ADVERTISEMENT

ಸಂಗತ | ಮೊಸಳೆ ಸಂರಕ್ಷಣೆ: ಲೆಕ್ಕ ತಪ್ಪಿದ್ದೆಲ್ಲಿ?

ಒಡಿಶಾದ ರಾಷ್ಟ್ರೀಯ ಉದ್ಯಾನದಲ್ಲಿ ಸಂರಕ್ಷಣಾ ಕಾರ್ಯದಿಂದ ಮೊಸಳೆಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿರುವುದು ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ

ಶಿಶಿರ ವಸಿಷ್ಠ
Published 28 ಡಿಸೆಂಬರ್ 2023, 23:37 IST
Last Updated 28 ಡಿಸೆಂಬರ್ 2023, 23:37 IST
   

ವನ್ಯಜೀವಿ, ಪಕ್ಷಿ, ಪರಿಸರದ ಮಾತು ಬಂದಾಗಲೆಲ್ಲ ಅವುಗಳ ಸಂರಕ್ಷಣೆಯ ಬಗೆಗೂ ಚರ್ಚೆ
ಗಳಾಗುತ್ತವೆ. ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್‍ವೇಷನ್ ಆಫ್‌ ನೇಚರ್‌ (ಐಯುಸಿಎನ್) ನಾಲ್ಕು ವರ್ಷಗಳಿಗೊಮ್ಮೆ ಇಂಥಿಂಥ ಪ್ರಾಣಿ, ಪಕ್ಷಿ, ಜಲಚರಗಳು ವಿನಾಶದ ಅಂಚು ತಲುಪಿವೆ ಎಂಬ ಪಟ್ಟಿ ನೀಡಿದಾಗ, ‘ಅಯ್ಯೋ ಸರಿಯಾದ ಸಂರಕ್ಷಣೆ ಇಲ್ಲದೆ ಹೀಗಾಗಿದೆ’ ಎಂಬ ಅಭಿಪ್ರಾಯ ವ್ಯಕ್ತ
ವಾಗುತ್ತದೆ. ಜೊತೆಗೆ, ಅದಕ್ಕೆ ಪರಿಹಾರವೆಂಬಂತೆ ವಿಶ್ವದ ಅಥವಾ ಅದೇ ದೇಶದ ಇತರ ಪ್ರದೇಶಗಳಲ್ಲಿ ನಡೆದ ಸಂರಕ್ಷಣಾ ಕೆಲಸಗಳು ಯಶಸ್ವಿಯಾದದ್ದರ ಬಗ್ಗೆ ಸಚಿತ್ರ ವರದಿಗಳು ಪ್ರಕಟಗೊಂಡು, ಇಲ್ಲಿ ಮಾಡಿದಂತೆ ಬೇರೆಡೆಯೂ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಅದಕ್ಕಾಗಿ ಕ್ರಮ ವಹಿಸಿ ಎಂಬ ಒತ್ತಾಯ ಜೋರಾಗುತ್ತದೆ.

ಒಂದು ಜೀವಿಆವಾಸದ ಪ್ರಾಣಿ, ಪಕ್ಷಿ, ಗಿಡ, ಜಲಚರಗಳ ಸಂಖ್ಯೆ ಕಡಿಮೆಯಾದಾಗ ಆತಂಕ ಮೂಡುವುದು ಸಹಜ. ಪರಿಸರದಲ್ಲೇನೋ ಅಪರಾ ತಪರಾ ಆಗಿದೆ ಎನ್ನಬಹುದು. ಆದರೆ, ಅಳಿವಿನಂಚಿನಲ್ಲಿದ್ದ ಜೀವಿಯೊಂದರ ಸಂಖ್ಯೆಯು ಸಂರಕ್ಷಣಾ ಕ್ರಮಗಳಿಂದಾಗಿ ಮಿತಿಮೀರಿದರೆ ಅದಕ್ಕೆ ಏನನ್ನುತ್ತೀರಿ? ಹೌದು, ಸರ್ಕಾರದ ಯೋಜನೆಯಂತೆ ನಡೆದ ಸಂರಕ್ಷಣಾ ಕೆಲಸದಿಂದ ಒಡಿಶಾ ರಾಜ್ಯದ ರಾಷ್ಟ್ರೀಯ ಉದ್ಯಾನದಲ್ಲಿ ಮೊಸಳೆಗಳ ಸಂಖ್ಯೆ ನಿರೀ ಕ್ಷೆಗೂ ಮೀರಿ ಹೆಚ್ಚಾಗಿ, ಅವು ಜನವಸತಿಯತ್ತ ನುಗ್ಗಿ ಹಲವರ ಪ್ರಾಣ ತೆಗೆದಿವೆ. ಹಿಂದಿನ ಆರು ತಿಂಗಳಲ್ಲಿ ಆರು ಜನರನ್ನು ಕೊಂದಿರುವ ಮೊಸಳೆಗಳಿಗೆ ಆವಾಸದ ವ್ಯಾಪ್ತಿ ಸಾಲುತ್ತಿಲ್ಲ ಎಂಬ ಮಾತಿದೆ. ಮೊಸಳೆಗಳ ಸಂಖ್ಯೆ ವಿಪರೀತ ಹೆಚ್ಚಿರುವುದು ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.

