ADVERTISEMENT

ಓಜೋನ್ ಪದರ: ಸೂರಿನ ಸುರಕ್ಷೆಗೊಂದು ಸಂಕಲ್ಪ

ಓಜೋನ್ ಪದರದ ರಕ್ಷಣೆ ವಿಶ್ವದ ಪ್ರತೀ ಪ್ರಜೆಯ ಹೊಣೆ

ಯೋಗಾನಂದ
Published 16 ಸೆಪ್ಟೆಂಬರ್ 2020, 1:13 IST
Last Updated 16 ಸೆಪ್ಟೆಂಬರ್ 2020, 1:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ರಹ್ಮಾಂಡದಲ್ಲಿ ಜೀವಿಸುವಿಕೆ ಸಾಧ್ಯವಾಗಿರುವ ಅತ್ಯಪರೂಪದ ನೆಲೆ ಭೂಮಿ. ಮನುಷ್ಯ, ಅಭಿವೃದ್ಧಿಯ ಅತಿಮೋಹಕ್ಕೆ ಬಿದ್ದು ಪ್ರಕೃತಿಯ ಅನನ್ಯ ಬಳುವಳಿಗಳನ್ನೇ ಹಾನಿಗೊಳಿಸುತ್ತಿದ್ದಾನೆ.

‘ಸ್ತರಗೋಳ’ವು (stratosphere) ಭೂಮಿಯ ವಾಯುಮಂಡಲದ ಒಂದು ಭಾಗ. ಅದರಲ್ಲಿ, ಅಂದರೆ ಭೂಮಿಯಿಂದ 15-50 ಕಿ.ಮೀ. ಎತ್ತರದಲ್ಲಿ ವ್ಯಾಪಿಸಿರುವ ‘ಓಜೋನ್ ಅನಿಲ ಕೊಡೆ’ ಇದೆ. ಭೂಮಿಯ ರಕ್ಷಣೆಗೆ ನಿಸರ್ಗ ಹಿಡಿದಿರುವ ನಾಜೂಕಿನ ಗುರಾಣಿಯಿದು. ಸೂರ್ಯನಿಂದ ಭೂಮಿಯ ಮೇಲ್ಮೈ ತಲುಪಲು ಧಾವಿಸುವ ಅತಿನೇರಳೆ ವಿಕಿರಣದ ಅಧಿಕಾಂಶಗಳನ್ನು ತಡೆಹಿಡಿಯುವ ಪೊರೆಯದು. ಅದನ್ನು ನಾವು ನೋಡಲಾಗದು, ಅನುಭವಕ್ಕೂ ಅದು ಬರದು. ಆದರೆ ಅದರ ಸೇವೆ ಮಾತ್ರ ಅಸದೃಶ.

ಸೂರ್ಯನ ವಿಕಿರಣಗಳು ಏಕಾಏಕಿ ನುಗ್ಗಿದರೆ ಚರ್ಮದ ಕ್ಯಾನ್ಸರ್, ಕ್ಯಾಟರ‍್ಯಾಕ್ಟ್, ಕುರುಡು ಪರಿಣಮಿಸುವ ಸಾಧ್ಯತೆ ಅಧಿಕ. ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ಸಸ್ಯಗಳು, ಜಲಮೂಲಗಳ ಪರಿಸರ ಸಮತೋಲನ ಹದ ತಪ್ಪುವುದು. ಹಾಲಿ ಮೂರು ಮಿ.ಮೀ. ತೆಳುವಿರುವ ಓಜೋನ್ ಪದರ ಮತ್ತೂ ತೆಳುವಾಗುತ್ತಿರುವುದು ಆತಂಕದ ಸಂಗತಿ. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಂತೂ ಈ ನ್ಯೂನತೆ ಗಂಭೀರ ಸ್ವರೂಪದಲ್ಲಿದೆ.

ADVERTISEMENT

ದಕ್ಷಿಣ ಧ್ರುವದ ಮೇಲಿನ ಓಜೋನ್ ಪದರ ವರ್ಷದಿಂದ ವರ್ಷಕ್ಕೆ ತೆಳುವಾಗುತ್ತಿರುವುದನ್ನು 1980ರಲ್ಲಿ ಉಪಗ್ರಹಗಳ ನೆರವಿನಿಂದ ಗಮನಿಸಿದ್ದೇ ಬಂತು. ರಕ್ಷಾ ಕೊಡೆಯ ಮಹತ್ವ, ಅದು ಛಿದ್ರಗೊಳ್ಳತೊಡಗಿದರೆ ಆಗುವ ದುರಂತ ಎಷ್ಟು ಘೋರ ಎನ್ನುವುದರತ್ತ ವಿಶೇಷವಾಗಿ ಪರಿಸರವಾದಿಗಳು, ವಿಜ್ಞಾನಾಸಕ್ತರ ಚಿತ್ತ ಹರಿಯಿತು. ಓಜೋನ್ ಪದರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವುದು ಪರ್ಯಾವರಣದ ಸಂರಕ್ಷಣೆಯ ಪ್ರಮುಖ ಭಾಗವಾಗಿಯೇ ರೂಪ ತಳೆಯಿತು. ಒಂದರ್ಥದಲ್ಲಿ ಎಲ್ಲರೂ ಪರಿಸರವಾದಿಗಳೇ ಎಂಬ ಪರಿಕಲ್ಪನೆಗೆ ರೆಕ್ಕೆ ಮೂಡಿತು.

