ADVERTISEMENT

ಪದ್ಮ ಪ್ರಶಸ್ತಿ: ಆರ್ಥಿಕ ಭದ್ರತೆಯೂ ಬೇಕಲ್ಲವೆ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:39 IST
Last Updated 29 ಜನವರಿ 2026, 0:39 IST
_
_   

ಭಾರತ ಸರ್ಕಾರ ನೀಡುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಗೌರವಗಳು. ರಾಷ್ಟ್ರಪತಿ ಭವನದ ವೈಭವ, ಮಾಧ್ಯಮಗಳ ಹೊಗಳಿಕೆ, ಸಾಮಾಜಿಕ ಜಾಲತಾಣಗಳ ಅಭಿನಂದನೆ, ಮುಂತಾದವು ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಕೆಲವು ಕ್ಷಣಗಳ ರಾಷ್ಟ್ರೀಯ ಸಂಭ್ರಮವನ್ನು ಸೃಷ್ಟಿಸುತ್ತದೆ. ಆ ಸಡಗರ ಮುಗಿದ ನಂತರ, ಪುರಸ್ಕಾರಕ್ಕೆ ಪಾತ್ರರಾದ ಕೆಲವರ ಬದುಕು ಹೇಗಿರುತ್ತದೆ?

ಪದ್ಮ ಪ್ರಶಸ್ತಿಗಳನ್ನು ಪಡೆದ ಹೆಚ್ಚಿನವರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಆರ್ಥಿಕ ಅಸ್ಥಿರತೆ, ಅನಾರೋಗ್ಯ ಮತ್ತು ವ್ಯವಸ್ಥಾತ್ಮಕ ನಿರ್ಲಕ್ಷ್ಯವನ್ನು ಎದುರಿಸುತ್ತಿದ್ದಾರೆ. ಕೆಲವು ಪದ್ಮ ಪ್ರಶಸ್ತಿ ಪುರಸ್ಕೃತರು ಖ್ಯಾತ ವೈದ್ಯರು, ವಿಜ್ಞಾನಿಗಳು, ಉದ್ಯಮಿಗಳು ಅಥವಾ ಕಲಾವಿದರು ಆಗಿರುವುದರಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುತ್ತಾರೆ. ಆದರೆ ಸಮಾಜ ಸೇವೆ, ಜಾನಪದ, ಸಾಹಿತ್ಯ, ಮುಂತಾದ ಕ್ಷೇತ್ರಗಳಲ್ಲಿನ ಹಲವು ಸಾಧಕರು ಸೀಮಿತ ಆದಾಯದೊಂದಿಗೆ ಜೀವನ ನಡೆಸುತ್ತಿರುವ ಉದಾಹರಣೆಗಳಿವೆ.

