ADVERTISEMENT

ಸಂಗತ: ಮಹಿಳೆ ಮನೆಯೊಡತಿಯೇ? ಡಾ. ಕೆ.ಎಸ್.ಚೈತ್ರಾ ಲೇಖನ

ಮನೆ ಮಾಲೀಕತ್ವ ಮಹಿಳೆಯರದ್ದೇ... ದಾಖಲೆಗಳಲ್ಲಿ ಮಾತ್ರ!

ಡಾ .ಕೆ.ಎಸ್.ಚೈತ್ರಾ
Published 7 ಫೆಬ್ರುವರಿ 2023, 19:36 IST
Last Updated 7 ಫೆಬ್ರುವರಿ 2023, 19:36 IST
sangata
sangata   

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ–5ರ ಪ್ರಕಾರ, ಮನೆ ಮತ್ತು ಜಮೀನಿನ ಮಾಲೀಕತ್ವ ಹೊಂದಿರುವ ಮಹಿಳೆಯರ ಪ್ರಮಾಣ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು, ಸುಮಾರು ಶೇಕಡ 65ರಷ್ಟು!

15- 49 ವರ್ಷದ ಮಹಿಳೆಯರು ತಮ್ಮದೇ ಹೆಸರಿನಲ್ಲಿ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಜಂಟಿ ಮಾಲೀಕತ್ವ ಹೊಂದಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ಮಹಿಳೆಯರ ಪ್ರಮಾಣ ಹೆಚ್ಚು. ಈ ವರದಿ ಓದಿ ಖುಷಿಯಾಗಿ ಎಲ್ಲರೊಡನೆ ಹಂಚಿಕೊಂಡೆ. ಕೂಡಲೇ ಮನೆಸಹಾಯಕಿ ‘ಹಂಗೇ ಮನೆ ಸಾಲ ಕಟ್ತಾ ಕಟ್ತಾ ಸಾಯೋರು ಎಷ್ಟ್ ಜನಾ ಅಂತ ರಿಪೋರ್ಟ್ ಇದ್ಯಾ ವಸಿ ನೋಡಕ್ಕಾ’ ಅಂದಳು ನಗುತ್ತಲೇ!

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಈ ಪ್ರಮಾಣ ಹೆಚ್ಚು ಮಾತ್ರವಲ್ಲ ಹಿಂದಿಗಿಂತ ಏರಿಕೆಯಾಗಿದೆ ಎನ್ನುವುದು ಹೆಮ್ಮೆಯ ವಿಷಯವೇ. ತಲೆಯ ಮೇಲೊಂದು ಸೂರು ಬದುಕಿನ ಅವಶ್ಯಕತೆಯಾದರೆ, ಸ್ವಂತ ಮನೆ ಎನ್ನುವುದು ಇಂದಿಗೂ ಭಾರತೀಯ ಕೆಳ ಮತ್ತು ಮಧ್ಯಮ ವರ್ಗದವರ ಬಹುದೊಡ್ಡ ಕನಸು. ದಿನನಿತ್ಯದ ಖರ್ಚು ವೆಚ್ಚ ತೂಗಿಸುತ್ತಾ ಹೇಗೋ ದುಡ್ಡು ಉಳಿತಾಯ ಮಾಡಿ ಸ್ವಂತ ಮನೆ ಮಾಡುವುದು ಬದುಕಿನ ಬಹು ದೊಡ್ಡ ಗುರಿಯೂ ಹೌದು. ಹೀಗಿರುವಾಗ ಅಂಥ ದೊಡ್ಡ ಕನಸು, ಗುರಿಯ ಮಾಲೀಕತ್ವ ಮಹಿಳೆಯ ಹೆಸರಿನಲ್ಲಿ ಇದ್ದಾಗ ಆಕೆಯಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮನೆಯೊಡತಿಗೆ ಸಹಜವಾಗಿಯೇ ಹೆಚ್ಚು ಮನ್ನಣೆ ಸಿಗುತ್ತದೆ. ಹಾಗೆಯೇ ಆಕೆಯ ಹೆಸರಿನಲ್ಲಿ ಮನೆ ಇದೆ ಎಂದರೆ ಆಕೆ ಶೈಕ್ಷಣಿಕವಾಗಿ ಮುನ್ನಡೆಯುತ್ತಿದ್ದಾಳೆ, ಆರ್ಥಿಕವಾಗಿ ಸ್ವತಂತ್ರಳಾಗಿದ್ದಾಳೆ, ಆಕೆಯನ್ನೂ ಕುಟುಂಬದ ಪ್ರಮುಖ ಸದಸ್ಯೆ ಎಂದು ಪರಿಗಣಿಸಲಾಗುತ್ತಿದೆ, ಅಡುಗೆ ಮನೆಯ ಜತೆ ಬ್ಯಾಂಕ್, ಆಫೀಸು ಹೀಗೆ ಹೊರಪ್ರಪಂಚದ ವ್ಯವಹಾರಗಳ ಅರಿವು ಆಕೆಗಿರುತ್ತದೆ ಎಂದರ್ಥ.

