ADVERTISEMENT

ಸಂಗತ: ನೋಟು ರದ್ದತಿ- ಜಾಣ ಮೌನವೇಕೆ?

ನೋಟು ರದ್ದತಿಯು ಆರ್ಥಿಕ ವ್ಯವಸ್ಥೆಗೆ ಒಳಿತು ಮಾಡಿದ್ದಕ್ಕಿಂತ ನಕಾರಾತ್ಮಕ ಪರಿಣಾಮ ಬೀರಿದ್ದೇ ಹೆಚ್ಚು ಎಂಬುದು ಆಳುವ ಪಕ್ಷಕ್ಕೂ ಮನದಟ್ಟಾಗಿದೆಯೇ?

ಎಚ್.ಕೆ.ಶರತ್
Published 19 ನವೆಂಬರ್ 2021, 2:13 IST
Last Updated 19 ನವೆಂಬರ್ 2021, 2:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವೆಂಬರ್ 8, ಪ್ರಧಾನಿ ನರೇಂದ್ರ ಮೋದಿಯವರು ₹500 ಮತ್ತು ₹1000 ಮುಖಬೆಲೆಯ ನೋಟು ರದ್ದತಿ ನಿರ್ಧಾರ ಪ್ರಕಟಿಸಿದ ಮಹತ್ವದ ದಿನ. ಈ ನಿರ್ಧಾರ ಕೈಗೊಂಡು ಐದು ವರ್ಷಗಳಾದ ಸಂಭ್ರಮವನ್ನು ಮೋದಿ ಅವರಾಗಲೀ ಆಡಳಿತಾರೂಢ ಬಿಜೆಪಿಯಾಗಲೀ ಆಚರಿಸಿದ್ದು ಎಲ್ಲೂ ಕಂಡುಬರಲಿಲ್ಲ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ, ಸರ್ಜಿಕಲ್ ಸ್ಟ್ರೈಕ್ ವರ್ಷಾಚರಣೆಗಳನ್ನು ಬಹು ಹುಮ್ಮಸ್ಸಿನಿಂದ ಆಯೋಜಿಸುವ ಬಿಜೆಪಿಗೆ, ನೋಟು ರದ್ದತಿ ನಿರ್ಧಾರ ಮಾತ್ರ ಏಕೆ ಸಂಭ್ರಮಿಸಲು ಅರ್ಹವಾದ ಬೆಳವಣಿಗೆಯಾಗಿ ತೋರುತ್ತಿಲ್ಲ? ಹಾಗಾದರೆ ನೋಟು ರದ್ದತಿ ಈ ದೇಶದ ಆರ್ಥಿಕ ವ್ಯವಸ್ಥೆಗೆ ಒಳಿತು ಮಾಡಿದ್ದಕ್ಕಿಂತ ಹೆಚ್ಚಾಗಿ ನಕಾರಾತ್ಮಕ ಪರಿಣಾಮ ಬೀರಿದ್ದೇ ಹೆಚ್ಚೆಂಬುದು ಸ್ವತಃ ಆಳುವ ಪಕ್ಷಕ್ಕೂ ಮನದಟ್ಟಾಗಿದೆಯೇ?

ಐದು ವರ್ಷಗಳ ಹಿಂದೆ ದಿಢೀರನೆ ಟಿ.ವಿ. ಪರದೆಗಳಲ್ಲಿ ಪ್ರತ್ಯಕ್ಷವಾಗಿ, ಈ ದೇಶದ ಜನರಲ್ಲಿ ಆತಂಕ ಮತ್ತು ಆಶಾಭಾವ ಎರಡನ್ನೂ ಹುಟ್ಟುಹಾಕಿದ್ದ ನೋಟು ರದ್ದತಿ ನಿರ್ಧಾರ ಪ್ರಕಟಿಸಿದ ವೇಳೆ ಪ್ರಧಾನಿ ಮೋದಿ ಅವರು ಆಡಿದ ಮಾತುಗಳು ಮತ್ತು ನೀಡಿದ ಆಶ್ವಾಸನೆಗಳಿಗೆ ಈಗಲೂ ಅವರು ಬದ್ಧರಾಗಿದ್ದಾರೆಯೇ? ಈ ನಿರ್ಧಾರದಿಂದ ಜನಸಾಮಾನ್ಯರು ಅನುಭವಿಸಿದ ಯಾತನೆಗೆ ಪ್ರತಿಯಾಗಿ ಅವರಿಗೆ ದಕ್ಕಿದ್ದಾದರೂ ಏನೆಂದು ಉತ್ತರಿಸುವ ಪ್ರಯತ್ನ ಮಾಡಬಾರದೆ?

