ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಹಾಲಿ ಕುಲಪತಿಗಳ ಅಧಿಕಾರಾವಧಿ ಮುಕ್ತಾಯವಾಗುವ ಸಮಯ ಬಂದಿದೆ. ಈ ಸ್ಥಾನಗಳಿಗೆ ಮುಂದೆ ಯಾರು ಬರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಯಾರು ಬಂದರೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡುತ್ತಾರೆ ಎಂಬ ಹರಟೆಯಲ್ಲಿ ಸಹ ವಿಶ್ವವಿದ್ಯಾಲಯಗಳ ಮೇಷ್ಟ್ರುಗಳು ತೊಡಗುತ್ತಾರೆ. ಇದು ಸಾಲದೆಂಬಂತೆ, ಯಾರು ಬಂದರೆ ತಮ್ಮ ವಿಶ್ವವಿದ್ಯಾಲಯಕ್ಕೆ ಒಳಿತು ಎಂಬುದಕ್ಕಿಂತ, ಯಾರು ಬಂದರೆ ಯಾರಿಗೆ ಒಳಿತು ಎಂಬ ಗುಸುಗುಸು ಕೂಡ ನಡೆಯುವುದು ಸಹಜ.
ಉನ್ನತ ಶಿಕ್ಷಣದ ಉನ್ನತ ಸ್ಥಾನಗಳನ್ನು ಅಲಂಕರಿಸಲು ಬೋಧನೆ, ಸಂಶೋಧನೆ, ಪ್ರಕಟಣೆ ಮತ್ತು ಅನುಭವಗಳನ್ನು ಪ್ರಮುಖ ಮಾನದಂಡಗಳನ್ನಾಗಿ ಪರಿಗಣಿಸಲಾಗುವುದು. ಆದ್ದರಿಂದ ಪ್ರತಿಬಾರಿ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ಖಾಲಿ ಆಗುತ್ತಿದ್ದ ಹಾಗೆ ರೇಸಿನಲ್ಲಿ ಇರುವವರು ಬೃಹತ್ ಗಾತ್ರದ ಪ್ರೊಫೈಲುಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ವಾಸ್ತವವಾಗಿ ಪ್ರೊಫೈಲ್ ಸಿದ್ಧಪಡಿಸಬೇಕಿರುವುದು ಒಂದು ಪ್ರಮುಖ ಶೈಕ್ಷಣಿಕ ಅಗತ್ಯ ಆಗಿರುತ್ತದೆ. ಅಂದರೆ ಅದು ಮೊದಲ ಹಂತದ ಪ್ರಯತ್ನ ಮತ್ತು ತಾವು ಅರ್ಹರು ಎಂದು ಸಾಬೀತುಪಡಿಸಲು ಪ್ರೊಫೈಲುಗಳ ಗಾತ್ರ ಮುಖ್ಯವಾಗಿರುತ್ತದೆ.
ಇದಾದ ನಂತರ ಮುಂದಿನ ಹಂತ ಅತ್ಯಂತ ಮುಖ್ಯವಾದದ್ದಾಗಿರುತ್ತದೆ. ಅದನ್ನು ‘ಲಾಬಿ ಮಾಡುವುದು’ ಎನ್ನುತ್ತಾರೆ. ಯಾರಿಗೆ ಯಾವ ವಿಶ್ವವಿದ್ಯಾಲಯದ ಮೇಲೆ ಕಣ್ಣು ಇರುತ್ತದೆಯೋ ಅಲ್ಲಿ ಸಂಖ್ಯೆಯಲ್ಲಿ ಹೆಚ್ಚಿರುವ ಪ್ರಮುಖ ಜಾತಿ, ಆ ಪ್ರದೇಶದ ಪ್ರಮುಖ ರಾಜಕಾರಣಿ ಮುಂತಾದ ಅಂಶಗಳನ್ನು ಗಮನಿಸುತ್ತಾರೆ. ಇದರ ಜೊತೆಯಲ್ಲಿ ಆ ವಿಶ್ವವಿದ್ಯಾ
ಲಯದ ಗಾತ್ರಕ್ಕೆ ಅನುಗುಣವಾಗಿ ತಮ್ಮ ಜೇಬನ್ನು ಸಹ ಹಿಗ್ಗಿಸಿಕೊಂಡು ಮುಂದಿನ ಹಂತಕ್ಕೆ ಸಿದ್ಧರಾಗುತ್ತಾರೆ. ಮೇಲೆ ನಮೂದಿಸಿರುವ ಶೈಕ್ಷಣಿಕ ಅಗತ್ಯವು ಕುಲಪತಿ ಸ್ಥಾನಕ್ಕೆ ಅರ್ಹತೆಯನ್ನು ಗುರುತಿಸಲು ಮಾತ್ರ ಬೇಕು. ಆದರೆ ಕುಲಪತಿಯನ್ನು ಆಯ್ಕೆ ಮಾಡಲು ಇರುವ ಗುಪ್ತ ಮಾನದಂಡಗಳು ಜಾತಿ, ರಾಜಕಾರಣ ಮತ್ತು ಹಣ.