ADVERTISEMENT

ಇದಲ್ಲದೇ ಮನೆಯ ಮಾಲೀಕತ್ವ ಆಕೆಗಿದ್ದಾಗ ತನ್ನ ಮತ್ತು ಮಕ್ಕಳ ಆರೋಗ್ಯ, ಶಿಕ್ಷಣ ಹೀಗೆ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯದ ಜತೆ ಹಕ್ಕೂ ತಾನಾಗಿ ಸಿಗುತ್ತದೆ. ಒಟ್ಟಿನಲ್ಲಿ ಅಬಲೆಯಿಂದ ಸಬಲಳಾಗುವತ್ತ ಪ್ರಮುಖ ಹೆಜ್ಜೆ ಇದು ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಮನೆ ಖರೀದಿಸಲು ಕಾರಣ, ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯ, ತೆರಿಗೆ ವಿನಾಯಿತಿ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಇಳಿಕೆ, ಬಾಡಿಗೆಗೆ ಕೊಟ್ಟರೂ ಬರುವ ಆದಾಯದಲ್ಲಿ ತೆರಿಗೆ ವಿನಾಯಿತಿ... ಹೀಗೆ ಅನೇಕ ಅನುಕೂಲಗಳು. ಸರ್ಕಾರವು ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸ ಲೆಂದೇ ನೀಡಿರುವ ಸೌಲಭ್ಯಗಳು ಇವು. ಅವುಗಳನ್ನು ಖಂಡಿತಾ ಉಪಯೋಗಿಸಬೇಕು, ಆದರೆ ಸಬಲೀಕರಣ ಸಾಧ್ಯವಾಗುತ್ತಿದೆಯೇ...? ಯೋಚಿಸಬೇಕು!

ಮನೆ ಮಾಲೀಕತ್ವ ವರದಿಯಾಗಿರುವ ಹಾಗೆ ಮಹಿಳೆಯರದ್ದೇ... ದಾಖಲೆಗಳಲ್ಲಿ ಮಾತ್ರ. ಹಣಕಾಸಿನ ಜವಾಬ್ದಾರಿ, ಪ್ರಮುಖ ನಿರ್ಣಯಗಳು ಇವೆಲ್ಲಾ ಪುರುಷರದ್ದೇ. ಗಂಡ ಅಥವಾ ಅಪ್ಪ ಹೇಳಿದಲ್ಲಿ ಸಹಿ ಅಥವಾ ಹೆಬ್ಬೆಟ್ಟು ಒತ್ತಿದರೆ ಮಹಿಳೆಯ ಕೆಲಸ ಮುಗಿಯಿತು. ಗ್ರಾಮೀಣ ಪ್ರದೇಶಗಳ ಕೂಡುಕುಟುಂಬಗಳಲ್ಲಿ ಯಜಮಾನರು- ದೊಡ್ಡವರು ಹೇಳಿದ್ದನ್ನು ಮರುಪ್ರಶ್ನಿಸದೆ ಮಾಡುವುದಷ್ಟೇ ಆಕೆಯ ಕರ್ತವ್ಯ. ಏನು, ಎತ್ತ, ಏಕೆ ಇವುಗಳ ಅರಿವೇ ಹೆಚ್ಚಿನ ಮಹಿಳೆಯರಿಗೆ ಇಲ್ಲದಿದ್ದಾಗ ಹಕ್ಕು ಚಲಾವಣೆ, ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನಿರೀಕ್ಷಿಸುವುದು ಹೇಗೆ?

ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಕೆಳ-ಮಧ್ಯಮ ವರ್ಗದ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮಹಿಳೆಯರು ಹಣ ಗಳಿಸುತ್ತಿದ್ದಾರೆ, ಕುಟುಂಬವನ್ನು ಸಾಕುತ್ತಿದ್ದಾರೆ. ಚಿಕ್ಕದಾದರೂ ಸ್ವಂತ ಮನೆ ಎಂಬ ಕನಸು ಕೈಗೂಡಿದೆ. ಆದರೆ ಸಾಲದ ಹೊರೆಯೂ ತಲೆಗೇರಿದೆ. ಗಂಡನನ್ನು ಸಂಬಾಳಿಸುತ್ತಾ, ಮಕ್ಕಳನ್ನು ಓದಿಸುತ್ತಾ, ಮನೆಗಾಗಿ ಮಾಡಿದ ಸಾಲವನ್ನು ತೀರಿಸುತ್ತಾ ಜತೆಗೇ ‘ಮನೆ ಇವಳ ಹೆಸರಲ್ಲಿದೆ ಎಂದು ಹಾರಾಡ್ತಾಳೆ, ಧಿಮಾಕು ತೋರಿಸ್ತಾಳೆ’ ಎಂದು ಹೊಡೆತ, ಬೈಗುಳ ತಿನ್ನುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಲ್ಲ.

ಆದ್ದರಿಂದಲೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2019- 21ರ ಇನ್ನೊಂದು ವರದಿಯನ್ನೂ ಗಮನಿಸುವುದು ಮುಖ್ಯ. ಕರ್ನಾಟಕದ ವಿವಾಹಿತ ಮಹಿಳೆಯರಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಮಾಣ ಶೇಕಡ 44ರಷ್ಟಿದ್ದು ಇದು ದೇಶದಲ್ಲಿ ಅತಿ ಹೆಚ್ಚು. ಅಲ್ಲದೆ, ಅದರ ಹಿಂದಿನ ವರದಿಗೆ ಹೋಲಿಸಿದರೆ ತೀವ್ರ ಹೆಚ್ಚಳ ಕಂಡಿದೆ. ಶಿಕ್ಷಣ ಇಲ್ಲದಿರುವುದು, ಆರ್ಥಿಕವಾಗಿ ಪುರುಷರ ಮೇಲೆ ಅವಲಂಬನೆ ಇದಕ್ಕೆ ಮುಖ್ಯ ಕಾರಣಗಳು.

ಕೌಟುಂಬಿಕ ಹಿಂಸೆ ವಿರುದ್ಧ ಕಠಿಣವಾದ ಕಾನೂನುಗಳಿವೆ, ಶಿಕ್ಷೆಯೂ ಆಗುತ್ತದೆ. ಆದರೆ ದೂರು ನೀಡುವವರು ಯಾರು? ಅರಿವಿಲ್ಲ ಎನ್ನುವುದು ಒಂದು ಅಂಶ. ಅರಿವಿದ್ದರೂ ಗಂಡನ ಮತ್ತು ಮನೆಯವರ ಮರ್ಯಾದೆ ಕಾಪಾಡುವ ಹೊಣೆಯನ್ನು ಸಮಾಜ ಹೊರಿಸಿದೆ ಮತ್ತು ಮಹಿಳೆ ಸ್ವತಃ ಹೊತ್ತುಕೊಂಡಿದ್ದಾಳೆ. ಒಟ್ಟಿನಲ್ಲಿ ತಮ್ಮ ಮಾಲೀಕತ್ವದ ಮನೆಗಳಲ್ಲಿಯೂ ಮಹಿಳೆಯರು ಮೌನವಾಗಿ ಎಲ್ಲವನ್ನೂ ಸಹಿಸಿಬದುಕುತ್ತಿದ್ದಾರೆ. ವರದಿಗಳು ಸುದ್ದಿಯಲ್ಲಿವೆ ಅಷ್ಟೇ.

ಮಹಿಳೆ ಮನದೊಡತಿಯಾಗಿ ಗೌರವ, ಪ್ರೀತಿ, ಸಮಾನ ಅವಕಾಶ ಪಡೆದಾಗ ಮಾತ್ರ ನಿಜಾರ್ಥದಲ್ಲಿ ಮನೆಯೊಡತಿ ಆಗಲು ಸಾಧ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.