ದಶಕಗಳ ಹಿಂದೆ ಮೈಸೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ದಿನಗಳು. ನಮ್ಮ ಕೊಠಡಿ ಮೇಲ್ವಿಚಾರಕರು ‘ಅಕ್ಕಪಕ್ಕದವರು ಬರೆಯುವುದು ತಪ್ಪೂ ಆಗಿರಬಹುದು. ನಿಮ್ಮಷ್ಟಕ್ಕೆ ಯೋಚಿಸಿ ಉತ್ತರ ಬರೆಯಿರಿ’ ಎಂದು ನಮ್ಮನ್ನು ಎಚ್ಚರಿಸುತ್ತಿದ್ದರು. ಪರೀಕ್ಷೆ ಎಂದ ಮೇಲೆ ಕೆಲವರು ತೇರ್ಗಡೆಯಾಗುತ್ತಾರೆ, ಇನ್ನು ಕೆಲವರು ಅನುತ್ತೀರ್ಣರಾಗುತ್ತಾರೆ. ಪರೀಕ್ಷೆಯಲ್ಲಿ ಬರೆಯುವ ಉತ್ತರಗಳು ಜ್ಞಾನವನ್ನು ಅಳೆಯುವ ಮಾಪನ ಎನ್ನುವುದೇ ಒಂದು ಭ್ರಮೆ. ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳ ಮೂಲ ಇದೇ ಎನ್ನಬಹುದು. ಇನ್ನೊಬ್ಬರ ಉತ್ತರವನ್ನು ತನ್ನದು ಎಂದು ಬಿಂಬಿಸಿ ಕೊಳ್ಳುವುದು ಹುಸಿ ವಿದ್ವತ್ತಷ್ಟೇ ಅಲ್ಲ, ಅದು ಅವರ ಕಲಿಕಾ ಪ್ರಕ್ರಿಯೆಯ ಅಪೂರ್ಣ ಸ್ಥಿತಿ ಸಹ ಆಗಿರುತ್ತದೆ.
ಪರೀಕ್ಷೆಗಳಲ್ಲಿ ಅವ್ಯವಹಾರ ನಡೆಯುವುದು ಶಿಕ್ಷಣ ಪದ್ಧತಿಯಷ್ಟೇ ಹಳೆಯದು. ಅದು ಜಾಗತಿಕ
ಸಮಸ್ಯೆಯೂ ಹೌದು. ಅಕ್ರಮಗಳಿಗೆ ಕಾರಣಗಳು ಹಲವು. ಸಿದ್ಧತೆಯ ಕೊರತೆ, ಕೀಳರಿಮೆ,
ಭಯ, ಪಠ್ಯಕ್ರಮದ ಹೊರೆ... ಹೀಗೆ ಒಂದೆರಡಲ್ಲ. ಪರೀಕ್ಷೆಯಲ್ಲಿ ಹೇಗಾದರೂ ತೇರ್ಗಡೆಯಾಗಬೇಕು
ಎಂಬ ಮೊಂಡುತನ ದುಷ್ಕೃತ್ಯಕ್ಕೆ ದೂಡುತ್ತದೆ. ಪಿಯುಸಿಗೆ ಸಂಬಂಧಿಸಿದಂತೆ ವಿಜ್ಞಾನ ವಿಷಯಗಳ ಪರೀಕ್ಷೆಯ ನಿರ್ವಹಣೆ ಸೂಕ್ಷ್ಮವೇ ಹೌದು. ಆ ವಿಷಯಗಳು ಕ್ಲಿಷ್ಟ, ಗಣಿತವಂತೂ ಕಬ್ಬಿಣದ ಕಡಲೆ ಎನ್ನುವ ಭಾವನೆಯೇ ಎಲ್ಲೆಲ್ಲೂ ಇದೆ.
ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳನ್ನು ಕಡೆಗಣಿಸದೆ ಶ್ರದ್ಧಾಸಕ್ತಿಯಿಂದ ಹಾಜರಾದರೆ ಅದಕ್ಕೆ ಸಂಬಂಧಿಸಿದ ಪರೀಕ್ಷೆಯ ಚಿತ್ರಣವೇ ಬೇರೆ ರೀತಿ ಇರುತ್ತದೆ. ಅವರು ಆ ಪರೀಕ್ಷೆಯಲ್ಲಿ ಉಲ್ಲಾಸದಿಂದಲೇ ಉತ್ತರಿಸುತ್ತಾರೆ. ಸಿದ್ಧಾಂತ, ಪ್ರಯೋಗ, ಲೆಕ್ಕಾಚಾರ ಸಮನ್ವಯಗೊಳ್ಳುವುದರಿಂದ ಪ್ರಶ್ನೆಗಳು ನೀರಸ ಎನ್ನಿಸವು. ಮೆಸೇಜ್, ವಾಟ್ಸ್‌ಆ್ಯಪ್, ಇ- ಮೇಲ್‌ನಂತಹ ಸೌಲಭ್ಯಗಳು ಅರಿವಿನ ವಿನಿಮಯಕ್ಕೆ ಸದ್ಬಳಕೆಯಾದರೆ ತಂತ್ರಜ್ಞಾನವನ್ನು ಗೌರವಿಸಿದಂತೆ.
