ADVERTISEMENT

ಬ್ರಹ್ಮರಾಕ್ಷಸನ ‘ಮದ್ಯ’ ಮಾರ್ಗ

ಡಾ.ರಾಜೇಗೌಡ ಹೊಸಹಳ್ಳಿ
Published 31 ಜನವರಿ 2019, 20:26 IST
Last Updated 31 ಜನವರಿ 2019, 20:26 IST
ಬ್ರಹ್ಮರಾಕ್ಷಸನ ‘ಮದ್ಯ’ ಮಾರ್ಗ
ಬ್ರಹ್ಮರಾಕ್ಷಸನ ‘ಮದ್ಯ’ ಮಾರ್ಗ   

ಮದ್ಯ, ಮಿಥುನ- ಇವು ಎದೆಗೂಡಿನೊಳಗೆ ಕಟ್ಟಿರುವ ಕೆಂಜಗನ ಗೂಡೂ ಹೌದು, ಗೀಜುಗ ನೇಯ್ದ ಗೂಡೂ ಹೌದು. ಆರಿಸಿಕೊಳ್ಳುವಿಕೆಯು ಹೃದಯವಂತ ಮನುಷ್ಯತ್ವದೊಳಗಿರಬೇಕು. ಕುಡುಕ ಗಂಡಂದಿರನ್ನು, ಮಕ್ಕಳನ್ನು ನಿಯಂತ್ರಿಸಲಾರದೆ ಸೋತು ಬಸುರಿಯರು, ಬಾಣಂತಿಯರು, ಕಾಲಿಗೆ ಚಪ್ಪಲಿ ಸಹಾ ಇಲ್ಲದ ಮುದುಕಮ್ಮದಿರು ರಾಜ್ಯದ ಮೇಲ್ತುದಿಯಿಂದ ರಾಜ್ಯದ ರಾಜಧಾನಿಗೆ ಬಂದು ಮದ್ಯ ನಿಷೇಧಕ್ಕೆ ಆಗ್ರಹಿಸಿದ್ದಾರೆ.

ರೆಸಾರ್ಟ್‌ನಲ್ಲಿ ಬಾಟಲಿ ಬೀಸುವ ಶಾಸಕರಿಂದ ಹಿಡಿದು ಕಟ್ಟಕಡೆಯ ಕೂಲಿಯವರೆಗೆ ಪುರುಷ ಪ್ರಪಂಚ ಮನುಷ್ಯತ್ವವನ್ನೇ ಕಳೆದುಕೊಂಡುಬಿಟ್ಟಿದೆ. ನಮ್ಮಜ್ಜನ ಕಾಲದಲ್ಲಿ ಆರೋಗ್ಯಪೂರಕವಾದ ಒಂದು ಸೀಸೆ ಹೆಂಡ ಕುಡಿದರೆ ಅವರು ಮುಖದ ಮೇಲೆ ಮುಸುಕು ಹಾಕಿ ಮಲಗುವಷ್ಟು ನಾಚಿಕೆಯಲ್ಲಿದ್ದರು. ಅದೆಲ್ಲವೂ ಈಗ ಲಜ್ಜೆರಹಿತವಾಗಿದೆ.

ನಿಜಲಿಂಗಪ್ಪನವರು ಮಂತ್ರಿಗಳು, ಯಶೋಧರಾ ದಾಸಪ್ಪನವರು ಅಬಕಾರಿ ಮಂತ್ರಿಗಳು. ಆ ಕಾಲದಲ್ಲಿ ನಿಷೇಧ ಜಾರಿಯಾಗಿ 1967ರ ಅಬಕಾರಿ ಸಚಿವ ರಾಮಕೃಷ್ಣ ಹೆಗಡೆಯವರ ಅವಧಿವರೆಗೆ ಜಾರಿಯಲ್ಲಿತ್ತು. ಆ ಅವಧಿಯ ನಡುವೆ ನಮ್ಮೂರಲ್ಲಿ ಬಟ್ಟಿ ಸಾರಾಯಿ ಎಂಬುದು ಸೀಸೆಯ ಬಿರಡೆ ತೆಗೆದ ಬ್ರಹ್ಮರಾಕ್ಷಸನಂತೆ ಮನೆ ಮನೆಯಲ್ಲಿ ನೊಚ್ಚನೆ ಬೆಂಕಿ ಕಾಯಿಸುತ್ತಾ, ಹೆಂಗಸರು ಮಕ್ಕಳು ಸಹಾ ಮೂಗು ಅರಳಿಸುತ್ತಾ ಪಾಕ ಪ್ರವೀಣರಾಗಿಬಿಟ್ಟದ್ದನ್ನು ಬಲ್ಲೆವು.

