‘ಷಡ್ಯಂತ್ರ’ ಪದ ಇತ್ತೀಚೆಗೆ ರಾಜಕಾರಣಿಗಳ ಬಾಯಿಯಲ್ಲಿ ಅತಿಯಾಗಿ ಕೇಳಿಬರುತ್ತಿದೆ. ಸಾಮಾನ್ಯವಾಗಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರುವ ‘ಷಡ್ಯಂತ್ರ’ ರೀತಿಯ ಸಮುಚ್ಚಯ ಪದಗಳು ಕನ್ನಡ ವ್ಯಾಕರಣದಲ್ಲಿ ಕಾಣಸಿಗುವು ದಿಲ್ಲ. ಷಡ್ಯಂತ್ರದಲ್ಲಿ ‘ಷಟ್’ ಮತ್ತು ‘ಯಂತ್ರ’ ಪದಗಳ ಸಂಯೋಜನೆಯಿದೆ. ಇದರ ಭಾವಾರ್ಥ, ವಿರೋಧಿಗಳನ್ನು ಹಣಿಯಲು ಆರು (ಷಟ್) ಸಾಧನ (ಯಂತ್ರ) ಬಳಸಿ ಹೆಣೆದ ಪಿತೂರಿ ಎಂದಾಗುತ್ತದೆ. ಆ ಆರು ಸಾಧನಗಳ ಬಗೆಗೆ ಖಚಿತ ಮಾಹಿತಿ ಇರುವಂತಿಲ್ಲ. ತಾಂತ್ರಿಕ ಆಚರಣೆಗಳಲ್ಲೂ ‘ಯಂತ್ರ’ ಪದಬಳಕೆ ಕಾಣಬಹುದು. ಬಹುಶಃ, ಈ ಶಬ್ದದ ವ್ಯುತ್ಪತ್ತಿ ಬಗೆಗೆ ಅಷ್ಟೇನೂ ಅರಿವು, ಆಸಕ್ತಿ ಇರದ ರಾಜಕಾರಣಿಗಳು ಸಮಯಾನುಸಾರ ಸರಾಗವಾಗಿ ಬಳಸಿ ಮುಗಿಸುತ್ತಾರೆ.
‘ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಇದೆ, ಆ ರಹಸ್ಯ ಶೀಘ್ರದಲ್ಲೇ ಹೊರಬರಲಿದೆ’ ಎಂಬುದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಖಚಿತ ಅಭಿಪ್ರಾಯ. ಧರ್ಮಸ್ಥಳ ಪ್ರಕರಣ ಕುರಿತು ತಮ್ಮದೇ ಸರ್ಕಾರ ರಚಿಸಿರುವ ಎಸ್.ಐ.ಟಿ. ತನಿಖೆ ನಡೆಸುತ್ತಿರುವ ಸೂಕ್ಷ್ಮ ಸಂದರ್ಭದಲ್ಲಿಯೇ ಡಿಸಿಎಂ ಆಡಿರುವ ಮಾತುಗಳ ಪರಿಣಾಮ ಸಣ್ಣದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರ ಇಂತಹ ಮಾತುಗಳು ಎಸ್.ಐ.ಟಿ. ಅಧಿಕಾರಿಗಳು ಮತ್ತು ಹೋರಾಟಗಾರರ ನೈತಿಕತೆಯನ್ನು ನಲುಗಿಸುವುದಷ್ಟೇ ಅಲ್ಲ, ನಾಗರಿಕರ ಭಾವನೆಗಳನ್ನು ಸಹ ಕದಡಬಲ್ಲವು. ಅಷ್ಟಕ್ಕೂ ಶಿವಕುಮಾರ್ ಉಲ್ಲೇಖಿಸುವ ಷಡ್ಯಂತ್ರ ರೂಪಿಸಿದವರು ಯಾರು? ಆ ಸಂಚಿನಲ್ಲಿ ಅಡಗಿರುವ ಆರು ತಂತ್ರಗಳು ಯಾವುವು?