ಶೈಕ್ಷಣಿಕ ಸಂಸ್ಕೃತಿ ಎನ್ನುವುದಿದೆ. ಯಶಸ್ಸಿಗೆ ಹತ್ತಿರದ ದಾರಿ ಇಲ್ಲ. ಕಷ್ಟಪಟ್ಟು ಓದಿ, ಬರೆಯದೇ ಅನ್ಯ ಮಾರ್ಗ ಇಲ್ಲ ಎನ್ನುವುದನ್ನು ಬೋಧಕರು ಪಠ್ಯ ಕ್ರಮದ ಒಂದು ಭಾಗದಂತೆ ಮಕ್ಕಳಿಗೆ ತಿಳಿಸುತ್ತಿರಬೇಕು.
ಪಾಸಾಗುವುದೆಂದರೆ ವರ, ನಪಾಸಾಗುವುದು ಶಾಪ ಎನ್ನುವ ಪರಿಭಾವನೆಯಿಂದ ವಿದ್ಯಾರ್ಥಿಗಳು ಮುಕ್ತ
ರಾಗಲಿ. ಅನುತ್ತೀರ್ಣವಾಗುವುದು ವೈಫಲ್ಯವಾಗಲಿ, ಅವಮಾನಕರವಾಗಲಿ ಅಲ್ಲ. ಅದು ಮತ್ತಷ್ಟು ಓದು, ಬರಹದಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಿಗುವ ಮತ್ತೊಂದು ಅವಕಾಶ. ನಪಾಸು ತಾತ್ಕಾಲಿಕ, ಅದು ಕಲಿಸುವ ಪಾಠ ಅನವರತ. ಇದು ಮನವರಿಕೆಯಾದರೆ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಮನೋಭಾವ ಬಹುಮಟ್ಟಿಗೆ ತಪ್ಪುತ್ತದೆ.
ವಿದ್ಯಾರ್ಜನೆಯೆಂದರೆ ಪೈಪೋಟಿ ಅಥವಾ ಸ್ಪರ್ಧೆಯಲ್ಲ. ಪರೀಕ್ಷಾ ಕೊಠಡಿಯಲ್ಲಿ ಬರೆಯುವಾಗ ಕೆಲವರು ಬಹುವಾಗಿ ಉದ್ವೇಗಕ್ಕೆ ಒಳಗಾಗುತ್ತಾರೆ. ಯಾರಾದರೂ ಸಹಪರೀಕ್ಷಾರ್ಥಿ ಒಂದು ಹೆಚ್ಚುವರಿ ಹಾಳೆ ಕೇಳಿ ಪಡೆದರೂ ಬಿಗುವು. ಪ್ರತಿ ವಿದ್ಯಾರ್ಥಿಯೂ ತಾನಾಯಿತು, ತನ್ನ ಉತ್ತರವಾಯಿತು ಎಂಬ ಪ್ರಜ್ಞೆಯಿಂದ ಪರೀಕ್ಷೆಯನ್ನು ಎದುರಿಸಿದರೆ ನಕಲು ಮಾಡುವ ಚಾಳಿ ದೂರವಾದೀತು. ಪರೀಕ್ಷಾ ಅವ್ಯವಹಾರ
ಗಳಿಗೆ ಶಿಕ್ಷೆಯಾಗುವ ಮಾತು ಬೇರೆ. ಆದರೆ ಅಂತಹ ಅವ್ಯವಹಾರಗಳ ಕಾರಣದಿಂದ ನಿಜವಾಗಿ ಸಂತ್ರಸ್ತ
ರಾಗುವ ಪ್ರಾಮಾಣಿಕ ವಿದ್ಯಾರ್ಥಿಗಳ ಪಾಡೇನು?
ಪ್ರಶ್ನೆಪತ್ರಿಕೆಯ ಸೋರಿಕೆ, ಪರೀಕ್ಷೆಗೆ ಬೇನಾಮಿ ವ್ಯಕ್ತಿಯ ಹಾಜರಿ, ಮೌಲ್ಯಮಾಪನದಲ್ಲಿ ಹಸ್ತಕ್ಷೇಪ- ಇಂಥವಂತೂ ಗಂಭೀರ ಪ್ರಮಾದಗಳು. ಪರೀಕ್ಷಾ ಅವ್ಯವಹಾರದಲ್ಲಿ ತೊಡಗುವವರು ಅತಿ ಅಪಾಯಕಾರಿ ತಳಪಾಯದ ಮೇಲೆ ಸಮಾಜವನ್ನು ಕಟ್ಟುವವರು. ನಕಲು ಮಾಡಿ ರ‍್ಯಾಂಕ್, ಗ್ರೇಡ್ ಪಡೆದವರಿಂದ ಮುಂದೆ ಗುಣಮಟ್ಟದ ದೇಶಸೇವೆಯನ್ನು ನಿರೀಕ್ಷಿಸು ವುದಾದರೂ ಹೇಗೆ? ಪೋಷಕರು ತಮ್ಮ ಅತಿ ನಿರೀಕ್ಷೆಯಿಂದ ಹೊರಬರಬೇಕು. ಪರೀಕ್ಷೆಗೆ ಹೊರಡುವ ಮಕ್ಕಳಿಗೆ ಹೆಚ್ಚೆಚ್ಚು ಅಂಕಗಳನ್ನು ತೆಗೆದುಕೊ ಎನ್ನುವ ಬದಲು ಚೆನ್ನಾಗಿ ಬರಿ, ಪ್ರಾಮಾಣಿಕವಾಗಿ ಬರಿ ಎಂದು ಹಾರೈಸುವುದು ಒಳ್ಳೆಯದು.
