ADVERTISEMENT

ಸಂಗತ: ಎಳೆಯರಿಗೊಂದು ಒಲುಮೆಯ ದಾರಿ

ಮಕ್ಕಳ ಒಳಗೊಂದು ವಿಶಾಲ ಮನೋಭೂಮಿಕೆ ನಿರ್ಮಾಣ ಆಗಬೇಕು

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 18 ಏಪ್ರಿಲ್ 2025, 23:55 IST
Last Updated 18 ಏಪ್ರಿಲ್ 2025, 23:55 IST
...
...   

ಆಧುನಿಕತೆಯ ಬಿರುಗಾಳಿಯ ಅಬ್ಬರದಲ್ಲಿ ಬದುಕು-ಬಾಂಧವ್ಯದ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವ ಯುಗವೊಂದಕ್ಕೆ ನಾವೀಗ ಎದುರಾಗು ತ್ತಿರುವ ಸಂದರ್ಭವಿದು. ಸಂವೇದನಾರಾಹಿತ್ಯ, ಶುಷ್ಕ ಸ್ಥಿತಿಗತಿಯಿಂದ ನಾವಿರುವ ಸಮಾಜವನ್ನು ಆಚೆ ತರಲು ಮಾಡಬೇಕಾದುದು ಏನು ಎಂಬ ಬಗ್ಗೆ ಹಿರಿಯರೊಬ್ಬರು ಒಡನಾಡಿಗಳೊಂದಿಗೆ ಚರ್ಚಿಸುತ್ತಿದ್ದರು. ಪ್ರಸ್ತುತ ಕಾಲಘಟ್ಟದ ಅನಿವಾರ್ಯ ಎಂಬಂತೆ ಆಗಿರುವ ಹಣ, ಆಸ್ತಿ, ಅಂತಸ್ತು, ಅಧಿಕಾರದ ಬೆನ್ನು ಬಿದ್ದಿರುವ ಇಂದಿನ ಜಾಯಮಾನಕ್ಕೆ ಆರೋಗ್ಯ, ನೆಮ್ಮದಿ ಎಂಬ ಜೀವಾಮೃತದ ಮಹತ್ವ ಮರೆತುಹೋಗಿದೆ.

ಏಕಮುಖವಾಗಿ ಬೆಳೆದು ನಿಂತವರು, ಬಲಿತರನ್ನು ಬದಲಿಸುವುದು ಸುಲಭವಲ್ಲ. ಹಾಗಾಗಿ, ಸಮಾಜದ ಮುಂದಿನ ತಲೆಮಾರುಗಳಲ್ಲಿ ವಿವೇಕ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವುದೇ ಸೂಕ್ತ ಮತ್ತು ಸಾಧ್ಯ ಮಾರ್ಗವೆಂಬ ಒಮ್ಮತದ ಅಭಿಪ್ರಾಯವೂ ಮೂಡಿತು. ಆದರೆ ಇದೀಗ ಯುವ ಮನಸ್ಸುಗಳ ಭವಿಷ್ಯವನ್ನು ಕಸಿಯುತ್ತಿರುವ ಟಿ.ವಿ, ಮೊಬೈಲ್ ಫೋನ್‌ ಗೀಳು, ಆನ್‌ಲೈನ್‌ ಗೇಮ್, ಬೆಟ್ಟಿಂಗ್ ದಂಧೆ, ಮದ್ಯ, ಮಾದಕವ್ಯಸನ ಹಾಗೂ ದ್ವೇಷ, ಅಸಹಿಷ್ಣುತೆ, ಕ್ರೌರ್ಯದ ಮನಃಸ್ಥಿತಿಗಳಿಂದ ಅವರನ್ನು ಪಾರು ಮಾಡಬೇಕಿದೆ. ಈಗಿರುವ ಹಂತದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸಲು ಶಾಲಾ ಪಠ್ಯದಲ್ಲಿ ಮೌಲ್ಯಯುತ ಶಿಕ್ಷಣದ ಕಡ್ಡಾಯ ಅಳವಡಿಕೆಗೂ ಒತ್ತಾಯ ಕೇಳಿಬಂತು. ಜೊತೆಗೆ ಪೋಷಕವರ್ಗ ಅಗತ್ಯವಾಗಿ ಕೈಗೊಳ್ಳಬೇಕಾದ ಹತ್ತಾರು ಹೊಣೆಗಾರಿಕೆಗಳ ಬಗ್ಗೆಯೂ ಚರ್ಚೆಯಾಯಿತು.