ಒಡಿಶಾದ ಪ್ರಮುಖ ಕಾಂಡ್ಲಾ ಕಾಡಿನ ವ್ಯಾಪ್ತಿಯಲ್ಲಿ ರುವ ಭೈತರ್‍ಕನಿಕಾ ರಾಷ್ಟ್ರೀಯ ಉದ್ಯಾನದಲ್ಲಿ 1,800ರಷ್ಟಾಗಿರುವ ಉಪ್ಪುನೀರಿನ ಮೊಸಳೆಗಳು, ಉದ್ಯಾನದಿಂದ ಹೊರಗೆ ನೂರು ಕಿ.ಮೀ. ದೂರದ ವರೆಗೂ ಸಂಚರಿಸಿ ಜನರ ಮೇಲೆ ಆಕ್ರಮಣ ಮಾಡುತ್ತಿವೆ.

ADVERTISEMENT

ಮೊಸಳೆಗಳು ಜನರನ್ನು ಕೊಲ್ಲುತ್ತಿರುವುದರಿಂದ ವಸತಿ ಪ್ರದೇಶದ ನಿವಾಸಿಗಳು ಸಹಜವಾಗಿಯೇ
ಆತಂಕಗೊಂಡಿದ್ದಾರೆ. ಸಂರಕ್ಷಣಾ ಕೆಲಸ ಯಶಸ್ವಿಯಾದದ್ದರ ಬಗ್ಗೆ ಖುಷಿಪಡಬೇಕೋ ಅಥವಾ ಸಂಖ್ಯಾ ಹೆಚ್ಚಳ ಸರಿಯಲ್ಲ ಎನ್ನಬೇಕೋ ಎಂಬ ಗೊಂದಲದಲ್ಲಿರುವ ಅರಣ್ಯ ಇಲಾಖೆಯು ತಜ್ಞರ ಅಭಿಪ್ರಾಯ
ಕ್ಕಾಗಿ ಎದುರು ನೋಡುತ್ತಿದೆ.