ಪರೀಕ್ಷೆಯು ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗ. ಪರೀಕ್ಷೆಯು ಪಾರದರ್ಶಕವಾಗಿದ್ದರೆ ಒದಗುವ ಶಿಕ್ಷಣವೂ ಸಮರ್ಥ ಮತ್ತು ಸಾರ್ಥಕ. ವಿದ್ಯಾರ್ಜನೆ ಎಂದರೆ ಬರೀ ನೆನಪಿನಶಕ್ತಿಯನ್ನು ಉದ್ದೀಪಿಸುವುದು ಎನ್ನುವ ಇರಾದೆ ಅಕ್ರಮಗಳನ್ನು ಪೋಷಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ರೀತಿ ನೀತಿಗಳಿಗೆ ಬದ್ಧರಾಗಿ
ಇರಬೇಕು. ಉದ್ದೇಶಪೂರ್ವಕವಾಗಿ ಯಾವುದೇ ಬಗೆಯ ದುರ್ನಡೆ, ವಂಚನೆ, ನಕಲು ಮಾಡುವುದರಲ್ಲಿ ತೊಡಗುವುದು ಶಿಕ್ಷಾರ್ಹವೇ ಸರಿ. ನಮ್ಮ ಅಂತರಂಗ ದಲ್ಲೊಬ್ಬ ಮೇಲ್ವಿಚಾರಕನಿದ್ದರೆ ಕೊಠಡಿ ಮೇಲ್ವಿಚಾರಕರ ಅಗತ್ಯವೇ ಇರದು.
ಆಯಾ ವಿದ್ಯಾಸಂಸ್ಥೆಗೆ ಸಂಬಂಧಿಸಿದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಪರೀಕ್ಷಾ ಪೂರ್ವದಲ್ಲಿ ಸಭೆ ನಡೆಸಬೇಕು. ಪರೀಕ್ಷೆಯಲ್ಲಿ ಶೈಕ್ಷಣಿಕ ಪ್ರಾಮಾಣಿಕತೆ ಕಾಪಾಡಿಕೊಳ್ಳುವ ದಿಸೆಯಲ್ಲಿ ಅಲ್ಲಿ ವಿವರವಾಗಿ ಚರ್ಚೆಗಳು ನಡೆಯಬೇಕು. ಪರೀಕ್ಷೆಯು ನಕಲು ಮಾಡಿಯಾದರೂ ತೇರ್ಗಡೆಯಾಗುವಷ್ಟು ಮುಖ್ಯವಲ್ಲ ಎನ್ನುವುದು ಆ ಸಭೆಯ ಸ್ಪಷ್ಟ ನಿರ್ಣಯವಾಗಬೇಕು. ಭರಪೂರ ಅಂಕಗಳು ಪ್ರತಿಭೆ, ಕೌಶಲವನ್ನು ಪ್ರತಿಬಿಂಬಿಸುವುದಿಲ್ಲ. ಪರೀಕ್ಷೆಯಲ್ಲಿ ನೂರರ ಸಮೀಪದ ಅಂಕಗಳನ್ನು ಪಡೆದವರ ಪಟ್ಟಿಯು ಆಯಾ ಶಾಲೆ, ಕಾಲೇಜಿನ ಹೊರಗೆ ವಿಜೃಂಭಿಸುವ ಅಗತ್ಯವಿಲ್ಲ.
ನಪಾಸಾದವರನ್ನು ಪರೋಕ್ಷವಾಗಿ ಅವಮಾನಿಸಿ, ಮರಳಿ ಯತ್ನ ಮಾಡಲು ಹೊರಟವರನ್ನು ನಿರುತ್ತೇಜಿ
ಸುವುದೇ? ಬ್ರಿಟಿಷ್ ಬರಹಗಾರ ಸಿ.ಎಸ್.ಲೂಯಿಸ್ ಹೇಳಿದಂತೆ, ‘ನಾವ್ಯಾರೂ ಹೊಸ ಗುರಿ, ಹೊಸ ಕನಸಿನತ್ತ ಹೊರಳದಷ್ಟು ವೃದ್ಧರಲ್ಲ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.