ADVERTISEMENT

ಸಂಗತ | ಕಾಪಿಡಬೇಕಿದೆ ಸರ್ಕಾರಿ ಕಾಲೇಜು

ಶಿಕ್ಷಣ ಹಕ್ಕನ್ನು ಸಾಕಾರಗೊಳಿಸುವ ಅಕ್ಷಯಪಾತ್ರೆಗಳಂತಿರುವ ಸರ್ಕಾರಿ ಕಾಲೇಜುಗಳನ್ನು ಕಾಪಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು

ರೇವಣ್ಣ ಎಂ.ಜಿ.
Published 20 ಏಪ್ರಿಲ್ 2025, 23:30 IST
Last Updated 20 ಏಪ್ರಿಲ್ 2025, 23:30 IST
,
,   

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ದಿನ, ಸರ್ಕಾರಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯೊಬ್ಬ ಕರೆ ಮಾಡಿ ‘ಸರ್, ಮುಂದಿನ ವರ್ಷ ಕಾಲೇಜು ಬದಲಾವಣೆ ಮಾಡಬೇಕೆಂದುಕೊಂಡಿದ್ದೇನೆ. ದ್ವಿತೀಯ ಪಿಯುಸಿ ಫಲಿತಾಂಶ ಸರ್ಕಾರಿ ಕಾಲೇಜುಗಳಲ್ಲಿ ಕಳಪೆಯಂತೆ, ಅದಕ್ಕಾಗಿ ಪೋಷಕರು ಯಾವುದಾದರೂ ಖಾಸಗಿ ಕಾಲೇಜಿಗೆ ಸೇರಿಕೊಳ್ಳಲು ಒತ್ತಾಯ ಮಾಡುತ್ತಿದ್ದಾರೆ’ ಎಂದು ಹೇಳಿದ. ಇದನ್ನು ಕೇಳಿ ದಿಗಿಲಾಯಿತು. ಹಾಗೆಯೇ ಪರೀಕ್ಷಾ ಫಲಿತಾಂಶದ ಅಂಕಿ ಅಂಶಗಳ ಕಡೆಗೊಮ್ಮೆ ಕಣ್ಣಾಡಿಸಿದೆ.

ಸರ್ಕಾರಿ ಕಾಲೇಜುಗಳ ಫಲಿತಾಂಶ ಶೇ 57.11ರಷ್ಟು ಇದ್ದರೆ, ಅನುದಾನರಹಿತ ಕಾಲೇಜುಗಳ ಫಲಿತಾಂಶ ಶೇ 82.66ರಷ್ಟು ಇತ್ತು. ಸರ್ಕಾರಿ ಕಾಲೇಜುಗಳ 61,951 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೆ, ಅನುದಾನ ರಹಿತ ಕಾಲೇಜುಗಳ 57,302 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಶೂನ್ಯ ಫಲಿತಾಂಶ ದಾಖಲಾದ ಕಾಲೇಜುಗಳಲ್ಲಿ 8 ಸರ್ಕಾರಿ ಕಾಲೇಜುಗಳಿದ್ದರೆ, 90 ಅನುದಾನರಹಿತ ಕಾಲೇಜುಗಳೂ ಇದ್ದವು. ಅಂಕಿ ಅಂಶಗಳನ್ನು ಹೋಲಿಸುವಾಗ ಕಾಲೇಜುಗಳ ದಾಖಲಾತಿ ಮಾನದಂಡ, ವಿದ್ಯಾರ್ಥಿಗಳ ಹಿನ್ನೆಲೆಯನ್ನೊಮ್ಮೆ ಕಣ್ಮುಂದೆ ತಂದುಕೊಂಡರೆ, ಕಳಪೆ, ಉತ್ತಮ ಎಂಬ ಪ್ರಶ್ನೆಯೇ ಬರುವುದಿಲ್ಲ. ಮೊಲದ ವೇಗದಲ್ಲಿ ಆಮೆ ಓಡಲಾರದೆಂದ ಮಾತ್ರಕ್ಕೆ ಆಮೆಗೆ ಕಳಪೆ ಹಣೆಪಟ್ಟಿ ಕಟ್ಟಬಹುದೇ? ಹಾಗೆಂದು, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳು ಮಾತ್ರ ಸರ್ಕಾರಿ ಕಾಲೇಜುಗಳಿಗೆ ಸೇರುವುದರಿಂದ ಫಲಿತಾಂಶದಲ್ಲಿ ಈ ರೀತಿಯ ವ್ಯತ್ಯಾಸವಿದೆ ಎಂದು ಹೇಳಿ, ಸರ್ಕಾರಿ ಕಾಲೇಜುಗಳಲ್ಲಿ ಎಲ್ಲವೂ ಸರಿಯಿದೆಯೆಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದೂ ಸರಿಯಲ್ಲ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಗ್ರಾಮೀಣ ಭಾಗದ ಬಹಳಷ್ಟು ಪಿಯು ಕಾಲೇಜುಗಳು ಮುಚ್ಚಿವೆ. ನಗರದ ಕೆಲವು ಕಾಲೇಜುಗಳೂ ಮುಚ್ಚುವ ಹಂತಕ್ಕೆ ಬಂದಿವೆ. ಇಂತಹ ಹೊತ್ತಿನಲ್ಲಿ ಕೊರತೆಗಳ ನೆಪವೊಡ್ಡಿ ಸರ್ಕಾರಿ ಕಾಲೇಜುಗಳನ್ನು ದೂರೀಕರಿಸುವುದೆಂದರೆ ನೆಗಡಿಗೆ ಮೂಗನ್ನು ದೂಷಿಸಿದಂತೆ!

