ADVERTISEMENT

ತೆರೆದ ಮನಸ್ಸಿನ ಪರೀಕ್ಷೆ

ಪ್ರಾಯೋಗಿಕವಾಗಿ ಕೆಲವು ವಿಷಯಗಳಿಗಾದರೂ ತೆರೆದ ಪುಸ್ತಕ ಪರೀಕ್ಷೆ ನಡೆಸಬಹುದು

ಎಚ್.ಕೆ.ಶರತ್
Published 5 ಜುಲೈ 2018, 20:09 IST
Last Updated 5 ಜುಲೈ 2018, 20:09 IST

ತೆರೆದ ಪುಸ್ತಕ ಪರೀಕ್ಷೆ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಒಲವು ವ್ಯಕ್ತಪಡಿಸಿರುವುದು, ಈ ನಿಟ್ಟಿನಲ್ಲಿ ಅಗತ್ಯವಿದ್ದ ಚರ್ಚೆಯೊಂದನ್ನು ಹುಟ್ಟು ಹಾಕಲು ನೆಪವಾಗಿದೆ. ಅದರ ಸಾಧಕ-ಬಾಧಕ ಕುರಿತ ಚರ್ಚೆ, ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿರುವ ಮಾನಸಿಕ ಒತ್ತಡವನ್ನು ತಗ್ಗಿಸುವುದರ ಬಗೆಗೆ ಕೇಂದ್ರಿತವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೂ ಇದೆ. ಇದುವರೆಗೂ ಶಿಕ್ಷಕ ಕೇಂದ್ರಿತ ಅಥವಾ ಶಿಕ್ಷಕ ಸ್ನೇಹಿಯಾಗಿದ್ದ ಕಲಿಕಾ ಪ್ರಕ್ರಿಯೆಯನ್ನು ಮಕ್ಕಳ ಕೇಂದ್ರಿತವಾಗಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ತೆರೆದ ಪುಸ್ತಕ ಪರೀಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಾದರೆ, ಈ ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಶಿಕ್ಷಕರು ಮಾನಸಿಕವಾಗಿ ಸಿದ್ಧರಿರುವರೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ.

ಎಂ.ಟೆಕ್. ವಿದ್ಯಾಭ್ಯಾಸದ ವೇಳೆ ನಮಗೆ ವಿಷಯವೊಂದನ್ನು ಬೋಧಿಸುತ್ತಿದ್ದ ಪ್ರಾಧ್ಯಾಪಕರೊಬ್ಬರು ಆಂತರಿಕ ಪರೀಕ್ಷೆಯಲ್ಲಿ ಏನನ್ನೇ ಬರೆದರೂ ಕಡಿಮೆ ಅಂಕ ನೀಡುತ್ತಿದ್ದರು. ಉತ್ತರ ಪತ್ರಿಕೆ ಹಿಡಿದು, ‘ಈ ಪ್ರಶ್ನೆಗೆ ಬರೆದಿರುವ ಉತ್ತರ ಸರಿ ಇದ್ದರೂ ಏಕೆ ಅಂಕ ನೀಡಿಲ್ಲ’ ಎಂದು ಯಾರಾದರೂ ವಿದ್ಯಾರ್ಥಿ ಪ್ರಶ್ನಿಸಿದರೆ, ‘ಇದು ಈ ಟೆಕ್ಸ್ಟ್ ಬುಕ್‍ನಲ್ಲಿ ಇದ್ಯಾ ತೋರ್ಸು’ ಅಂತ ತಮ್ಮ ಬಳಿ ಇರುವ ಪುಸ್ತಕ ಮುಂದೊಡ್ಡಿ, ‘ಅದರಲ್ಲಿರುವಂತೆಯೇ ಬರೆದಿದ್ಯಾ’ ಎಂದು ವಿಚಾರಿಸುತ್ತಿದ್ದರು. ಅವರ ಪ್ರಕಾರ, ಸಿಲಬಸ್ ಕಾಪಿಯಲ್ಲಿ ಉಲ್ಲೇಖಿಸಿರುವ ಪಠ್ಯ ಪುಸ್ತಕದಲ್ಲಿರುವ ಹಾಗೆ ಯಥಾವತ್ತು ಬರೆದರೆ ಮಾತ್ರ ಅದು ಸರಿ ಉತ್ತರ!