ಈ ಒಂದು ದಶಕದಲ್ಲಿ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಸ್ಥಾನ ಅಲಂಕರಿಸಿದ್ದವರು ಗಂಭೀರ ಆರೋಪಗಳಿಗೆ ಒಳಗಾಗಿದ್ದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕುಲಪತಿ ಸ್ಥಾನದ ಜವಾಬ್ದಾರಿಯನ್ನು ಬದಿಗೊತ್ತಿ, ಅದರೊಟ್ಟಿಗೆ ಬರುವ ಅಧಿಕಾರ ನಿರಂಕುಶವಾದದ್ದು ಎಂದು ಅರ್ಥೈಸಿಕೊಳ್ಳುವ ಭ್ರಷ್ಟರು ಜ್ಞಾನ ಕೇಂದ್ರಗಳ ಸಮರ್ಥ ನಾಯಕರಾಗಬಲ್ಲರೇ? ಅಂತಹವರು ಜ್ಞಾನ ಕೇಂದ್ರವಾದ ವಿಶ್ವವಿದ್ಯಾಲಯವನ್ನು ‘ಚಿನ್ನದ ಗಣಿ’ ಎಂದು ಪರಿಭಾವಿಸುತ್ತಾರೆ.
ಉನ್ನತ ಶಿಕ್ಷಣದ ಬಗ್ಗೆ ತಲಸ್ಪರ್ಶಿ ಜಿಜ್ಞಾಸೆಯನ್ನು ನಡೆಸಿದ ಹಮ್‌ಬೋಲ್ಟ್, ಉನ್ನತ ಶಿಕ್ಷಣ ಎಂದರೆ ಉನ್ನತ ಕಲಿಕೆ. ಉನ್ನತ ಕಲಿಕೆಯ ಮೂಲ ಧ್ಯೇಯಗಳು ಸ್ವಯಂ ಕೃಷಿ, ಸ್ವಯಂ ಅಭಿವೃದ್ಧಿ ಮತ್ತು ಸ್ವಯಂ ಅಭಿವ್ಯಕ್ತಿ ಎಂದು ಅಭಿಪ್ರಾಯಪಡುತ್ತಾನೆ. ಉನ್ನತ ಶಿಕ್ಷಣ ಕೇಂದ್ರಗಳನ್ನು ಜ್ಞಾನ ಶಾಖೆಗಳು ಎಂದು ಗುರುತಿಸುವುದು ಇದೇ ಕಾರಣದಿಂದಾಗಿ. ಇಲ್ಲಿ ಕೆಲಸ ಮಾಡುವ ಅಧ್ಯಾಪಕರು ಕೇವಲ ಪಾಠಮಾಡುವವರಾಗಿರದೆ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಮತ್ತು ಆದರ್ಶಪ್ರಾಯರಾಗಿ ಕೆಲಸ ನಿರ್ವಹಿಸಬೇಕು.
ನೂತನ ಶಿಕ್ಷಣ ನೀತಿಯ ಅನುಷ್ಠಾನದಲ್ಲಿತೊಡಗಿರುವ ಸರ್ಕಾರದ ಮುಂದೆ, ವಿದ್ಯಾರ್ಥಿಗಳಿಗೆಬಹುಶಿಸ್ತೀಯ ಆಯಾಮಗಳಿಂದ ಕಲಿಕೆ ಸುಗಮವಾಗಲೆಂದು ಅತ್ಯುತ್ತಮ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವುದೊಂದೇ ಗುರಿಯಾಗಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಅಡಗಿರುವ ಮೂಲ ಅಂಶಗಳನ್ನು ಹಾಗೂ ಗುಣಮಟ್ಟ ಮತ್ತು ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಅರಿತಿರುವ ಒಬ್ಬ ದಾರ್ಶನಿಕನನ್ನು ಕುಲಪತಿಯನ್ನಾಗಿ ಆಯ್ಕೆ ಮಾಡಬೇಕಿರುವ ಬಹುಮುಖ್ಯ ಸವಾಲು ಸಹ ಇದೆ.