ವಿಧಾನಸಭೆಯ ಕಲಾಪದಲ್ಲಿ ವಿಪಕ್ಷ ನಾಯಕ ಆರ್. ಅಶೋಕ, ‘ಒಬ್ಬ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೇಗೆ?’ ಎಂದು ವಾದಿಸಿದ್ದಾರೆ. ಬಿಜೆಪಿಯ ಇತರ ಸದಸ್ಯರು ಕೂಡ, ‘ಮುಖ್ಯಮಂತ್ರಿ ಕೊಲೆಗಾರ ಎಂದು ಹೇಳಿರುವುದು ಈ ಸದನಕ್ಕೆ ಮಾಡಿದ ಅವಮಾನ, ತನಿಖೆ ನಡೆಸಿ’ ಎಂದು ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಇವರೆಲ್ಲರ ಮಾತಿನ ಗುರಿ ಇದ್ದುದು ‘ಜಸ್ಟೀಸ್ ಫಾರ್ ಸೌಜನ್ಯ’ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರೆಡೆ. ವಾಸ್ತವವಾಗಿ, ಈ ಹಿಂದೆ ಬೆಳ್ತಂಗಡಿಯ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದ್ದು ಬಿಜೆಪಿ ಶಾಸಕ ಹರೀಶ್ ಪೂಂಜ. ಹಾಗಾದರೆ ತಮ್ಮದೇ ಪಕ್ಷದ ಶಾಸಕ ಪೂಂಜ ಅವರ ವಿರುದ್ಧ ಪಕ್ಷದ ಇನ್ನೊಂದು ಬಣ ಷಡ್ಯಂತ್ರ ರೂಪಿಸಿದೆಯೇ?
ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಮುಂದಾದ ಉಪಮುಖ್ಯಮಂತ್ರಿ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ಸದನದಲ್ಲಿ ಸಾಂದರ್ಭಿಕವಾಗಿ ಆಡಿದ ಮಾತುಗಳ ಹೊರದನಿ ಒಂದಾದರೆ, ಒಳಾರ್ಥ ಮತ್ತೊಂದು ಆಗಿತ್ತು! ‘ಮುಖ್ಯಮಂತ್ರಿಗಳು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಪ್ರತೀ ವರ್ಷ ಚಿಕಿತ್ಸೆ ಪಡೆಯುತ್ತಾರೆ. ಅವರಿಗೆ ಆ ಕ್ಷೇತ್ರದ ಮೇಲೆ ಅಪಾರ ನಂಬಿಕೆ’ ಎಂದು ಹೇಳುತ್ತಾರೆ ಶಿವಕುಮಾರ್. ಅವರ ಆಪ್ತ ಶಾಸಕ ಬಾಲಕೃಷ್ಣ, ‘ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಸಹೋದರ ಮುಖ್ಯಮಂತ್ರಿಯನ್ನು ಭೇಟಿಯಾಗಿ ಎಸ್.ಐ.ಟಿ. ರಚನೆ ಸ್ವಾಗತಿಸಿದ್ದಕ್ಕೆ ತಾವೇ ಸಾಕ್ಷಿ’ ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ, ಸನ್ನಿವೇಶದ ರಾಜಕೀಯ ಫಸಲು ತೆಗೆಯಲು ಮುಂದಾಗಿರುವ ಬಿಜೆಪಿ ನಿರೀಕ್ಷೆಯಂತೆ ‘ಧರ್ಮಯುದ್ಧ’ ಘೋಷಿಸಿದೆ. ಧರ್ಮಸ್ಥಳದ ವಿರುದ್ಧ ಕಾಂಗ್ರೆಸ್ ಸರ್ಕಾರ ಮತ್ತು ಹೈಕಮಾಂಡ್ ಷಡ್ಯಂತ್ರ ಮಾಡಿದೆ ಎಂಬುದು ಈ ಪಕ್ಷದ ಪ್ರತಿಪಾದನೆ. ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರುವ ಉದ್ದೇಶವುಳ್ಳ ಈ ಪ್ರಕರಣದ ಹಿಂದೆ ಎಡಪಂಥೀಯ ಶಕ್ತಿಗಳ ಷಡ್ಯಂತ್ರ ಇರುವುದಾಗಿ ಆರೋಪಿಸಿರುವ ಈ ಪಕ್ಷದ ನಾಯಕರು ಎನ್.ಐ.ಎ. ಮತ್ತು ಇ.ಡಿ. ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಆದರೆ ಧರ್ಮಸ್ಥಳ ಗ್ರಾಮದಲ್ಲಿ ಸಂಭವಿಸಿವೆ ಎನ್ನಲಾದ ಅಸಹಜ ಸಾವು–ಕೊಲೆಗಳ ಬಗ್ಗೆ ನ್ಯಾಯಯುತ ತನಿಖೆಯಾಗಬೇಕೆಂದು ಹೋರಾಟ ನಿರತರಾದವರಲ್ಲಿ ಎಡಪಂಥೀಯ ಒಲವಿನ ವಿಚಾರವಾದಿಗಳಷ್ಟೇ ಇಲ್ಲ; ಇವರಲ್ಲಿ ಗಾಢ ಧಾರ್ಮಿಕ ನಂಬಿಕೆ–ಶ್ರದ್ಧೆ ಹೊಂದಿರುವ ಅನೇಕ ವಕೀಲರು, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಸಂಘಟಕರು ಸೇರಿದ್ದಾರೆ. ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ‘ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ’ಯ ಅಧ್ಯಕ್ಷರು.
ಹೀಗಿರುವಾಗ, ಧಾರ್ಮಿಕ ನಂಬಿಕೆಯ ಧರ್ಮಸ್ಥಳ ಕ್ಷೇತ್ರ ಮತ್ತು ಪ್ರಕರಣಗಳಿಗೆ ಕಾರಣರಾದ ಆರೋಪಿಗಳನ್ನು ಜನರೆದುರು ಪ್ರತ್ಯೇಕವಾಗಿ ಬಿಂಬಿಸುವಲ್ಲಿ ಹೋರಾಟಗಾರರು ವಿಫಲರಾದರೇ? ದೇವರು, ಧರ್ಮ, ಆಚರಣೆಗಳನ್ನು ಜನರ ನಂಬಿಕೆಯ ಭಾಗವಾಗಿ ಗೌರವಿಸುವುದು ನಾಗರಿಕ ಮತ್ತು ಸಾಂವಿಧಾನಿಕ ಕರ್ತವ್ಯ. ಹಾಗೆಯೇ ಆಸ್ತಿಕ ಭಾವನೆಗಳನ್ನು ಅನ್ಯಾಯದ ರಕ್ಷಣೆಗೆ ಬಳಸುವುದು ಹೇಯ ಕೃತ್ಯ. ಈ ಕುರಿತು ನಿಖರ ತಿಳಿವಳಿಕೆ ಅತ್ಯಗತ್ಯ.
ದೂರುದಾರರು, ಹೋರಾಟಗಾರರು ಬಂಧನಕ್ಕೆ ಒಳಗಾಗುವ ವಿದ್ಯಮಾನವು ನ್ಯಾಯಯುತ ಆಡಳಿತ ಹಾಗೂ ಆರೋಗ್ಯಪೂರ್ಣ ಸಾಮಾಜಿಕ, ನ್ಯಾಯಿಕ, ನಾಗರಿಕ ವ್ಯವಸ್ಥೆಯ ಲಕ್ಷಣವಂತೂ ಅಲ್ಲ. ಒಟ್ಟಾರೆ, ‘ಒದ್ದು ಒಳಗೆ ಹಾಕುವ’ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂಚೂರು ಸೈದ್ಧಾಂತಿಕ ಸಂವೇದನೆ ಉಳಿಸಿಕೊಂಡಿರುವ ಸಿದ್ದರಾಮಯ್ಯ ಸಂದಿಗ್ಧತೆಗೆ ಸಿಲುಕಿದಂತೆ ಭಾಸವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.