ಸಾಹಿತ್ಯ ಸಮಾರಂಭವೊಂದರಲ್ಲಿ ಭೇಟಿಯಾದ ಲೇಖಕಮಿತ್ರರೊಬ್ಬರು ಸಾಹಿತ್ಯ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ತುಂಬ ಆತಂಕದಿಂದ ಮಾತನಾಡಿದರು. ಪ್ರತಿವರ್ಷ ಪ್ರಕಟವಾಗುತ್ತಿರುವ ಅಸಂಖ್ಯಾತ ಪುಸ್ತಕಗಳು, ಲೇಖಕರ ಪ್ರಚಾರದ ಭರಾಟೆ, ಪ್ರಶಸ್ತಿಗಳ ಮಹಾಪೂರ, ಹೊಗಳಿ ಹೊನ್ನ
ಶೂಲಕ್ಕೆ ಏರಿಸುತ್ತಿರುವ ವಿಮರ್ಶಾ ಪ್ರವೃತ್ತಿ... ಹೀಗೆ ಮಾತಿನುದ್ದಕ್ಕೂ ಅನೇಕ ಸಂಗತಿಗಳ ಕುರಿತು ಬೇಸರ ವ್ಯಕ್ತಪಡಿಸಿದರು. ಮಾತಿನ ಕೊನೆಯಲ್ಲಿ, ಪ್ರಕಟ ಆಗುತ್ತಿರುವ ಪುಸ್ತಕಗಳು ಓದುಗರನ್ನು ತಲುಪುತ್ತಿವೆಯೇ, ಸದ್ಯದ ಸಾಹಿತ್ಯಕ ವಾತಾವರಣ ಪ್ರಜ್ಞಾವಂತ ಓದುಗರನ್ನು ಬೆಳೆಸುತ್ತಿದೆಯೇ ಎಂದು ಪ್ರಶ್ನಿಸಿದರು. ಸಾಹಿತ್ಯಲೋಕ ಈ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ತುರ್ತು ಅಗತ್ಯ ಇಂದು ಎದುರಾಗಿದೆ.
ಪುಸ್ತಕವೊಂದು ಪ್ರಕಟವಾದ ನಂತರ ಅದು ಸಹಲೇಖಕರನ್ನು ಶರವೇಗದಲ್ಲಿ ತಲುಪುತ್ತಿದೆಯೇ ವಿನಾ ಓದುಗರನ್ನಲ್ಲ. ಒಂದರ್ಥದಲ್ಲಿ ಪುಸ್ತಕಗಳು ಲೇಖಕರ ನಡುವೆ ಪರಸ್ಪರ ವಿನಿಮಯಗೊಳ್ಳುತ್ತಿವೆಯೇ ಹೊರತು ಮಾರಾಟವಾಗುತ್ತಿಲ್ಲ. ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳಲ್ಲೂ ಸಭಾಂಗಣಗಳು ಪ್ರಕಾಶಕರು ಮತ್ತು ಲೇಖಕರಿಂದ ಭರ್ತಿಯಾಗಿರುತ್ತವೆ, ಓದುಗರ ಸಂಖ್ಯೆ ತೀರಾ ಕಡಿಮೆಯಿರುತ್ತದೆ.
ವಾಟ್ಸ್‌ಆ್ಯಪ್ ಮತ್ತು ಫೇಸ್‍ಬುಕ್‍ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಪುಸ್ತಕಗಳ ಕುರಿತು ಚರ್ಚೆಗಳಾಗುತ್ತಿರುವುದು ಕೂಡ ಲೇಖಕರ ಸಮೂಹದಿಂದಲೇ ಎನ್ನುವುದು ಗಮನಿಸಬೇಕಾದ ಸಂಗತಿ. ಲೇಖಕರೇ ಸಹಲೇಖಕರ ಕೃತಿಗಳನ್ನು ಚರ್ಚಿಸುವಾಗ ಅಲ್ಲಿ ಮೆಚ್ಚುಗೆ ಮತ್ತು ಹೊಗಳಿಕೆ ಮುನ್ನೆಲೆಗೆ ಬರುತ್ತಿವೆ. ಕೃತಿಯೊಂದರ ಕುರಿತು ಮೆಚ್ಚುಗೆಯ ಮಾತನಾಡಿದ ವ್ಯಕ್ತಿಯ ಹಿನ್ನೆಲೆಯನ್ನು ಕೆದಕಿದರೆ ಆತ ಕೂಡ ಮೂಲದಲ್ಲಿ ಕವಿ, ಕಥೆಗಾರ, ಲೇಖಕನಾಗಿರುವ ಸಾಧ್ಯತೆಯೇ ಹೆಚ್ಚು. ತಿದ್ದಿ ಬುದ್ಧಿ ಹೇಳಬೇಕಾದ ಕೆಲವು ಹಿರಿಯ ಲೇಖಕರು ಕೆಟ್ಟ ಕೃತಿಗಳನ್ನೂ ಹೊಗಳುತ್ತಿರುವುದು ದುರಂತದ ಸಂಗತಿ.
