಹಕ್ಕು ಕಸಿಯದಿರಿ
ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಅಲೆಮಾರಿಗಳ ವಿಷಯದಲ್ಲಿ ಗಾಳಿಗೆ ತೂರಲಾಗಿದೆ. ತಬ್ಬಲಿ ಸಮುದಾಯಗಳಿಗೆ ನ್ಯಾಯ ದೊರಕಿಸುವುದು ಮುಖ್ಯಮಂತ್ರಿಗಳ ಕರ್ತವ್ಯ.
***
ಒಮ್ಮೆ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎನ್. ಮುನಿಸ್ವಾಮಿ ಅವರೊಂದಿಗೆ ನಾನು ಮತ್ತು ಗೆಳೆಯರು ಮಾತನಾಡುತ್ತಿರುವಾಗ, ಚಾತುರ್ವರ್ಣ ವ್ಯವಸ್ಥೆ ಬಗ್ಗೆ ಚರ್ಚೆಯಾಗುತ್ತಿತ್ತು. ನಮ್ಮಲ್ಲೊಬ್ಬರು ಚಾತುರ್ವರ್ಣ ಪದ್ಧತಿಯ ಶ್ರೇಣೀಕರಣವನ್ನು ತಲೆಕೆಳಗು ಮಾಡಬೇಕು ಎಂದರು. ಆ ಮಾತುಗಳನ್ನು ಕೇಳಿದೊಡನೆ ಗಾಬರಿಗೊಂಡ ಮುನಿಸ್ವಾಮಣ್ಣ, ‘ಅದ್ಯಾಕಂಗೆ ಅಂತೀರಪ್ಪ, ಚಾತುರ್ವರ್ಣ ತಲೆಕೆಳಗಾದರೆ ಬ್ರಾಹ್ಮಣರು ಅಸ್ಪೃಶ್ಯರಾಗಿ ಬಿಡುತ್ತಾರೆ. ಈ ‘ಅಸ್ಪೃಶ್ಯತೆ’ ಎಂಬ ನರಕ ನನ್ನ ಶತ್ರುವಿಗೂ ಬೇಡ. ತಲೆಕೆಳಗಾಗೋದೂ ಬೇಡ. ಸಮಾನವಾಗಲಿ’ ಎಂದಿದ್ದರು. ನಾವು ಕರಗಿ ನೀರಾಗಿದ್ದೆವು.
ಒಳಮೀಸಲಾತಿ ಜಾರಿ ಸಂಬಂಧ ಅಲೆಮಾರಿ ಸಮುದಾಯಗಳು ಅನುಭವಿಸುತ್ತಿರುವ ನರಕವನ್ನು ಪ್ರಭುತ್ವ ಮತ್ತು ಸಮಾಜ ಮುನಿಸ್ವಾಮಣ್ಣನವರ ಅಂತಃಕರಣದಿಂದ ನೋಡಬೇಕಿದೆ. ಆ ನರಕದೊಳಗೆ ಕನಿಷ್ಠ ಪಕ್ಷ ಕಣ್ಣಾಡಿಸಿ ನೋಡಬೇಕಿದೆ. ಬುದ್ಧನ ಪ್ರಜ್ಞೆಯಲ್ಲಿ ಜೀವ ಪಡೆದ ಕರುಣೆ ಮೈತ್ರಿಯದು.
ಒಳಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್ ಕಳೆದ ವರ್ಷದ ಆಗಸ್ಟ್ 1ರಂದು, ‘ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸಾಂವಿಧಾನಿಕವಾಗಿ ದತ್ತವಾಗಿದೆ’ ಎಂದು ತೀರ್ಪು ನೀಡಿತು. ಪರಿಶಿಷ್ಟ ಜಾತಿಗಳು ಏಕರೂಪ ಸಮುದಾಯಗಳಲ್ಲ ಎಂದು ಸ್ಪಷ್ಟಪಡಿಸಿ, ಸಾಮಾಜಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಒಳಮೀಸಲಾತಿ ನೀಡಲು ಸೂಚಿಸಿತ್ತು. ಇದಕ್ಕೆ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಿತ್ತು. ಆ ಕಾರಣ, ಕರ್ನಾಟಕ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗವನ್ನು ರಚಿಸಿತ್ತು. ಈ ಆಯೋಗವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜನಗಣತಿಯನ್ನು ಹೊರತುಪಡಿಸಿದ ಬೃಹತ್ ಸಮೀಕ್ಷೆಗೆ ಕೈ ಹಾಕಿ, ಯಶಸ್ವಿಯೂ ಆಯಿತು.
