ಭಾರತವು ಹಲವಾರು ಧರ್ಮ, ಜಾತಿ, ಮತ, ಬುಡಕಟ್ಟು, ಸಂಸ್ಕೃತಿ, ಭಾಷೆಗಳ ಜನ ತಲೆತಲಾಂತರ
ಗಳಿಂದ ಒಟ್ಟಿಗೇ ಬದುಕುತ್ತಿರುವ ಒಂದು ದೇಶ. 1947ರಲ್ಲಿ ಸ್ವಾತಂತ್ರ್ಯ ಪಡೆದ ದೇಶದಲ್ಲಿ, ಹಿಂದಿನಿಂದ ನಡೆದುಬಂದಿದ್ದ ಸತಿಪದ್ಧತಿಯಿಂದ ಹಿಡಿದು ಅಸ್ಪೃಶ್ಯತೆವರೆಗಿನ ಹಲವಾರು ಕ್ರೂರ ಆಚರಣೆಗಳನ್ನು ತೊಡೆದು ಹಾಕಬೇಕಾಗಿತ್ತು. ಅದಕ್ಕಾಗಿ ಭಾರತ ಸಂವಿಧಾನವು ಮೊದಲಿಗೆ ಮಾಡಿದ್ದು ಧರ್ಮ, ಜಾತಿ, ಲಿಂಗ, ವರ್ಗ, ಪ್ರದೇಶ, ಭಾಷೆ ಇವು ಯಾವುದರ ಆಧಾರದ ಮೇಲೆಯೂ ತಾರತಮ್ಯವನ್ನು ಮಾಡದೆ ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ ಹಾಗೂ ಸ್ಥಾನಮಾನಗಳ ಸಮಾನತೆಯನ್ನು ಘೋಷಿಸಿದ್ದು.
ಮಾನವ ಹಕ್ಕುಗಳು ಮಾನವರಿಗೆ ಹುಟ್ಟಿನಿಂದಲೇ ಪ್ರಕೃತಿದತ್ತವಾಗಿ ದೊರಕಿರುತ್ತವೆ. ಆದರೆ, ಕೆಲವು ಶಕ್ತಿಗಳು ಕೆಲವರ ಮಾನವಹಕ್ಕುಗಳನ್ನು ಕಸಿಯಬಹುದು, ಅವರನ್ನು ಅಮಾನವೀಯವಾಗಿ ಶೋಷಿಸಬಹುದು. ಆದರೆ ಸಂವಿಧಾನದ ಪ್ರಕಾರ ರಚಿತವಾದ ಸರ್ಕಾರಗಳು ಈ ಹಕ್ಕುಗಳನ್ನು ಸಂರಕ್ಷಿಸಬೇಕು. ಆದರೆ ನೂರಾರು ವರ್ಷಗಳಿಂದ ಐತಿಹಾಸಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ದಮನಕ್ಕೆ ಒಳಗಾಗಿ, ನಂತರ ವಿಮೋಚನೆ ಹೊಂದಿರುವ ಕೆಲವು ಸಮುದಾಯಗಳು ಹಾಗೂ ಸಮಾಜಗಳು ತಮ್ಮ ಹಕ್ಕುಗಳನ್ನು ಅನುಭವಿಸಲು ಕಷ್ಟಪಡಬೇಕಾಗಿದೆ. ಹೀಗಾಗಿ, ಇಂಥ ಕೆಲವು ದುರ್ಬಲ ವರ್ಗಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರಗಳು, ಸಮಾಜಮುಖಿ ಸಂಸ್ಥೆಗಳು ಮಾಡಬೇಕಾಗುತ್ತದೆ.
ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯು ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವ ಅಗತ್ಯವನ್ನು ಗುರುತಿಸಿತು. ಅದನ್ನು ಅನುಸರಿಸಿ 1992ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಾಷ್ಟ್ರೀಯ ಅಥವಾ ಜನಾಂಗೀಯ, ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾ ತರ ಹಕ್ಕುಗಳ ಕುರಿತ ಘೋಷಣೆಯನ್ನು ಅಂಗೀಕರಿಸಿತು. ಇದು ಎಲ್ಲಾ ಬಗೆಯ ಅಲ್ಪಸಂಖ್ಯಾತರಿಗೆ ಸುನಿಶ್ಚಿತಗೊಳಿಸಬೇಕಾದ ಮೂಲಭೂತ ಹಕ್ಕುಗಳನ್ನು ನಿರೂಪಿಸಿತು. ಇದರ ನೆನಪಿಗಾಗಿ ಡಿಸೆಂಬರ್ 18 ಅನ್ನು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನಾಗಿ ಘೋಷಿಸಲಾಯಿತು. ಭಾರತವು 2013ರಿಂದ ಈ ದಿನವನ್ನು ಆಚರಿಸುತ್ತಿದೆ.
ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಸಿಖ್ಖರು, ಜೈನರು ಮತ್ತು ಪಾರ್ಸಿಗಳನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಎಂದು ಪರಿಗಣಿಸ ಲಾಗಿದೆ. ಕರ್ನಾಟಕದಲ್ಲಿಯೂ ಈ ಸಮುದಾಯಗಳು ಬೇರೆ ಬೇರೆ ಪ್ರಮಾಣದಲ್ಲಿ ಇವೆ. ಈ ಬಾರಿಯ ದಿನಾಚರಣೆಯ ಘೋಷವಾಕ್ಯ ‘ವೈವಿಧ್ಯಕ್ಕೆ ಉತ್ತೇಜನ, ಹಕ್ಕುಗಳ ರಕ್ಷಣೆ’. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಜನಜಾಗೃತಿ ಮೂಡಿಸುವುದು, ಅಲ್ಪಸಂಖ್ಯಾತ ಸಮೂಹಗಳ ವಿಶಿಷ್ಟ ಅಗತ್ಯಗಳು, ಕಾಳಜಿಗಳನ್ನು ಒಳಗೊಳ್ಳುವಂಥ ಕಾರ್ಯ ನೀತಿಗಳನ್ನು ರೂಪಿಸುವುದು, ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅಲ್ಪಸಂಖ್ಯಾತ ಸಮುದಾಯವನ್ನು ಸಬಲೀಕರಿಸುವುದು, ಅಂಥ ಸಮುದಾಯದ ವಿರುದ್ಧ ತೋರಲಾಗುವ ತಾರತಮ್ಯದ ವಿರುದ್ಧ ಹೋರಾಡುವುದು, ಶಿಕ್ಷಣ, ಉದ್ಯೋಗ ಹಾಗೂ ಇತರ ವಲಯಗಳಲ್ಲಿ ಅವರಿಗೆ ಸೂಕ್ತ ಅವಕಾಶಗಳನ್ನು ಖಚಿತಪಡಿಸಿಕೊಳ್ಳುವುದು, ಎಲ್ಲಾ ನಾಗರಿಕರಲ್ಲಿ ಸೌಹಾರ್ದವನ್ನು ಬಲಪಡಿಸುವುದು– ಇವು ಅಲ್ಪಸಂಖ್ಯಾತರ ಹಕ್ಕುಗಳ ದಿನದ ಉದ್ದೇಶಗಳಾಗಿವೆ.
ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ಖಾತರಿಗೊಳಿಸುವ ಸಲುವಾಗಿ ಹಲವಾರು ವಿಶಿಷ್ಟ ಕಾಯ್ದೆಗಳು ಮತ್ತು ನಿಯಮಾವಳಿಗಳನ್ನು ಜಾರಿ ಗೊಳಿಸಲಾಗಿದೆ. ಅವುಗಳ ಅನುಷ್ಠಾನಕ್ಕಾಗಿ ಹಲವು ಹಂತಗಳ ಅಧಿಕೃತ ವ್ಯವಸ್ಥೆ ಇದೆ. ಕೇಂದ್ರದಲ್ಲಿ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವಾಲಯ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮವನ್ನು ಸ್ಥಾಪಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಈ ಮೊದಲು ಇದ್ದ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ನಿರ್ದೇಶನಾಲಯದಿಂದ ಪ್ರತ್ಯೇಕಿಸಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲಾಗಿದೆ. ಜೊತೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವೂ ಕಾರ್ಯನಿರತವಾಗಿದೆ. ಇವೆರಡೂ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ ಅಭಿವೃದ್ಧಿಗಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತವೆ.
ಇವೆಲ್ಲವೂ ಸರ್ಕಾರಿ ಸಂಸ್ಥೆಗಳು. ಅವುಗಳ ಕಾರ್ಯಕ್ಷೇತ್ರ ತುಂಬಾ ವಿಶಾಲವಾದದ್ದು. ಕೆಲವೊಮ್ಮೆ ಇಲಾಖೆ, ನಿಗಮಗಳು ಸಕ್ರಿಯವಾಗಿದ್ದರೂ ಸರ್ಕಾರಗಳ ವತಿಯಿಂದ ಅಪೇಕ್ಷಿತ ನೈತಿಕ ಮತ್ತು ಆರ್ಥಿಕ ಬೆಂಬಲ ಸಿಗದೇ ಇರಬಹುದು. ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಗಬೇಕಾದ ಹಕ್ಕುಗಳು ಸಿಗದೇ ಹೋಗುವ ಸಾಧ್ಯತೆ ಇರುತ್ತದೆ. ಇದರ ಮೇಲೆ ನಿಗಾ ಇಡಲು, ಸಾರ್ವಜನಿಕ ಜೀವನದಿಂದ ಆಯ್ದ ಪರಿಣತರು, ತಜ್ಞರು, ಗಣ್ಯರನ್ನು ಒಳಗೊಂಡ ಆಯೋಗಗಳನ್ನೂ ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವಿದ್ದರೆ, ಕರ್ನಾಟಕದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿತವಾಗಿದೆ.
ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಆಗಾಗ ಚ್ಯುತಿ ಉಂಟಾಗುತ್ತಿರುವ ಇಂದಿನ ಸ್ಥಿತಿಯಲ್ಲಿ, ಅಲ್ಪ ಸಂಖ್ಯಾತರ ಆಯೋಗಗಳು ಹೆಚ್ಚು ಬದ್ಧತೆ ಹಾಗೂ ತತ್ಪರತೆಯಿಂದ ಕೆಲಸ ಮಾಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.