ಪುಸ್ತಕವೊಂದು ಪ್ರಕಟವಾದ ನಂತರ ಅದು ಓದುಗರಿಗೆ ಸೇರಿದ್ದು. ಲೇಖಕ ನೇಪಥ್ಯಕ್ಕೆ ಸರಿದು ಕೃತಿ ಮುನ್ನೆಲೆಗೆ ಬರಬೇಕು. ಓದುಗರ ಸಮೂಹದಲ್ಲಿ ಓದಿದ ಪುಸ್ತಕಗಳ ಕುರಿತು ಚರ್ಚೆ, ಸಂವಾದಗಳಾಗಬೇಕು. ವಿಪರ್ಯಾಸವೆಂದರೆ, ಇಂದು ಪುಸ್ತಕಗಳ ಕುರಿತು ಚರ್ಚಿಸುತ್ತಿರುವವರಲ್ಲಿ ಲೇಖಕರದೇ ಸಿಂಹಪಾಲಿದೆ. ಲೇಖಕರಲ್ಲಿ ಸೆಲೆಬ್ರಿಟಿಗಳಾಗುವ ಉಮೇದು ಹೆಚ್ಚುತ್ತಿದೆ. ಚರ್ಚೆ ಮತ್ತು ಸಂವಾದಗಳಲ್ಲಿ ಉತ್ಸವಮೂರ್ತಿಯಂತೆ ಲೇಖಕರು ಪಾಲ್ಗೊಳ್ಳುತ್ತಿದ್ದಾರೆ. ಲೇಖಕರಲ್ಲಿನ ಈ ಜನಪ್ರಿಯತೆಯ ಮೋಹ ಸಾಹಿತ್ಯದ ಗುಣಮಟ್ಟದ ಕುಸಿತಕ್ಕೆ ಕಾರಣವಾಗುತ್ತಿದೆ.
ಅನೇಕ ಸಂದರ್ಭಗಳಲ್ಲಿ ಪ್ರಕಾಶಕರ ಹೆಸರಿನಲ್ಲಿ ಲೇಖಕರೇ ತಮ್ಮ ಪುಸ್ತಕಗಳ ಪ್ರಕಟಣೆಗೆ ಬಂಡವಾಳ ಹೂಡುತ್ತಾರೆ. ಪುಸ್ತಕದ ಮುಖಪುಟ, ಪುಟವಿನ್ಯಾಸ, ಹಿರಿಯ ಲೇಖಕರಿಂದ ಮುನ್ನುಡಿ ಮತ್ತು ಹಿನ್ನುಡಿ, ಪುಸ್ತಕ ಬಿಡುಗಡೆ, ಮಾರಾಟ ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಪ್ರಕಾಶಕರ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ತಮ್ಮ ಮೇಲೆ ಹೇರಿಕೊಳ್ಳುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ, ಕೃತಿಯ ನಿಜವಾದ ಅಂತಃಸತ್ವವಾದ ಬರವಣಿಗೆಯು ನಿಸ್ತೇಜ ಮತ್ತು ನೀರಸವಾಗುತ್ತಿದೆ.
ಫ್ರೆಂಚ್ ಕಾದಂಬರಿಕಾರ ವಿಕ್ಟರ್ ಹ್ಯೂಗೊ ಬರೆದ ‘ದಿ ಹಂಚ್‍ಬ್ಯಾಕ್ ಆಫ್ ನೋಟ್ರೊಡಮ್’ ಕಾದಂಬರಿ ಪ್ರಕಟವಾಗಿ ಎರಡು ಶತಮಾನಗಳಾದರೂ ಮಹತ್ವದ ಕೃತಿಯಾಗಿ ಉಳಿದಿದೆ. ಕಮೂ, ಕಾಫ್ಕಾ ಅವರನ್ನು ಓದುಗರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಕುವೆಂಪು, ಶಿವರಾಮ ಕಾರಂತ, ದೇವನೂರ ಮಹಾದೇವ, ಅನಂತಮೂರ್ತಿ, ಲಂಕೇಶ್, ಶ್ರೀಕೃಷ್ಣ ಆಲನಹಳ್ಳಿ ಅವರಂತಹ ಕನ್ನಡದ ಮಹತ್ವದ ಲೇಖಕರ ಕೃತಿಗಳು ಸದ್ಯದ ಸಂದರ್ಭದಲ್ಲೂ ಓದುಗರ ಸಮೂಹದಲ್ಲಿ ಚರ್ಚೆಗೆ ಒಳಗಾಗುತ್ತಿವೆ. ಗಟ್ಟಿಯಾದ ಮತ್ತು ಎಲ್ಲ ಕಾಲಕ್ಕೂ ಸಲ್ಲಬಹುದಾದ ವಿಷಯವಸ್ತು ಪುಸ್ತಕವೊಂದನ್ನು ನೂರಾರು ವರ್ಷಗಳಾದರೂ ಓದುಗರ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿಸಬಲ್ಲದು. ಪ್ರಚಾರ ಮತ್ತು ಗಿಮಿಕ್ ಪುಸ್ತಕದ ಜನಪ್ರಿಯತೆಗೆ ನೆರವಾಗಲಾರವು.