ರೆಫ್ರಿಜರೇಟರ್, ಏರ್ ಕಂಡೀಷನರ್, ಸ್ಪ್ರೇಯರ್‌ಗಳಲ್ಲಿ ಕ್ಲೋರೊಫ್ಲೋರೊ ಕಾರ್ಬನ್‍ಗಳೆಂಬ (ಸಿ.ಎಫ್.ಸಿ.) ರಾಸಾಯನಿಕ ಸಂಯುಕ್ತ ವಸ್ತುಗಳನ್ನು ಬಳಸಲಾಗುತ್ತದೆ. ಅಗ್ನಿಶಾಮಕಗಳಲ್ಲಿ ಹ್ಯಾಲೊನ್ ಎಂಬ ರಾಸಾಯನಿಕ ಸಂಯುಕ್ತವನ್ನು ಬಳಸಲಾಗುತ್ತದೆ.
ಇದು ಒತ್ತಿಕ್ಕಿದ ದ್ರವ ಅನಿಲ. ಇವುಗಳ ಬಾಷ್ಪಶೀಲತೆ ಅಧಿಕ. ಸೊನ್ನೆ ಡಿಗ್ರಿ ಸೆಲ್ಸಿಯಸ್‍ಗಿಂತ ತುಸು ಹೆಚ್ಚಿನ ಉಷ್ಣತೆಯಲ್ಲೇ ಕೊತ ಕೊತ ಕುದಿಯುವ ಗುಣ. ಈ ವರವೇ ಓಜೋನ್ ಪದರಕ್ಕೆ ಸಂಚಕಾರ ಒಡ್ಡಿರುವುದು. ಕ್ಲೋರೊಫ್ಲೋರೊ ಕಾರ್ಬನ್ ಬಿಡುಗಡೆ ಮಾಡುವ ಕ್ಲೋರಿನ್ ಮಂದಗತಿಯಲ್ಲಿ ಮೇಲೇರಿ ಸ್ತರಗೋಳ ಸೇರುತ್ತದೆ. ಸೂರ್ಯನ ಅತಿನೇರಳೆ ವಿಕಿರಣಗಳಿಂದ ವಿಭಜಿಸಲ್ಪಟ್ಟು ಕ್ಲೋರಿನ್ ಪರಮಾಣುಗಳು ಬಿಡುಗಡೆಯಾಗುತ್ತವೆ. ಇವುಗಳಿಂದಲೇ ಓಜೋನ್ ಅಣುಗಳ ನಾಶ. ಲಕ್ಷ ಓಜೋನ್ ಅಣುಗಳನ್ನು ಸಂಹರಿಸಲು ಒಂದೇ ಒಂದು ಕ್ಲೋರಿನ್ ಪರಮಾಣು ಸಾಕು!

ವಾಸ್ತವವಾಗಿ ಸೂರ್ಯನ ವಿವಿಧ ಬಗೆಯ ವಿಕಿರಣಗಳಿಂದಲೇ ಸತತವಾಗಿ ಓಜೋನ್ ಅಣುಗಳ ಸೃಷ್ಟಿ ಮತ್ತು ಲಯ. ಸಾಧಾರಣ ಸ್ಥಿತಿಗತಿಯಲ್ಲಿ ಸೃಷ್ಟಿ, ಲಯಗಳಲ್ಲಿ ಸಾಮ್ಯವೇ ಇದ್ದೀತು. ಆದರೆ ಮನುಷ್ಯಕೃತ ರಾಸಾಯನಿಕ ಸಂಯುಕ್ತಗಳು ವಾಯುಮಂಡಲಕ್ಕೆ ಮಾರಕ ಅನಿಲಗಳನ್ನು ಸ್ರವಿಸುವಂತಾದರೆ?

ಓಜೋನ್ ಪದರದ ರಕ್ಷಣೆ ವಿಶ್ವದ ಪ್ರತೀ ಪ್ರಜೆಯ ಹೊಣೆ. ಚಳಿಗಾಲದಲ್ಲಿ ರೆಫ್ರಿಜರೇಟರ್ ಅನಗತ್ಯ. ಇನ್ನು ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಆಹಾರ ಪದಾರ್ಥಗಳನ್ನು ಕೆಡದಂತೆ ಇಡುವ ನಾನಾ ಕ್ರಮಗಳಿವೆ. ಬೇಸಿಗೆಯಲ್ಲಿ ಸೊಪ್ಪು, ತರಕಾರಿಯನ್ನು ಮಡಕೆಯಲ್ಲಿಟ್ಟು ಬಾಡದಂತೆ ಮಾಡಬಹುದು. ಕಾರಿನ ಬಳಕೆ ಮಿತಗೊಳಿಸುವ, ಪರಿಸರಕ್ಕೆ ಹಾನಿ ಮಾಡುವ ಅನಿಲ, ಶುಚಿಕಾರಕಗಳನ್ನು ಬಳಸದಿರುವ ಮೂಲಕ ಸರ್ವರೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಬೇಕು.