ADVERTISEMENT

ನೋಟು ರದ್ದತಿ ನಿರ್ಧಾರದಿಂದ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವೆಂದು ಅವರು ಹೇಳಿದ್ದರು. ಇಂದು ಭ್ರಷ್ಟಾಚಾರ ಕಡಿಮೆಯಾಗಿದೆಯೇ? ನೋಟು ರದ್ದತಿಯಿಂದ ಕಪ್ಪುಹಣ ಹೊಂದಿದ್ದವರನ್ನು ಗುರುತಿಸಲು ಸಾಧ್ಯವಾಗಿದ್ದರೆ, ಈ ನಿರ್ಧಾರದಿಂದ ತೊಂದರೆ ಅನುಭವಿಸಿದ, ಜೈಲುಪಾಲಾದ ತೆರಿಗೆ ವಂಚಕರ ಪಟ್ಟಿಯನ್ನು ದೇಶದ ಜನರ ಮುಂದಿಡುವ ಪ್ರಯತ್ನವನ್ನು ಒಕ್ಕೂಟ ಸರ್ಕಾರ ಮಾಡಬಾರದೇಕೆ?

ಭ್ರಷ್ಟಾಚಾರ ನಿಯಂತ್ರಿಸುವ ಪ್ರಾಮಾಣಿಕತೆ ಇದ್ದಿದ್ದರೆ, ಸರ್ಕಾರದ ಪ್ರತೀ ನಡೆಯಲ್ಲೂ ಪಾರದರ್ಶಕತೆ ಎದ್ದು ಕಾಣಬೇಕಿತ್ತಲ್ಲವೇ? ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಎದೆಯುಬ್ಬಿಸಿ ಹೇಳುವವರಿಗೆ ಕಡೆಪಕ್ಷ ಪಿಎಂ ಕೇರ್ಸ್ ನಿಧಿಗೆ ಬಂದಿರುವ ದೇಣಿಗೆ ವಿವರ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ಜನರಿಂದ ಸಂಗ್ರಹಿಸಿದ ಹಣದ ಲೆಕ್ಕ ಕೊಡಲೂ ಏಕೆ ಹಿಂಜರಿಕೆ? ಮಾಹಿತಿ ಹಕ್ಕು ಕಾಯ್ದೆ ದುರ್ಬಲಗೊಳಿಸಲು ತೋರುವ ಉತ್ಸಾಹವನ್ನು ಭ್ರಷ್ಟಾಚಾರ ನಿರ್ಮೂಲನೆಗೆ ತೋರುತ್ತಿರುವ ಇಚ್ಛಾಶಕ್ತಿ ಎಂದು ಭಾವಿಸಬೇಕೆ?

ನೋಟು ರದ್ದತಿ ನಿರ್ಧಾರವು ಭಯೋತ್ಪಾದನೆ ನಿಯಂತ್ರಣಕ್ಕೂ ನೆರವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು. ಅವರ ಈ ನಿರೀಕ್ಷೆಯಾದರೂ ನಿಜವಾಗಿದೆಯೇ? ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ನಡೆಸುತ್ತಿರುವ ಜನಸಾಮಾನ್ಯರು, ಪೊಲೀಸರು ಮತ್ತು ಯೋಧರ ಹತ್ಯೆಗಳನ್ನು ಗಮನಿಸುತ್ತಿರುವ ಯಾರಿಗೇ ಆದರೂ ವಾಸ್ತವದ ಅರಿವಾಗುವುದಿಲ್ಲವೇ?

ದೇಶದ ಆರ್ಥಿಕತೆ ಮತ್ತು ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ತೀವ್ರ ತೆರನಾದ ಪರಿಣಾಮ ಬೀರಿದ ನೋಟು ರದ್ದತಿಯಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಇದ್ದ ಅಸಲಿ ಕಾರಣವಾದರೂ ಏನು?

‘ಕೇವಲ ಐವತ್ತು ದಿನಗಳ ಕಾಲಾವಕಾಶ ನೀಡಿ. ಅಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಿರಿ. ಆನಂತರ ಎಲ್ಲರ ಬದುಕು ಹಸನಾಗಲಿದೆ’ ಎನ್ನುವ ಭರವಸೆ ನೀಡಿದ್ದ ವ್ಯಕ್ತಿ, ಅಂದು ತಾನಾಡಿದ್ದ ಮಾತುಗಳಿಗೆ ಉತ್ತರದಾಯಿ ಆಗಬೇಕಲ್ಲವೇ? ಪ್ರಧಾನಿ ಮೋದಿಯವರ ಭರವಸೆಯ ಮಾತುಗಳನ್ನು ನಂಬಿ ತರಹೇವಾರಿ ತೊಂದರೆಗಳನ್ನು ಎದುರಿಸಿದ ಜನರಿಗೆ ಕೊನೆಗೂ ಸಿಕ್ಕಿದ್ದಾದರೂ ಏನು?