ADVERTISEMENT

ಅಬಕಾರಿಯವರು ಹಾಗೂ ಪೊಲೀಸಿನವರು ಕಳ್ಳಕಾಕರನ್ನು ಜೀಪಿಗೆ ತುಂಬಿದಂತೆ, ಹಳ್ಳಿಗೆ ನುಗ್ಗಿ ಕಳ್ಳಬಟ್ಟಿ ಸಾರಾಯಿ ತಯಾರಿಕಾ ಪ್ರವೀಣರನ್ನು ಎಳೆದುಕೊಂಡು ಹೋಗಿದ್ದನ್ನು ನೋಡಿದ್ದು ನೆನಪು. ಆನಂತರವೂ ಕಳ್ಳಬಟ್ಟಿ ನಿಲ್ಲಲಿಲ್ಲ.

ಮೀಥೇನ್ ಆಲ್ಕೊಹಾಲ್– ಇದು ಕೈಗಾರಿಕಾ ರಂಗದಲ್ಲಿ ಬಳಸುವ ವಿಷ. ಎಥೆನಾಲ್ ಆಲ್ಕೊಹಾಲ್ ಸ್ಪಿರಿಟ್ ಇದು ಕುಡಿಯಬಹುದಾದ ರಸ. ಈ ಅಂತರವನ್ನು ಕಳ್ಳಬಟ್ಟಿ ದಂಧೆಯವರು ಮರೆಮಾಚಿ, ಸಾವಿರಾರು ಜನರನ್ನು ಕೊಂದ ವಿಚಾರವನ್ನು ಅರಿತ ಸರ್ಕಾರ ತನ್ನ ಸುಪರ್ದಿಗೆ ಅಬಕಾರಿ ನೀತಿ ತೆಗೆದುಕೊಂಡು ಡಿಸ್ಟಿಲರಿಗಳಿಗೆ ಕಣ್ಗಾವಲಿನಿಂದ ‘ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್’ ಎಂಬ ಸೂತ್ರ ಅಳವಡಿಸಿ, ಆದಷ್ಟು ಆರೋಗ್ಯಪೂರಿತ ಲಿಕ್ಕರ್ ಅನ್ನು ಜನರಿಗೆ ಕುಡಿಸುತ್ತಿದೆ.

ಆದರೆ, ನಿಗದಿತ ಅಂಗಡಿಗಳಲ್ಲಿ ಕೊಂಡ ಮಧ್ಯವರ್ತಿಗಳು ₹ 68ರ ಬದಲು ₹90ಕ್ಕೆ ಸೀಲ್ಡ್ ಬಾಟಲಿಗಳನ್ನು ಗೂಡಂಗಡಿಗಳಲ್ಲಿ ಮನೆಮನೆಗಳಲ್ಲಿ ಮಾರಲಾರಂಭಿಸಿದ್ದಾರೆ. ಇದನ್ನು ತಡೆಯಲು ಅಬಕಾರಿ ಇಲಾಖೆ ಇದೆ. ಆದರೆ ಅವರಿಗೆ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಮೌನ ವಹಿಸುತ್ತಾರೆ. ಆದಾಯ ಹೆಚ್ಚು ಬೇಕೆಂದು ಟಾರ್ಗೆಟ್ ಫಿಕ್ಸ್ ಮಾಡುತ್ತಾ, ಜನ ಇನ್ನೂ ಹೆಚ್ಚು ಕುಡಿಯಿರಿ ಎಂದು ಹೇಳುವ ಸರ್ಕಾರದ ರೀತಿ ನಾಚಿಕೆ ತರುವಂತಹದು.

ಈ ಮೇಲಿನ ವಿಚಾರವು ಪಾನನಿಷೇಧ ಮಾಡಬೇಕು ಎನ್ನುವುದಕ್ಕೆ ವಿರೋಧದ ಮಾತಲ್ಲ. ನಿಷೇಧ ಹೇರಬೇಕಾದರೆ ಪೂರ್ವತಯಾರಿ ಬೇಕಾಗುತ್ತದೆ. ಸರ್ಕಾರ, ಮದ್ಯಪಾನ ಸಂಯಮ ಮಂಡಳಿ, ಸಂಘ ಸಂಸ್ಥೆಗಳು, ಸಮಾಜ ವಿಜ್ಞಾನಿಗಳು ಎಲ್ಲರೂ ಕುಳಿತು ಮುಂದೇನು ಮಾಡಬೇಕು ಎಂದು ಆಗುಹೋಗುಗಳನ್ನು ಚರ್ಚಿಸಿ ನಿರ್ಧಾರಕ್ಕೆ ಬರಬೇಕು. ಈ ದುರಭ್ಯಾಸ ಬಿಡಿಸಲು ಹೆಚ್ಚಾಗಿ ಗಂಡಸರನ್ನು ಅಹಿಂಸಾ ತತ್ವದಲ್ಲಿ ಬಗ್ಗಿಸುವ ದಾರಿಗಳಾಗಬೇಕು. ಅದು ಅಹಿಂಸಾ ಕ್ರಾಂತಿಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರಿಂದ ಪ್ರಾರಂಭವಾಗಿದೆ. ಮನೆಮಾರು ಉಳಿಸಿಕೊಳ್ಳಬೇಕೆನ್ನುವ ಸ್ತ್ರೀಯರು ಇನ್ನೂ ತಾಳ್ಮೆ ಕಳೆದುಕೊಂಡಿಲ್ಲ.