ADVERTISEMENT

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲಿಲ್ಲವೆಂಬ ಕಾರಣಕ್ಕೆ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಮಾಧ್ಯಮಗಳಲ್ಲಿ ನೋಡಿದಾಗ, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಈಗಾಗಲೇ ನಕಾರಾತ್ಮಕ ಧೋರಣೆ ಮನೆ ಮಾಡಿದೆ ಎಂಬುದು ಅರಿವಿಗೆ ಬರುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದೇವೆ ಎಂದು ಹೇಳಿಕೊಳ್ಳಲು ಮಕ್ಕಳು ಹಿಂಜರಿಯುವ ಪರಿಸ್ಥಿತಿ ಬಂದೊದಗಿರುವುದು ಆಘಾತಕಾರಿ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಗೊಂಡ ದಿನ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣಳಾಗಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಕರೆ ಮಾಡಿ ‘ಸರ್, ಒಂದು ವಿಷಯದಲ್ಲಿ ಅಂಕ ಕಡಿಮೆಯಾಗಿದೆ’ ಎಂದಳು. ‘ಅಷ್ಟು ಆತ್ಮವಿಶ್ವಾಸವಿದ್ದರೆ ಉತ್ತರಪತ್ರಿಕೆಯ ಪ್ರತಿ ತರಿಸಿಕೊಂಡು ಸಂಬಂಧಪಟ್ಟ ಉಪನ್ಯಾಸಕರಿಗೆ ತೋರಿಸಿ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕು’ ಎಂದೆ. ‘ಅಯ್ಯೋ ಸರ್, ಪ್ರತಿ ಪಡೆಯಲು 530 ರೂಪಾಯಿಯೇ ಇಲ್ಲದಿರುವಾಗ ಮರುಮೌಲ್ಯಮಾಪನಕ್ಕೆ ಹಾಕಲು 1,670 ರೂಪಾಯಿಯನ್ನು ಎಲ್ಲಿಂದ ತರುವುದು? ಬೇಡ ಬಿಡಿ ಸರ್, ಹೇಗೋ ಪಿಯುಸಿ ಉತ್ತೀರ್ಣಳಾಗಿ ದ್ದೇನೆ. ಪದವಿ ಮುಗಿಸಿಕೊಂಡು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಒಂದು ಉದ್ಯೋಗ ಪಡೆದುಕೊಳ್ಳುತ್ತೇನೆ. ಸರ್ಕಾರಿ ಕಾಲೇಜು ಇಲ್ಲದಿದ್ದರೆ ಪೋಷಕರು ಪಿಯುಸಿಗೆ ಖಂಡಿತವಾಗಿಯೂ ನನ್ನನ್ನು ಕಳುಹಿಸುತ್ತಿರಲಿಲ್ಲ’ ಎಂಬ ಆಕೆಯ ನೋವಿನ ಮಾತುಗಳನ್ನು ಕೇಳಿದಾಗ ಗಂಟಲು ಕಟ್ಟಿತು.