ನೋಟು ರದ್ದತಿ ಎಂಬುದು ದೇಶದ ಅರ್ಥ ವ್ಯವಸ್ಥೆಯಲ್ಲಿನ ಕೊಳೆ ತೊಳೆದು ಶುಭ್ರಗೊಳಿಸಲು ಕಂಡುಕೊಂಡ ವಿನೂತನ ದಾರಿಯಾಗಿದ್ದರೆ, ಈ ದಾರಿಯನ್ನು ಅನುಸರಿಸುವ ಪ್ರಯತ್ನವನ್ನು ಬೇರೆ ದೇಶಗಳ ನಾಯಕರು ಏಕೆ ಮಾಡಲಿಲ್ಲ? ಸ್ವತಃ ಮೋದಿಯವರೇ ಈ ನಿರ್ಧಾರ ಕೈಗೊಂಡಿದ್ದು ತಮ್ಮ ಮಹತ್ತರ ಸಾಧನೆ ಎಂದು ಬಿಂಬಿಸಿಕೊಳ್ಳಲು ಏಕೆ ಮುಂದಾಗುತ್ತಿಲ್ಲ?‌

ನೋಟು ರದ್ದತಿ ನಿರ್ಧಾರ ಕೈಗೊಳ್ಳುವ ಮುನ್ನ ಅದರ ಪರಿಣಾಮಗಳ ಕುರಿತು ತಜ್ಞರೊಂದಿಗೆ ಪ್ರಧಾನಿ ಸಮಾಲೋಚನೆ ನಡೆಸಿರಲಿಲ್ಲವೇ? ಸೂಕ್ತ ಪರಾಮರ್ಶೆಯ ನಂತರ ಈ ನಿರ್ಧಾರ ಕೈಗೊಂಡಿದ್ದೇ ಆಗಿದ್ದರೆ, ನಿರೀಕ್ಷಿಸಿದ್ದ ಸಕಾರಾತ್ಮಕ ಪರಿಣಾಮಗಳ ಪೈಕಿ ಕೆಲವನ್ನಾದರೂ ಸಾಧಿಸಬೇಕಿತ್ತಲ್ಲವೇ?

ಒಂದು ವೇಳೆ ಈ ನಿರ್ಧಾರದಿಂದ ತಾವು ನಿರೀಕ್ಷಿಸಿದ್ದನ್ನು ಸಾಧಿಸಲು ವಿಫಲವಾಗಿದ್ದರೆ, ಆ ವೈಫಲ್ಯದ ಹೊಣೆ ಹೊರುವ ಜವಾಬ್ದಾರಿಯನ್ನು ನಿರ್ಧಾರ ಘೋಷಿಸಿದ್ದ ಪ್ರಧಾನಿಯವರೇ ಹೊರಬೇಕಲ್ಲವೇ? ತಾನು ಕೈಗೊಂಡ ತೀರ್ಮಾನದಿಂದಾಗಿ ದೇಶದ ಜನರು ಅನುಭವಿಸಿದ, ಇಂದಿಗೂ ಅನುಭವಿಸುತ್ತಲೇ ಇರುವ ದುಷ್ಪರಿಣಾಮಗಳ ಕುರಿತು ಇನಿತಾದರೂ ಪಶ್ಚಾತ್ತಾಪ ಪಡಬೇಕಲ್ಲವೇ? ಆತ್ಮವಿಮರ್ಶೆಗೆ ತನ್ನನ್ನು ಒಳಪಡಿಸಿಕೊಳ್ಳಲು ಸಿದ್ಧವಿಲ್ಲದ ನಾಯಕ, ತನ್ನ ತಪ್ಪುಗಳಿಂದ ಪಾಠ ಕಲಿಯಲು ಸಾಧ್ಯವೇ? ತಾನೇ ಎಸಗಿದ ತಪ್ಪುಗಳ ಕುರಿತು ಮರುಗದ ನಾಯಕನನ್ನು ಎಚ್ಚರಿಸುವ ಪ್ರಯತ್ನವನ್ನು ಪ್ರಜಾಪ್ರಭುತ್ವದ ಅಸಲಿ ಕಾವಲುಗಾರರಾದ ನಾವೆಲ್ಲರೂ ಮಾಡಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.