ಗಾಂಧೀಜಿ ಮಾರ್ಗದಲ್ಲಿಯೇ ಇದ್ದಾರೆ. ಸಮಾಜ, ಸರ್ಕಾರ ಸಹಕರಿಸಬೇಕು. ಗಾಂಧೀಜಿ ಇಂತಹುದನ್ನು ಕುರಿತು ‘ಅಹಿಂಸೆಯಿಂದ ನಮ್ಮ ಗುರಿ ಮುಟ್ಟಬೇಕಾದರೆ ಮದ್ಯಮಾದಕ ಶಾಪಗ್ರಸ್ತರಾದ ಲಕ್ಷೋಪಲಕ್ಷ ಜನ ಸ್ತ್ರೀ ಪುರುಷರ ಭವಿಷ್ಯವನ್ನು ಮುಂದೆ ಬರಲಿರುವ ಸರ್ಕಾರದ ಪಾಲಿಗೆ ಬಿಡುವಂತಿಲ್ಲ’ ಎಂದು ಭವಿಷ್ಯ ನುಡಿದಿದ್ದರು.

‘ಇದು ವೈದ್ಯರಿಂದ, ಕಾರ್ಯಕರ್ತರಿಂದ ಆಗುವ ಕೆಲಸ’ ಎಂದಿದ್ದರು. ಕಾಲಮಾನಕ್ಕೆ ತಕ್ಕಂತೆ ಮಾತು ಕೇಳದ ಕುಡುಕರಿಗೆ ಅಣ್ಣಾ ಹಜಾರೆಯವರ ತುಸು ಬಲ ಪ್ರಯೋಗವೂ ಬೇಕಾಗಬಹುದು. ಸ್ತ್ರೀಯರು ಗಯ್ಯಾಳಿಯರು ಆಗಬೇಕಾಗುತ್ತದೆ. ಅದು ಹೆಚ್ಚು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ.

ಅಲ್ಲಲ್ಲಿ ಈ ಸಾಮಾಜಿಕ ನಿಯಂತ್ರಣ ಆಗುತ್ತಿಲ್ಲವೆಂದಲ್ಲ. ತಮಿಳುನಾಡಿನ ತಿರುನಲ್ವೇಲಿ ಹಾಗೂ ಕರ್ನಾಟಕದ ಕೆಲವು ಮಠಮಾನ್ಯಗಳಿಂದ ಆಗುತ್ತಿದೆ. ಅದಕ್ಕೆ ಇಡೀ ಸಮಾಜ ಕೈಜೋಡಿಸಬೇಕಾಗುತ್ತದೆ. ಆದಿವಾಸಿಗಳ ಕಾಲದ ಸುರಾಪಾನ ಆರೋಗ್ಯಭರಿತವಾಗಿತ್ತು ನಿಜ. ಅದೀಗ ಉಳಿದಿಲ್ಲ. ಕಾಲ ಬದಲಾಗಿದೆ. ಮನುಷ್ಯ ಬದಲಾಗಬೇಕು. ಮದ್ಯವು ಸಂಸಾರ ಹಾಳು ಮಾಡಿದರೆ ಸಮಾಜಕ್ಕೆ ಕೇಡು. ಮನೆಮನೆಯ ಮಹಿಳೆಯರು ಮಕ್ಕಳಿಗಂತೂ ನರಕಯಾತನೆ.

ಈ ನರಕದ ವಿದ್ಯಮಾನ ಹಬ್ಬುತ್ತಾ ಹೋದರೆ ದೇಶಕ್ಕೆ ಕೇಡು. ಈಗಾಗಲೇ ಈ ಬ್ರಹ್ಮರಾಕ್ಷಸ, ದೇಶದ ತುಂಬಾ ನಾಡಿನ ತುಂಬಾ ವಾಮನ ಹೆಜ್ಜೆ ಇರಿಸುತ್ತಿದ್ದಾನೆ. ನೆಲಕ್ಕೆ ಹೂತು ಹೋಗುತ್ತಿರುವ ಬಲಿಯಂತವರು, ಅಂತಹವರ ಕುಟುಂಬದ ಸ್ತ್ರೀಯರು, ಮಕ್ಕಳ ಕ್ಷೇಮವೇ ಸಮಾಜದ ಕ್ಷೇಮ. ಅದೇ ದೇಶವು ಅಭಿವೃದ್ಧಿ ಕಡೆ ಹೆಜ್ಜೆ ಹಾಕುವ ಕ್ಷೇಮದ ಮಾರ್ಗ. ಆರೋಗ್ಯ ಕೆಟ್ಟ ಸಮಾಜ ಮಾನವ ಕುಲಕ್ಕೆ ಕೇಡು. ಇಂಥಾದ್ದನ್ನು ಸ್ತ್ರೀ ಸೈನ್ಯದೊಡನೆ ಸೇರಿ ವರ್ತಮಾನವು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದೇ ಈಗಿನ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.