ವಿಶ್ವಸಂಸ್ಥೆಯು 1987ರ ಸೆ. 16ರಂದು ಕೆನಡಾದ ಮಾಂಟ್ರಿಯಲ್‍ನಲ್ಲಿ ಒಂದು ಮಹತ್ತರ ಸಭೆ ಏರ್ಪಡಿಸಿತ್ತು. 46 ದೇಶಗಳು ಭಾಗವಹಿಸಿದ್ದವು. ಓಜೋನ್ ಕೊಡೆಯ ಸುರಕ್ಷತೆಗೆ ವಿಸ್ತೃತ ಚರ್ಚೆಯಾಗಿ ಒಂದು ಜಾಗತಿಕ ನಿರ್ಣಯ ಹೊರಬಂದಿತು. ಕೊಡೆಯಲ್ಲಿ ರಂಧ್ರಗಳಾಗುತ್ತಿರುವುದನ್ನು ಶತಾಯಗತಾಯ ತಪ್ಪಿಸಲು ಯಾವ್ಯಾವ ಶೈತ್ಯಕಾರಿಗಳ ಉಪಯೋಗವನ್ನು ಯಾವ ಬಗೆಗಳಲ್ಲಿ ನಿಯಂತ್ರಿಸಬೇಕು ಎನ್ನುವುದರ ಮಾರ್ಗಸೂಚಿಯೂ ಸಿದ್ಧವಾಯಿತು. 1992ರಲ್ಲಿ ಭಾರತ ಒಪ್ಪಂದಕ್ಕೆ ಸಹಿ ಹಾಕಿತು. ಇಂದಿಗೆ ಜಗತ್ತಿನ ಒಟ್ಟು 197 ರಾಷ್ಟ್ರಗಳು ಒಪ್ಪಂದವನ್ನು ಮಾನ್ಯ ಮಾಡಿ ಓಜೋನ್ ಕವಚದ ರಕ್ಷಣೆಗೆ ಕಂಕಣಬದ್ಧವಾಗಿವೆ.

2005ರ ವೇಳೆಗೆ ಶೇ 20ರಷ್ಟು ನ್ಯೂನತೆ ಸುಧಾರಿಸಿತ್ತು. ‘ಬರದಲ್ಲೊಂದು ವರ’ ಎನ್ನುವಂತೆ ವಿಶ್ವದಾದ್ಯಂತ ಕೊರೊನಾ ಹತ್ತಿಕ್ಕಲು ವಿಧಿಸಲಾದ ಲಾಕ್‍ಡೌನ್‍ಗಳ ಪರೋಕ್ಷ ಪ್ರಭಾವದಿಂದ ಉತ್ತರ ಧ್ರುವದ ಮೇಲಿದ್ದ ಓಜೋನ್ ರಂಧ್ರ ಮುಚ್ಚಿಹೋಗಿದೆ. ಮನಸ್ಸಿದ್ದರೆ ಮಾಳಿಗೆ ದೃಢ.

ಒಂದು ಸ್ವಾರಸ್ಯವನ್ನು ಗಮನಿಸಲೇಬೇಕು. ಭೂಮಿ ಮತ್ತು ಅದರ ನೈಸರ್ಗಿಕ ಉಪಗ್ರಹ ಚಂದ್ರನು ಸೂರ್ಯನಿಂದ ಬಹುತೇಕ ಒಂದೇ ಅಂತರದಲ್ಲಿವೆ. ಆದರೆ ಚಂದ್ರನ ಪಾಲಿಗೆ ಓಜೋನ್ ರಕ್ಷಾ ಕವಚವಿಲ್ಲ. ನಮಗೆ ಇರುವುದೊಂದೇ ಭೂಮಿ. ಅದಕ್ಕಿರುವ ಓಜೋನ್ ಸೂರೂ ಒಂದೇ. ಸೆ. 16 ‘ವಿಶ್ವ ಓಜೋನ್ ದಿನ’. ‘ಸೂರ್ಯನ ಅಡಿಯಲ್ಲಿ ಸಕಲ ಜೀವಿಗಳ ಯೋಗಕ್ಷೇಮ’ ಎಂಬ ಮಾಂಟ್ರಿಯಲ್ ಒಪ್ಪಂದದ ಧ್ಯೇಯವಾಕ್ಯ ಸಾರ್ಥಕವಾಗಲು ವಿಶ್ವಪ್ರಜೆ ಪುನರ್‌ ಸಂಕಲ್ಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.