ADVERTISEMENT

ಇದೇ ಮನಸ್ಥಿತಿ ಹೊಂದಿರುವ ಬಹಳಷ್ಟು ಅಧ್ಯಾಪಕರು, ಶಿಕ್ಷಕರು ನಮ್ಮ ನಡುವೆ ಇರುವುದನ್ನು ಅಲ್ಲಗಳೆಯಲಾಗದು. ವಿಷಯ ಗ್ರಹಿಸಿ ತನ್ನದೇ ಆದ ಶೈಲಿಯಲ್ಲಿ ಅದನ್ನು ನಿರೂಪಿಸಲು ಹೊರಡುವ ವಿದ್ಯಾರ್ಥಿಗಳ ಬೆನ್ನು ತಟ್ಟುವ ಬದಲಿಗೆ, ಅವರನ್ನು ಕಂಠಪಾಠದ ಪಟುಗಳಾಗಿಸಲು ಇನ್ನಿಲ್ಲದ ಮುತುವರ್ಜಿ ತೋರುವವರಿಗೆ ಬರವಿಲ್ಲ.

ಉತ್ತರ ಪತ್ರಿಕೆಯ ಮೌಲ್ಯಮಾಪನ ಕ್ರಮಬದ್ಧವಾಗಿರಲಿ ಎಂಬ ಸದುದ್ದೇಶದಿಂದಲೇ ಸಿದ್ಧಪಡಿಸುವ ‘ಆನ್ಸರ್ ಸ್ಕೀಮ್’ ಕೂಡ, ವಿಶ್ಲೇಷಿಸಿ ತಮ್ಮದೇ ಶೈಲಿಯಲ್ಲಿ ಉತ್ತರಿಸುವವರ ಪರ ವಕಾಲತ್ತು ವಹಿಸುವುದು ಅಪರೂಪವೇ. ವಿಶ್ಲೇಷಣಾತ್ಮಕ ಪ್ರಶ್ನೆಗಳನ್ನು ಕೇಳುವ ಗೋಜಿಗೆ ಹೋಗದಿರುವುದೇ ಉತ್ತಮವೆಂಬ ನಿಲುವು ಕೆಲವು ಪ್ರಾಧ್ಯಾಪಕರದ್ದು! ಅಂತಹ ಪ್ರಶ್ನೆಗಳಿಗೆ ಇದಷ್ಟೇ ಉತ್ತರವೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲದ ಕಾರಣ ಮೌಲ್ಯಮಾಪನದ ವೇಳೆ ಸಮಸ್ಯೆ (ಸವಾಲು) ಎದುರಾಗುತ್ತದೆ ಎಂಬ ಕಾರಣಕ್ಕೆ, ‘ಓದು, ನೆನಪಿಟ್ಟುಕೋ, ಪರೀಕ್ಷೆ ಬರೆ, ಮರೆ’ ಸೂತ್ರಕ್ಕೆ ಬದ್ಧವಾಗಿರುವಂತಹ ಪ್ರಶ್ನೆಗಳನ್ನು ಕೇಳುವುದು ಕ್ಷೇಮವೆಂದೇ ಭಾವಿಸುತ್ತಾರೆ.

ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಶ್ನೆಗಳನ್ನು ಪೋಣಿಸುತ್ತ, ಪಠ್ಯಪುಸ್ತಕ ಅಥವಾ ನೋಟ್ಸ್‌ನಲ್ಲಿರುವುದನ್ನು ಯಥಾವತ್ತಾಗಿ ಬಟ್ಟಿ ಇಳಿಸುವುದನ್ನು ಅಪೇಕ್ಷಿಸುತ್ತ ಬಂದಿರುವ ಶಿಕ್ಷಕರು, ಮಕ್ಕಳಲ್ಲಿನ ಸೃಜನಶೀಲತೆ ಒರೆಗೆ ಹಚ್ಚಿ ಅವರಲ್ಲಿನ ವಿಶ್ಲೇಷಣಾತ್ಮಕ ಸಾಮರ್ಥ್ಯ ಪರೀಕ್ಷಿಸಲು ಬೇಕಿರುವ ಮುಕ್ತ ಮನಸ್ಸು ಹೊಂದಬಲ್ಲರೇ?