ಇಂದು ಪ್ರಶಸ್ತಿ ಕೊಡಮಾಡುವ ಸಂದರ್ಭದಲ್ಲಿ ಕಿರಿಯ ಲೇಖಕರಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಕಿರಿಯ ಲೇಖಕರ ಬೆಳವಣಿಗೆಗೆ ತೊಡಕಾಗುತ್ತಿದೆ. ಪ್ರಶಸ್ತಿಯ ಮೊತ್ತಕ್ಕಿಂತ ಪ್ರಶಸ್ತಿಪತ್ರ ಸಿಕ್ಕರೆ ಸಾಕು ಎಂದು ಮೊತ್ತವನ್ನು ತೆರೆಮರೆಯಲ್ಲಿ ವ್ಯವಸ್ಥಾಪಕರಿಗೆ ಹಿಂದಿರುಗಿಸುವ ಔದಾರ್ಯವನ್ನು ಅನೇಕ ಬರಹಗಾರರು ಪ್ರದರ್ಶಿಸುತ್ತಿದ್ದಾರೆ. ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಓದುಗರನ್ನೂ ಒಳಗಾಗಿಸಿಕೊಳ್ಳುವುದು ತುಂಬ ಅರ್ಥಪೂರ್ಣ ನಡೆಯಾಗುತ್ತದೆ. ಹೀಗೆ ಮಾಡುವುದರಿಂದ ಓದುಗರಿಗೆ ಕೃತಿಗಳನ್ನು ಪರಿಚಯಿಸಿ ಓದುಗರ ಸಮೂಹವೊಂದು ಬೆಳೆಯುವಂತಹ ವಾತಾವರಣ ಸೃಷ್ಟಿಸಿದಂತೆ ಆಗುತ್ತದೆ.
‘ಪ್ರತಿಯೊಬ್ಬ ಲೇಖಕ ಎದುರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ- ನಾನಿದನ್ನು ಯಾಕೆ ಬರೆಯುತ್ತೇನೆ? ಯಾರಿಗಾಗಿ ಬರೆಯುತ್ತಿದ್ದೇನೆ?’ ಎಂದು ಯಶವಂತ ಚಿತ್ತಾಲರು ಬರವಣಿಗೆ ಕುರಿತು ಹೇಳಿರುವ ಮಾತು ಕಿರಿಯ ಲೇಖಕರಿಗೆ ನೀತಿಪಾಠದಂತಿದೆ. ‘ಓದುಗರಿಗಾಗಿ’ ಬರೆಯುತ್ತಿದ್ದೇನೆ ಎನ್ನುವ ಮಾನಸಿಕ ಸಿದ್ಧತೆ ಪ್ರತಿ ಬರಹಗಾರನಿಗೆ ಅಗತ್ಯ. ಅದು ಗಟ್ಟಿ ಬರವಣಿಗೆಗೆ ಕಾರಣವಾಗಿ ಆ ಮೂಲಕ ಪ್ರಜ್ಞಾವಂತ ಓದುಗರನ್ನು ಬೆಳೆಸಲು ನೆರವಾಗುತ್ತದೆ.
ಪ್ರಚಾರದ ಗೀಳಿಗೆ ಒಳಗಾಗುವ ಲೇಖಕನಾಗಲೀ ಅವನ ಬರವಣಿಗೆಯಾಗಲೀ ಹೆಚ್ಚು ದಿನ ಬಾಳಲಾರವು ಎನ್ನುವ ಸತ್ಯವನ್ನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ಕಿರಿಯ ಲೇಖಕರು ಅರ್ಥಮಾಡಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.