ADVERTISEMENT

ಸಂಗತ: ವನ್ಯಜೀವಿ ಹೊಟ್ಟೆಗೆ ಪ್ಲಾಸ್ಟಿಕ್ ವಿಷ

ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಡುಪ್ರಾಣಿಗಳು ಏನೆಲ್ಲ ತೊಂದರೆ ಅನುಭವಿಸುತ್ತಿವೆ ಎಂಬುದು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 20:41 IST
Last Updated 12 ಏಪ್ರಿಲ್ 2021, 20:41 IST
ಸಂಗತ
ಸಂಗತ   

‘ಪ್ಲಾಸ್ಟಿಕ್ ತಿನ್ನುತ್ತಿರುವ ಕಾಡಿನ ಆನೆ, ಜಿಂಕೆಗಳನ್ನು ನೋಡಿದ್ದೀರಾ? ಹಾಗಿದ್ದರೆ ಅವುಗಳ ಫೋಟೊ ನಮಗೆ ಕಳಿಸಿಕೊಡಿ’ ಎಂಬ ಮನವಿಯೊಂದು ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಕಾಣಿಸಿಕೊಂಡಾಗ, ಇದೇನಿದು ಆನೆ, ಜಿಂಕೆಗಳೇಕೆ ಪ್ಲಾಸ್ಟಿಕ್ ತಿನ್ನುತ್ತವೆ, ಅವುಗಳ ಆಹಾರ ಬಿದಿರು, ಹುಲ್ಲು ಅಲ್ಲವೇ ಎಂಬ ಅಚ್ಚರಿಯ ಪ್ರತಿಕ್ರಿಯೆಗಳು ಬಂದವು.

ಮುಂಬೈ ಮೂಲದ ಸ್ಯಾಂಕ್ಚುರಿ ನೇಚರ್ ಫೌಂಡೇಷನ್ ಇಂಥದ್ದೊಂದು ಮನವಿ ಮಾಡಿ ಇಡೀ ದೇಶದ ವನ್ಯಜೀವಿ ಸಂರಕ್ಷಣಾ ನಿರತರ ಗಮನ ಸೆಳೆದಿದೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ದೇಶದ ಕಾಡುಪ್ರಾಣಿಗಳು ಏನೆಲ್ಲ ತೊಂದರೆ ಅನುಭವಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಕಾರ್ಯಯೋಜನೆಯೊಂದನ್ನು ಪ್ರಾರಂಭಿಸಿದ ನೇಚರ್ ಫೌಂಡೇಷನ್‌ನ ಫೋಟೊ ಲೈಬ್ರರಿ ವಿಭಾಗದ ಪ್ರಾಚಿ ಗಳಂಗೆ ಮತ್ತು ಕಾರ ತೇಜ್‍ಪಾಲ್ ಅವರು ಇನ್‌ಸ್ಟಾಗ್ರಾಂನ ಅಂಕಣಕ್ಕೆ #ಇನ್ ಅವರ್ ಫಿಲ್ತ್ ಎಂಬ ಶೀರ್ಷಿಕೆ ನೀಡಿ, ಅಭಯಾರಣ್ಯ, ಪಕ್ಷಿಧಾಮ, ನ್ಯಾಷನಲ್ ಪಾರ್ಕ್, ಕುರುಚಲು ಕಾಡು, ಜಲಾನಯನ ಪ್ರದೇಶಗಳಲ್ಲಿ ಆವಾಸ ಹೊಂದಿರುವ ಪ್ರಾಣಿ- ಪಕ್ಷಿಗಳು, ಜನ ಬಳಸಿ ಬಿಸಾಡಿರುವ ಪ್ಲಾಸ್ಟಿಕ್ ಕಸದಿಂದ ತೊಂದರೆ ಅನುಭವಿಸುತ್ತಿರುವ ಚಿತ್ರಗಳು ನಿಮ್ಮ ಬಳಿ ಇದ್ದರೆ ನಮ್ಮ ಲೈಬ್ರರಿಗೆ ಕಳುಹಿಸಿರಿ, ಆಯ್ದ ಚಿತ್ರಗಳನ್ನು ವಾರಕ್ಕೊಮ್ಮೆ ಇನ್‌ಸ್ಟಾದಲ್ಲಿ ಪ್ರಕಟಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದಿದ್ದರು.