ಇದೆಲ್ಲ ಶುರುವಾದದ್ದು 1997ರಲ್ಲಿ. ಆಗ ಮೊಸಳೆಗಳ ಸಂಖ್ಯೆ ಸಾವಿರದಷ್ಟಿತ್ತು. ಈಗ ಅವುಗಳ ಸಂಖ್ಯೆ ಹೆಚ್ಚಿರುವುದರಿಂದ, 23 ಅಡಿ ಉದ್ದ ಬೆಳೆ ಯುವ ಮೊಸಳೆಗಳಿಗೆ ಅಲ್ಲಿರುವ ಸ್ಥಳಾವಕಾಶ ಕಡಿಮೆ ಯಾಗಿದೆ. ಅಲ್ಲದೆ, ಗಂಡು ಮೊಸಳೆಗಳ ಸಂಖ್ಯೆ ಮಿತಿ ಮೀರಿರುವುದು ಮತ್ತು ಸಂಗಾತಿಯ ಸಹವಾಸಕ್ಕೆ ನಿರಂತರ ಪೈಪೋಟಿ ನಡೆಯುತ್ತಿರುವುದು ಅವುಗಳ ಆಕ್ರಮಣಾ ಪ್ರವೃತ್ತಿಯನ್ನು ಹೆಚ್ಚಿಸಿದೆ ಎಂಬುದು ಮೊಸಳೆ ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೂ ಮುಂಚೆ 1975ರಲ್ಲಿ, ಮಹಾನದಿಗೆ ಹೊಂದಿಕೊಂಡಿರುವ ಸತ್ಕೋಸಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಘರಿಯಾಲ್ ಮೊಸಳೆ, ಸಿಮಿಲಿಪಾಲ್ ಪ್ರದೇಶದಲ್ಲಿ ಮಗ್ಗರ್ ಮೊಸಳೆ ಮತ್ತು ಭೈತರ್‍ಕನಿಕಾದಲ್ಲಿ ಉಪ್ಪುನೀರಿನ ಮೊಸಳೆಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಎಲ್ಲ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಯೋಜನೆಗೆ ಯಾವುದೇ ಅಡೆತಡೆ ಇಲ್ಲದಿದ್ದುದ ರಿಂದ ಭೈತರ್‍ಕನಿಕಾದಲ್ಲಿನ ಮೊಸಳೆಗಳ ಸಂಖ್ಯೆ 1992ರ ಹೊತ್ತಿಗೆ ಆರೋಗ್ಯಕರ ಸಂಖ್ಯೆ ತಲುಪಿತು. ಹೀಗಾಗಿ, ಯೋಜನೆಯನ್ನು ತಾತ್ಕಾಲಿಕವಾಗಿ
ನಿಲ್ಲಿಸಲಾಗಿತ್ತು. ಆದರೆ ಅರಣ್ಯ ಅಧಿಕಾರಿಗಳು ರಾಷ್ಟ್ರೀಯ ಉದ್ಯಾನದಲ್ಲಿ ಜಾಗವಿಲ್ಲ ಎಂಬ ಕಾರಣಕ್ಕೆ, ಸಂಶೋಧನೆಗೆಂದು ತಂದ ಮೊಸಳೆ ಮೊಟ್ಟೆಗಳು ಮರಿಯಾದ ನಂತರ ಅವುಗಳನ್ನು ಪಕ್ಕದ ನದಿಗೆ ಬಿಡುವುದನ್ನು ರೂಢಿಸಿಕೊಂಡಿದ್ದಾರೆ. ಇದು ಅನಾ ಹುತಗಳಿಗೆ ಕಾರಣವಾಗುತ್ತಿದೆ ಎನ್ನುವ ಹಿರಿಯ ವನ್ಯ ಜೀವಿ ವಿಜ್ಞಾನಿ ಸುಧಾಕರ್, ಭೈತರ್‍ಕನಿಕಾದಲ್ಲಿರುವ ಮೊಸಳೆಗಳ ಪೈಕಿ ಅರ್ಧದಷ್ಟು ವಯಸ್ಕ ಮೊಸಳೆಗಳಿವೆ, ನಲವತ್ತು ಹದಿವಯಸ್ಕ ಮೊಸಳೆಗಳಿವೆ, ಇವೆಲ್ಲ ಮನುಷ್ಯರ ಮೇಲೆ ದಾಳಿ ಮಾಡುವ ಶಕ್ತಿ ಪಡೆದಿವೆಯಾದ್ದ ರಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಉತ್ತರ ಭಾರತದ ನದಿ ಪಾತ್ರಕ್ಕಷ್ಟೇ ಸೀಮಿತವಾಗಿರುವ ಘರಿಯಾಲ್ ಮೊಸಳೆಗಳು ಅಳಿವಿನಂಚಿಗೆ ಸರಿದಿವೆ. ಘರಿಯಾಲ್ ಮೊಸಳೆಗಳ ಮೊಟ್ಟೆಗಳು ಇತರ ವನ್ಯಪ್ರಾಣಿ ಮತ್ತು ಮನುಷ್ಯನ ನಿರಂತರ ದಾಳಿಯಿಂದ ನಲುಗುತ್ತಿವೆ. ನದಿ ಮಾಲಿನ್ಯ, ಅಣೆಕಟ್ಟೆ ನಿರ್ಮಾಣ, ಅನಿಯಂತ್ರಿತ ಮೀನುಗಾರಿಕೆ, ಅಕ್ರಮ ಮರಳು ಗಣಿಗಾರಿಕೆಯಿಂದ ತೀವ್ರ ಅಪಾಯದಲ್ಲಿವೆ. ಈ ಮೊಸಳೆಗಳ ಸಂಖ್ಯೆ ಹೆಚ್ಚಾದಷ್ಟೂ ನದಿ ಮಾಲಿನ್ಯ ಕಡಿಮೆ ಇರುತ್ತದಾದ್ದರಿಂದ ಘರಿಯಾಲ್ ಮೊಸಳೆಗಳನ್ನು ರಕ್ಷಿಸಲೇಬೇಕಾದ ಅನಿವಾರ್ಯ ನಮಗಿದೆ.

ಇದೇ ಆಗಸ್ಟ್ ತಿಂಗಳಿನಲ್ಲಿ ಅರಣ್ಯ ಇಲಾಖೆಯ ಕೆಲಸಗಾರರು 38 ಮರಿಗಳನ್ನು ನದಿಗೆ ಬಿಟ್ಟಿದ್ದರು. ಹಿಂದಿನ ಹತ್ತು ವರ್ಷಗಳಲ್ಲಿ 50 ಜನ ಮೊಸಳೆ ದಾಳಿ ಯಿಂದ ಸಾವನ್ನಪ್ಪಿದ್ದಾರೆ. ಡೆಹ್ರಾಡೂನ್‍ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿ ಬಿ.ಸಿ.ಚೌಧರಿ ಅವರ ಪ್ರಕಾರ, ಆವಾಸದ ವ್ಯಾಪ್ತಿಯನ್ನು ಮೀರಿ ಮೊಸಳೆಗಳ ಸಂಖ್ಯೆ ಬೆಳೆದಿರುವುದು ಅಪಾಯಕಾರಿ ಸನ್ನಿವೇಶವೇ ಸರಿ. ಇದನ್ನು ಸರಿಪಡಿಸಲು ಅರಣ್ಯ ಇಲಾಖೆಯು ಹಿರಿಯ ತಜ್ಞರ ತಂಡ ರಚಿಸುವ ತಯಾರಿಯಲ್ಲಿದೆ. ಇವರು ತಂಡ ರಚಿಸುವವರೆಗೆ ಮೊಸಳೆಗಳು ಸುಮ್ಮನಿರುತ್ತವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.