ಕುಲಪತಿ ಸ್ಥಾನದ ಹೊಣೆಗಾರಿಕೆಯನ್ನು ಅರಿತವ ಯೋಗ್ಯ ನಾಯಕನಾಗುತ್ತಾನೆ. ತನ್ನ ಅಧ್ಯಾಪಕ ಜೀವನದ ಅನುಭವವು ಆತನಿಗೆ ಶೈಕ್ಷಣಿಕ ದೃಷ್ಟಿಕೋನವನ್ನು ಕಟ್ಟಿಕೊಟ್ಟಿದ್ದರೆ ಮಾತ್ರ ಆತ ಜ್ಞಾನದ ಕಟ್ಟುವಿಕೆಯ ಮೂಲಕ ವಿದ್ಯಾರ್ಥಿಗಳ ಸಮಗ್ರ ಸಾಮರ್ಥ್ಯ ಕಟ್ಟುವಿಕೆಯನ್ನು ಸಾಧಿಸುತ್ತಾನೆ. ದೂರದೃಷ್ಟಿಯುಳ್ಳ ಆದರ್ಶ ಕುಲಪತಿಯಾಗುತ್ತಾನೆ.
ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್‌ಫ್ರೇಮ್‌ವರ್ಕ್‌ನವರ (ಎನ್‌ಐಆರ್‌ಎಫ್) ರ‍್ಯಾಂಕಿಂಗ್, ಉನ್ನತ ಶಿಕ್ಷಣ ಕೇಂದ್ರಗಳ ಸಂಶೋಧನೆ ಮತ್ತು ಪ್ರಕಟಣೆಗಳ ಗುಣಮಟ್ಟವನ್ನು ಆಧರಿಸಿರುತ್ತದೆ. ಆದ್ದರಿಂದ ಪ್ರತೀ ವಿಶ್ವವಿದ್ಯಾಲಯಕ್ಕೆ ಬೇಕಿರುವುದು ಕಟ್ಟುವುದು, ಅಂದರೆ ಜ್ಞಾನವನ್ನು ಕಟ್ಟುವುದು. ಒಬ್ಬ ದಾರ್ಶನಿಕ ಇದನ್ನು ಅರಿತು ಬೌದ್ಧಿಕ ನಾಯಕತ್ವ ನೀಡಬಲ್ಲ. ಕಟ್ಟಡ ಕಾಮಗಾರಿ ಮಾಡಿಸುವ ಸಿವಿಲ್ ಗುತ್ತಿಗೆದಾರನ ಮನಃಸ್ಥಿತಿಯ ವ್ಯಕ್ತಿ ಅಲ್ಲ.
ಜ್ಞಾನ ಕಟ್ಟುವ ಕೆಲಸದ ಬದಲು ಕಟ್ಟಡ ಕಟ್ಟುವ ಕೆಲಸಕ್ಕೆ ಆದ್ಯತೆ, ಯೋಗ್ಯ ಅಧ್ಯಾಪಕರ ನೇಮಕಾತಿ ಬದಲು ಲಂಚಕ್ಕಾಗಿ ಯೋಗ್ಯರಲ್ಲದವರ ನೇಮಕ, ಕಮಿಷನ್ ಆಸೆಗೆ ಕಳಪೆ ಮೂಲಸೌಕರ್ಯ ಇತ್ಯಾದಿಗಳಿಗೆ ಇಡೀ ರಾಜ್ಯ ಸಾಕ್ಷಿಯಾಗಿರುವುದು ಸತ್ಯ. ಹಲವಾರು ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ತೆರವುಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕಟ್ಟಡ ಕಟ್ಟುವ ‘ಮೇಸ್ತ್ರಿ’ಗಳ ಬದಲು ಜ್ಞಾನ ಕಟ್ಟುವ ದಾರ್ಶನಿಕರು ಆ ಉನ್ನತ ಸ್ಥಾನಗಳನ್ನು ಅಲಂಕರಿಸುವಂತೆ ಮಾಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.
ಲೇಖಕ: ಪ್ರಾಧ್ಯಾಪಕ, ಇಂಗ್ಲಿಷ್ ವಿಭಾಗ,
ತುಮಕೂರು ವಿಶ್ವವಿದ್ಯಾಲಯ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.