ಮೇಲಿನ ನಿದರ್ಶನಕ್ಕೆ ವ್ಯತಿರಿಕ್ತವಾದ ನಿಲುವು ಹೊಂದಿದ್ದ ಮತ್ತೊಬ್ಬರು ಪ್ರಾಧ್ಯಾಪಕರು ನಮಗೆ ಎಂ.ಟೆಕ್‌ನಲ್ಲಿ ಬೋಧಿಸುತ್ತಿದ್ದರು. ಒಮ್ಮೆ ಆಂತರಿಕ ಪರೀಕ್ಷೆಯನ್ನು ‘ತರೆದ ಪುಸ್ತಕ ಪರೀಕ್ಷೆ’ ಮಾದರಿಯಲ್ಲೇ ನಡೆಸಿದ್ದ ಅವರು, ಎರಡು ಪ್ರಶ್ನೆಗಳನ್ನು ನೀಡಿ ‘ಒಂದು ಗಂಟೆ ಬಿಟ್ಟು ಬರ್ತೀನಿ. ಯಾವ ನೋಟ್ಸು, ಬುಕ್‍ನಾದ್ರೂ ನೋಡ್ಕೊಂಡು ಉತ್ತರ ಬರೆಯಬಹುದು’ ಅಂತೇಳಿ ಹೊರ ಹೋಗಿದ್ದರು.

ಅವರು ಕೊಟ್ಟ ಪ್ರಶ್ನೆಗಳು ಆ ಸಬ್ಜೆಕ್ಟ್‌ಗೆ ಸಂಬಂಧಿಸಿದ್ದವೆ ಆಗಿದ್ದರೂ, ಅವುಗಳಿಗೆ ಸೂಕ್ತವಾದ ಉತ್ತರ ಯಾವುದಿರಬಹುದೆಂದು ನಿರ್ಧರಿಸುವುದೇ ನಮ್ಮ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ತೆರೆದ ಪುಸ್ತಕ ಪರೀಕ್ಷೆಗಿಂತ ಮಾಮೂಲಿ ಉರು ಹೊಡೆದು ಬರೆಯುವ ಪರೀಕ್ಷೆಯೇ ಸುಲಭವೇನೊ ಎಂದು ಚಡಪಡಿಸಿದ್ದೆವು!

ತೆರೆದ ಪುಸ್ತಕ ಪರೀಕ್ಷೆ ಎಂದ ಕೂಡಲೇ ‘ಕಾಪಿ ರೈಟಿಂಗ್’ ಮಾದರಿಯದ್ದಿರಬಹುದೆಂದು ಭಾವಿಸಿ ತಮ್ಮ ಅಭಿಪ್ರಾಯ ಮಂಡಿಸಲಾರಂಭಿಸಿದ್ದಾರೆ. ನಮ್ಮ ಪ್ರಾಧ್ಯಾಪಕರೊಬ್ಬರ ಪ್ರಯೋಗಶೀಲ ಗುಣದಿಂದಾಗಿ, ಎಂ.ಟೆಕ್. ಓದಿನ ವೇಳೆ ನಮಗಾದ ಅನುಭವ ತೆರೆದ ಪುಸ್ತಕ ಪರೀಕ್ಷೆಯನ್ನು ಬೇರೆಯದೇ ರೀತಿಯಲ್ಲಿ ನೋಡಬೇಕಿರುವ ಅಗತ್ಯವನ್ನು ಮನಗಾಣಿಸುತ್ತಲೇ ಇದೆ. ತೆರೆದ ಪುಸ್ತಕ ಪರೀಕ್ಷೆಯು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುವ ಜೊತೆಜೊತೆಗೆ ಶಿಕ್ಷಕರ ವಿಷಯ ಗ್ರಹಿಕಾ ಮಟ್ಟ, ಪ್ರಯೋಗಶೀಲತೆ, ವಿಶ್ಲೇಷಣಾ ಮನೋಭಾವವನ್ನೂ ಒರೆಗೆ ಹಚ್ಚುತ್ತದೆ.

ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟದ ಮೌಲ್ಯಮಾಪನ ನಡೆಸುವ National Board of Accreditation (NBA)ಕೂಡ ವಿದ್ಯಾರ್ಥಿ ಕೇಂದ್ರಿತ ಕಲಿಕೆಯಾದ Outcome Based Education (OBE)ಗೆ ಹೆಚ್ಚು ಒತ್ತು ನೀಡುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಅದರ ಆಧಾರದ ಮೇಲೆಯೇ ಕಾಲೇಜುಗಳಿಗೆ ಮಾನ್ಯತೆ ನೀಡಬೇಕೊ ಬೇಡವೋ ಎಂಬುದನ್ನು ಅದು ನಿರ್ಧರಿಸುತ್ತಿದೆ.

ಪುಸ್ತಕದಲ್ಲಿರುವುದನ್ನು ಉರು ಹೊಡೆದು ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸುವುದೇ ಕಲಿಕೆ ಎಂಬ ನಿಲುವಿಗೆ ಜೋತು ಬಿದ್ದಿರುವ ನಮಗೆ, ತೆರೆದ ಪುಸ್ತಕ ಪರೀಕ್ಷೆ ತರಬಹುದಾದ ಸುಧಾರಣೆಗಳ ಕುರಿತು ಸಾವಧಾನದಿಂದ ಪರಿಶೀಲಿಸುವ ವಿವೇಕ ಜಾಗೃತವಾಗಲೂ ಒಂದಿಷ್ಟು ಸಮಯ ಬೇಕಾಗಬಹುದು.

ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮತ್ತು ಪಿಎಚ್.ಡಿ. ಕೋರ್ಸ್ ವರ್ಕ್ ಪರೀಕ್ಷೆಗಳಾದರೂ ತೆರೆದ ಪುಸ್ತಕ ಮಾದರಿ ಅಳವಡಿಸಿಕೊಳ್ಳಬಾರದೆ? ಯಾವ ಹಂತದ ಕಲಿಕೆ ಹೇಗಿರಬೇಕು ಮತ್ತು ಅದನ್ನು ಹೇಗೆ ಪರೀಕ್ಷಿಸಬೇಕು ಎಂಬ ಕುರಿತ ಪುನರಾವ ಲೋಕನದೆಡೆಗೆ ಈ ಚರ್ಚೆ ವಿಸ್ತರಿಸಿಕೊಳ್ಳಲಿ. ಪ್ರಾಯೋಗಿಕವಾಗಿ ಕೆಲವು ವಿಷಯಗಳಿಗಾದರೂ ತೆರೆದ ಪುಸ್ತಕ ಪರೀಕ್ಷೆ ನಡೆಸಬಹುದು.

ವಿಶ್ವವಿದ್ಯಾಲಯಗಳು ಕೂಡ ಈ ನಿಟ್ಟಿನಲ್ಲಿ ಸಮಾಲೋಚಿಸಿ, ತಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಯತ್ತ ‘ತೆರೆದ’ ಮನಸ್ಸಿನಿಂದ ನೋಡುವಂತಾಗಲಿ. ಎಲ್ಲಕ್ಕೂ ಮೊದಲು, ತೆರೆದ ಪುಸ್ತಕ ಪರೀಕ್ಷೆ ಎಂದ ಮಾತ್ರಕ್ಕೆ ಅದು ಸಿದ್ಧ ಮಾದರಿಯ ಪ್ರಶ್ನೆಗಳಿಗೆ ಪಠ್ಯಪುಸ್ತಕ ನೋಡಿಕೊಂಡು ‘ಕಾಪಿ ರೈಟಿಂಗ್’ ಮಾದರಿಯಲ್ಲಿ ಬರೆಯುವುದಲ್ಲ ಎಂಬುದನ್ನು ಎಲ್ಲರಿಗೂ ಮನದಟ್ಟುಮಾಡಿಕೊಡುವ ನಿಟ್ಟಿನಲ್ಲೂ ಕಾರ್ಯೋನ್ಮುಖ ವಾಗಬೇಕಿದೆ. ಪ್ರಾಥಮಿಕ ಶಿಕ್ಷಣ ಸಚಿವರ ಆಲೋಚನೆ ಉನ್ನತ ಶಿಕ್ಷಣದೆಡೆಗೂ ಮುಖ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.