ಮನವಿಯನ್ನು ಗಂಭೀರವಾಗಿ ತೆಗೆದುಕೊಂಡ ಪರಿಸರ ಜಾಗೃತಿ, ಸಂರಕ್ಷಣೆ, ಛಾಯಾಗ್ರಹಣ, ವರದಿಗಾರಿಕೆಗಳಲ್ಲಿ ತೊಡಗಿಕೊಂಡಿರುವ ಅನೇಕರು ತಾವು ತೆಗೆದ ಚಿತ್ರಗಳನ್ನು ಕಳಿಸಲು ಶುರು ಮಾಡಿದರು. ‘ಮಹಾರಾಷ್ಟ್ರದ ತಡೋಬ- ಅಧಾರಿ ಹುಲಿ ಸಂರಕ್ಷಿತ ಅರಣ್ಯದ ಮರಿ ಹುಲಿಯೊಂದು ಪ್ಲಾಸ್ಟಿಕ್ ಗೋಣಿ ಚೀಲವನ್ನು ಬಾಯಲ್ಲಿ ಕಚ್ಚಿ ಹಿಡಿದ ಚಿತ್ರ ನಮ್ಮನ್ನು ತುಂಬಾ ಡಿಸ್ಟರ್ಬ್ ಮಾಡಿತು’ ಎಂದಿದ್ದಾರೆ ತೇಜ್‍ಪಾಲ್.

ADVERTISEMENT

ತಮಿಳುನಾಡಿನ ವಾಲ್‍ಪರೈ ಸಂರಕ್ಷಿತಾರಣ್ಯದಲ್ಲಿರುವ ಸಿಂಹಬಾಲದ ಕೋತಿಯೊಂದು (ಲಯನ್ ಟೇಲ್ಡ್ ಮಕಾಕ್), ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಆಹಾರವನ್ನು ಸೇವಿಸುತ್ತಿರುವ ಚಿತ್ರವನ್ನು ಕಳಿಸಿದ್ದ ಹವ್ಯಾಸಿ ಫೋಟೊಗ್ರಾಫರ್ ವಿಶಾಲ್, ಬರುವ ಪ್ರವಾಸಿಗರು ತಾವು ತಿಂದಾದ ಮೇಲೆ ಎಲ್ಲೆಂದರಲ್ಲಿ ಕಸ ಹಾಕುತ್ತಾರೆ, ಇದು ಹೀಗೆಯೇ ಮುಂದುವರಿದರೆ ಕೋತಿಗಳ ಆಹಾರಕ್ರಮವೇ ಬದಲಾಗುವ ಅಪಾಯವಿದೆ ಎಂಬ ಟಿಪ್ಪಣಿ ಬರೆದು ಕಳಿಸಿದ್ದನ್ನು ಹೇಳುವ ಪ್ರಾಚಿ, ಆನೆ, ತೋಳ, ನರಿ, ಟಿಟ್ಟಿಭ, ಹೆಬ್ಬಳಿಲು, ಜಿಂಕೆಗಳೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯ ತಾಣದಲ್ಲಿ ಆಹಾರ ಅರಸುತ್ತಿರುವ ನೂರಾರು ಚಿತ್ರಗಳು ನಮಗೆ ಬಂದಿವೆ, ಇದು ಅತ್ಯಂತ ದುಃಖಕರ ಸಂಗತಿ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯ ಅರಣ್ಯ ಪ್ರದೇಶದ ಕಾಡಾನೆಯೊಂದು ಫುಟ್‍ಬಾಲ್ ಗಾತ್ರದ ಪ್ಲಾಸ್ಟಿಕ್ ಉಂಡೆಯನ್ನು ನುಂಗುತ್ತಿರುವ ಚಿತ್ರ, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಹೊಟ್ಟೆ ಸೇರುವ ಪ್ಲಾಸ್ಟಿಕ್, ಆನೆಗಳ ಪ್ರಾಣಕ್ಕೇ ಕುತ್ತು ತರುತ್ತದೆ ಎನ್ನುವ ಬ್ರಿಟನ್ ಮೂಲದ ಸ್ವಯಂಸೇವಾ ಸಂಸ್ಥೆ ‘ಎಲಿಫೆಂಟ್ ಫ್ಯಾಮಿಲಿ’, 13 ದೇಶಗಳಲ್ಲಿ ಏಷ್ಯಾ ಮೂಲದ ಆನೆಗಳ ಆವಾಸವಿದೆ, ಅವುಗಳ ಪೈಕಿ 9ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ ಮಿತಿಮೀರಿದೆ ಎಂದು ವರದಿ ಮಾಡಿದೆ. ಕಳೆದ ವರ್ಷ ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನದ ನಾಲ್ಕು ಜಿಂಕೆಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದವು. ಪೋಸ್ಟ್ ಮಾರ್ಟಂ ಮಾಡಿದಾಗ ನಾಲ್ಕೂ ಜಿಂಕೆಗಳ ಹೊಟ್ಟೆಯಲ್ಲಿ ತಲಾ ಆರು ಕೆ.ಜಿಯಷ್ಟು ತೂಕದ ಪ್ಲಾಸ್ಟಿಕ್ ಪತ್ತೆಯಾಗಿತ್ತು. ಉದ್ದಬಾಲದ ಮರದ ಇಲಿಗಳು ಗೋವಾದ ಕಾವ್ರೆಮ್‍ನಲ್ಲಿ ಬಳಸಿ ಬಿಸಾಡಿದ ಹಾಲಿನ ಪ್ಯಾಕೆಟ್‍ ಅನ್ನೇ ಮನೆ ಮಾಡಿಕೊಂಡಿವೆ!