ರಜಾ ಅವಧಿಯಲ್ಲಿ ಮಕ್ಕಳಿಗೆ ಪುಸ್ತಕದಾಚೆಯ ನೈಜಲೋಕದ ಅನಾವರಣ ಆಗಬೇಕಾದ್ದು ಅವಶ್ಯ. ಪೋಷಕರ ನಿತ್ಯದ ಜಂಜಡದ ನಡುವೆಯೂ ಮಕ್ಕಳಿಗಿಷ್ಟು ಸಮಯವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಹಣ-ಆಸ್ತಿ ಕೂಡಿಡಲು ಹೆಣಗಾಡುವ ಬದಲು ಅವರೊಂದು ಆರೋಗ್ಯಕರ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ನೆರವಾಗುವುದನ್ನು ಬದುಕಿನ ಧ್ಯೇಯ ಆಗಿಸಿಕೊಳ್ಳಬೇಕು. ಬಾಲ್ಯದಲ್ಲಿ ಮಕ್ಕಳಿಗೆ ಮಾತು, ಗ್ರಹಿಕೆ, ಕುತೂಹಲಕಾರಿ ಪ್ರಶ್ನೆಗಳು ಮೂಡುವ ಹೊತ್ತಿಗೆ ಮನೆಯಲ್ಲೊಂದು ಆರೋಗ್ಯಕರ ಸಾಂಸಾರಿಕ ವಾತಾವರಣವನ್ನು ಕಾಪಿಡಬೇಕಾದ್ದು ಅಗತ್ಯ. ಮನೆಯು ಸದಾ ಕಾಳಜಿ, ಪ್ರೀತಿ, ಕರುಣೆಯನ್ನು ಪೊರೆಯಬೇಕು. ಮನೆಮಂದಿಯ ವರ್ತನೆಯು ಮಗುವಿನ ನಾಳೆಯ ನೀಲಿನಕ್ಷೆಯನ್ನು ರೂಪಿಸುತ್ತದೆಂಬ ಅರಿವಿರಬೇಕು.

ADVERTISEMENT

ಪೋಷಕರು ಯಾಂತ್ರಿಕತೆ, ಕೃತಕತೆ, ಬಾಹ್ಯಾಡಂಬರ, ಉದಾಸೀನವನ್ನು ಪ್ರೋತ್ಸಾಹಿಸದೆ ಮಕ್ಕಳೊಟ್ಟಿಗೆ ಆಗಾಗ ಹಳ್ಳಿಗಾಡು, ಗದ್ದೆ-ತೋಟ, ನದಿ-ತೊರೆ, ಕಡಲತೀರ, ಜಲಪಾತ, ಕಾಡು-ಕಣಿವೆ ಸುತ್ತಾಡುವಷ್ಟು ಬಿಡುವು ಮಾಡಿಕೊಳ್ಳಬೇಕು. ಮಕ್ಕಳು ಬೀಜ ಮೊಳೆಯುವ, ಸಸಿ ಚಿಗುರುವ, ಹೂ ಬಿರಿಯುವ, ಫಲ ಕಟ್ಟುವ ನೈಸರ್ಗಿಕ ಸೊಬಗನ್ನು ಬೆರಗಾಗಿ ಸವಿಯಬೇಕು. ಬೀಸುವ ಗಾಳಿ, ಸೂರ್ಯೋದಯ, ಪಶುಪಕ್ಷಿಗಳ ಸ್ವಚ್ಛಂದ ಬದುಕಿನೆಡೆಗೆ ಮನಸ್ಸು ಹೊರಳಬೇಕು. ಜೀವಸಂಕುಲದ ಸಹಜೀವನ, ಅನನ್ಯತೆ, ಪರಿಸರದ ತಾದಾತ್ಮ್ಯ, ಸೃಷ್ಟಿಯ ವಿಸ್ಮಯಗಳನ್ನು ಎಳೆಯ ಗೆಳೆಯರು ಗ್ರಹಿಸುವಂತೆ ಆಗಬೇಕು.

ಸಮಾಜದಲ್ಲಿ ಪರಸ್ಪರರೊಡನೆಯ ಬಾಂಧವ್ಯ ಸುಧಾರಣೆ, ಆತ್ಮೀಯ ಒಡನಾಟವು ಮಕ್ಕಳ ವೈಯಕ್ತಿಕ, ಸಾಮಾಜಿಕ ಬೆಳವಣಿಗೆಯ ನೆಲೆಯಲ್ಲಿ ಪ್ರಮುಖವಾಗುತ್ತದೆ. ರಜಾ ಅವಧಿಯಲ್ಲಿ ಮಕ್ಕಳನ್ನು ಐತಿಹಾಸಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಕರೆದೊಯ್ಯುವ ಮೂಲಕ ಅವರ ಭಾವವಲಯದ ವಿಸ್ತರಣೆಗೆ ಕಾರಣವಾಗಬಹುದು. ಮನಸ್ಸು ಅರಳಿಸುವ ಹಾಡು, ಸಾಹಿತ್ಯ, ಸಂಗೀತ, ಚಿತ್ರಕಲೆಯಂತಹ ಚಟುವಟಿಕೆಗಳ ಒಳಗೊಳ್ಳುವಿಕೆಯಿಂದಲೂ ಹಬ್ಬ, ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿನ ಭಕ್ತಿಪೂರ್ವಕವಾದ ಪಾಲ್ಗೊಳ್ಳುವಿಕೆಯಿಂದಲೂ ಸಾಮರಸ್ಯದ ಪಾಠ ಕಲಿಸಬಹುದು. ನಾಟಕ, ಸಿನಿಮಾ, ಸರ್ಕಸ್ ಸೇರಿದಂತೆ ವಿವಿಧ ಪಂದ್ಯಾಟಗಳಲ್ಲಿಯೂ ಮನರಂಜನೆ ಹೊಂದುವ ಮೂಲಕ ವ್ಯಕ್ತಿತ್ವ ವಿಕಸನೆಯ ಸಾಧುಮಾರ್ಗವನ್ನು ಕಂಡುಕೊಳ್ಳಬಹುದು.