ನಾಗಮೋಹನದಾಸ್ ಆಯೋಗವು ಸುಮಾರು ಶೇ 70ರಷ್ಟು ಪರಿಶಿಷ್ಟ ಜಾತಿಗಳ ಗಣತಿ ಮಾಡಿತು. ಜನಸಂಖ್ಯೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ದತ್ತಾಂಶಗಳನ್ನು ಶೇಖರಿಸಿತು. ಅದರ ಆಧಾರದ ಮೇಲೆ 101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿತು. ಇದರಲ್ಲಿ ಮೊದಲನೇ ಗುಂಪು (ಪ್ರವರ್ಗ ‘ಎ’) ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 59 ಅಲೆಮಾರಿ ಸಮುದಾಯಗಳನ್ನು ಒಳಗೊಂಡಿತ್ತು. ಇವುಗಳ ಸಂಖ್ಯೆ ಕೇವಲ ಶೇ 5ರಷ್ಟು ಇತ್ತು. ‘ಮಾಸ್ತಿ’ ಎಂಬ 33 ಜನರಿಂದ ಹಿಡಿದು ಚೆನ್ನ–ಹೊಲೆಯ ದಾಸರ್ ಎಂಬ 80,000 ಜನಸಂಖ್ಯೆವರೆಗಿನ ಸಮುದಾಯಗಳು ಈ ಗುಂಪಿನಲ್ಲಿದ್ದವು. ಇವರಲ್ಲಿನ ಚುನಾಯಿತ ಸದಸ್ಯರು ಕೇವಲ ಶೇ 0.09. ಉದ್ಯೋಗಿಗಳ ಸಂಖ್ಯೆ ಶೇ 0.86. ಪದವಿ ಪಡೆದವರು ಶೇ 3.66. ಹೀಗೆ ಇಡೀ ಪರಿಶಿಷ್ಟ ಜಾತಿಗಳಿಗೆ ಹೋಲಿಸಿದರೆ ಅಲೆಮಾರಿ ಸಮುದಾಯಗಳು ಹಲವು ಮಾನದಂಡಗಳಲ್ಲಿ ಸಾಮಾಜಿಕವಾಗಿ ಹಿಂದುಳಿದಿವೆ.