ಹೀಗೆಯೇ ಕೆಲ ವರ್ಷಗಳ ಹಿಂದೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೊಬ್ಬ, ಪುನಃ ಪ್ರಥಮ ಪಿಯುಸಿಯಿಂದ ಕಾಂಬಿನೇಷನ್ ಬದಲಿಸಿಕೊಂಡು ಓದು ಮುಂದುವರಿಸಲೇಬೇಕು ಎಂಬ ಹಟದಿಂದ, ಹತ್ತಿರದ ಎಲ್ಲಾ ಖಾಸಗಿ ಕಾಲೇಜುಗಳನ್ನು ಕೇಳಿದರೂ ಯಾರೂ ದಾಖಲು ಮಾಡಿಕೊಳ್ಳಲಿಲ್ಲ. ಅನಿವಾರ್ಯವಾಗಿ ಸರ್ಕಾರಿ ಕಾಲೇಜಿಗೆ ಸೇರಿದ ಆತ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿ ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾದ.

ಇತ್ತೀಚೆಗೆ ನಡೆದ ಉಪನ್ಯಾಸಕರ ಸಮ್ಮೇಳನವೊಂದರಲ್ಲಿ ‘ಸರ್ಕಾರಿ ಕಾಲೇಜುಗಳಲ್ಲಿ ಸದ್ದಿಲ್ಲದೆ ಪವಾಡಗಳು ಜರುಗುತ್ತವೆ’ ಎಂದು ಲೇಖಕಿಯೊಬ್ಬರು ಹೇಳಿದ ಮಾತು ಇಂತಹ ಸಂಗತಿಗಳನ್ನು ಕಂಡಾಗ ಸತ್ಯ ಎಂದೆನಿಸುತ್ತದೆ. ಸರ್ಕಾರಿ ಕಾಲೇಜುಗಳು ಇಲ್ಲದಿದ್ದರೆ ಇಂತಹ ಮಕ್ಕಳಿಗೆ ಶಿಕ್ಷಣ ಸಾಧ್ಯವಾಗುತ್ತಿತ್ತೇ? ‘ಕೆಲವು ಪ್ರಕಾಶಮಾನವಾದ ಮನಸ್ಸುಗಳನ್ನು ತರಗತಿಯ ಕೊನೆಯ ಬೆಂಚುಗಳಲ್ಲಿ ಕಾಣಬಹುದು’ ಎಂಬ ಅಬ್ದುಲ್ ಕಲಾಂ ಅವರ ಮಾತುಗಳನ್ನು ಈ ಬಗೆಯ ಮಕ್ಕಳಿಗೂ ಅನ್ವಯಿಸಬಹುದಲ್ಲವೇ?

ಹಳ್ಳಿಗಳನ್ನು ಕುರಿತು ಕುವೆಂಪು ‘ನಿನ್ನನೀ ಕೀಳ್ಗತಿಗೆ ತಂದವರಾರು? ನಿನ್ನವರ ಕೈಬೆರಳ ಕಡಿದವರಾರು?’ ಎಂದ ಮಾತನ್ನು ಇಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಕೇಳುವ ಪರಿಸ್ಥಿತಿ ಬಂದೊದಗಿದೆ. ಶಿಕ್ಷಣವು ಮುಂದೊಂದು ದಿನ ಉಳ್ಳವರ ಸ್ವತ್ತಾಗಬಾರದೆಂದರೆ, ಶಿಕ್ಷಣ ಹಕ್ಕನ್ನು ಸಾಕಾರಗೊಳಿಸುವ ಅಕ್ಷಯಪಾತ್ರೆಗಳಂತೆ ಇರುವ ಸರ್ಕಾರಿ ಕಾಲೇಜುಗಳನ್ನು ಕಾಪಿಡುವುದು ನಮ್ಮೆಲ್ಲರ ಹೊಣೆಯಾಗಬೇಕು. ಸಮ ಸಮಾಜದ ಕನಸು ಹೊತ್ತ ಎಲ್ಲರೂ ಇದಕ್ಕಾಗಿ ಒಮ್ಮನಸ್ಸಿನಿಂದ ಸಂಕಲ್ಪ ತೊಡಬೇಕು.

ಲೇಖಕ: ಉಪನ್ಯಾಸಕ, ಸರ್ಕಾರಿ‌ ಪದವಿಪೂರ್ವ ಕಾಲೇಜು ಕೃಷ್ಣರಾಜಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.