ಪದ್ಮ ಪ್ರಶಸ್ತಿಗಳೊಂದಿಗೆ ಯಾವುದೇ ನಗದು ಬಹುಮಾನ ಅಥವಾ ಹಣಕಾಸು ಅನುದಾನ ನೀಡಲಾಗುವುದಿಲ್ಲ. ಈ ಪ್ರಶಸ್ತಿ ಒಂದು ಪದಕ (ಮೆಡಲ್) ಹಾಗೂ ಭಾರತದ ರಾಷ್ಟ್ರಪತಿ ಅವರ ಸಹಿ ಇರುವ ಪ್ರಮಾಣಪತ್ರ ಒಳಗೊಂಡಿರುತ್ತದೆ. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಪಿಂಚಣಿ ಅಥವಾ ಗೌರವಧನ ನೀಡುವ ವ್ಯವಸ್ಥೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಲ್ಲ. ಈ ಕುರಿತ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ರಾಜ್ಯ ಸರ್ಕಾರಗಳು ಪುರಸ್ಕೃತರಿಗೆ ಆರ್ಥಿಕ ಅನುಕೂಲ ಕಲ್ಪಿಸುವ ಕೆಲಸ ಮಾಡಿವೆ. ಒಡಿಶಾ ರಾಜ್ಯ ಸರ್ಕಾರವು ತನ್ನ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮಾಸಿಕ ₹30 ಸಾವಿರ ಗೌರವಧನ ನೀಡುತ್ತಿದೆ. ತೆಲಂಗಾಣ ಸರ್ಕಾರ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪುರಸ್ಕೃತರಿಗೆ ಮಾಸಿಕ ₹25 ಸಾವಿರ ಪಿಂಚಣಿ ನೀಡುತ್ತಿದೆ. ಪದ್ಮಶ್ರೀ ಪ್ರಶಸ್ತಿ ವಿಜೇತರಿಗೆ ಒಮ್ಮೆ ಮಾತ್ರ ₹25 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಹರಿಯಾಣ ರಾಜ್ಯವು ಪದ್ಮ ಪುರಸ್ಕೃತರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡುತ್ತಿದೆ. ಉತ್ತರ ಪ್ರದೇಶದಲ್ಲಿ ₹50 ಸಾವಿರ ಪಿಂಚಣಿ ಇದೆ. ಉಳಿದ ರಾಜ್ಯಗಳಲ್ಲಿ ಇಂಥ ಅನುಕೂಲಗಳಿಲ್ಲ.

ADVERTISEMENT

ತಮ್ಮ ಬದುಕನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಅರ್ಪಿಸಿದವರು, ರಾಷ್ಟ್ರದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಮೇಲೂ ವೃದ್ಧಾಪ್ಯದಲ್ಲಿ ಮೂಲ ಸೌಲಭ್ಯಗಳಿಗಾಗಿ ಹೋರಾಡಬೇಕಾದ ಅಸಹಾಯಕ ಪರಿಸ್ಥಿತಿ ಇದೆ. ಒಡಿಶಾದ ಪದ್ಮಶ್ರೀ ಪುರಸ್ಕೃತ ನೃತ್ಯ ಕಲಾವಿದರೊಬ್ಬರು ಗಂಭೀರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಒದ್ದಾಡಿದ್ದರು. ರಾಜಸ್ಥಾನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಜಾನಪದ ಗಾಯಕರೊಬ್ಬರು ತಮ್ಮ ಅಂತಿಮ ದಿನಗಳಲ್ಲಿ ಸೂಕ್ತ ಆರೋಗ್ಯ ಸೌಲಭ್ಯಗಳಿಲ್ಲದೆ ಸಂಕಷ್ಟ ಅನುಭವಿಸಿದ್ದರು. ಒಡಿಶಾದ ಕವಿಯೊಬ್ಬರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಬರಲು ಹಣ ಇಲ್ಲದಿರುವುದರಿಂದ, ಅಂಚೆಯಲ್ಲಿ ಪ್ರಶಸ್ತಿ ಕಳುಹಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಹೀಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪದ್ಮ ಪ್ರಶಸ್ತಿ ಪುರಸ್ಕೃತರು ಅನೇಕ ರಾಜ್ಯಗಳಲ್ಲಿದ್ದಾರೆ. 2018ರಲ್ಲಿ, ಪದ್ಮ ಪ್ರಶಸ್ತಿ ಪಡೆದ ಕೆಲವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮಗೆ ಪಿಂಚಣಿ ಯೋಜನೆ ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕದಲ್ಲೂ ಪದ್ಮ ಪ್ರಶಸ್ತಿ ಪುರಸ್ಕೃತ ಕಲಾವಿದರು ಹಾಗೂ ಸಮಾಜಸೇವಕರಲ್ಲಿ ಕೆಲವರು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿಯೇ ಇದ್ದಾರೆ.