ಬೆಳೆಯುವ ಹಂತದಲ್ಲಿರುವ ಮಕ್ಕಳನ್ನು ಗ್ರಂಥಾಲಯ, ಕ್ರೀಡಾಂಗಣ, ವಸ್ತುಸಂಗ್ರಹಾಲಯ, ಖಗೋಳ ವೀಕ್ಷಣೆಗೆ ಕರೆದೊಯ್ಯಬೇಕಾದದ್ದು ಬಹುಮುಖ್ಯ. ಅಲ್ಲಿಯ ಭೇಟಿ, ಮಾಹಿತಿಗಳಿಂದ ಬದುಕಿನಲ್ಲಿ ಶ್ರದ್ಧೆ-ಶ್ರಮ, ಸೋಲು-ಗೆಲುವು, ಹೊಂದಾಣಿಕೆಯ ಮಹತ್ವವನ್ನು ಅರಿಯುವುದರೊಟ್ಟಿಗೆ ವಿಶ್ವವಿಸ್ತಾರ ಮತ್ತದರ ಅಗಾಧತೆಯನ್ನು ಅನುಭವಿಸಲೂ ಸಾಧ್ಯ. ಇಂತಹದರ ಪಾಲ್ಗೊಳ್ಳುವಿಕೆಯಿಂದ ಮಕ್ಕಳೊಳಗೊಂದು ವಿಶಾಲ ಮನೋಭೂಮಿಕೆಯ ನಿರ್ಮಾಣ ಕ್ರಮೇಣ ಈಡೇರುತ್ತದೆ.

ಮಕ್ಕಳನ್ನು ಸಾಧ್ಯವಾದಾಗೆಲ್ಲಾ ರೈತರು, ಕಾರ್ಮಿಕರು, ಶ್ರಮಿಕರು, ಆಸ್ಪತ್ರೆಯ ರೋಗಿಗಳು ಮತ್ತು ಅನಾಥರ ನೆಲೆಗಳಿಗೆ ಕರೆದೊಯ್ದು ಮುಖಾಮುಖಿಯಾಗಿಸಿ ಅಲ್ಲಿಯ ಪರಿಸ್ಥಿತಿಯನ್ನು ಅರಿಯಲು ನೆರವಾಗಬೇಕು. ಶ್ರಮದ ದುಡಿಮೆ, ಸರಳ ಜೀವನಶೈಲಿ, ನಿಯತ್ತಿನ ಬೆಲೆ, ಆರೋಗ್ಯದ ಕಾಳಜಿ, ದುಃಖ, ನೋವು, ಅಸಹಾಯಕತೆಯ ಹಸಿಹಸಿ ಅನುಭವಗಳು ಅವರಲ್ಲಿ ಗಾಢವಾಗುತ್ತಾ ಸಂವೇದನಾಶೀಲ ವ್ಯಕ್ತಿತ್ವ ವೊಂದು ಪಕ್ವಗೊಳ್ಳಲು ವೇದಿಕೆ ನಿರ್ಮಿಸಿಕೊಟ್ಟಂತೆ ಆಗುತ್ತದೆ.‌

ಹೀಗೆ ಪೋಷಕ ವರ್ಗವು ಸರಳ ಮತ್ತು ಕೈಗೆಟಕುವ ಹತ್ತಾರು ಮಾರ್ಗಗಳಲ್ಲಿ ತಮ್ಮ ಮಕ್ಕಳ ಮನೋವಿಕಾಸಕ್ಕೆ ಅವಕಾಶ ನೀಡಿದಾಗ ಸನ್ನಡತೆ, ಬದ್ಧತೆ, ಹೊಣೆಗಾರಿಕೆಯುಳ್ಳ ಸತ್ಪ್ರಜೆಗಳು ಮನೆಗಷ್ಟೇ ಅಲ್ಲ ಸಮಾಜಕ್ಕೂ ದಕ್ಕುತ್ತಾರೆ. ಆ ಮೂಲಕ ಟಿ.ವಿ, ಮೊಬೈಲ್ ಗೀಳಿನಿಂದ, ಆನ್‌ಲೈನ್ ಗೇಮ್, ಮಾದಕ ವ್ಯಸನ ಹಾಗೂ ದ್ವೇಷ, ಕ್ರೌರ್ಯದ ಮನಃಸ್ಥಿತಿಯಿಂದ ಮಕ್ಕಳು ಪಾರಾಗಲಿ ಎಂಬುದು ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.