ಆಯೋಗದ ಶಿಫಾರಸನ್ನು ಪರಿಷ್ಕರಿಸಿರುವ ಸರ್ಕಾರ, ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’ ಮತ್ತು ‘ಸಿ’ ಎಂಬ ಮೂರು ಪ್ರವರ್ಗಗಳಾಗಿ ವಿಂಗಡಣೆ ಮಾಡಿದೆ. ಯಾವ ಲೆಕ್ಕಾಚಾರದಲ್ಲಿ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ‘ಸಿ’ಗೆ ಸೇರಿಸಿತೋ ತಿಳಿಯದಾಗಿದೆ. ಏಕೆಂದರೆ ಭೋವಿ, ಲಂಬಾಣಿಯವರು ಇರುವ ಈ ಪ್ರವರ್ಗದಲ್ಲಿ ಅಲೆಮಾರಿ ಸಮುದಾಯಗಳು ಸ್ಪರ್ಧೆಗೆ ಇಳಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಉದಾಹರಣೆಗೆ, ಪಿಯುಸಿ ತೇರ್ಗಡೆಯಲ್ಲಿ ಅಲೆಮಾರಿ ಸಮುದಾಯಗಳ ಪಾಲು ಶೇ 6.64ರಷ್ಟಿದ್ದರೆ, ಪ್ರವರ್ಗ ‘ಡಿ’ಗಳದ್ದು (ಭೋವಿ, ಲಂಬಾಣಿ, ಕೊರಮ, ಕೊರಚ) ಶೇ 9.12. ಅದೇ ರೀತಿಯಲ್ಲಿ, ಕ್ರಮವಾಗಿ ಪದವಿ ಪಡೆದವರು ಶೇ 3.66 ಮತ್ತು ಶೇ 5.07. ಎಂಜಿನಿಯರಿಂಗ್ ಪದವಿ ಪಡೆದವರು ಶೇ 0.93 ಮತ್ತು ಶೇ 1.23. ವಿದ್ಯಾರ್ಥಿ ವೇತನ ಪಡೆದವರಲ್ಲಿ ಶೇ 15.26 ಮತ್ತು ಶೇ 20.09. ಸರ್ಕಾರಿ ಉದ್ಯೋಗದಲ್ಲಿ ಶೇ 0.86 ಅಲೆಮಾರಿಗಳಾದರೆ, ಶೇ 1.29 ಪ್ರವರ್ಗ ‘ಡಿ’ ಅವರದ್ದಾಗಿದೆ. ಅಲೆಮಾರಿಗಳಲ್ಲಿ ಇದುವರೆಗೆ 12 ಜಾತಿಗಳಿಗೆ ಸರ್ಕಾರಿ ಉದ್ಯೋಗವೇ ಸಿಕ್ಕಿಲ್ಲ. ಹೀಗಿರುವಾಗ ಪ್ರವರ್ಗ ‘ಡಿ’ ಜಾತಿಗಳೊಂದಿಗೆ ಅಲೆಮಾರಿ ಸಮುದಾಯಗಳನ್ನು ಸೇರಿಸುವುದು ಅನ್ಯಾಯವೇ ಸರಿ. ನ್ಯಾಯಾಲಯ ಸೂಚಿಸಿದ ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಅಲೆಮಾರಿಗಳ ವಿಚಾರದಲ್ಲಿ ಗಾಳಿಗೆ ತೂರಲಾಗಿದೆ.
ಸಂವಿಧಾನ ಜಾರಿಗೊಂಡು 75 ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, 6:6:5ರ ಪ್ರಮಾಣದ ಒಳಮೀಸಲಾತಿ ಜಾರಿ ಮೂಲಕ ಅಲೆಮಾರಿಗಳ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ; ಈ ಮೂಲಕ, ಮತಬ್ಯಾಂಕ್ ರಾಜಕಾರಣಕ್ಕೆ ಸರ್ಕಾರ ಶರಣಾಗಿರುವಂತಿದೆ. ಸಾಮಾಜಿಕ ನ್ಯಾಯದ ಪರ ವಾದಿಸುವ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನದ ವಿವೇಚನಾಧಿಕಾರ ಬಳಸಿ ಮತ್ತು ನ್ಯಾಯಾಲಯದ ತೀರ್ಪು ಗಮನಿಸಿ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ 1ರಷ್ಟು ಒಳಮೀಸಲಾತಿ ನೀಡಿ ನ್ಯಾಯ ಕೊಡಿಸಬೇಕಾಗಿದೆ. ಶಾಲೆ ಬಿಟ್ಟ ತಮ್ಮನ್ನು ನೇರವಾಗಿ 5ನೇ ತರಗತಿಗೆ ದಾಖಲು ಮಾಡಿಕೊಂಡ ಗುರುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ನೆನಪಿಸಿಕೊಳ್ಳುವುದಿದೆ. ಆ ಗುರುಗಳನ್ನು ನೆನೆದು, ತಬ್ಬಲಿ ಸಮುದಾಯಗಳಿಗೆ ಅವರು ನ್ಯಾಯ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.