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಸರ್ಕಾರ ಸಾಧಕರಿಗೆ ಸಹಾಯ ಮಾಡುತ್ತಿದೆ ಎಂದು ಭಾವಿಸಬೇಕಾಗಿಲ್ಲ. ನಾಡಿನ ಘನತೆಯನ್ನು ಎತ್ತಿಹಿಡಿದ ಸಾಧಕರನ್ನು ಗೌರವಿಸಬೇಕಾದುದು ಹಾಗೂ ಅವರ ಹಿತಾಸಕ್ತಿ ರಕ್ಷಿಸಬೇಕಾದುದು ಸರ್ಕಾರದ ಹೊಣೆಗಾರಿಕೆ. ಅದು ರಾಷ್ಟ್ರದ ನೈತಿಕ ಹೊಣೆಗಾರಿಕೆಯೂ ಹೌದು.

ದೇಶ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿರುವ ಕಾರಣದಿಂದಾಗಿ ಸಾಧಕರಿಗೆ ಪದ್ಮ ಪುರಸ್ಕಾರ ನೀಡಲಾಗಿರುತ್ತದೆ. ಆ ಗೌರವ ಸಾಂಕೇತಿಕವಾಗಿಯಷ್ಟೇ ಉಳಿಯದೆ, ಅಗತ್ಯ ಇರುವವರಿಗೆ ಆರ್ಥಿಕ ಭದ್ರತೆಯಾಗಿ ಪರಿಣಮಿಸಬೇಕು. ಬರೀ ಗೌರವ ಹೊಟ್ಟೆ ತುಂಬಿಸುವುದಿಲ್ಲ ಎನ್ನುವುದು ಕಟು ವಾಸ್ತವ.

ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರಿಗೆ ಕಲ್ಯಾಣನೀತಿಯೊಂದನ್ನು ರೂಪಿಸಬೇಕು. ಅವರಿಗಾಗಿ ಜೀವನಪೂರ್ತಿ ಪಿಂಚಣಿ, ಉಚಿತ ಆರೋಗ್ಯ ಯೋಜನೆ, ತುರ್ತು ನೆರವು ನಿಧಿ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚುವರಿ ಬೆಂಬಲ ನೀಡುವಂತಹ ನೀತಿಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯ.

ಯಾವುದೇ ರಾಷ್ಟ್ರ ತನ್ನ ಮಹಾನ್ ವ್ಯಕ್ತಿಗಳನ್ನು ಅವರುಜೀವಂತವಾಗಿರುವಾಗಲೇ ಕಾಳಜಿ ಮಾಡಬೇಕು; ಸಾವಿನ ನಂತರ ಶೋಕಾಚರಣೆ ಮಾಡುವುದರಿಂದ ಉಪಯೋಗ ಇಲ್ಲ. ಪದ್ಮ ಪ್ರಶಸ್ತಿ ಪುರಸ್ಕೃತರು ನಮ್ಮ ಸಮಾಜದ ಮೌನ ಶಿಲ್ಪಿಗಳು. ಅವರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸುವುದು ಹಾಗೂ‌ ಸಂಧ್ಯಾ ಕಾಲವನ್ನು ನೆಮ್ಮದಿಯಿಂದ ಕಳೆಯುವಂತೆ ನೋಡಿಕೊಳ್ಳುವುದು ಅವರ ಸೇವೆಗೆ ಸರ್ಕಾರ ಹಾಗೂ ಸಮಾಜ ನೀಡಬಹುದಾದ ಅರ್ಥಪೂರ್ಣ ಗೌರವ.

ನಾಗರಿಕ ಪ್ರಶಸ್ತಿಗಳ ಮೌಲ್ಯವನ್ನು ಹಣದಿಂದ ಅಳೆಯಬಾರದು ಎನ್ನುವುದು ನಿಜ. ಆದರೆ, ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ನಂತರವೂ ಬದುಕು ಸಂಕಷ್ಟದಿಂದ ಕೂಡಿರಬಹುದು ಎನ್ನುವುದನ್ನು ‘ನಾಗರಿಕ ಸಮಾಜ’ವೊಂದು ಒಪ್ಪುವುದು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ದೇಶಕ್ಕೆ ಶೋಭೆ ತರುವಂತದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.