ತಮಿಳುನಾಡಿನ ನೀಲಗಿರಿಯ ಕಂದು ಪುನುಗು ಬೆಕ್ಕುಗಳು ವಿನಾಶದ ಅಂಚಿನಲ್ಲಿವೆ. ಇವು ಪಶ್ಚಿಮಘಟ್ಟಗಳಲ್ಲಿ ಮಾತ್ರ ಆವಾಸ ಹೊಂದಿದ್ದು, ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಆಹಾರ ಅರಸುವುದನ್ನು ರೂಢಿ ಮಾಡಿಕೊಂಡಿವೆ. ಗುರುಗ್ರಾಮದ ಹಳದಿ ಟಿಟ್ಟಿಭ ಪಕ್ಷಿಗಳು, ಮಹಾರಾಷ್ಟ್ರದ ತಿಪೇಶ್ವರ್ ಅಭಯಾರಣ್ಯದ ಹುಲಿ, ಲಡಾಕ್ ಪ್ರದೇಶದ ಹಿಮಾಲಯನ್ ಮರ್‍ಮಟ್, ರನ್ ಆಫ್ ಕಛ್‌ನ ಯುರೇಶಿಯನ್ ಹದ್ದು, ಅಹಮದ್ ನಗರದ ಹುಲ್ಲುಗಾವಲಿನ ತೋಳ, ಧಾರವಾಡದ ನೀರಹಾವುಗಳೆಲ್ಲ ಪ್ಲಾಸ್ಟಿಕ್ ಕಸದ ನಡುವೆಯೇ ತಮ್ಮ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿವೆ ಎಂಬಂತೆ ಕಾಣುವ ಅನೇಕ ಚಿತ್ರಗಳು ಈಗಾಗಲೇ ಇನ್‌ಸ್ಟಾಗ್ರಾಂನ ಭಿತ್ತಿಯಲ್ಲಿವೆ.

ನೀತಿ ಆಯೋಗದ ಪ್ರಕಾರ, ದೇಶದ ಶೇ 70ರಷ್ಟು ನೀರಿನ ತಾಣಗಳು ಕಲುಷಿತಗೊಂಡಿದ್ದು, ಜಲಚರಗಳು ಮೈಕ್ರೊ ಪ್ಲಾಸ್ಟಿಕ್‍ನಿಂದ ಗಂಭೀರ ಅಪಾಯ ಎದುರಿಸುತ್ತಿವೆ. ಹವಳ ಜೀವಿಗಳ ಹೊಟ್ಟೆಯಲ್ಲೂ ಪ್ಲಾಸ್ಟಿಕ್‍ನ ವಿಷ ಸೇರಿದೆ. ನಾವೆಲ್ಲ ಕಾಡನ್ನು ನುಂಗಿ ನೊಣೆದಿರುವುದರಿಂದ ಮನುಷ್ಯನ ಆವಾಸಕ್ಕೆ ತೀರಾ ಹತ್ತಿರ ಬಂದಿರುವ ವನ್ಯಜೀವಿಗಳ ಆಹಾರ ಕ್ರಮವೂ ಬದಲಾಗಲಿದೆ, ಇದು ದೊಡ್ಡ ಪಾರಿಸರಿಕ ಅಸಮತೋಲನದ ಮುನ್ಸೂಚನೆ ಎಂಬುದು ತಜ್ಞರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.